
ಡಿಜಿಟಲ್ ಪಾವತಿ : ಯುಪಿಐ, ಫಾಸ್ಟ್ಯಾಗ್ ಮುನ್ನಡೆ; ಎಇಪಿಎಸ್ ವಹಿವಾಟಿಗೆ ಹಿನ್ನಡೆ
ಬ್ಯಾಂಕುಗಳ ನಡುವಿನ ತ್ವರಿತ ನಿಧಿ ವರ್ಗಾವಣೆಯ ಐಎಂಪಿಎಸ್, ಗ್ರಾಮೀಣ ಭಾಗದ ಆಧಾರ ಸ್ತಂಭವಾಗಿರುವ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ ಕುಸಿತವನ್ನು ಎದುರಿಸುತ್ತಿವೆ.
ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್ಪಿಸಿಐ) ನಿರ್ವಹಿಸುವ ಡಿಜಿಟಲ್ ಪಾವತಿ ವ್ಯವಸ್ಥೆಗಳು ಭಾರತದ ಆರ್ಥಿಕತೆಯ ಚಿತ್ರಣವನ್ನು ಆಮೂಲಾಗ್ರವಾಗಿ ಬದಲಾಯಿಸಿವೆ. ಭಾರತೀಯ ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಮಿಶ್ರ ಹಾಗೂ ಕುತೂಹಲಕಾರಿ ಬೆಳವಣಿಗೆಗಳು ಗೋಚರಿಸುತ್ತಿವೆ. ಏಕೀಕೃತ ಪಾವತಿ ಇಂಟರ್ಫೇಸ್ ಸಣ್ಣ ಮೌಲ್ಯದ ಮತ್ತು ನಿರಂತರ ವಹಿವಾಟುಗಳಿಗೆ ದೈನಂದಿನ ಸಾಧನವಾಗಿ ಹೊರಹೊಮ್ಮಿದ್ದರೆ, ಹೆದ್ದಾರಿ ಟೋಲ್ಗಳಲ್ಲಿ ಫಾಸ್ಟ್ಯಾಗ್ ಗಣನೀಯ ಪ್ರಗತಿ ಸಾಧಿಸುತ್ತಿದೆ. ಆದರೆ, ಬ್ಯಾಂಕುಗಳ ನಡುವಿನ ತ್ವರಿತ ನಿಧಿ ವರ್ಗಾವಣೆಯ ಐಎಂಪಿಎಸ್ ಮತ್ತು ಗ್ರಾಮೀಣ ಭಾಗದ ಆಧಾರ ಸ್ತಂಭವಾಗಿರುವ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ ಕೆಲವು ರಚನಾತ್ಮಕ ಸವಾಲುಗಳನ್ನು ಹಾಗೂ ಕುಸಿತವನ್ನು ಎದುರಿಸುತ್ತಿವೆ. ಈ ಬೆಳವಣಿಗೆಗಳು ಭಾರತದ ಚಿಲ್ಲರೆ ಆರ್ಥಿಕತೆ, ನಗದು ರಹಿತ ವಹಿವಾಟು ಮತ್ತು ಹಣಕಾಸು ಸೇರ್ಪಡೆಯ ಕುರಿತು ಮಹತ್ವದ ಒಳನೋಟಗಳನ್ನು ನೀಡುತ್ತವೆ.
ಯುಪಿಐ ವಹಿವಾಟಿನ ಒಟ್ಟು ಮೌಲ್ಯಕ್ಕಿಂತ ಅದರ ಪ್ರಮಾಣ ಅಥವಾ ಸಂಖ್ಯೆಯು ಅತಿ ವೇಗವಾಗಿ ಬೆಳೆಯುತ್ತಿರುವುದು ಇತ್ತೀಚಿನ ಪ್ರಮುಖ ಪ್ರವೃತ್ತಿಯಾಗಿದೆ. ಅಂಕಿಅಂಶಗಳು ಒಂದು ಸ್ಪಷ್ಟ ಆರ್ಥಿಕ ನಡವಳಿಕೆಯನ್ನು ಸೂಚಿಸುತ್ತವೆ. ಗ್ರಾಹಕರು ದಿನಸಿ ಖರೀದಿ, ಚಹಾ ಅಂಗಡಿಗಳು, ಸ್ಥಳೀಯ ತರಕಾರಿ ಮಾರುಕಟ್ಟೆ ಹಾಗೂ ಸಣ್ಣಪುಟ್ಟ ಸೇವೆಗಳಂತಹ ದೈನಂದಿನ, ಸಣ್ಣ ಮೌಲ್ಯದ ವೆಚ್ಚಗಳಿಗಾಗಿ ನಗದಿನ ಬದಲಾಗಿ ಯುಪಿಐ ಅನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಕೇವಲ ಚಿಲ್ಲರೆ ಪಾವತಿಗಳಷ್ಟೇ ಅಲ್ಲದೆ, ಗೃಹೋಪಯೋಗಿ ವಸ್ತುಗಳ ಖರೀದಿ, ಶಾಲಾ ಶುಲ್ಕ ಮತ್ತು ಇ-ಕಾಮರ್ಸ್ನಂತಹ ಹೆಚ್ಚಿನ ಮೌಲ್ಯದ ಖರೀದಿಗಳಿಗೂ ಯುಪಿಐ ವೇದಿಕೆಯು ಸಕ್ರಿಯವಾಗಿ ಬಳಕೆಯಾಗುತ್ತಲೇ ಇದೆ. ಸಣ್ಣ ಮೌಲ್ಯದ ಪಾವತಿಗಳಲ್ಲೂ ಯುಪಿಐ ಪ್ರಾಬಲ್ಯ ಸಾಧಿಸಿರುವುದು ಭಾರತೀಯ ಮಾರುಕಟ್ಟೆಯಲ್ಲಿ ಚಿಲ್ಲರೆ ನಗದಿನ ಮೇಲಿನ ಅವಲಂಬನೆಯನ್ನು ತೀವ್ರವಾಗಿ ಕಡಿಮೆ ಮಾಡಿದೆ.
ವೇಗ ಪಡೆದುಕೊಂಡ ಫಾಸ್ಟ್ಯಾಗ್
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹಣಾ ವ್ಯವಸ್ಥೆಯಾದ ಫಾಸ್ಟ್ಯಾಗ್ ಅಕ್ಟೋಬರ್ ತಿಂಗಳಲ್ಲಿ ದಾಖಲೆಯ ವಹಿವಾಟುಗಳನ್ನು ದಾಖಲಿಸಿದೆ. ಸೆಪ್ಟೆಂಬರ್ ತಿಂಗಳಲ್ಲಿ 7,377 ಕೋಟಿ ರೂ. ಮೌಲ್ಯದ 418 ಮಿಲಿಯನ್ (41.8 ಕೋಟಿ ರೂ.) ವಹಿವಾಟುಗಳು ನಡೆದಿದ್ದವು. ಅಕ್ಟೋಬರ್ ವೇಳೆಗೆ ಇದು 8,085 ಕೋಟಿ ರೂ. ಮೌಲ್ಯದ 454 ಮಿಲಿಯನ್ (45.4 ಕೋಟಿ ರೂ.) ವಹಿವಾಟುಗಳಿಗೆ ಏರಿಕೆಯಾಗಿದೆ. ಇದು ವಹಿವಾಟಿನ ಪ್ರಮಾಣದಲ್ಲಿ ಶೇ. 8.6 ರಷ್ಟು ಮತ್ತು ಮೌಲ್ಯದಲ್ಲಿ ಶೇ. 9.6 ರಷ್ಟು ಮಾಸಿಕ ಬೆಳವಣಿಗೆಯನ್ನು ತೋರಿಸುತ್ತದೆ. ಎನ್ಪಿಸಿಐ ನೀಡಿರುವ ವರದಿಯ ಪ್ರಕಾರ, ಫಾಸ್ಟ್ಯಾಗ್ ವಹಿವಾಟಿನ ಪ್ರಮಾಣದಲ್ಲಿ ಶೇ. 12 ರಷ್ಟು ಮತ್ತು ಮೌಲ್ಯದಲ್ಲಿ ಶೇ.17 ರಷ್ಟು ವಾರ್ಷಿಕ ಬೆಳವಣಿಗೆ ಕಂಡುಬಂದಿದೆ. ಜೊತೆಗೆ, ಇದುವರೆಗೆ ದೇಶಾದ್ಯಂತ 11.07 ಮಿಲಿಯನ್ (1.1 ಕೋಟಿಗೂ ಹೆಚ್ಚು) ವಾರ್ಷಿಕ ಪಾಸ್ಗಳನ್ನು ವಿತರಿಸಲಾಗಿದೆ.
ಆದರೂ, ವಾರ್ಷಿಕ ಬೆಳವಣಿಗೆಯ ಶೇಕಡಾವಾರು ಲೆಕ್ಕಾಚಾರದಲ್ಲಿ ವ್ಯತ್ಯಾಸಗಳು ಕಂಡುಬಂದಿವೆ. ಮಾಧ್ಯಮ ವರದಿಗಳ ಪ್ರಕಾರ, ಕಳೆದ ವರ್ಷದ ಅಕ್ಟೋಬರ್ನಲ್ಲಿ 6,686 ಕೋಟಿ ರೂ. ಮೌಲ್ಯದ ೩೬೧ ಮಿಲಿಯನ್ ವಹಿವಾಟುಗಳು ದಾಖಲಾಗಿದ್ದವು. ಈ ಪ್ರಕಟಿತ ಅಂಕಿಅಂಶಗಳಿಗೆ ಪ್ರಸ್ತುತ ಅಕ್ಟೋಬರ್ ಅಂಕಿಅಂಶಗಳನ್ನು ಹೋಲಿಸಿದರೆ, ವಹಿವಾಟಿನ ಪ್ರಮಾಣದಲ್ಲಿ ಶೇ. 25.8 ರಷ್ಟು ಮತ್ತು ಮೌಲ್ಯದಲ್ಲಿ ಶೇ. 20.9 ರಷ್ಟು ಬೆಳವಣಿಗೆ ಕಂಡುಬರಬೇಕಿತ್ತು. ಆದರೆ ಎನ್ಪಿಸಿಐ ನೀಡಿದ ಶೇ. 12 ಮತ್ತು ಶೇ. 17 ರ ವರದಿಯು ಈ ಹಿಂದಿನ ಅಂಕಿಅಂಶಗಳೊಂದಿಗೆ ತಾಳೆಯಾಗುತ್ತಿಲ್ಲ. ಆದ್ದರಿಂದ ಈ ಐತಿಹಾಸಿಕ ಹೋಲಿಕೆಯನ್ನು ಮರುಪರಿಶೀಲಿಸಿ ಸ್ಪಷ್ಟಪಡಿಸುವ ಅಗತ್ಯವಿದೆ.
ಮೌಲ್ಯ ಹೆಚ್ಚಳ, ಆದರೆ ಕುಸಿಯುತ್ತಿರುವ ವಹಿವಾಟಿನ ಆವರ್ತನ
ತ್ವರಿತ ಪಾವತಿ ಸೇವೆಯಾದ ಐಎಂಪಿಎಸ್ ದೊಡ್ಡ ಮೊತ್ತದ ಬ್ಯಾಂಕ್-ಟು-ಬ್ಯಾಂಕ್ ವಹಿವಾಟುಗಳಲ್ಲಿ ತನ್ನ ಮಹತ್ವವನ್ನು ಉಳಿಸಿಕೊಂಡಿದ್ದರೂ, ಅದರ ಬಳಕೆಯ ಆವರ್ತನದಲ್ಲಿ ಇಳಿಕೆ ಕಂಡುಬಂದಿದೆ. ಅಕ್ಟೋಬರ್ನಲ್ಲಿ ಐಎಂಪಿಎಸ್ ಒಟ್ಟು 7.63 ಲಕ್ಷ ಕೋಟಿ ರೂ. ಮೌಲ್ಯದ 375 ಮಿಲಿಯನ್ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಿದೆ. ಸೆಪ್ಟೆಂಬರ್ನಲ್ಲಿ ದಾಖಲಾಗಿದ್ದ 354 ಮಿಲಿಯನ್ ವಹಿವಾಟು ಮತ್ತು 7.06 ಲಕ್ಷ ಕೋಟಿ ರೂ.ಗೆ ಹೋಲಿಸಿದರೆ ಅಕ್ಟೋಬರ್ನಲ್ಲಿ ಮಾಸಿಕ ಪ್ರಗತಿ ದಾಖಲಾಗಿದೆ. ವಾರ್ಷಿಕ ಲೆಕ್ಕಾಚಾರದಲ್ಲಿ ಐಎಂಪಿಎಸ್ ವಹಿವಾಟಿನ ಮೌಲ್ಯವು ಶೇ. 19 ರಷ್ಟು ಹೆಚ್ಚಳವಾಗಿದೆ, ಆದರೆ ವಹಿವಾಟುಗಳ ಒಟ್ಟು ಪ್ರಮಾಣವು ಶೇ. 7 ರಷ್ಟು ಕುಸಿದಿದೆ. ಈ ವಿರೋಧಾಭಾಸವು ಏನನ್ನು ತೋರಿಸುತ್ತದೆ ಎಂದರೆ—ಜನರು ಮತ್ತು ವ್ಯವಹಾರಗಳು ಹೆಚ್ಚಿನ ಮೊತ್ತದ ಹಣ ವರ್ಗಾವಣೆಗೆ ಐಎಂಪಿಎಸ್ ಅನ್ನು ಇಂದಿಗೂ ನೆಚ್ಚಿಕೊಂಡಿದ್ದಾರೆ. ಆದರೆ, ಮಧ್ಯಮ ಮತ್ತು ಸಣ್ಣ ಮೊತ್ತದ ವರ್ಗಾವಣೆಗಳಿಗೆ ಐಎಂಪಿಎಸ್ ಬದಲಾಗಿ ಯುಪಿಐ ಕಡೆಗೆ ವಾಲುತ್ತಿರಬಹುದು. ಆದರೂ, ಈ ಪ್ರಮಾಣ ಕುಸಿತಕ್ಕೆ ಯುಪಿಐ ನೇರ ಕಾರಣವೇ ಎಂಬುದನ್ನು ದೃಢಪಡಿಸಲು ಪ್ರತ್ಯೇಕ ಅಧ್ಯಯನದ ಅಗತ್ಯವಿದೆ.
ಎಇಪಿಎಸ್ ಹಿನ್ನಡೆ: ಗ್ರಾಮೀಣ ಹಣಕಾಸು ಸೇರ್ಪಡೆಗೆ ಕಳವಳ
ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯು ಎದುರಿಸುತ್ತಿರುವ ಹಿನ್ನಡೆಯು ಆರ್ಥಿಕ ತಜ್ಞರಲ್ಲಿ ಕಳವಳ ಮೂಡಿಸಿದೆ. ಸೆಪ್ಟೆಂಬರ್ನಲ್ಲಿದ್ದ 95.78 ಮಿಲಿಯನ್ ವಹಿವಾಟುಗಳಿಂದ ಅಕ್ಟೋಬರ್ನಲ್ಲಿ 102 ಮಿಲಿಯನ್ಗೆ ಏರಿಕೆಯಾಗಿದ್ದರೂ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಶೇ. 8 ರಷ್ಟು ಕಡಿಮೆಯಾಗಿದೆ. ಅಕ್ಟೋಬರ್ನಲ್ಲಿ ಏಇಪಿಎಸ್ ಮೂಲಕ 25,555 ಕೋಟಿ ರೂ. ಮೊತ್ತದ ವಹಿವಾಟು ನಡೆದಿದ್ದು, ಇದು ವಾರ್ಷಿಕವಾಗಿ ಬರೋಬ್ಬರಿ ಶೇ. 16 ರಷ್ಟು ಕುಸಿತ ಕಂಡಿದೆ. ಬ್ಯಾಂಕಿಂಗ್ ಸೌಲಭ್ಯಗಳಿಲ್ಲದ ಗ್ರಾಮೀಣ ಪ್ರದೇಶಗಳಲ್ಲಿ ನಗದು ಹಿಂಪಡೆಯುವಿಕೆ, ಬ್ಯಾಲೆನ್ಸ್ ವಿಚಾರಣೆ ಮತ್ತು ಸರ್ಕಾರದ ಡಿಬಿಟಿ ಹಣವನ್ನು ಪಡೆಯಲು ಬಡ ಜನರಿಗೆ ಎಇಪಿಎಸ್ ಪ್ರಮುಖ ಸಾಧನವಾಗಿದೆ. ಇಂತಹ ವ್ಯವಸ್ಥೆಯಲ್ಲಿ ವಾರ್ಷಿಕ ಮಟ್ಟದಲ್ಲಿ ವಹಿವಾಟು ಕುಸಿಯುತ್ತಿರುವುದು ಗಂಭೀರ ವಿಷಯ. ಬಯೋಮೆಟ್ರಿಕ್ ದೋಷಗಳು, ಆನ್ಲೈನ್ ವಂಚನೆಗಳ ತಡೆಗೆ ಜಾರಿಗೆ ತಂದ ಕಠಿಣ ನಿಯಮಗಳು ಅಥವಾ ಗ್ರಾಮೀಣ ಮಟ್ಟದಲ್ಲಿ ಹಣಕಾಸು ಬಿಕ್ಕಟ್ಟು ಕಾರಣವೇ ಎಂಬುದನ್ನು ತಿಳಿಯಲು ಸಕ್ರಿಯ ಬಳಕೆದಾರರು ಮತ್ತು ಪ್ರದೇಶವಾರು ದತ್ತಾಂಶಗಳ ವಿಶ್ಲೇಷಣೆ ಅಗತ್ಯವಾಗಿದೆ.
