
ಬಂಗಾಳ ಸರ್ಕಾರ v/s ಚುನಾವಣಾ ಆಯೋಗ: SIR ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಿಂದ ಮಹತ್ವದ ಸೂಚನೆ
ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ, ಮತದಾರರ ಪಟ್ಟಿ ಪರಿಷ್ಕರಣೆಗೆ ನ್ಯಾಯಾಂಗ ಅಧಿಕಾರಿಗಳನ್ನು ಬಳಸಿಕೊಳ್ಳಲು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಪಶ್ಚಿಮ ಬಂಗಾಳ ಸರ್ಕಾರ ಮತ್ತು ಭಾರತೀಯ ಚುನಾವಣಾ ಆಯೋಗದ ನಡುವಿನ ಸಮನ್ವಯದ ಕೊರತೆ ಮತ್ತು ಪರಸ್ಪರ ಅಪನಂಬಿಕೆಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ನಿರ್ದೇಶನ ನೀಡಿದೆ. ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿನ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲು ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಪಶ್ಚಿಮ ಬಂಗಾಳದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರ ಮತ್ತು ಭಾರತೀಯ ಚುನಾವಣಾ ಆಯೋಗದ ನಡುವೆ ನಡೆಯುತ್ತಿರುವ ಆರೋಪ-ಪ್ರತ್ಯಾರೋಪಗಳ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇದು ದುರದೃಷ್ಟಕರ ಎಂದಿರುವ ಸುಪ್ರೀಂ ಕೋರ್ಟ್ ಈ ಬಿಕ್ಕಟ್ಟನ್ನು ಕೊನೆಗಾಣಿಸಲು ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ನೆರವಾಗಲು ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸುವಂತೆ ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ ನೀಡಿದೆ.
ನ್ಯಾಯಾಂಗ ಅಧಿಕಾರಿಗಳಿಗೆ ಹೊಸ ಜವಾಬ್ದಾರಿ
ಸಾಮಾನ್ಯವಾಗಿ ಈ ಪ್ರಕ್ರಿಯೆಯನ್ನು ಆಡಳಿತ ಮಂಡಳಿಯ ಅಧಿಕಾರಿಗಳು ನಿರ್ವಹಿಸುತ್ತಾರೆ. ಆದರೆ, ಸುಪ್ರೀಂ ಕೋರ್ಟ್‌ನ ಈ ಆದೇಶದ ಅನ್ವಯ, ಇನ್ನು ಮುಂದೆ ನ್ಯಾಯಾಂಗ ಅಧಿಕಾರಿಗಳು 'ಚುನಾವಣಾ ನೋಂದಣಿ ಅಧಿಕಾರಿ’ಗಳಾಗಿ (Elector Registration Officers - ERO) ಕಾರ್ಯನಿರ್ವಹಿಸಲಿದ್ದಾರೆ. ಮತದಾರರ ಪಟ್ಟಿಗೆ ಸಂಬಂಧಿಸಿದ ಹಕ್ಕುಗಳು ಮತ್ತು ಆಕ್ಷೇಪಣೆಗಳ ನ್ಯಾಯಾಂಗ ನಿರ್ಣಯವನ್ನು ಇವರೇ ಮಾಡಲಿದ್ದಾರೆ.
ವಿವಾದಕ್ಕೆ ಕಾರಣವೇನು?
ಈ ಬಿಕ್ಕಟ್ಟಿನ ಹಿಂದೆ ಎರಡು ಮುಖ್ಯ ಕಾರಣಗಳಿವೆ. ಚುನಾವಣಾ ನೋಂದಣಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲು ಎಸ್‌ಡಿಎಂ (SDM) ಶ್ರೇಣಿಯ ಸಾಕಷ್ಟು ಗ್ರೂಪ್ ಬಿ ಅಧಿಕಾರಿಗಳನ್ನು ರಾಜ್ಯ ಸರ್ಕಾರವು ಚುನಾವಣಾ ಆಯೋಗಕ್ಕೆ ಒದಗಿಸಿದೆಯೇ ಎಂಬ ಬಗ್ಗೆ ತೀವ್ರ ವಿವಾದವಿತ್ತು. ಚುನಾವಣಾ ಆಯೋಗವು ನೇಮಕ ಮಾಡಿರುವ 'ಮೈಕ್ರೋ-ಅಬ್ಸರ್ವರ್' ಮತ್ತು 'ಸ್ಪೆಷಲ್ ರೋಲ್ ಅಬ್ಸರ್ವರ್'ಗಳ ವರದಿಯನ್ನು ಆಯೋಗ ಅವಲಂಬಿಸಿರುವುದಕ್ಕೆ ಪಶ್ಚಿಮ ಬಂಗಾಳ ಸರ್ಕಾರವು ಆಕ್ಷೇಪ ವ್ಯಕ್ತಪಡಿಸಿತ್ತು.
ಈ ಹಿನ್ನೆಲೆಯಲ್ಲಿ, ಪ್ರಕ್ರಿಯೆಯು ಪಾರದರ್ಶಕವಾಗಿ ಮತ್ತು ಯಾವುದೇ ಪಕ್ಷಪಾತವಿಲ್ಲದೆ ನಡೆಯಲು ನ್ಯಾಯಾಂಗ ಅಧಿಕಾರಿಗಳ ಉಸ್ತುವಾರಿ ಅಗತ್ಯ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಮಮತಾ ಬ್ಯಾನರ್ಜಿ ವಾದ
ಪಶ್ಚಿಮ ಬಂಗಾಳದ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು. ಮತದಾರರ ಪಟ್ಟಿ ಪರಿಷ್ಕರಣೆಯು ನ್ಯಾಯಸಮ್ಮತವಾಗಿ ನಡೆಯುತ್ತಿಲ್ಲ ಮತ್ತು ಇದು ಒಂದು ರಾಜ್ಯವನ್ನು ಗುರಿಯಾಗಿಸಿಕೊಂಡು ಮಾಡುತ್ತಿರುವ ರಾಜಕೀಯ ಪ್ರಕ್ರಿಯೆ ಎಂದು ಮಮತಾ ಬ್ಯಾನರ್ಜಿ ವಾದಿಸಿದರು. ಕೇವಲ ಹೆಸರಿನ ಕಾಗುಣಿತದಲ್ಲಿರುವ (Spelling) ಸಣ್ಣಪುಟ್ಟ ವ್ಯತ್ಯಾಸಗಳ ಕಾರಣಕ್ಕೆ ಲಕ್ಷಾಂತರ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ ಎಂಬುದು ಅವರ ಪ್ರಮುಖ ಆರೋಪವಾಗಿತ್ತು. ಮದುವೆಯ ನಂತರ ವಿಳಾಸ ಬದಲಾದ ಮಹಿಳೆಯರು ಮತ್ತು ಹೆಸರಿನಲ್ಲಿ ಸಣ್ಣ ಬದಲಾವಣೆ ಇರುವ ಮತದಾರರು ಇದರಿಂದಾಗಿ ಮತದಾನದ ಹಕ್ಕನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ಅವರು ತಿಳಿಸಿದರು.
ಅಲ್ಲದೆ, ಈ ಪರಿಷ್ಕರಣೆ ಪ್ರಕ್ರಿಯೆಯು ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ತರುತ್ತಿದೆ ಮತ್ತು ಕೇಂದ್ರ ಸರ್ಕಾರವು ಚುನಾವಣಾ ಆಯೋಗದ ಮೂಲಕ ತನ್ನ ಸರ್ಕಾರವನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಅವರು ಕೋರ್ಟ್‌ನಲ್ಲಿ ಗಂಭೀರವಾಗಿ ವಾದಿಸಿದರು. ಸುಮಾರು 1.3 ಕೋಟಿಗೂ ಹೆಚ್ಚು ಮತದಾರರನ್ನು ಶಂಕಿತರ ಪಟ್ಟಿಯಲ್ಲಿ ಇಟ್ಟಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ ಮತ್ತು ಇದು ಮತದಾರರ ಸೇರ್ಪಡೆಯ ಬದಲಿಗೆ ಮತದಾರರ ಹೆಸರನ್ನು 'ಡಿಲೀಟ್' ಮಾಡುವ ಅಭಿಯಾನದಂತೆ ಕಾಣುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

