Delhi Assembly Security Breach| ಬ್ಯಾರಿಕೇಡ್ ಮುರಿದು ವಿಧಾನಸಭೆ ಸಂಕೀರ್ಣಕ್ಕೆ ನುಗ್ಗಿದ ಕಾರು; ಸ್ಪೀಕರ್ ಕಾರಿಗೆ ಮಸಿ ಬಳಿದ ದುಷ್ಕರ್ಮಿ
x
ದೆಹಲಿ ವಿಧಾನಸಭಾ ಸಂಕೀರ್ಣದಲ್ಲಿ ಭದ್ರತಾ ವೈಫಲ್ಯ

Delhi Assembly Security Breach| ಬ್ಯಾರಿಕೇಡ್ ಮುರಿದು ವಿಧಾನಸಭೆ ಸಂಕೀರ್ಣಕ್ಕೆ ನುಗ್ಗಿದ ಕಾರು; ಸ್ಪೀಕರ್ ಕಾರಿಗೆ ಮಸಿ ಬಳಿದ ದುಷ್ಕರ್ಮಿ

ದೆಹಲಿ ವಿಧಾನಸಭೆಯ ಗೇಟ್ ನಂಬರ್ 2ರ ಮೂಲಕ ಬ್ಯಾರಿಕೇಡ್ ಭೇದಿಸಿ ನುಗ್ಗಿದ ಅಪರಿಚಿತ ವಾಹನ, ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಕಾರಿಗೆ ಮಸಿ ಬಳಿದು ಭಾರಿ ಆತಂಕ ಸೃಷ್ಟಿಸಿದೆ.


ದೆಹಲಿ ವಿಧಾನಸಭೆಯ ಆವರಣದಲ್ಲಿ ಸೋಮವಾರ ಮಧ್ಯಾಹ್ನ ಭಾರಿ ಭದ್ರತಾ ಲೋಪ ಸಂಭವಿಸಿದೆ. ಅಪರಿಚಿತ ವಾಹನವೊಂದು ಭದ್ರತಾ ತಡೆಗೋಡೆಯನ್ನು (ಬ್ಯಾರಿಕೇಡ್) ಭೇದಿಸಿ ವಿಧಾನಸಭೆಯ ಆವರಣದೊಳಗೆ ನುಗ್ಗಿದ್ದು, ಈ ವೇಳೆ ವಿಧಾನಸಭೆ ಸ್ಪೀಕರ್ ಅವರ ವಾಹನಕ್ಕೆ ಮಸಿ ಬಳಿಯಲಾಗಿದೆ ಎಂದು ವರದಿಯಾಗಿದೆ.

ಘಟನೆಯ ವಿವರ

ಉತ್ತರ ಪ್ರದೇಶದ ನೋಂದಣಿ ಸಂಖ್ಯೆ ಹೊಂದಿದ್ದ ವಾಹನವೊಂದು ಗೇಟ್ ಸಂಖ್ಯೆ 2ರ ಮೂಲಕ ಬಲವಂತವಾಗಿ ನುಗ್ಗಿದೆ. ಕಬ್ಬಿಣದ ಬ್ಯಾರಿಕೇಡ್ ಅನ್ನು ಡಿಕ್ಕಿ ಹೊಡೆದು ವಾಹನವು ವಿಧಾನಸಭೆಯ ಹೈ-ಸೆಕ್ಯೂರಿಟಿ ಝೋನ್ ಪ್ರವೇಶಿಸಿತ್ತು.

ಆವರಣದೊಳಗೆ ನುಗ್ಗಿದ ಚಾಲಕನು ವಿಧಾನಸಭೆ ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಕಚೇರಿಯತ್ತ ತೆರಳಿದ್ದಾನೆ. ಅಲ್ಲಿ ಸ್ಪೀಕರ್ ಅವರ ವಾಹನಕ್ಕೆ ಮಸಿ ಬಳಿಯಲಾಗಿದೆ ಎಂದು ಆರೋಪಿಸಲಾಗಿದೆ. ಅಚ್ಚರಿಯೆಂದರೆ, ಚಾಲಕನು ವಾಹನದಿಂದ ಕೆಳಗಿಳಿದು ಸ್ಪೀಕರ್ ಕಚೇರಿಯ ಮುಂಭಾಗ ಹೂಗುಚ್ಛವೊಂದನ್ನು (Bouquet) ಇಟ್ಟು ನಂತರ ಅಲ್ಲಿಂದ ಪರಾರಿಯಾಗಿದ್ದಾನೆ. ವಾಹನ ಚಲಾಯಿಸುತ್ತಿದ್ದ ವ್ಯಕ್ತಿಯು ಮುಖವಾಡ ಧರಿಸಿದ್ದ ಎನ್ನಲಾಗಿದ್ದು, ಈ ಇಡೀ ಘಟನೆಯು ಭದ್ರತಾ ಸಿಬ್ಬಂದಿಯನ್ನು ಬೆಚ್ಚಿ ಬೀಳಿಸಿದೆ.

ಘಟನೆ ವಿಡಿಯೋ ಇಲ್ಲಿದೆ

ತನಿಖೆ ಚುರುಕು:

ಅತ್ಯಂತ ಸುರಕ್ಷಿತ ಪ್ರದೇಶವೆಂದು ಪರಿಗಣಿಸಲಾದ ವಿಧಾನಸಭೆ ಸಂಕೀರ್ಣಕ್ಕೆ ಇಷ್ಟೊಂದು ಸುಲಭವಾಗಿ ವಾಹನವೊಂದು ನುಗ್ಗಿದ್ದು ಹೇಗೆ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಘಟನೆಯ ನಂತರ ವಾಹನವು ಅಲ್ಲಿಂದ ಪರಾರಿಯಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ವಾಹನ ಮತ್ತು ಚಾಲಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಈ ಘಟನೆಯು ಶಾಸಕರು ಮತ್ತು ಹಿರಿಯ ಅಧಿಕಾರಿಗಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಈ ಹಿಂದೆ ಬಜೆಟ್ ಅಧಿವೇಶನದ ವೇಳೆಯೂ ವಿಧಾನಸಭೆಗೆ ಬಾಂಬ್ ಬೆದರಿಕೆ ಕರೆಗಳು ಬಂದಿದ್ದವು ಎಂಬುದು ಇಲ್ಲಿ ಗಮನಾರ್ಹ.

Read More
Next Story