Oracle Layoffs| ಐಟಿ ಉದ್ಯೋಗಿಗಳಿಗೆ ಬಿಗ್‌ ಶಾಕ್: ಬೆಂಗಳೂರು ಸೇರಿದಂತೆ ಭಾರತದಲ್ಲಿ 12,000 ಒರಾಕಲ್‌ ನೌಕರರ ವಜಾ
x
ಭಾರತದಲ್ಲಿ 12,000 ಒರಾಕಲ್‌ ನೌಕರರ ವಜಾ(ಸಂಗ್ರಹ ಚಿತ್ರ)

Oracle Layoffs| ಐಟಿ ಉದ್ಯೋಗಿಗಳಿಗೆ ಬಿಗ್‌ ಶಾಕ್: ಬೆಂಗಳೂರು ಸೇರಿದಂತೆ ಭಾರತದಲ್ಲಿ 12,000 ಒರಾಕಲ್‌ ನೌಕರರ ವಜಾ

ಪ್ರಮುಖ ಐಟಿ ಸಂಸ್ಥೆ ಒರಾಕಲ್ (Oracle) ಭಾರತದಲ್ಲಿ 12,000 ಉದ್ಯೋಗಿಗಳನ್ನು ವಜಾ ಮಾಡಿದೆ. ಜಾಗತಿಕವಾಗಿ 30,000 ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದಾರೆ.


ಅಮೆರಿಕ ಮೂಲದ ಪ್ರಮುಖ ಐಟಿ ಸಂಸ್ಥೆಯಾದ ಒರಾಕಲ್ (Oracle) ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಮರುಸಂಘಟಿಸುವ ಹೆಸರಿನಲ್ಲಿ ದೊಡ್ಡ ಮಟ್ಟದ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ವರದಿಗಳ ಪ್ರಕಾರ, ಬೆಂಗಳೂರು ಸೇರಿದಂತೆ ಭಾರತದಾದ್ಯಂತ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದ್ದು, ಮುಂದಿನ ಒಂದು ತಿಂಗಳೊಳಗೆ ಮತ್ತೊಂದು ಸುತ್ತಿನ ವಜಾ ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಜಾಗತಿಕ ಮಟ್ಟದಲ್ಲಿ 30,000 ಉದ್ಯೋಗಿಗಳು ವಜಾ:

ಕೇವಲ ಭಾರತ ಮಾತ್ರವಲ್ಲದೆ, ಜಾಗತಿಕವಾಗಿ ಒರಾಕಲ್ ಸುಮಾರು 30,000 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ. ಭಾರತದಲ್ಲಿ ಕಂಪನಿಯು ಸುಮಾರು 30,000 ಸಿಬ್ಬಂದಿಯನ್ನು ಹೊಂದಿದ್ದು, ಈ ಪೈಕಿ ಶೇ. 40ರಷ್ಟು ಮಂದಿ ಈಗಾಗಲೇ ಕೆಲಸ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಲು ಒರಾಕಲ್ ಸಂಸ್ಥೆ ನಿರಾಕರಿಸಿದೆ.

ಉದ್ಯೋಗಿಗಳಿಗೆ ಬಂದ ಇಮೇಲ್‌ನಲ್ಲಿ ಏನಿದೆ?

ಸಂಸ್ಥೆಯು ತನ್ನ ಉದ್ಯೋಗಿಗಳಿಗೆ ಕಳುಹಿಸಿರುವ ಇಮೇಲ್‌ನಲ್ಲಿ, "ಸಂಸ್ಥೆಯಲ್ಲಿ ಕೆಲವು ಸಾಂಸ್ಥಿಕ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಈ ಕಾರಣದಿಂದಾಗಿ ಕಾರ್ಯಾಚರಣೆಯನ್ನು ಸುಗಮಗೊಳಿಸಲು ನಿರ್ಧರಿಸಲಾಗಿದ್ದು, ದುರದೃಷ್ಟವಶಾತ್ ನೀವು ಪ್ರಸ್ತುತ ಹೊಂದಿರುವ ಹುದ್ದೆಯ ಅಗತ್ಯವಿಲ್ಲದಂತಾಗಿದೆ (Redundant)," ಎಂದು ತಿಳಿಸಿದೆ.

ಪರಿಹಾರ ಪ್ಯಾಕೇಜ್ ವಿವರ:

ಕೆಲಸ ಕಳೆದುಕೊಂಡ ಉದ್ಯೋಗಿಗಳಿಗೆ ಕಂಪನಿಯು ಕೆಲವು ಆರ್ಥಿಕ ಸವಲತ್ತುಗಳನ್ನು ಘೋಷಿಸಿದೆ:

• ಒಂದು ವರ್ಷ ಸೇವೆ ಪೂರ್ಣಗೊಳಿಸಿದವರಿಗೆ ಪ್ರತಿ ವರ್ಷಕ್ಕೆ 15 ದಿನಗಳ ಸಂಬಳ.

• ಒಂದು ತಿಂಗಳ ನೋಟಿಸ್ ಅವಧಿಯ ವೇತನ.

• ಎರಡು ತಿಂಗಳ ವೇತನವನ್ನು 'ಟಾಪ್-ಅಪ್' ಆಗಿ ನೀಡಲಾಗುತ್ತಿದೆ.

• ಇದರೊಂದಿಗೆ ಗ್ರಾಚ್ಯುಟಿ ಮತ್ತು ರಜೆ ನಗದೀಕರಣ (Leave Encashment) ಸೌಲಭ್ಯ ಸಿಗಲಿದೆ.

• ಷರತ್ತು: ಈ ಪ್ಯಾಕೇಜ್ ಕೇವಲ ಸ್ವಯಂಪ್ರೇರಿತವಾಗಿ ಮತ್ತು ಸೌಹಾರ್ದಯುತವಾಗಿ ರಾಜೀನಾಮೆ ನೀಡುವವರಿಗೆ ಮಾತ್ರ ಅನ್ವಯಿಸುತ್ತದೆ ಎಂದು ಕಂಪನಿ ಹೇಳಿದೆ.

ಹೊರಬಿದ್ದ ಆಘಾತಕಾರಿ ಅಂಶಗಳು:

ಒರಾಕಲ್‌ನ ಮಾಜಿ ಉದ್ಯೋಗಿ ಮೆರುಗು ಶ್ರೀಧರ್ ಎಂಬುವವರು ಕಂಪನಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. "ಭಾರತದಲ್ಲಿ ಕಂಪನಿಯು 16 ಗಂಟೆಗಳ ಶಿಫ್ಟ್ ಕೆಲಸವನ್ನು ಹೇರುತ್ತಿದೆ. ಇದನ್ನು ಪ್ರತಿಭಟಿಸಿದ್ದಕ್ಕೆ ನನ್ನನ್ನು ಸೆಪ್ಟೆಂಬರ್‌ನಲ್ಲಿ ವಜಾ ಮಾಡಲಾಗಿತ್ತು. ಅಮೆರಿಕದಲ್ಲಿ ಸ್ಥಳೀಯ ಕಾನೂನುಗಳು ಕಠಿಣವಾಗಿರುವುದರಿಂದ, ಅಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಉದ್ಯೋಗಿಗಳ ಮೇಲೆ ಲೇ-ಆಫ್ ಪ್ರಭಾವ ಹೆಚ್ಚಾಗಿದೆ," ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ ಉದ್ಯೋಗ ಕಳೆದುಕೊಂಡಿರುವ ಸಾವಿರಾರು ಕುಟುಂಬಗಳಲ್ಲಿ ಆತಂಕ ಮನೆ ಮಾಡಿದ್ದು, ಮುಂದಿನ ತಿಂಗಳು ನಡೆಯಲಿರುವ 'ಮತ್ತೊಂದು ಸುತ್ತಿನ ವಜಾ' ಐಟಿ ವಲಯದಲ್ಲಿ ಭೀತಿ ಸೃಷ್ಟಿಸಿದೆ.

Read More
Next Story