ಹಸೆಮಣೆಯಲ್ಲಿ ಕುಳಿತಿದ್ದ ವಧುವಿನ ಮೇಲೆ ಪಾಗಲ್‌ ಪ್ರೇಮಿಯಿಂದ ಗುಂಡಿನ ದಾಳಿ
x
ಮದುವೆ ಸಂಭ್ರಮದಲ್ಲಿದ್ದ ವಧು-ವರ

ಹಸೆಮಣೆಯಲ್ಲಿ ಕುಳಿತಿದ್ದ ವಧುವಿನ ಮೇಲೆ ಪಾಗಲ್‌ ಪ್ರೇಮಿಯಿಂದ ಗುಂಡಿನ ದಾಳಿ

ಬಿಹಾರದ ಬಕ್ಸರ್‌ನಲ್ಲಿ ಮದುವೆ ವಿಧಿವಿಧಾನ ನಡೆಯುತ್ತಿದ್ದಾಗ ವೇದಿಕೆಯ ಮೇಲಿದ್ದ ವಧುವಿನ ಹೊಟ್ಟೆಗೆ ಆಕೆಯ ಮಾಜಿ ಪ್ರೇಮಿ ಗುಂಡು ಹಾರಿಸಿದ್ದು, ವಧುವಿನ ಸ್ಥಿತಿ ಗಂಭೀರವಾಗಿದೆ.


ಮದುವೆಯ ಸಂಭ್ರಮ ಸಡಗರದಿಂದ ಕೂಡಿದ್ದ ಮನೆಯಲ್ಲಿ ಅಕ್ಷರಶಃ ರಕ್ತದ ಕೋಡಿ ಹರಿದಿದೆ. ಹಸೆಮಣೆ ಏರಿದ್ದ ವಧುವಿಗೆ ಆಕೆಯ ಮಾಜಿ ಪ್ರೇಮಿ ಎನ್ನಲಾದ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದು, ಮದುವೆ ಮನೆ ಸ್ಮಶಾನ ಸದೃಶ್ಯವಾಗಿ ಮಾರ್ಪಟ್ಟಿರುವ ಘಟನೆ ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಹದಿನೆಂಟು ವರ್ಷದ ಆರತಿ ಕುಮಾರಿ ತನ್ನ ಭಾವಿ ಪತಿಯೊಂದಿಗೆ ಮದುವೆ ಮಂಟಪದಲ್ಲಿ ಕುಳಿತಿದ್ದಳು. ನೆಂಟರಿಷ್ಟರು, ಸ್ನೇಹಿತರಿಂದ ವೇದಿಕೆ ತುಂಬಿ ತುಳುಕುತ್ತಿತ್ತು. ವಧುವಿನ ಸಹೋದರಿ ಎನ್ನಲಾದ ಬಾಲಕಿಯೊಬ್ಬಳು ಶಾಸ್ತ್ರದ ಪ್ರಕಾರ ತನ್ನ ಭಾವನ ಹಣೆಗೆ ಸಿಂಧೂರ ಇಡುತ್ತಿದ್ದಳು. ನಂತರ ಅದೇ ಸಿಂಧೂರವನ್ನು ವಧುವಿನ ಹಣೆಗೆ ಇಡಲು ಮುಂದಾದ ಕ್ಷಣದಲ್ಲಿ, ಅತಿಥಿಗಳ ನಡುವೆ ಅವಿತಿದ್ದ ದುಷ್ಕರ್ಮಿ ದಿಢೀರ್ ಗುಂಡಿನ ದಾಳಿ ನಡೆಸಿದ್ದಾನೆ.

ಹೊಟ್ಟೆಯ ಭಾಗಕ್ಕೆ ತಗುಲಿದ ಗುಂಡು

ಆರೋಪಿ ಹಾರಿಸಿದ ಗುಂಡು ನೇರವಾಗಿ ಆರತಿ ಕುಮಾರಿಯ ಹೊಟ್ಟೆಯ ಭಾಗಕ್ಕೆ (ಹೊಕ್ಕುಳ ಬಳಿ) ತಗುಲಿದೆ. ತಕ್ಷಣವೇ ಆಕೆ ಮಂಟಪದಲ್ಲೆ ಕುಸಿದು ಬಿದ್ದಿದ್ದಾಳೆ. ಗುಂಡಿನ ಸದ್ದು ಕೇಳುತ್ತಿದ್ದಂತೆ ಮದುವೆ ಮಂಟಪದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಕೆಲವರು ಆರತಿ ಪ್ರಜ್ಞೆ ತಪ್ಪದಂತೆ ಎಚ್ಚರಿಸಲು ಯತ್ನಿಸುತ್ತಿದ್ದರೆ, ಇನ್ನುಳಿದವರು ಭಯದಿಂದ ದಿಕ್ಕಾಪಾಲಾಗಿ ಓಡಿದ್ದಾರೆ.

ವಧುವಿನ ಸ್ಥಿತಿ ಗಂಭೀರ

ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಆರತಿಯನ್ನು ತಕ್ಷಣವೇ ಹತ್ತಿರದ ಸಾದರ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ, ಸ್ಥಿತಿ ಗಂಭೀರವಾಗಿದ್ದರಿಂದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ವಾರಣಾಸಿಯ ಟ್ರಾಮಾ ಸೆಂಟರ್‌ಗೆ ರವಾನಿಸಿದ್ದಾರೆ. ಪ್ರಸ್ತುತ ವಧುವಿನ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋ ಇಲ್ಲಿದೆ

ಆರೋಪಿ ಪಲಾಯನ

ಗುಂಡು ಹಾರಿಸಿದ ವ್ಯಕ್ತಿಯನ್ನು ನೆರೆಮನೆಯ ನಿವಾಸಿ ದೀನ್‌ಬಂಧು ಎಂದು ಗುರುತಿಸಲಾಗಿದೆ. ಈತ ಮತ್ತು ವಧುವಿನ ನಡುವೆ ಪ್ರೇಮ ಸಂಬಂಧವಿತ್ತು ಎಂದು ಸ್ಥಳೀಯರು ಶಂಕಿಸಿದ್ದಾರೆ. ಕೃತ್ಯ ಎಸಗಿದ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಹಿಂದೆ ಈತ ಮದ್ಯದ ಪ್ರಕರಣವೊಂದರಲ್ಲಿ ಜೈಲು ಪಾಲಾಗಿದ್ದ ಎಂದು ಹೆಚ್ಚುವರಿ ಪೊಲೀಸ್ ಠಾಣಾಧಿಕಾರಿ ಚಂದನ್ ಕುಮಾರ್ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ತಲೆಮರೆಸಿಕೊಂಡಿರುವ ಆರೋಪಿಯ ಪೋಷಕರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.

ರಾಜ್ಯದಲ್ಲಿಯೂ ನಡೆದಿತ್ತು ಇಂತಹದ್ದೇ ಘಟನೆ

ಕೆಲ ವರ್ಷಗಳ ಹಿಂದೆ ಕೊಡಗಿನಲ್ಲಿ ಮದುವೆಯ ನಂತರದ ಆರತಕ್ಷತೆ ವೇಳೆ ಆಘಾತಕಾರಿ ಘಟನೆಯೊಂದು ನಡೆದಿತ್ತು. ವಧುವನ್ನು ಪ್ರೀತಿಸುತ್ತಿದ್ದ ವ್ಯಕ್ತಿಯೊಬ್ಬ, ಆಕೆ ಬೇರೆಯವನ ಪಾಲಾಗುತ್ತಿದ್ದಾಳೆ ಎಂಬ ದ್ವೇಷದಿಂದ ಮದುವೆ ಮಂಟಪಕ್ಕೇ ನುಗ್ಗಿ ತನ್ನಲ್ಲಿದ್ದ ಕೋವಿಯಿಂದ ವಧುವಿನ ಮೇಲೆ ಗುಂಡು ಹಾರಿಸಿದ್ದ. ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

ಸಂಪ್ರದಾಯವು ಮುಳುವಾಗಿತ್ತು

ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಮದುವೆಯ ಸಂಭ್ರಮಕ್ಕಾಗಿ ಗಾಳಿಯಲ್ಲಿ ಗುಂಡು ಹಾರಿಸುವ ಸಂಪ್ರದಾಯವಿದೆ. ಇದು ಅನೇಕ ಬಾರಿ ಸಾವಿನಲ್ಲಿ ಅಂತ್ಯವಾಗಿರುವ ಘಟನೆಗಳು ವರದಿಯಾಗಿದ್ದವು. ವರನ ಸ್ನೇಹಿತರು ಹಾರಿಸಿದ ಗುಂಡು ಆಕಸ್ಮಿಕವಾಗಿ ವರನಿಗೇ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ ಅನೇಕ ಪ್ರಕರಣಗಳ ನಡುವೆ, ಸಂಭ್ರಮಕ್ಕೆ ಹಾರಿಸಿದ ಗುಂಡು ಮಂಟಪದಲ್ಲಿ ಕುಳಿತಿದ್ದ ಮಗು ಅಥವಾ ವಯಸ್ಸಾದವರಿಗೆ ತಗುಲಿ ಮದುವೆ ಮನೆ ಮಸನವಾದ ಉದಾಹರಣೆಗಳು ಸಾಕಷ್ಟಿವೆ.

Read More
Next Story