ED shocks TMC: Bank deposits worth Rs 440 crore seized
x

ಮಾಜಿ ಸಿಎಂ ಮಮತಾ ಬ್ಯಾನರ್ಜಿ

ಟಿಎಂಸಿಗೆ ಇ.ಡಿ ಶಾಕ್: ಬರೋಬ್ಬರಿ 440 ಕೋಟಿ ರೂ. ಬ್ಯಾಂಕ್ ಠೇವಣಿ ಮುಟ್ಟುಗೋಲು

ಏ. 2023 ಮತ್ತು ಜೂನ್ ನಡುವಿನ ಅವಧಿಯಲ್ಲಿ ಟಿಎಂಸಿಯ ಅಧಿಕೃತ ಬ್ಯಾಂಕ್ ಖಾತೆಗಳಿಂದ ಕೇರ್‌ವೆಲ್ ಏವಿಯೇಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ಸುಮಾರು 160 ಕೋಟಿ ರೂ.ಗಳನ್ನು ಅಕ್ರಮವಾಗಿ ವರ್ಗಾಯಿಸಲಾಗಿತ್ತು.


Click the Play button to hear this message in audio format

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಕ್ಕೆ ಸೇರಿದ ಬರೊಬ್ಬರಿ 440 ಕೋಟಿ ರೂ. ಬ್ಯಾಂಕ್ ಠೇವಣಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ. ಪಕ್ಷದ ನಿಧಿ ದುರುಪಯೋಗದ ತನಿಖೆಯ ಭಾಗವಾಗಿ ಕೋಲ್ಕತ್ತಾದ ಹಲವೆಡೆ ದಾಳಿ ನಡೆಸಿದ ಬೆನ್ನಲ್ಲೇ ಅಧಿಕಾರಿಗಳು ಬುಧವಾರ (ಜುಲೈ 8) ಈ ಮಹತ್ವದ ಆದೇಶ ಹೊರಡಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್ 17 (1-ಎ) ಅಡಿಯಲ್ಲಿ ಇಡಿ ಈ ಕಠಿಣ ಕ್ರಮ ಕೈಗೊಂಡಿದೆ.

ಟಿಎಂಸಿ ಪಕ್ಷದ ಹೆಸರಿನಲ್ಲಿದ್ದ ಮೂರು ಪ್ರಮುಖ ಖಾಸಗಿ ಬ್ಯಾಂಕ್ ಖಾತೆಗಳಲ್ಲಿದ್ದ ಒಟ್ಟು 440.42 ಕೋಟಿ ರೂ. ಮೊತ್ತವನ್ನು ಈಗ ಇಡಿ ವಶಕ್ಕೆ ಪಡೆದಿದೆ. ಈ ಹಠಾತ್ ಬೆಳವಣಿಗೆಗೆ ಸಂಬಂಧಿಸಿದಂತೆ ಟಿಎಂಸಿ ಪಕ್ಷದಿಂದ ಇನ್ನು ಯಾವುದೇ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಖಾಸಗಿ ಜೆಟ್ ಸೇವೆಗಳನ್ನು ನಿರ್ವಹಿಸುವ 'ಕೇರ್‌ವೆಲ್ ಗ್ರೂಪ್ ಆಫ್ ಕಂಪನಿಸ್' ಹಾಗೂ 'ಕೇರ್‌ವೆಲ್ ಏವಿಯೇಷನ್' ಸಂಸ್ಥೆಗಳು ಸೇರಿದ್ದ ಸ್ಥಳಗಳ ಮೇಲೆ ಇ.ಡಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದರು. ಈ ವೇಳೆ ಭಾರಿ ಪ್ರಮಾಣದ ಆರ್ಥಿಕ ಅಕ್ರಮ ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

160 ಕೋಟಿ ರೂ. ವರ್ಗಾವಣೆ

2023 ರ ಏಪ್ರಿಲ್‌ ಮತ್ತು ಜೂನ್ ನಡುವಿನ ಅವಧಿಯಲ್ಲಿ ಟಿಎಂಸಿಯ ಅಧಿಕೃತ ಬ್ಯಾಂಕ್ ಖಾತೆಗಳಿಂದ ಕೇರ್‌ವೆಲ್ ಏವಿಯೇಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ಸುಮಾರು 160 ಕೋಟಿ ರೂ.ಗಳನ್ನು ಅಕ್ರಮವಾಗಿ ವರ್ಗಾಯಿಸಲಾಗಿತ್ತು. ಇದೇ ಕಂಪನಿಯು 2023 ಮತ್ತು 2026 ರ ನಡುವೆ ಹೊಸದಾಗಿ ಆರಂಭಿಸಲಾದ ಮತ್ತೊಂದು ಶಂಕಿತ ಸಂಸ್ಥೆಗೆ 82.96 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ. ಈ ಹಣದ ಪೈಕಿ 112 ಕೋಟಿ ರೂ. ಗಳನ್ನು 'ಎಂಬ್ರೇರ್ ಲೆಗಸಿ 600' ಬಿಸಿನೆಸ್ ಜೆಟ್ ಮತ್ತು 'ಅಗಸ್ಟಾವೆಸ್ಟ್‌ಲ್ಯಾಂಡ್ 109 ಎಸ್‌ಪಿ' ಹೆಲಿಕಾಪ್ಟರ್ ಖರೀದಿಸಲು ಬಳಸಲಾಗಿತ್ತು. ವಿಶೇಷವೆಂದರೆ, ಇತ್ತೀಚೆಗಷ್ಟೇ ನಡೆದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸೋತು ಅಧಿಕಾರ ಕಳೆದುಕೊಂಡ ಟಿಎಂಸಿ ಪಕ್ಷಕ್ಕೆ ಈ ಐಷಾರಾಮಿ ಹೆಲಿಕಾಪ್ಟರ್‌ಗಳನ್ನು ಬಾಡಿಗೆಗೆ ನೀಡಲಾಗಿತ್ತು.

ಪಕ್ಷದ ವಿಭಜನೆ, ಆಂತರಿಕ ಸಂಘರ್ಷ

ಚುನಾವಣಾ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಭಾರಿ ಆಂತರಿಕ ಸ್ಫೋಟ ಸಂಭವಿಸಿತ್ತು. ಮಮತಾ ಬ್ಯಾನರ್ಜಿ ನಾಯಕತ್ವದ ವಿರುದ್ಧ ಅಸಮಾಧಾನಗೊಂಡ ಹಲವು ಭಿನ್ನಮತೀಯ ನಾಯಕರು ಕೋಲ್ಕತ್ತಾ ಮತ್ತು ನವದೆಹಲಿಯಲ್ಲಿ ತಮ್ಮದೇ ಆದ ಪ್ರತ್ಯೇಕ ಬಣಗಳನ್ನು ರಚಿಸಿಕೊಂಡಿದ್ದರು. ಪಕ್ಷ ವಿಭಜನೆಯಾದ ಬೆನ್ನಲ್ಲೇ ಇತ್ತ ಪಕ್ಷದ ಬ್ಯಾಂಕ್ ಖಾತೆಗಳು ಮತ್ತು ನಿಧಿಯ ಮೂಲಗಳ ಮೇಲೂ ತನಿಖಾ ಸಂಸ್ಥೆಗಳು ತೀವ್ರ ನಿಗಾ ಇರಿಸಿದ್ದವು. ಕಳೆದ ತಿಂಗಳು, "ಅಸಲಿ ಟಿಎಂಸಿ ಯಾರು?" ಎಂಬ ಕಾನೂನು ಹೋರಾಟದ ನಡುವೆಯೇ, ಬಂಡಾಯ ಶಾಸಕರು ನೀಡಿದ ದೂರಿನ ಆಧಾರದ ಮೇಲೆ ಕೋಲ್ಕತ್ತಾ ಪೊಲೀಸರು ಈ ಮೂರು ಬ್ಯಾಂಕ್ ಖಾತೆಗಳಿಂದ ಹಣ ಡ್ರಾ ಮಾಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು.

ಹೈಕೋರ್ಟ್ ಮೆಟ್ಟಿಲೇರಿದ್ದ ಮಮತಾ ಬ್ಯಾನರ್ಜಿ ಬಣ

ಪೊಲೀಸರು ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿದ್ದನ್ನು ಪ್ರಶ್ನಿಸಿ ಪಕ್ಷದ ಸಂಸ್ಥಾಪಕಿ ಮತ್ತು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಬಣ ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿತ್ತು. ಜು. 2 ರಂದು ಈ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ಆ ಖಾತೆಗಳಲ್ಲಿ ಸದ್ಯ ಎಷ್ಟು ಮೊತ್ತದ ನಿಧಿ ಬಾಕಿ ಇದೆ ಎಂಬುದನ್ನು ಸ್ಪಷ್ಟಪಡಿಸುವಂತೆ ಖಾಸಗಿ ಬ್ಯಾಂಕ್ ಅಧಿಕಾರಿಗಳಿಗೆ ಆದೇಶಿಸಿತ್ತು. ಹೈಕೋರ್ಟ್‌ನಲ್ಲಿ ಈ ಕಾನೂನು ಹೋರಾಟ ನಡೆಯುತ್ತಿರುವ ಬೆನ್ನಲ್ಲೇ, ಈಗ ಕೇಂದ್ರ ತನಿಖಾ ಸಂಸ್ಥೆಯಾದ ಇ.ಡಿ ನೇರವಾಗಿ 440 ಕೋಟಿ ರೂ.ಗಳನ್ನು ಮುಟ್ಟುಗೋಲು ಹಾಕಿಕೊಂಡು ಟಿಎಂಸಿಗೆ ಚೇತರಿಸಿಕೊಳ್ಳಲಾಗದ ಶಾಕ್ ನೀಡಿದೆ.

Read More
Next Story