
ಉದ್ಧವ್ ಠಾಕ್ರೆಗೆ ಆಘಾತ? ಶಿವಸೇನೆ (ಯುಬಿಟಿ)ಯಿಂದ 6 ಸಂಸದರು, 16 ಶಾಸಕರು ಔಟ್?
ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಬೆಳವಣಿಗೆ. ಶಿವಸೇನೆ (UBT)ಯ 6 ಲೋಕಸಭಾ ಸಂಸದರು ಹಾಗೂ 14-16 ಶಾಸಕರು ಎಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ.
ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಮ್ಮೆ ಮಹತ್ವದ ಬೆಳವಣಿಗೆಗಳು ನಡೆಯುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ನಾಲ್ಕು ವರ್ಷಗಳ ಹಿಂದೆ ಪಕ್ಷವನ್ನು ವಿಭಜಿಸಿದ ಬಂಡಾಯದ ಬಳಿಕ ದೊಡ್ಡ ಹೊಡೆತ ಅನುಭವಿಸಿದ್ದ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ಇದೀಗ ಮತ್ತೊಂದು ರಾಜಕೀಯ ಸವಾಲು ಎದುರಾಗುವ ಸಾಧ್ಯತೆ ಕಂಡುಬಂದಿದೆ.
ಶಿವಸೇನೆ (ಯುಬಿಟಿ) ಪಕ್ಷದ ಹಲವು ಸಂಸದರು ಮತ್ತು ಶಾಸಕರು ಶೀಘ್ರದಲ್ಲೇ ಪಕ್ಷ ತೊರೆದು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆಯಾಗಬಹುದು ಎಂಬ ಸುದ್ದಿಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಮೂಲಗಳ ಪ್ರಕಾರ, 2024ರ ಲೋಕಸಭಾ ಚುನಾವಣೆಯಲ್ಲಿ ಶಿವಸೇನೆ (ಯುಬಿಟಿ) ಟಿಕೆಟ್‌ನಲ್ಲಿ ಆಯ್ಕೆಯಾಗಿದ್ದ 9 ಸಂಸದರ ಪೈಕಿ 6 ಮಂದಿ ಪಕ್ಷ ತೊರೆಯುವ ಸಾಧ್ಯತೆ ಇದೆ. ಜೊತೆಗೆ 14ರಿಂದ 16 ಮಂದಿ ಶಾಸಕರೂ ಉದ್ಧವ್ ಠಾಕ್ರೆ ಬಣವನ್ನು ತೊರೆದು ಶಿಂಧೆ ಬಣದತ್ತ ಮುಖ ಮಾಡುವ ಸಾಧ್ಯತೆ ಇದೆ ಎಂದು ವರದಿಗಳು ಸೂಚಿಸಿವೆ.
ಇದಕ್ಕಾಗಿ ಕೆಲ ಸಂಸದರು ಈಗಾಗಲೇ ನವದೆಹಲಿಗೆ ತೆರಳಿದ್ದು, ಉಳಿದವರು ಬುಧವಾರ ರಾಜಧಾನಿಗೆ ಆಗಮಿಸುವ ನಿರೀಕ್ಷೆಯಿದೆ. ಎಲ್ಲಾ ಸಂಸದರು ಶಿವಸೇನೆ ಸಂಸದ ಶ್ರಿಕಾಂತ್ ಶಿಂಧೆ ಅವರ ನಿವಾಸದಲ್ಲಿ ಸಭೆ ನಡೆಸಲಿದ್ದು, ಈ ಸಭೆಯಲ್ಲಿ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಸಹ ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಭೆಯ ಬಳಿಕ ಈ ನಾಯಕರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ. ಜೂನ್ 19ರಂದು ಶಿವಸೇನೆ ಸಂಸ್ಥಾಪನಾ ದಿನಾಚರಣೆ ನಡೆಯಲಿರುವ ಹಿನ್ನೆಲೆಯಲ್ಲಿ ಅದಕ್ಕೂ ಮುನ್ನವೇ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಈ ಬೆಳವಣಿಗೆಗಳು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)ಗೆ ಮತ್ತೊಂದು ದೊಡ್ಡ ಹಿನ್ನಡೆಯಾಗುವ ಸಾಧ್ಯತೆ ಇದೆ.
2022ರಲ್ಲಿ ಏಕನಾಥ್ ಶಿಂಧೆ ನೇತೃತ್ವದಲ್ಲಿ ನಡೆದ ಬಂಡಾಯದಿಂದ ಶಿವಸೇನೆ ಎರಡು ಬಣಗಳಾಗಿ ವಿಭಜನೆಯಾಗಿತ್ತು. ಆ ಬಳಿಕ ಮಹಾರಾಷ್ಟ್ರದ ರಾಜಕೀಯ ಚಿತ್ರಣವೇ ಬದಲಾಗಿತ್ತು. ಇದೀಗ ಮತ್ತೆ ಪಕ್ಷದ ಜನಪ್ರತಿನಿಧಿಗಳ ವಲಸೆ ಕುರಿತು ಕೇಳಿಬರುತ್ತಿರುವ ಸುದ್ದಿಗಳು ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿವೆ.

