Anganwadi workers get high-tech: 79,000 Samsung smartphones distributed at a cost of Rs. 93 crore!
x

ಸಾಂದರ್ಭಿಕ ಚಿತ್ರ

ಅಂಗನವಾಡಿ ಕಾರ್ಯಕರ್ತೆಯರು ಹೈಟೆಕ್: 93 ಕೋಟಿ ರೂ. ವೆಚ್ಚದಲ್ಲಿ 79 ಸಾವಿರ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ ವಿತರಣೆ!

ಅಂಗನವಾಡಿ ಕೇಂದ್ರಗಳಲ್ಲಿ ದಿನನಿತ್ಯದ ಕಾರ್ಯಗಳಿಗಾಗಿ ಭೌತಿಕ ರಿಜಿಸ್ಟರ್‌ಗಳನ್ನು ನಿರ್ವಹಿಸುವ ಹೊರೆಯಿಂದ ಕಾರ್ಯಕರ್ತೆಯರನ್ನು ಮುಕ್ತಗೊಳಿಸುವುದು ಈ ಬೃಹತ್ ವಿತರಣೆಯ ಹಿಂದಿನ ಪ್ರಮುಖ ಉದ್ದೇಶ.


Click the Play button to hear this message in audio format

ಗ್ರಾಮೀಣ ಭಾಗದ ಮಕ್ಕಳ ಕಲ್ಯಾಣ ಕೇಂದ್ರಗಳನ್ನು ತಾಂತ್ರಿಕವಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಒಡಿಶಾ ರಾಜ್ಯ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಕೇಂದ್ರ ಸರ್ಕಾರದ 'ಪೋಷಣ್ ಅಭಿಯಾನ'ವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ, ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕಿಯರು ಹಾಗೂ ಬ್ಲಾಕ್ ಕೋ-ಆರ್ಡಿನೇಟರ್‌ಗಳಿಗೆ ಒಟ್ಟು 79,033 ಸ್ಮಾರ್ಟ್‌ಫೋನ್‌ಗಳನ್ನು ವಿತರಿಸಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ಈ ಬೃಹತ್ ಯೋಜನೆಗಾಗಿ ಒಡಿಶಾ ಸರ್ಕಾರ ಒಟ್ಟು 93.13 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು, ದಕ್ಷಿಣ ಕೊರಿಯಾ ಮೂಲದ ಜನಪ್ರಿಯ ಬ್ರ್ಯಾಂಡ್ 'ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ06' (Samsung Galaxy A06) ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ನಿರ್ಧರಿಸಿದೆ.

ಡಿಜಿಟಲ್ ಆಗಲಿದೆ ಪೋಷಣ್ ಅಭಿಯಾನದ ಕಾರ್ಯಗಳು

ಅಂಗನವಾಡಿ ಕೇಂದ್ರಗಳಲ್ಲಿ ದಿನನಿತ್ಯದ ಕಾರ್ಯಗಳಿಗಾಗಿ ಭೌತಿಕ ರಿಜಿಸ್ಟರ್‌ಗಳನ್ನು ನಿರ್ವಹಿಸುವ ಹೊರೆಯಿಂದ ಕಾರ್ಯಕರ್ತೆಯರನ್ನು ಮುಕ್ತಗೊಳಿಸುವುದು ಈ ಬೃಹತ್ ವಿತರಣೆಯ ಹಿಂದಿನ ಪ್ರಮುಖ ಉದ್ದೇಶ. ವಿತರಿಸಲಾಗುವ ಈ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ 'ಪೋಷಣ್ ಟ್ರ್ಯಾಕರ್' ಅಪ್ಲಿಕೇಶನ್ ಅಳವಡಿಸಲಾಗಿದ್ದು, ಇದರ ಮೂಲಕ ಹಲವು ಪ್ರಮುಖ ಕಾರ್ಯಗಳನ್ನು ಡಿಜಿಟಲ್ ರೂಪದಲ್ಲಿ ನಿರ್ವಹಿಸಬಹುದಾಗಿದೆ. ಗರ್ಭಿಣಿಯರು, ಬಾಣಂತಿಯರು ಮತ್ತು 0-6 ವರ್ಷದೊಳಗಿನ ಮಕ್ಕಳ ನೊಂದಣಿ ಪ್ರಕ್ರಿಯೆ. ಪೌಷ್ಟಿಕ ಆಹಾರ ವಿತರಣೆಯ ನೈಜ-ಸಮಯದ ಟ್ರ್ಯಾಕಿಂಗ್ ಮಾಡಬಹುದಾಗಿದೆ.

ಪೌಷ್ಟಿಕಾಂಶದ ಮೇಲ್ವಿಚಾರಣೆಗಾಗಿ ದಿನನಿತ್ಯದ ಡೇಟಾ ಎಂಟ್ರಿ, ಮಕ್ಕಳ ದೈನಂದಿನ ಬೆಳವಣಿಗೆ, ತೂಕ ಮತ್ತು ಅಪೌಷ್ಟಿಕತೆಯ ಪ್ರಮಾಣವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬಹುದು.

ಬೆಲೆ ಮತ್ತು ಬ್ರ್ಯಾಂಡ್ ಆಯ್ಕೆ ಬಗ್ಗೆ ಶುರುವಾಯ್ತು ಚರ್ಚೆ!

ಒಡಿಶಾ ಸರ್ಕಾರ ಖರೀದಿಸುತ್ತಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ06 (4GB RAM/64GB ಸ್ಟೋರೇಜ್) ಸ್ಮಾರ್ಟ್‌ಫೋನ್‌ನ ಬೆಲೆ ಪ್ರತಿ ಯೂನಿಟ್‌ಗೆ ಅಂದಾಜು 11,783 ರೂ. ಬೀಳಲಿದೆ. ಆದರೆ ಈ ಬೃಹತ್ ಪ್ರಮಾಣದ ಖರೀದಿಯ ದರವು, ಮಾರುಕಟ್ಟೆಯಲ್ಲಿನ ಚಿಲ್ಲರೆ ದರಕ್ಕೆ ಸರಿಸಮಾನವಾಗಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ತೆರಿಗೆದಾರರ ಹಣವನ್ನು ಚಿಲ್ಲರೆ ದರದಲ್ಲೇ ಬೃಹತ್ ಖರೀದಿಗೆ ಬಳಸುತ್ತಿರುವುದರ ಔಚಿತ್ಯವನ್ನು ವಿಮರ್ಶಕರು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ, ಇದೇ 10,000 ರಿಂದ 14,000 ರೂ.ಗಳ ಬೆಲೆಬಾಳುವ 'ಲಾವಾ' (Lava) ದಂತಹ ಉತ್ತಮ ಗುಣಮಟ್ಟದ (5G, ಅಧಿಕ RAM ಮತ್ತು ಬ್ಯಾಟರಿ ಸಾಮರ್ಥ್ಯ) ಭಾರತೀಯ ಬ್ರ್ಯಾಂಡ್‌ಗಳನ್ನು ಕೈಬಿಟ್ಟು, ವಿದೇಶಿ ಕಂಪನಿಯ ಮೊಬೈಲ್‌ಗಳನ್ನು ಆಯ್ಕೆ ಮಾಡಿಕೊಂಡಿರುವುದು ಟೀಕೆಗೆ ಗುರಿಯಾಗಿದೆ.

ಈ ಎಲ್ಲಾ ಚರ್ಚೆಗಳ ನಡುವೆಯೂ, ಪೋಷಣ್ ಅಭಿಯಾನದ ಅಡಿಯಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಮತ್ತು ನೈಜ-ಸಮಯದ ನಿಖರ ಮೇಲ್ವಿಚಾರಣೆಗಾಗಿ ಅಂಗನವಾಡಿ ಕಾರ್ಯಕರ್ತೆಯರನ್ನು ತಾಂತ್ರಿಕವಾಗಿ ಸಬಲೀಕರಣಗೊಳಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ಸರ್ಕಾರ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.

Read More
Next Story