
ಪಶ್ಚಿಮ ಬಂಗಾಳ SIR: ಇಂದು ಅಂತಿಮ ಪಟ್ಟಿ ಪ್ರಕಟ- 58 ಲಕ್ಷ ಮತದಾರರ ಹೆಸರು ಡಿಲೀಟ್!
SIR| 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಚುನಾವಣಾ ಆಯೋಗದಿಂದ ಮತದಾರರ ಪಟ್ಟಿ ಪರಿಷ್ಕರಣೆ ಪಟ್ಟಿ ಬಿಡುಗಡೆಯಾಗುತ್ತಿದೆ. 7.66 ಕೋಟಿಯಿಂದ 7.08 ಕೋಟಿಗೆ ಮತದಾರರ ಸಂಖ್ಯೆ ಇಳಿಕೆಯಾಗಿದೆ.
2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಭಾರತೀಯ ಚುನಾವಣಾ ಆಯೋಗವು ಮತದಾರರ ಪಟ್ಟಿಯ ಬೃಹತ್ 'ಪರಿಷ್ಕರಣಾ' ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಸುಮಾರು 24 ವರ್ಷಗಳ ನಂತರ ನಡೆದ ಈ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯ ಅಂತಿಮ ಫಲಿತಾಂಶವಾಗಿ ಶನಿವಾರ ನವೀಕೃತ ಮತದಾರರ ಪಟ್ಟಿಯನ್ನು ಆಯೋಗ ಪ್ರಕಟಿಸುತ್ತಿದೆ. ವಿಶೇಷವೆಂದರೆ, ಈ ಪರಿಷ್ಕರಣೆಯ ನಂತರ ರಾಜ್ಯದ ಮತದಾರರ ಸಂಖ್ಯೆಯಲ್ಲಿ ಬರೋಬ್ಬರಿ 58 ಲಕ್ಷದಷ್ಟು ಕುಸಿತ ಕಂಡುಬಂದಿದ್ದು, ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಮತದಾರರ ಸಂಖ್ಯೆ ಹಠಾತ್ ಇಳಿಕೆಯಾಗಿದ್ದೇಕೆ?
ಡಿಸೆಂಬರ್‌ನಲ್ಲಿ ಪ್ರಕಟವಾದ ಕರಡು ಪಟ್ಟಿಯಲ್ಲಿ ಮತದಾರರ ಸಂಖ್ಯೆ 7.66 ಕೋಟಿ ಇತ್ತು. ಆದರೆ ಈಗ ಅದು 7.08 ಕೋಟಿಗೆ ಇಳಿಕೆಯಾಗಿದೆ. ಅಂದರೆ ಸುಮಾರು 58 ಲಕ್ಷಕ್ಕೂ ಹೆಚ್ಚು ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಮೃತಪಟ್ಟ ಮತದಾರರ ಹೆಸರುಗಳು ಇನ್ನೂ ಪಟ್ಟಿಯಲ್ಲೇ ಉಳಿದಿದ್ದವು. ಕೆಲಸ ಅಥವಾ ಇತರ ಕಾರಣಗಳಿಗಾಗಿ ಬೇರೆ ರಾಜ್ಯ ಅಥವಾ ಜಿಲ್ಲೆಗಳಿಗೆ ವಲಸೆ ಹೋದವ ಹೆಸರುಗಳೂ ಪಟ್ಟಿಯಲ್ಲಿದ್ದವು. ಇಷ್ಟೇ ಅಲ್ಲದೇ ಒಬ್ಬ ವ್ಯಕ್ತಿಯ ಹೆಸರು ಎರಡು ಅಥವಾ ಅದಕ್ಕಿಂತ ಹೆಚ್ಚು ಕಡೆ ನೋಂದಣಿಯಾಗಿತ್ತು.
ಏನಿದು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR)?
ಪಶ್ಚಿಮ ಬಂಗಾಳದಲ್ಲಿ 2002ರ ನಂತರ, ಅಂದರೆ ಸುಮಾರು 24 ವರ್ಷಗಳ ಬಳಿಕ ಇಂತಹ ಬೃಹತ್ ಮಟ್ಟದ ಮನೆ-ಮನೆ ಸಮೀಕ್ಷೆ ಮತ್ತು ತಪಾಸಣೆ ನಡೆದಿದೆ. ರಾಜಕೀಯ ಪಕ್ಷಗಳ ನಡುವಿನ ಆರೋಪ-ಪ್ರತ್ಯಾರೋಪಗಳ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ದೋಷಮುಕ್ತಗೊಳಿಸಲು ಈ 'ವಿಶೇಷ ತೀವ್ರ ಪರಿಷ್ಕರಣೆ' ಕೈಗೊಂಡಿದೆ.
60 ಲಕ್ಷ ಮತದಾರರ ಭವಿಷ್ಯ ಇನ್ನೂ ಅಸ್ಪಷ್ಟ!
ಸುಮಾರು 1.67 ಕೋಟಿ ಮತದಾರರ ದಾಖಲೆಗಳಲ್ಲಿ ವ್ಯತ್ಯಾಸಗಳಿದ್ದವು. ಇದರಲ್ಲಿ 1.36 ಕೋಟಿ ಜನರ ದಾಖಲೆಗಳನ್ನು ಸರಿಪಡಿಸಲಾಗಿದೆ. ಆದರೆ, ಇನ್ನು ಸುಮಾರು 60 ಲಕ್ಷ ಮತದಾರರ ಹೆಸರುಗಳು 'ವಿಚಾರಣಾ ಹಂತ'ದಲ್ಲಿವೆ. ಇವರ ಬಗ್ಗೆ ಹಂತಹಂತವಾಗಿ ತನಿಖೆ ನಡೆಸಿ 'ಪೂರಕ ಪಟ್ಟಿ'ಗಳನ್ನು ಬಿಡುಗಡೆ ಮಾಡುವುದಾಗಿ ಆಯೋಗ ತಿಳಿಸಿದೆ.
ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಏನು ಮಾಡಬೇಕು?
ಒಂದು ವೇಳೆ ನಿಮ್ಮ ಹೆಸರು ಡಿಲೀಟ್ ಆಗಿದ್ದರೆ ಅಥವಾ ತಪ್ಪುಗಳಿದ್ದರೆ, ನೀವು ತಕ್ಷಣವೇ ಚುನಾವಣಾ ಆಯೋಗದ ವೆಬ್‌ಸೈಟ್ (eci.gov.in) ಅಥವಾ Voter Helpline App ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇಲ್ಲವೇ ನಿಮ್ಮ ಭಾಗದ ಬಿಎಲ್‌ಒ (BLO) ಅವರನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳನ್ನು ನೀಡಿ ಹೆಸರನ್ನು ಮತ್ತೆ ಸೇರಿಸಲು ಅವಕಾಶವಿರುತ್ತದೆ.

