
Delhi Fire Accident | ದೆಹಲಿಯಲ್ಲಿ ಮುಂಜಾನೆ ಭೀಕರ ಅಗ್ನಿ ದುರಂತ: 9 ಮಂದಿ ದಹನ, ಎಸಿ ಸ್ಫೋಟದ ಶಂಕೆ!
ದೆಹಲಿಯ ವಿವೇಕ್ ವಿಹಾರ್‌ನಲ್ಲಿ ಎಸಿ ಸ್ಫೋಟದಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ 9 ಮಂದಿ ಬಲಿ. ರಕ್ಷಣಾ ಕಾರ್ಯಾಚರಣೆಯ ಪೂರ್ಣ ವಿವರ ಇಲ್ಲಿದೆ.
ಪೂರ್ವ ದೆಹಲಿಯ ವಿವೇಕ್ ವಿಹಾರ್ ಪ್ರದೇಶದ ನಾಲ್ಕು ಅಂತಸ್ತಿನ ಕಟ್ಟಡವೊಂದರಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆಯ ವಿವರ:
ಮುಂಜಾನೆ ಸುಮಾರು 4 ಗಂಟೆಗೆ ಕಟ್ಟಡದ ಎರಡನೇ ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಮೂರು ಮತ್ತು ನಾಲ್ಕನೇ ಅಂತಸ್ತಿಗೆ ವ್ಯಾಪಿಸಿದೆ. ವಿಷಯ ತಿಳಿದ ಕೂಡಲೇ 14 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಸುಮಾರು ಎರಡು ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದವು.
ರಕ್ಷಣಾ ಕಾರ್ಯಾಚರಣೆ
ಕಟ್ಟಡದಲ್ಲಿದ್ದ 12ಕ್ಕೂ ಹೆಚ್ಚು ಜನರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಚಿಕಿತ್ಸೆಗಾಗಿ ಗುರು ತೇಗ್ ಬಹದ್ದೂರ್ (GTB) ಆಸ್ಪತ್ರೆಗೆ ದಾಖಲಿಸಲಾಗಿದೆ. "ಮುಂಜಾನೆ 4 ಗಂಟೆಗೆ ಕರೆ ಬಂದ ಕೂಡಲೇ ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ತಲುಪಿತು. 6 ಗಂಟೆಯ ಸುಮಾರಿಗೆ ಬೆಂಕಿ ನಿಯಂತ್ರಣಕ್ಕೆ ಬಂದಿದ್ದು, ನಂತರ ಶೋಧ ಕಾರ್ಯ ನಡೆಸಿ ಮೃತದೇಹಗಳನ್ನು ಹೊರತೆಗೆಯಲಾಗಿದೆ," ಎಂದು ಶಹದಾರಾ ಡಿಸಿಪಿ ರಾಜೇಂದ್ರ ಪ್ರಸಾದ್ ಮೀನಾ ತಿಳಿಸಿದ್ದಾರೆ.
#WATCH | Delhi: A resident, Charanjit Singh, says, "More than 10 vehicles (fire tenders) arrived. The fire brigade rescued around 20 people through the balcony... but I think some people from the backside flats were still able to come outside... I think 1 or 2 families are still… https://t.co/JXCQ0AMEls pic.twitter.com/j7ScMZ2fVR
— ANI (@ANI) May 3, 2026
ಅಗ್ನಿ ಅವಘಡಕ್ಕೆ ಕಾರಣವೇನು?
ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ, ಪ್ರಾಥಮಿಕ ಮಾಹಿತಿಯ ಪ್ರಕಾರ ಎಸಿ (AC) ಸ್ಫೋಟಗೊಂಡಿದ್ದರಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಸ್ಥಳೀಯ ನಿವಾಸಿಗಳು ಶಂಕಿಸಿದ್ದಾರೆ.
ಸ್ಥಳೀಯರ ಹೇಳಿಕೆ: "ಎಸಿ ಬ್ಲಾಸ್ಟ್ ಆದ ಶಬ್ದ ಕೇಳಿಸಿತು, ನಂತರ ಬೆಂಕಿ ಕಾಣಿಸಿಕೊಂಡಿತು. ಸುಮಾರು 15 ಜನರನ್ನು ರಕ್ಷಿಸಲಾಗಿದೆ, ಆದರೆ ಹಿಂಭಾಗದ ಫ್ಲಾಟ್‌ಗಳಲ್ಲಿ ಇನ್ನೂ ಕೆಲವರು ಸಿಲುಕಿರುವ ಸಾಧ್ಯತೆಯಿದೆ," ಎಂದು ಪ್ರತ್ಯಕ್ಷದರ್ಶಿಯೊಬ್ಬರು ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಪ್ರಸ್ತುತ ದೆಹಲಿ ಪೊಲೀಸರ ಕ್ರೈಮ್ ಟೀಮ್ ಸ್ಥಳಕ್ಕೆ ಭೇಟಿ ನೀಡಿದ್ದು, ಮೃತದೇಹಗಳನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.

