
ಸಣ್ಣ ಕೈಗಾರಿಕೆಗಳಿಗೆ ಬಂಪರ್ ಕೊಡುಗೆ; ನಿಜವಾಯ್ತು ʼದ ಫೆಡರಲ್ ಕರ್ನಾಟಕʼ ವರದಿ ನಿರೀಕ್ಷೆಗಳು
ಕೇಂದ್ರ ಸರ್ಕಾರವು ಕ್ರೆಡಿಟ್ ಲಿಂಕ್ಡ್ ಕ್ಯಾಪಿಟಲ್ ಸಬ್ಸಿಡಿ ಯೋಜನೆ ಹಾಗೂ ಕೈಗಾರಿಕಾ ಮೂಲಸೌಕರ್ಯ ಉನ್ನತೀಕರಣ ಯೋಜನೆಗಳನ್ನು ಸ್ಥಗಿತಗೊಳಿಸಿದ ಪರಿಣಾಮ ಸಣ್ಣ ಕೈಗಾರಿಕೆಗಳು ಸಂಕಷ್ಟಕ್ಕೆ ಒಳಗಾಗಿದ್ದವು.
ನಿರೀಕ್ಷೆಯಂತೆ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ ಕೇಂದ್ರ ಬಜೆಟ್ನಲ್ಲಿ ಬಂಪರ್ ಕೊಡುಗೆ ಘೋಷಣೆ ಮಾಡಲಾಗಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ನಲ್ಲಿ ಸಣ್ಣ ಉದ್ಯಮಗಳನ್ನು ʼಚಾಂಪಿಯನ್ ಎಂಎಸ್ಎಂಇʼ ಗಳನ್ನಾಗಿ ಪರಿವರ್ತಿಸಲು 10 ಸಾವಿರ ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ಪ್ರಮುಖವಾಗಿ ಏಳು ವಲಯಗಳಲ್ಲಿ ಉತ್ಪಾದನೆ ಹೆಚ್ಚಿಸುವ ಉಪಕ್ರಮವಾಗಿ ಈ ಘೋಷಣೆ ಮಾಡಿದೆ.
ಸಣ್ಣ ಕೈಗಾರಿಕೆಗಳಿಗೆ ಮೂಲಸೌಕರ್ಯ ಹಾಗೂ ಬಂಡವಾಳ ಒದಗಿಸುವ ಯೋಜನೆ ಘೋಷಣೆ ಮಾಡುವ ನಿರೀಕ್ಷೆಗಳ ಬಗ್ಗೆ ʼದ ಫೆಡರಲ್ ಕರ್ನಾಟಕʼ ಶನಿವಾರ ವಿಶೇಷ ವರದಿ ಪ್ರಕಟಿಸಿತ್ತು.
ಕೇಂದ್ರ ಸರ್ಕಾರವು ಕ್ರೆಡಿಟ್ ಲಿಂಕ್ಡ್ ಕ್ಯಾಪಿಟಲ್ ಸಬ್ಸಿಡಿ ಯೋಜನೆ ಹಾಗೂ ಕೈಗಾರಿಕಾ ಮೂಲಸೌಕರ್ಯ ಉನ್ನತೀಕರಣ ಯೋಜನೆಗಳನ್ನು ಸ್ಥಗಿತಗೊಳಿಸಿದ ಪರಿಣಾಮ ಸಣ್ಣ ಕೈಗಾರಿಕೆಗಳು ಸಂಕಷ್ಟಕ್ಕೆ ಒಳಗಾಗಿದ್ದವು. ಈ ಯೋಜನೆಗಳ ಮರು ಜಾರಿಗೆ ಉದ್ಯಮ ವಲಯವು ಕೇಂದ್ರದ ಮೇಲೆ ಒತ್ತಡ ತಂದಿತ್ತು. ಅದರಂತೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ತಮ್ಮ 9ನೇ ಬಜೆಟ್ನಲ್ಲಿ ಈ ಮಹತ್ವದ ಘೋಷಣೆ ಮಾಡಿದ್ದಾರೆ.
ಸಣ್ಣ ಕೈಗಾರಿಕೆಗಳಿಗೆ 10 ಸಾವಿರ ಕೋಟಿ ಅನುದಾನ
ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಆರ್ಥಿಕ ನೆರವು ಕಲ್ಪಿಸಲು ಬಜೆಟ್ನಲ್ಲಿ 10 ಸಾವಿರ ಕೋಟಿ ತೆಗೆದಿರಿಸಲಾಗಿದೆ. ಎಂಎಸ್ಎಂಇಗಳಿಗೆ 10 ಕೋಟಿ ರೂ., ಸ್ಟಾರ್ಟ್ಅಪ್ಗಳು ಹಾಗೂ ರಫ್ತುದಾರರಿಗೆ 20 ಕೋಟಿ ರೂ.ಗಳವರೆಗೆ ವರ್ಧಿತ ಕ್ರೆಡಿಟ್ ಸೌಲಭ್ಯ ಇದರಲ್ಲಿ ಸಿಗಲಿದೆ.
ಉದ್ಯಮ ಪೋರ್ಟಲ್ನಲ್ಲಿ ನೋಂದಾಯಿತ ಸೂಕ್ಷ್ಮ ಹಾಗೂ ಸಣ್ಣ ಉದ್ಯಮಗಳಿಗೆ ಉದ್ಯಮಗಳಿಗೆ 5 ಲಕ್ಷ ಮಿತಿಯೊಂದಿಗೆ ಕಸ್ಟಮೈಸ್ ಮಾಡಿದ ಕ್ರೆಡಿಟ್ ಕಾರ್ಡ್ಗಳನ್ನು ಒದಗಿಸುವ ಯೋಜನೆ ಘೋಷಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿ 5 ಲಕ್ಷ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮಹಿಳಾ ಉದ್ಯಮಿಗಳಿಗೆ 2 ಕೋಟಿ ರೂ. ಸಾಲ ಒದಗಿಸಲು ತೀರ್ಮಾನಿಸಲಾಗಿದೆ.
2-3ನೇ ಹಂತದ ನಗರಗಳಲ್ಲಿ ಉದ್ಯಮ ಸ್ಥಾಪನೆ
ದೇಶಾದ್ಯಂತ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಎಂಎಸ್ಎಂಇಗಳನ್ನು ಸ್ಥಾಪಿಸುವ ಸಂಬಂಧ ಕೇಂದ್ರ ಸರ್ಕಾರ ಮಹತ್ವದ ಘೋಷಣೆ ಮಾಡಿದೆ.
5 ಲಕ್ಷ ಹಾಗೂ ಅದಕ್ಕಿಂತ ಕಡಿಮಲೆ ಜನಸಂಖ್ಯೆ ಇರುವ ಪ್ರದೇಶಗಳಲ್ಲಿ ಎಂಎಸ್ಎಂಇಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಆ ಮೂಲಕ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಯೋಜನೆ ಹಾಕಿಕೊಂಡಿದೆ.
ಸಿಎಲ್ಸಿಎಸ್ಎಎಸ್ ಯೋಜನೆ ಹೇಗಿತ್ತು?
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ (ಎಂಎಸ್ಎಂಇ) ಸಚಿವಾಲಯದಡಿ ಬರುವ ಕ್ರೆಡಿಟ್ ಲಿಂಕ್ಡ್ ಕ್ಯಾಪಿಟಲ್ ಸಬ್ಸಿಡಿ ಯೋಜನೆಯು (ಸಿಎಲ್ಸಿಎಸ್ಎಸ್) ಅತ್ಯಾಧುನಿಕ ಯಂತ್ರೋಪಕರಣಗಳೊಂದಿಗೆ ತಂತ್ರಜ್ಞಾನವನ್ನು ಮೇಲ್ದರ್ಜೆಗೇರಿಸಲು ಸಣ್ಣ ಕೈಗಾರಿಕೆಗಳಿಗೆ ಸಹಾಯಧನ ಒದಗಿಸುವ ಉದ್ದೇಶ ಹೊಂದಿತ್ತು. ಈಗ ಘೋಷಣೆ ಮಾಡಿರುವ ಯೋಜನೆಯಲ್ಲಿ ಸಣ್ಣ ಕೈಗಾರಿಕೆಗಳಿಗೆ ವರ್ಧಿತ ಕ್ರೆಡಿಟ್ ಒದಗಿಸಲು ನಿರ್ಧರಿಸಲಾಗಿದೆ.
ಹಳೆಯ ಯಂತ್ರೋಪಕರಣ ಬದಲಿಸಿ, ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ನೀಡುವ ಸಾಲದ ಮೇಲೆ ಶೇ 15 ರಷ್ಟು ಸಬ್ಸಿಡಿ (ಗರಿಷ್ಠ 15 ಲಕ್ಷ) ಒದಗಿಸುತ್ತಿತ್ತು. ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಲೆಂದೇ 2000 ನೇ ಸಾಲಿನಲ್ಲಿ ಆರಂಭಿಸಿದ ಯೋಜನೆಯು 2020 ಮಾರ್ಚ್ವರೆಗೆ ಅಸ್ತಿತ್ವದಲ್ಲಿತ್ತು.
ಇನ್ನು 2017 ರಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಉದ್ಯಮಿಗಳಿಗೆ ಉತ್ತೇಜನ ನೀಡಲು ʼವಿಶೇಷ ಕ್ರೆಡಿಟ್ ಲಿಂಕ್ಡ್ ಕ್ಯಾಪಿಟಲ್ ಸಬ್ಸಿಡಿ ಯೋಜನೆ (SCLCSS) ಜಾರಿಗೆ ತರಲಾಯಿತು. ಉತ್ಪಾದನಾ ಮತ್ತು ಸೇವಾ ವಲಯಗಳಲ್ಲಿ ಪರಿಶಿಷ್ಟರ ಮಾಲೀಕತ್ವದ ಉದ್ಯಮಗಳಿಗೆ ಈ ಯೋಜನೆಯಡಿ ಶೇ 25 (25ಲಕ್ಷದ ಮಿತಿ) ರಷ್ಟು ಸಬ್ಸಿಡಿ ಸಿಗುತ್ತಿದೆ. ಪ್ರಸ್ತುತ, ಈ ಯೋಜನೆ ಮುಂದುವರಿದಿದೆ.
ಐಐಯುಎಸ್ ಹೇಗಿತ್ತು?
ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಮೂಲ ಸೌಕರ್ಯ ಒದಗಿಸುವ ಸಲುವಾಗಿ 2003 ರಲ್ಲಿ ಕೇಂದ್ರ ಸರ್ಕಾರ ಕೈಗಾರಿಕಾ ಮೂಲಸೌಕರ್ಯ ಉನ್ನತೀಕರಣ ಯೋಜನೆ (IIUS) ಜಾರಿಗೆ ತಂದಿತ್ತು. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದಡಿ ಆರಂಭಿಸಲಾಗಿದ್ದ ಈ ಯೋಜನೆಯನ್ನು 2017ರಲ್ಲಿ ಸ್ಥಗಿತಗೊಳಿಸಲಾಗಿದೆ. ಇದರಿಂದ ಸಾಕಷ್ಟ ಕೈಗಾರಿಕೆಗಳು ಮೂಲ ಸೌಕರ್ಯ ಸಮಸ್ಯೆಯಿಂದ ಬಳಸುತ್ತಿವೆ ಎಂದು ಸಣ್ಣ ಕೈಗಾರಿಕೆಗಳ ಮಾಲೀಕರ ಆರೋಪಿಸಿದ್ದರು. ಈಗ ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿ ಅಗತ್ಯ ಮೂಲಸೌಕರ್ಯಗಳೊಂದಿಗೆ ಎಂಎಸ್ಎಂಇ ಆರಂಭಿಸಲು ನಿರ್ಧರಿಸಿರುವುದು ಉತ್ತಮ ನಡೆಯಾಗಿದೆ.
12 ನೇ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ ಹೊಸ ಯೋಜನೆಗಳನ್ನು ಬೆಂಬಲಿಸಲು 2013 ರಲ್ಲಿ ಮಾರ್ಪಡಿಸಿದ ಕೈಗಾರಿಕಾ ಮೂಲಸೌಕರ್ಯ ಉನ್ನತೀಕರಣ ಯೋಜನೆಯನ್ನು (MIIUS) ಪರಿಚಯಿಸಲಾಯಿತು. ಮಾರ್ಪಡಿಸಿದ ಕೈಗಾರಿಕಾ ಮೂಲಸೌಕರ್ಯ ಉನ್ನತೀಕರಣ ಯೋಜನೆಯು (MIIUS) ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ ಉಪಕ್ರಮವಾಗಿದ್ದು, ಅಸ್ತಿತ್ವದಲ್ಲಿರುವ ಕೈಗಾರಿಕಾ ಪಾರ್ಕ್ಗಳು ಮತ್ತು ಕ್ಲಸ್ಟರ್ಗಳಿಗೆ ರಸ್ತೆ ಸಂಪರ್ಕ, ವಿದ್ಯುತ್ ಮತ್ತು ನೀರು ಸರಬರಾಜಿನಂತಹ ಗುಣಮಟ್ಟದ ಮೂಲಸೌಕರ್ಯ ಒದಗಿಸುವ ಮೂಲಕ ಕೈಗಾರಿಕಾ ಸ್ಪರ್ಧಾತ್ಮಕತೆ ಹೆಚ್ಚಿಸುವ ಗುರಿ ಹೊಂದಿತ್ತು. ಯೋಜನಾ ವೆಚ್ಚದ ಶೇ 50ರ ವರೆಗೆ ಕೇಂದ್ರದಿಂದ ಅನುದಾನ ಸಹ ಸಿಗುತ್ತಿತ್ತು. 2017 ರಲ್ಲಿ ಯೋಜನೆಯನ್ನು ನಿಲ್ಲಿಸಲಾಗಿತ್ತು.
ಬಜೆಟ್ ನಿರೀಕ್ಷೆಗಳ ಕುರಿತ ಚರ್ಚೆಯ ವಿಡಿಯೋ ಇಲ್ಲಿದೆ.

