ಕುನೋದಲ್ಲಿ ಮೂರು ಚೀತಾ ಮರಿಗಳ ಜನನ- ದೇಶದಲ್ಲಿ ಚೀತಾಗಳ ಸಂಖ್ಯೆ 38ಕ್ಕೆ ಏರಿಕೆ!
x
ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿದ ಚೀತಾ

ಕುನೋದಲ್ಲಿ ಮೂರು ಚೀತಾ ಮರಿಗಳ ಜನನ- ದೇಶದಲ್ಲಿ ಚೀತಾಗಳ ಸಂಖ್ಯೆ 38ಕ್ಕೆ ಏರಿಕೆ!

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ದಕ್ಷಿಣ ಆಫ್ರಿಕಾದ ಚೀತಾ 'ಗಾಮಿನಿ' ಮೂರು ಮರಿಗಳಿಗೆ ಜನ್ಮ ನೀಡಿದೆ. ಭಾರತದಲ್ಲಿ ಚೀತಾಗಳ ಸಂಖ್ಯೆ ಈಗ 38ಕ್ಕೆ ತಲುಪಿದೆ.


ಭಾರತದ ಮಹತ್ವಾಕಾಂಕ್ಷೆಯ 'ಪ್ರಾಜೆಕ್ಟ್ ಚೀತಾ' ಯೋಜನೆಗೆ ಮತ್ತೊಂದು ದೊಡ್ಡ ಯಶಸ್ಸು ಸಿಕ್ಕಿದೆ. ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮೂರು ಚೀತಾ ಮರಿಗಳು ಜನಿಸಿವೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಬುಧವಾರ ಘೋಷಿಸಿದ್ದಾರೆ. ಇದರೊಂದಿಗೆ ಭಾರತದಲ್ಲಿ ಚೀತಾಗಳ ಒಟ್ಟು ಸಂಖ್ಯೆ 38ಕ್ಕೆ ಏರಿಕೆಯಾಗಿದೆ.

ಗಾಮಿನಿಯ ಎರಡನೇ ಪ್ರಸವ

ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ 'ಗಾಮಿನಿ' ಎಂಬ ಹೆಣ್ಣು ಚೀತಾ ಈ ಮೂರು ಮರಿಗಳಿಗೆ ಜನ್ಮ ನೀಡಿದೆ. ಗಾಮಿನಿ ತಾಯಿಯಾಗುತ್ತಿರುವುದು ಇದು ಎರಡನೇ ಬಾರಿ. ವಿಶೇಷವೆಂದರೆ, ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಚೀತಾಗಳು ಆಗಮಿಸಿ ಮೂರು ವರ್ಷಗಳು ಪೂರೈಸಿದ ಈ ಸಂದರ್ಭದಲ್ಲೇ ಮರಿಗಳ ಜನನವಾಗಿರುವುದು ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

ಸಚಿವ ಭೂಪೇಂದರ್ ಯಾದವ್ ಹರ್ಷ

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವ ಭೂಪೇಂದರ್ ಯಾದವ್, "ಇದು ಕುನೋ ಮತ್ತು ಭಾರತಕ್ಕೆ ಹೆಮ್ಮೆಯ ಕ್ಷಣ. ಗಾಮಿನಿ ಮತ್ತು ಆಕೆಯ ಮೂರು ಪುಟಾಣಿ ಮರಿಗಳು ಆರೋಗ್ಯವಾಗಿ ಬೆಳೆಯಲಿ ಹಾಗೂ ದೇಶದ ಚೀತಾ ಪುನರುಜ್ಜೀವನದ ಕಥೆಯನ್ನು ವೇಗ ಮತ್ತು ಗಾಂಭೀರ್ಯದೊಂದಿಗೆ ಮುನ್ನಡೆಸಲಿ," ಎಂದು ಶುಭ ಹಾರೈಸಿದ್ದಾರೆ.

"ಪ್ರತಿ ಯಶಸ್ವಿ ಜನನವು 'ಪ್ರಾಜೆಕ್ಟ್ ಚೀತಾ'ವನ್ನು ಬಲಪಡಿಸುತ್ತದೆ. ಇದು ಈ ಯೋಜನೆಯಲ್ಲಿ ತೊಡಗಿರುವ ಕ್ಷೇತ್ರ ಸಿಬ್ಬಂದಿ ಮತ್ತು ಪಶುವೈದ್ಯಕೀಯ ತಂಡಗಳ ನಿರಂತರ ಶ್ರಮ ಮತ್ತು ಸಮರ್ಪಣಾ ಮನೋಭಾವವನ್ನು ಪ್ರತಿಬಿಂಬಿಸುತ್ತದೆ," ಎಂದು ಅವರು ಶ್ಲಾಘಿಸಿದ್ದಾರೆ.

ಪ್ರಾಜೆಕ್ಟ್ ಚೀತಾ ಹಿನ್ನೆಲೆ

ವಿಶ್ವದ ಮೊದಲ ಖಂಡಾಂತರ ಚೀತಾ ಸ್ಥಳಾಂತರ ಪ್ರಕ್ರಿಯೆಯ ಭಾಗವಾಗಿ 2022-23ರಲ್ಲಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಒಟ್ಟು 20 ಚೀತಾಗಳನ್ನು ಭಾರತಕ್ಕೆ ತರಲಾಗಿತ್ತು. ಅಳಿವಿನಂಚಿನಲ್ಲಿದ್ದ ಈ ಪ್ರಾಣಿಗಳನ್ನು ಭಾರತದ ಕಾಡುಗಳಲ್ಲಿ ಮತ್ತೆ ನೆಲೆಸುವಂತೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

Read More
Next Story