
Obituary| ಸೋಲಿಲ್ಲದ ಸರದಾರ ʼಅಜಿತ್ʼ ದಾದಾ: ಕಾಯಕವೇ ಅವರ ನಿಜವಾದ ʼಪವರ್ʼ
ರಾಜಕೀಯವನ್ನು ರಕ್ತಮಾಂಸವನ್ನಾಗಿ ಮಾಡಿಕೊಂಡಿದ್ದ ಅಜಿತ್ ಪವಾರ್ ಅವರು ಸೋಲಿಲ್ಲದ ಸರದಾರ. ಎಂತಹ ರಾಜಕೀಯ ಪಟ್ಟುಗಳನ್ನೂ ಗೆಲ್ಲುವ ಛಾತಿ ಅವರಿಗಿತ್ತು. ಅದಕ್ಕೆ ಮುಖ್ಯ ಕಾರಣ ಅವರೊಬ್ಬ ಕಾಯಕಯೋಗಿ…
ಬುಧವಾರ ಬೆಳಕು ಹರಿಯುವ ಹೊತ್ತಿಗೆ ಬರಸಿಡಿಲಿನಂತೆ ಎರಗಿದ ಆ ಸುದ್ದಿ ಇಡೀ ಮಹಾರಾಷ್ಟ್ರವನ್ನು ದಿಗ್ಭ್ರಮೆ-ಆಘಾತ-ಶೋಕಸಾಗರದಲ್ಲಿ ಮುಳುಗುವಂತೆ ಮಾಡಿತು. ಮಹಾರಾಷ್ಟ್ರದ ಉಪ-ಮುಖ್ಯಮಂತ್ರಿ ಅಜಿತ್ ಪವಾರ್ ಅವರು ತಮ್ಮದೇ ಭದ್ರಕೋಟೆಯಾದ ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಅಕ್ಷರಶಃ ನಿರ್ಜೀವವಾಗಿ ಧರೆಗುರುಳಿದಿದ್ದಾರೆ.
ಆರಂಭಿಕ ವರದಿ ಪ್ರಕಾರ ಅಜಿತ್ ಪವಾರ್ (66 ವರ್ಷ) ಅವರು ತಮ್ಮ ಸ್ವಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ ರಾಜಕೀಯ ಸಭೆಯಲ್ಲಿ ಭಾಗವಹಿಸಲು ತೆರಳುತ್ತಿದ್ದರು. ಹಿಂದಿನ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅದರಲ್ಲೂ ವಿಶೇಷವಾಗಿ ಪುಣೆ ಮತ್ತು ಪಿಂಪ್ರಿ-ಚಿಂಚವಾಡ್ ಮಹಾನಗರಪಾಲಿಕೆಯಲ್ಲಿ ಅವರ ಪಕ್ಷವು ಬಿಜೆಪಿ ವಿರುದ್ಧ ಹೀನಾಯ ಸೋಲು ಅನುಭವಿಸಿದ ನಂತರ ಮುಂಬರುವ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗೆಲ್ಲುವ ಕಡೆಗೆ ಅವರು ತಮ್ಮ ತಂತ್ರ ರೂಪಿಸಿದ್ದರು. ಆ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಏರ್ಪಾಟಾಗಿತ್ತು.
ಬೆಂಕಿ ಉಗುಳಿದ ವಿಮಾನ
ಲಭ್ಯವಾದ ವರದಿಗಳ ಪ್ರಕಾರ ಪವಾರ್ ಮತ್ತು ಇತರರು ಪ್ರಯಾಣಿಸುತ್ತಿದ್ದ ಚಾರ್ಟರ್ಡ್ ವಿಮಾನ ಅಪಘಾತಕ್ಕೀಡಾದಾಗ ಬೆಂಕಿಯ ಜ್ವಾಲೆಯನ್ನೇ ಉಗುಳಿದೆ. ವಿಮಾನ ನಿಯಂತ್ರಣ ಕಳೆದುಕೊಂಡು ಲ್ಯಾಂಡಿಂಗ್ ಮಾಡಲು ಹರಸಾಹಸಪಡುತ್ತಿತ್ತು. ಹವಾನಿಯಂತ್ರಣ ಪಟ್ಟಿಯ ಸುತ್ತ ಮತ್ತೆ ಮತ್ತೆ ಗಿರಕಿ ಹೊಡೆಯುತ್ತಿದ್ದುದನ್ನು ತಾವು ನೋಡಿದ್ದಾಗಿ ಪ್ರತ್ಯಕ್ಷದರ್ಶಿಗಳು ಹೇಳಿರುವುದನ್ನು ಮರಾಠಿ ಟೀವಿ ಚಾನೆಲ್—ಗಳು ಮತ್ತು ಎ.ಎನ್ಐ ಸುದ್ದಿಸಂಸ್ಥೆಗಳು ಉಲ್ಲೇಖಿಸಿವೆ.
“ವಿಮಾನದಲ್ಲಿ ಏನೋ ತೊಂದರೆ ಇರುವುದು ಖಚಿತ. ಅದು ಇನ್ನೇನು ಪತನಗೊಳ್ಳಲಿದೆ ಎಂದು ನಮಗೆ ಅನಿಸಿ ಭಯಗೊಂಡೆವು. ಕೊನೆಗೆ ಅದು ನಮ್ಮ ಕಣ್ಣೆದುರೇ ಸಂಭವಿಸಿಬಿಟ್ಟಿತು,” ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ವಿಮಾನವು ಸ್ಫೋಟಗೊಂಡು ಛಿದ್ರಛಿದ್ರವಾಗುವ ಮುನ್ನ ದೊಡ್ಡ ಶಬ್ಧ ಕೇಳಿಸಿತು ಎಂದು ಮಹಿಳೆಯೊಬ್ಬರು ಹೇಳಿದ್ದಾರೆ. ಇದರ ಪರಿಣಾಮ ವಿಮಾನದಲ್ಲಿದ್ದ ಎಲ್ಲಾ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಡಿಜಿಸಿಎ ದೃಢಪಡಿಸಿದೆ.
ಈ ಭೀಕರ ದುರಂತವು ಅವರ ಕುಟುಂಬ, ಪಕ್ಷದ ಕಾರ್ಯಕರ್ತರು, ಪ್ರತಿಪಕ್ಷದವರು ಹಾಗೂ ಇಡೀ ರಾಜ್ಯ ಸ್ತಬ್ಧಗೊಳ್ಳುವಂತೆ ಮಾಡಿದೆ. ಪವಾರ್ ಅವರ ನಿಧನದ ಸುದ್ದಿಯನ್ನು ಅರಗಿಸಿಕೊಳ್ಳಲು ಅಥವಾ ತಮ್ಮ ದುಃಖವನ್ನು ವ್ಯಕ್ತಪಡಿಸಲು ಅನೇಕರಿಗೆ ಸಾಧ್ಯವಾಗುತ್ತಿಲ್ಲ.
ಬಾರಾಮತಿಗೆ ಪವಾರ್ ಕುಟುಂಬ ದೌಡು
ಪವಾರ್ ಕುಟುಂಬದ ಹಿರಿಯ ಮುಖಂಡ ಮತ್ತು ಮಾಜಿ ಕೇಂದ್ರ ಕೃಷಿ ಸಚಿವ ಶರದ್ ಪವಾರ್, ಅವರ ಪುತ್ರಿ ಸಂಸದೆ ಸುಪ್ರಿಯಾ ಸುಳೆ, ಅಜಿತ್ ಪವಾರ್ ಅವರ ಪತ್ನಿ ಮತ್ತು ರಾಜ್ಯಸಭಾ ಸದಸ್ಯೆ ಸುನೇತ್ರಾ ಪವಾರ್ ಹಾಗೂ ಅಜಿತ್ ಅವರ ಪುತ್ರ ಪಾರ್ಥ ಅವರು ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಭಾಗವಹಿಸುವ ಸಲುವಾಗಿ ನವದೆಹಲಿಗೆ ತೆರಳಿದ್ದರು. ಶಾಸಕರಾದ ಅಜಿತ್ ದಾದಾ ಅವರ ಸೋದರಳಿಯ ರೋಹಿತ್ ಪವಾರ್ ಮುಂಬೈನಲ್ಲಿದ್ದರು. ಅವರೆಲ್ಲರೂ ತಕ್ಷಣವೇ ಬಾರಾಮತಿಗೆ ಧಾವಿಸಿದರು.
ಬಾರಾಮತಿ ವಿಧಾನಸಭಾ ಚುನಾವಣೆಯಲ್ಲಿ ಅಜಿತ್ ಪವಾರ್ ವಿರುದ್ಧ ಎನ್‌ಸಿಪಿ (ಎಸ್ಪಿ) ಟಿಕೆಟ್ನಲ್ಲಿ ಸ್ಪರ್ಧಿಸಿದ್ದ ಅವರ ಮತ್ತೊಬ್ಬ ಸೋದರಳಿಯ ಯುಗೇಂದ್ರ ಪವಾರ್ ಅವರು ಮಾತ್ರ ಬಾರಾಮತಿಯಲ್ಲಿದ್ದ ಏಕೈಕ ಕುಟುಂಬದ ಸದಸ್ಯರಾಗಿದ್ದರು; ಅವರು ಎನ್‌ಸಿಪಿ (ಎಸ್‌ಪಿ) ಬಣದ ಪರವಾಗಿ ಜಿಲ್ಲಾ ಪಂಚಾಯತ್ ಚುನಾವಣೆಗಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಘಟನೆಯ ನಂತರ, ರಾಜಕೀಯ ಭಿನ್ನಾಭಿಪ್ರಾಯಗಳಿದ್ದಾಗ್ಯೂ ಅವರು ಸಂಪೂರ್ಣವಾಗಿ ಧೃತಿಗೆಟ್ಟಂತೆ ಕಂಡುಬಂದರು ಮತ್ತು ದುಃಖ ತಡೆಯಲಾಗದೆ ಕಣ್ಣೀರಿಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.
“Devastated!” ಎಂದು ಸುಪ್ರಿಯಾ ಸುಳೆ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಸಂಕ್ಷಿಪ್ತವಾಗಿ ಬರೆದುಕೊಂಡಿದ್ದಾರೆ.
ತಮ್ಮ ಪ್ರೀತಿಪಾತ್ರ ನಾಯಕನಿಗೆ ಗೌರವ ಸೂಚಿಸಲು ಬಾರಾಮತಿ, ಬೀಡ್ ಮತ್ತು ಮಹಾರಾಷ್ಟ್ರದ ಬಹುತೇಕ ಭಾಗಗಳಲ್ಲಿ ಎಲ್ಲಾ ಮಾರುಕಟ್ಟೆಗಳು ಹಾಗೂ ವಾಣಿಜ್ಯ ಸಂಸ್ಥೆಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ.
ಅಜಿತ್ ಪವಾರ್ ಅವರು ಮಂಗಳವಾರವಷ್ಟೇ ರಾಜ್ಯದ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಿದ್ದರು. ಅವರು ಅತ್ಯಂತ ಖುಷಿಯ ಮೂಡ್ ನಲ್ಲಿ ಇದ್ದುದು ಕಂಡುಬಂದಿತ್ತು. ರಾಜ್ಯದಲ್ಲಿ ಇತ್ತೀಚೆಗೆ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಮ್ಮ ಪಕ್ಷದ ಸೋಲನ್ನು ಅವರು ಒಪ್ಪಿಕೊಂಡಿದ್ದರು.
“ಒಂದು ಕೆಲಸವನ್ನು ಅವರು ಒಪ್ಪಿಕೊಂಡರೆಂದರೆ ಅದನ್ನು ಆಗುಗೊಳಿಸಲು ಎಂತಹ ಸಾಹಸಕ್ಕಾದರೂ ಅವರು ಮುಂದಾಗುತ್ತಿದ್ದರು. ಆದರೆ ಒಂದು ವೇಳೆ ಅವರು ʼಇಲ್ಲʼ ಎಂದು ಹೇಳಿದರೆ ಅದು ಯಾವ ಕಾರಣಕ್ಕೂ ಆಗಲು ಸಾಧ್ಯವಿಲ್ಲ ಎಂದೇ ಅರ್ಥ, ಈ ವಿಚಾರದಲ್ಲಿ ಅವರ ನಿಲುವು ಅತ್ಯಂತ ಸ್ಪಷ್ಟವಾಗಿತ್ತು,:” ಎಂದು ಶಿವಸೇನೆಯ (ಯುಬಿಟಿ) ಲೋಕಸಭಾ ಸದಸ್ಯ ಅರವಿಂದ್ ಸಾವಂತ್ ಅವರು ಅಜಿತ್ ಪವಾರ್ ಅವರನ್ನು ನೆನೆದು ಹೀಗೆ ಬರೆದಿದ್ದಾರೆ.
ʼಮಾತೇ ಹೊರಡದಾಗಿದೆʼ ಎಂದು ಉಪಮುಖ್ಯಮಂತ್ರಿ ಹಾಗೂ ಶಿವಸೇನಾ ನಾಯಕ ಏಕನಾಥ ಶಿಂದೆ ಅವರು ಅಜಿತ್ ಪವಾರ್ ಅವರ ನಿಧನಕ್ಕೆ ಸಂತಾಪ ಸೂಚಿಸುತ್ತ ತಿಳಿಸಿದ್ದಾರೆ. ʼಇದೊಂದು ಭಾರೀ ದುರಂತʼ ಎಂದು ಅವರು ಹೇಳಿದ್ದಾರೆ. ಶಿಂಧೆ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಬಾರಾಮತಿಗೆ ಪ್ರಯಾಣ ಬೆಳೆಸಿದ್ದಾರೆ.
ಕಾಯಕಯೋಗಿ ಅಜಿತ್
ಅವರ ಸುತ್ತ ಯಾವತ್ತೂ ವಿವಾದಗಳು ಸುತ್ತಿಕೊಂಡಿರುತ್ತಿದ್ದವು. ಆದರೂ ಅವರನ್ನು ಸಮರ್ಥ ಆಡಳಿತಗಾರ ಎಂದು ಕರೆಯಲಾಗುತ್ತಿತ್ತು. ಅವರ ಚಿಕ್ಕಪ್ಪ ಶರದ್ ಪವಾರ್ ಅವರಂತೆ ಎಲ್ಲರ ಪಾಲಿಗೆ ಅವರು ನೆಚ್ಚಿನ ʼದಾದಾʼ ಆಗಿದ್ದರು.
ರಾಜ್ಯ ಶಾಸಕಾಂಗದಲ್ಲಿ ಅವರದ್ದು ಸುಮಾರು ಮೂರು ದಶಕಗಳ ಸುದೀರ್ಘ ಪಯಣ. ಆ ಅವಧಿಯಲ್ಲಿ ಅಜಿತ್ ಅವರು ಮಹಾರಾಷ್ಟ್ರ ಸರ್ಕಾರದಲ್ಲಿ ಹಣಕಾಸು, ಜಲಸಂಪನ್ಮೂಲ, ಇಂಧನ, ಗ್ರಾಮೀಣಾಭಿವೃದ್ಧಿ ಸಚಿವರಾಗಿ ಹಲವು ಖಾತೆಗಳನ್ನು ಸಮಾನ ದಕ್ಷತೆಯಿಂದ ನಿಭಾಯಿಸಿದ್ದರು. ಅತ್ಯಂತ ಕ್ಲಿಷ್ಟ ಎನ್ನುವಂತಹ ಯೋಜನೆಗಳನ್ನು ಕೂಡ ಮುನ್ನಡೆಸಿ ಅವುಗಳನ್ನು ದಾಖಲೆ ಸಮಯದಲ್ಲಿ ಅನುಷ್ಠಾನಗೊಳಿಸುವ ಛಾತಿ ಅವರಿಗಿತ್ತು. ಅಜಿತ್ ದಾದಾ ಯಾವತ್ತೂ ಶಿಸ್ತಿನ ಮನುಷ್ಯರಾಗಿದ್ದರು, ಆದರೆ ಅವರ ಕೆಲವು ಸಾರ್ವಜನಿಕ ಹೇಳಿಕೆಗಳು ಅವರನ್ನು ವಿಭಿನ್ನವಾಗಿ ಬಿಂಬಿಸುವಂತೆ ಮಾಡಿತ್ತು ಎಂದರೆ ಸುಳ್ಳಲ್ಲ.
ನುಡಿದಂತೆ ನಡೆಯುವ ನಾಯಕನಾಗಿದ್ದ ಅಜಿತ್ ಪವಾರ್ ಅವರನ್ನು ಕಂಡು ಜನರು ಮತ್ತು ಅಧಿಕಾರಿಗಳು ಎಷ್ಟು ಭಯ ಪಡುತ್ತಿದ್ದರೋ ಅಷ್ಟೇ ಪ್ರೀತಿಸುತ್ತಿದ್ದರು. ಅವರು ಪ್ರತಿ ದಿನ ಬೆಳಗಿನ ಜಾವವೇ ಎದ್ದು ತಮ್ಮ ದಿನಚರಿ ಪ್ರಾರಂಭಿಸುತ್ತಿದ್ದರು ಎಂಬುದಕ್ಕೆ ಈ ಚಳಿಗಾಲದ ಅವಧಿಯಲ್ಲಿಯೂ ಅವರು ಬೆಳಗಿನ ಜಾವವೇ ಎದ್ದು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು ಸಾಕ್ಷಿಯಾಗಿದೆ.
ಸುಮಾರು ನಾಲ್ಕು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ, ಅವರು ಸಾಮಾನ್ಯವಾಗಿ ಮುಂಜಾನೆ 5.30ಕ್ಕೆಲ್ಲ ತಮ್ಮ ಕೆಲಸವನ್ನು ಪ್ರಾರಂಭಿಸಿಬಿಡುತ್ತಿದ್ದರು ಮತ್ತು ಮಧ್ಯರಾತ್ರಿಯ ವರೆಗೂ ದುಡಿಯುವ ಕಾಯಕಯೋಗಿಯಾಗಿದ್ದರು.
ಸೋಲಿಲ್ಲದ ಸರದಾರ
1959ರ ಜುಲೈ 22 ರಂದು ಶರದ್ ಪವಾರ್ ಅವರ ಹಿರಿಯ ಸಹೋದರ ಅನಂತರಾವ್ ಪವಾರ್ ಅವರ ಮಗನಾಗಿ ಜನಿಸಿದ ಅಜಿತ್, 1980ರ ದಶಕದ ಉತ್ತರಾರ್ಧದಲ್ಲಿ ಬಾರಾಮತಿಯ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಪುಣೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನಿಂದ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದರು. ನಂತರ 1991 ರಲ್ಲಿ ಮೊದಲ ಬಾರಿಗೆ ರಾಜ್ಯ ವಿಧಾನಸಭೆಗೆ ಆಯ್ಕೆಯಾದರು.
ಶರದ್ ಪವಾರ್ ಅವರ ಮಾರ್ಗದರ್ಶನದಲ್ಲಿ ಬೆಳೆದ ಅಜಿತ್ ದಾದಾ, ರಾಜಕೀಯ ಶೈಲಿ ಮತ್ತು ಧೋರಣೆಯಲ್ಲಿ ಅವರಿಗಿಂತ ಭಿನ್ನವಾಗಿದ್ದರೂ, ಬುಧವಾರದ ಸಾವಿನವರೆಗೆ ಬಾರಾಮತಿಯಲ್ಲಿ ಎಂದಿಗೂ ಚುನಾವಣೆಯಲ್ಲಿ ಸೋತಿರಲಿಲ್ಲ. ಶರದ್ ಪವಾರ್ ಅವರು ಕೇಂದ್ರ ಕೃಷಿ ಸಚಿವರಾದ ಬಳಿಕ (2004 ರಿಂದ) ಅಜಿತ್ ದಾದಾ ಎನ್ಸಿಪಿ ಪಕ್ಷವನ್ನು ಸಾಂಘಿಕವಾಗಿ ನಡೆಸಲು ಪ್ರಾರಂಭಿಸಿದರು. "ರಾಜ್ಯದಲ್ಲಿ ಅಜಿತ್, ಕೇಂದ್ರದಲ್ಲಿ ಸುಪ್ರಿಯಾ" ಎಂಬುದು ಅವಿಭಜಿತ ಎನ್‌ಸಿಪಿ ಹಿರಿಯ ಪವಾರ್ ಮಾಡಿದ್ದ ಕೆಲಸದ ಹಂಚಿಕೆಯಾಗಿತ್ತು.
ಅಜಿತ್ ದಾದಾ ಅವರಿಗೆ ಗ್ರಾಮೀಣ ಆರ್ಥಿಕತೆಯಷ್ಟೇ ನಗರ ಆರ್ಥಿಕತೆ ಮತ್ತು ಸಮಸ್ಯೆಗಳ ಬಗ್ಗೆಯೂ ಸ್ಪಷ್ಟವಾದ ಅರಿವಿತ್ತು ಎಂದು ಅವರ ಆಪ್ತರು ಹೇಳುತ್ತಾರೆ. ಸಂಕೀರ್ಣವಾದ ಮಾತುಗಳಿಗಿಂತ ನಾಟಿ ಶೈಲಿಯ ಮಾತುಗಾರರಾಗಿದ್ದ ಅವರು, ಅಸೆಂಬ್ಲಿಯಲ್ಲಿ ಚರ್ಚೆಯ ಸಮಯದಲ್ಲಿ ತಮ್ಮ ಸ್ಪೂರ್ತಿದಾಯಕ ಭಾಷಣಗಳಲ್ಲಿ ಸ್ಥಳೀಯ ಗಾದೆಗಳನ್ನು ಸುಲಭವಾಗಿ ಉಲ್ಲೇಖಿಸುತ್ತಿದ್ದರು, ಇದು ಇಂದಿನ ರಾಜಕೀಯದಲ್ಲಿ ವಿರಳವಾಗಿದೆ.
ಅಜಿತ್ ದಾದಾ ಒಬ್ಬ ಕಠಿಣ, ನಿಷ್ಠುರ ರಾಜಕಾರಣಿಯಂತೆ ಕಂಡರೂ, ಅವರ ಆರಂಭಿಕ ದಿನಗಳ ತಳಮಟ್ಟದ ರಾಜಕಾರಣದ ಹಿನ್ನೆಲೆಯಿಂದಾಗಿ ಅವರಲ್ಲಿ ಭಾವನಾತ್ಮಕ ಮತ್ತು ಸಂವೇದನಾಶೀಲ ಗುಣ ನಿಚ್ಚಳವಾಗಿ ಕಾಣುತ್ತಿತ್ತು ಎಂದು ಅವರ ಆಪ್ತರು ಯಾವಾಗಲೂ ನೆನಪಿಸಿಕೊಳ್ಳುತ್ತಾರೆ. ಶರದ್ ಪವಾರ್ ಅವರಂತೆಯೇ, ಬಾರಾಮತಿ ಮತ್ತು ಅಲ್ಲಿನ ಜನರ ನಡುವೆ ಅಜಿತ್ ದಾದಾ ಕೂಡ ಯಾವುದೇ ಗೋಡೆಗಳನ್ನು ನಿರ್ಮಿಸಿರಲಿಲ್ಲ.
ಕೈತಪ್ಪುತ್ತಲೇ ಇದ್ದ ಸಿಎಂ ಪಟ್ಟ
ಆದರೆ, ಅಜಿತ್ ದಾದಾ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಸದಾ ಕೈತಪ್ಪುತ್ತಲೇ ಇತ್ತು. 1999ರಲ್ಲಿ ಎನ್‌ಸಿಪಿ ಸ್ಥಾಪನೆಯಾದ ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದಾಗ ಅವರಿಗೆ ಮುಖ್ಯಮಂತ್ರಿಯಾಗುವ ಸುವರ್ಣ ಅವಕಾಶವಿತ್ತು, ಆದರೆ ಆಗ ಪಕ್ಷವು ಆ ಸ್ಥಾನವನ್ನು ತನ್ನ ಮಿತ್ರಪಕ್ಷವಾದ ಕಾಂಗ್ರೆಸ್ಗೆ ಬಿಟ್ಟುಕೊಟ್ಟಿತು. ಆಗ ವಿಲಾಸರಾವ್ ದೇಶ್ಮುಖ್ ಮುಖ್ಯಮಂತ್ರಿ ಪಟ್ಟಕ್ಕೆ ಏರಿದರು ಮತ್ತು ಛಗನ್ ಭುಜಬಲ್ ಅವರಿಗೆ ಉಪಮುಖ್ಯಮಂತ್ರಿ ಅವಕಾಶ ಲಭಿಸಿತು; ಅಜಿತ್ ದಾದಾ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಸಿಕ್ಕಿದ್ದು ಬಹಳ ಕಾಲದ ನಂತರ, ಮತ್ತು ಅವರು ಕೊನೆಯವರೆಗೂ ಅದೇ ಸ್ಥಾನದಲ್ಲಿ ಮುಂದುವರಿದರು.
2022 ರಲ್ಲಿ ಅಜಿತ್ ದಾದಾ ಮೊದಲ ಬಾರಿಗೆ ತಮ್ಮ ಚಿಕ್ಕಪ್ಪನ ವಿರುದ್ಧ ಬಂಡಾಯ ಎದ್ದಿದ್ದರು, ಆದರೆ ಶರದ್ ಪವಾರ್ ಅದನ್ನು ಸಮರ್ಥವಾಗಿ ಶಮನಗೊಳಿಸಿದ್ದರು. ಶರದ್ ಪವಾರ್ ನೇತೃತ್ವದ ಎನ್‌ಸಿಪಿಗೆ ಅವರ ಈ ಹಠಾತ್ ನಿರ್ಧಾರದ ಬಗ್ಗೆ ಸುಳಿವೇ ಇಲ್ಲದಿದ್ದಾಗ, ಮುಂಜಾನೆ ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಅವರು ದೇವೇಂದ್ರ ಫಡ್ನವಿಸ್ ಅವರೊಂದಿಗೆ ಕೈಜೋಡಿಸಿ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಆದರೆ, ಜುಲೈ 2023 ರಲ್ಲಿ, ಶಿವಸೇನೆಯಲ್ಲಿ ಏಕನಾಥ್ ಶಿಂಧೆ ಸೃಷ್ಟಿಸಿದ ಒಡಕಿನ ಬೆನ್ನಲ್ಲೇ, ಅಜಿತ್ ಪವಾರ್ ಅಂತಿಮವಾಗಿ ತಮ್ಮ ಚಿಕ್ಕಪ್ಪನೊಂದಿಗೆ ರಾಜಕೀಯ ಸಂಬಂಧವನ್ನು ಕಡಿದುಕೊಂಡು ಎನ್‌ಸಿಪಿಯನ್ನು ವಿಭಜಿಸಿಯೇ ಬಿಟ್ಟರು ಮತ್ತು ಬಿಜೆಪಿಯೊಂದಿಗೆ ಕೈಜೋಡಿಸಿದರು.
ಅವರು ಹಣಕಾಸು ಖಾತೆ ಜೊತೆಗೆ ಉಪಮುಖ್ಯಮಂತ್ರಿ ಪಟ್ಟ ಗಿಟ್ಟಿಸಿದರು. 2024ರ ಲೋಕಸಭಾ ಚುನಾವಣೆಯಲ್ಲಿ ಅವರ ಬಣಕ್ಕೆ ಭಾರಿ ಹಿನ್ನಡೆ ಉಂಟಾಯಿತು. ಮಹಾರಾಷ್ಟ್ರದಲ್ಲಿ ಕೇವಲ ಒಂದು ಸ್ಥಾನವನ್ನು ಗೆಲ್ಲಲು ಮಾತ್ರ ಅವರ ಬಣಕ್ಕೆ ಸಾಧ್ಯವಾಯಿತು, ಆದರೆ ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರು ತಮ್ಮ ಹಿಡಿತವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾದರು.
ಪಕ್ಷದ ನಿಯಂತ್ರಣ ಮತ್ತು ರಾಜಕೀಯ ಚಿಹ್ನೆಯ ಬಗ್ಗೆ ಎನ್‌ಸಿಪಿಯ ಎರಡು ಬಣಗಳ ನಡುವಿನ ಹೋರಾಟವು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದೆ. ಆದರೆ ಇತ್ತೀಚೆಗೆ ಮುಕ್ತಾಯಗೊಂಡ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ಪುಣೆ ಮತ್ತು ಪಿಂಪ್ರಿ-ಚಿಂಚವಾಡ ಮಹಾನಗರಪಾಲಿಕೆ ಚುನಾವಣೆಗಳನ್ನು ಒಟ್ಟಾಗಿ ಎದುರಿಸಲು ಎರಡೂ ಎನ್ಸಿಪಿ ಬಣಗಳು ನಿರ್ಧರಿಸಿದ್ದವು; ಆದರೆ ಅಲ್ಲಿ ಬಿಜೆಪಿಯ ವಿರುದ್ಧ ತೀವ್ರ ಸೋಲನ್ನು ಅನುಭವಿಸಬೇಕಾಯಿತು.
ಕೇವಲ ಎರಡು ದಿನಗಳ ಹಿಂದೆಯಷ್ಟೇ, ಅಜಿತ್ ಪವಾರ್ ಮತ್ತು ಶರದ್ ಪವಾರ್ ಬಣಗಳು ಒಂದೇ ಚಿಹ್ನೆಯಡಿ (ಗಡಿಯಾರ) ಜಂಟಿಯಾಗಿ ಸ್ಪರ್ಧಿಸುವ ಬಗ್ಗೆ ಮಾತುಕತೆಗಳು ನಡೆದಿದ್ದವು. ಇದು ಎರಡೂ ಬಣಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವ ಮುನ್ಸೂಚನೆಯನ್ನು ನೀಡಿತ್ತು.
ಕೌಟುಂಬಿಕ ಸಂಬಂಧದ ಬಗ್ಗೆ ಗೌರವ
ರಾಜಕೀಯ ಹಗೆತನದ ಹೊರತಾಗಿಯೂ, ಅಜಿತ್ ದಾದಾ ಕುಟುಂಬದೊಳಗಿನ ಸಂಬಂಧಗಳನ್ನು ಕಡಿದುಕೊಂಡಿರಲಿಲ್ಲ. ಶರದ್ ಪವಾರ್ ಅವರು ಈಗಲೂ ತಮ್ಮ ಮಾರ್ಗದರ್ಶಕರು ಮತ್ತು ಗೌರವಾನ್ವಿತ ವ್ಯಕ್ತಿ ಎಂದು ಹಾಗೂ ಸುಪ್ರಿಯಾ ತಮ್ಮ ಪ್ರೀತಿಯ ಸಹೋದರಿ ಎಂದು ಸಾರ್ವಜನಿಕವಾಗಿ ಹೇಳಿಕೊಳ್ಳುತ್ತಿದ್ದರು. ಕಾಲಾನಂತರದಲ್ಲಿ ಕೇಸರಿ ಪಕ್ಷವು ತಮ್ಮ ಸ್ಥಳೀಯ ನಾಯಕರನ್ನು ಸೆಳೆಯುವ ಮೂಲಕ ತಮ್ಮ ಪಕ್ಷಕ್ಕೆ ಹಾನಿ ಮಾಡಬಹುದು ಎಂಬ ಅರಿವಿದ್ದರೂ, ಅವರು ಬಿಜೆಪಿಯೊಂದಿಗೆ ಹೊಂದಾಣಿಕೆ ಕಾಯ್ದುಕೊಂಡಿದ್ದರು.
ಶರದ್ ಪವಾರ್ ಅವರ ವಯೋಸಹಜ ಮಿತಿಗಳನ್ನು ಗಮನಿಸಿದರೆ, ಈ ಅಪಘಾತದಲ್ಲಿ ಅಜಿತ್ ದಾದಾ ಅವರ ನಿಧನವು ಎರಡೂ ಎನ್‌ಸಿಪಿ ಬಣಗಳನ್ನು ಅನಿಶ್ಚಿತತೆಯ ಸುಳಿಯಲ್ಲಿ ಸಿಲುಕಿಸಿದೆ. ಅವರ ಎನ್‌ಸಿಪಿ ಬಣದಲ್ಲಿ ಅಜಿತ್ ದಾದಾ ಅವರ ಸ್ಥಾನವನ್ನು ತುಂಬಬಲ್ಲ ಸಮರ್ಥ ನಾಯಕರು ಸದ್ಯಕ್ಕೆ ಯಾರೂ ಕಾಣಿಸುತ್ತಿಲ್ಲ ಎಂಬುದು ಮಾತ್ರ ಸತ್ಯ.
ವಿವಾದಗಳ ಹೊರತಾಗಿಯೂ...
ಅಜಿತ್ ಪವಾರ್ ಅವರ ಸುದೀರ್ಘ ರಾಜಕೀಯ ಜೀವನವು ಅನೇಕ ಗಂಭೀರ ಭ್ರಷ್ಟಾಚಾರದ ಆರೋಪಗಳು, ರಾಜಕೀಯ ಅತಿಕ್ರಮಣ ಮತ್ತು ವಿವಾದಗಳಿಂದ ಕೂಡಿದ್ದವು. ಅವುಗಳಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಬಹುದಾದ ಸಂಗತಿಗಳೆಂದರೆ 2007 ರಿಂದೀಚೆಗೆ ನಡೆದ ನೀರಾವರಿ ಯೋಜನೆಗಳ ಅಕ್ರಮಗಳು ಹಾಗೂ ಮಹಾರಾಷ್ಟ್ರ ರಾಜ್ಯ ಕೇಂದ್ರ ಸಹಕಾರಿ ಬ್ಯಾಂಕ್ಗಳಿಂದ ಹಿಡಿದು ಸಹಕಾರಿ ಸಕ್ಕರೆ ಕಾರ್ಖಾನೆಗಳ ದುರುಪಯೋಗದ ವರೆಗಿನ ವಿವಾದಗಳು. ಆದರೆ ಈ ವಿವಾದಗಳು ಯಾವುದೂ ಅವರ ರಾಜಕೀಯ ಜೀವನಕ್ಕೆ ಚ್ಯುತಿ ತರಲಿಲ್ಲ.
ಅವರ ಪತನಕ್ಕೇನೂ ಕಾರಣವಾಗಲಿಲ್ಲ. ವಾಸ್ತವವಾಗಿ, ಪ್ರಧಾನಿ ನರೇಂದ್ರ ಮೋದಿ ಅವರೇ ಅಜಿತ್ ಪವಾರ್ ವಿರುದ್ಧ ಗಂಭೀರ ಹಣಕಾಸು ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದರು, ಆದರೆ ಅವರು ಎನ್‌ಸಿಪಿಯನ್ನು ವಿಭಜಿಸಿ ಮಹಾರಾಷ್ಟ್ರದಲ್ಲಿ ಬಿಜೆಪಿಯ ಮಿತ್ರಪಕ್ಷವಾದ ನಂತರ ಅವರ ವಿರುದ್ಧದ ಟೀಕೆಗಳು ತಣ್ಣಗಾದವು.
ತಮ್ಮ ಪಕ್ಷದ ಮುಖ್ಯಸ್ಥರಾಗಿ, ಅವರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದ ಪಕ್ಷದ ಪದಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದರು. ಆ ಮೂಲಕ ತಮ್ಮ ಪಕ್ಷದೊಳಗೆ ಕಾನೂನುಬಾಹಿರ ನಡವಳಿಕೆಗಳ ವಿರುದ್ಧ ಶೂನ್ಯ ಸಹಿಷ್ಣುತೆ ಇರುವುದನ್ನು ಅವರು ಪ್ರತಿಪಾದಿಸಿದ್ದರು.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ.

