
ಮೃತ ಕೇತನ್ ಅಗರ್ವಾಲ್ ಹಾಗೂ ಆರೋಪಿ ಸಿಯಾ ಗೋಯಲ್
ಪುಣೆ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ: ಮೇಘಾಲಯ ಕೇಸ್ ನೋಡಿ ಸ್ಕೆಚ್ ಹಾಕಿದ್ದ ಸಿಯಾ!
ಪೊಲೀಸ್ ತನಿಖೆಯ ವೇಳೆ ಈ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣ ಮತ್ತು ಈ ಹಿಂದೆ ಮೇಘಾಲಯದಲ್ಲಿ ನಡೆದಿದ್ದ ರಾಜಾ ರಘುವಂಶಿ ಕೊಲೆ ಪ್ರಕರಣದ ನಡುವೆ ಅತ್ಯಂತ ವಿಚಿತ್ರ ಹಾಗೂ ಆಘಾತಕಾರಿ ಹೋಲಿಕೆಗಳು ಕಂಡುಬಂದಿವೆ.
ಪುಣೆ ಉದ್ಯಮಿ ಕೇತನ್ ಅಗರ್ವಾಲ್ ಅವರ ನಿಗೂಢ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪುಣೆ ಪೊಲೀಸರು, ಇಡೀ ದೇಶವನ್ನೇ ಬೆಚ್ಚಿಬೀಳಿಸುವಂತಹ ಆಘಾತಕಾರಿ ಸಂಚನ್ನು ಬಯಲಿಗೆಳೆದಿದ್ದಾರೆ. ಈ ಕೊಲೆ ಪ್ರಕರಣದ ತನಿಖೆಯುದ್ದಕ್ಕೂ ಸಿನಿಮಾ ಕಥೆಯನ್ನೂ ಮೀರಿಸುವಂತಹ ಕ್ರಿಮಿನಲ್ ಮೈಂಡ್‌ಸೆಟ್, ಪಕ್ಕಾ ಪ್ಲಾನಿಂಗ್ ಹಾಗೂ ನಿರ್ದಯಿ ಕೃತ್ಯದ ವಿವರಗಳು ಹೊರಬರುತ್ತಿವೆ.
ಮೇಘಾಲಯದ ಕೊಲೆಗೆ ಲಿಂಕ್?
ಪೊಲೀಸ್ ತನಿಖೆಯ ವೇಳೆ ಈ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣ ಮತ್ತು ಈ ಹಿಂದೆ ಮೇಘಾಲಯದಲ್ಲಿ ನಡೆದಿದ್ದ ರಾಜಾ ರಘುವಂಶಿ ಕೊಲೆ ಪ್ರಕರಣದ ನಡುವೆ ಅತ್ಯಂತ ವಿಚಿತ್ರ ಹಾಗೂ ಆಘಾತಕಾರಿ ಹೋಲಿಕೆಗಳು ಕಂಡುಬಂದಿವೆ. ಎರಡೂ ಪ್ರಕರಣಗಳಲ್ಲಿ ತನ್ನ ಸಂಗಾತಿಯನ್ನು ಅವರ ಹೆಂಡತಿಯೇ ಬೆಟ್ಟದ ತುದಿಯಿಂದ ಕೆಳಗೆ ತಳ್ಳಿ ಕೊಂದಿದ್ದಾರೆ! ಮೇಘಾಲಯದಲ್ಲಿ ಸೋನಮ್ ರಘುವಂಶಿ ಎಂಬಾಕೆ ತನ್ನ ಪತಿ ರಾಜಾ ರಘುವಂಶಿಯನ್ನು ಕೊಲ್ಲಲು ರೂಪಿಸಿದ್ದ ಸ್ಕೆಚ್‌ನಿಂದಲೇ, ಇಲ್ಲಿ ಪುಣೆಯ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಪ್ರೇರಿಪಿತಗೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಸೋನಮ್ ತಪ್ಪುಗಳಿಂದ ಪಾಠ ಕಲಿತ ಸಿಯಾ?
ಪೊಲೀಸ್ ಅಧಿಕಾರಿಗಳ ಪ್ರಕಾರ, ಸೋನಮ್ ರಘುವಂಶಿ ಪ್ರಕರಣದಲ್ಲಿ ಆದ ತಪ್ಪುಗಳನ್ನು ಗಮನಿಸಿದ್ದ ಸಿಯಾ ಗೋಯಲ್, ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಪ್ಲಾನ್ ಮಾಡಿದ್ದಳು. ಪೊಲೀಸರಿಗೆ ಯಾವುದೇ ಅನುಮಾನ ಬಾರದಂತೆ, ತನಿಖೆ ಕಷ್ಟವಾಗುವಂತೆ ಘಟನೆಯ ಸಮಯದಲ್ಲಿ ತಾನು ಬೇರೆಡೆ ಇದ್ದೆ ಎಂಬ ಪುರಾವೆಗಳನ್ನು ಸೃಷ್ಟಿಸಿಕೊಂಡಿದ್ದಳು ಎಂದು ಎನ್‌ಡಿಟಿವಿ ವರದಿ ಮಾಡಿದೆ.
'ಮಿಸಸ್ ಡಾಲೋವೇ' ಕಾದಂಬರಿಯಂತೆ ನಡೆದ ಪ್ಲಾನ್!
ಖ್ಯಾತ ಲೇಖಕಿ ವರ್ಜೀನಿಯಾ ವೂಲ್ಫ್ ಅವರ 'ಮಿಸಸ್ ಡಾಲೋವೇ' ಕಾದಂಬರಿಯ 'ಸ್ಟ್ರೀಮ್ ಆಫ್ ಕಾನ್ಶಿಯಸ್‌ನೆಸ್' (ಪ್ರಜ್ಞೆಯ ಪ್ರವಾಹ) ಶೈಲಿಯಂತೆಯೇ ಸಿಯಾ ಗೋಯಲ್ ಈ ಹತ್ಯೆಯ ಸಂಚು ರೂಪಿಸಿದ್ದಳು. ಕೇತನ್ ಅಗರ್ವಾಲ್ ಜೊತೆಗಿನ ಮದುವೆಯ ಬಂಧನದಿಂದ ತಪ್ಪಿಸಿಕೊಳ್ಳಲು ಕೊಲೆಯೊಂದೇ ದಾರಿ ಎಂದು ಆಕೆ ನಂಬಿದ್ದಳು. ಆಕೆಯ ಆಂತರಿಕ ಆಲೋಚನೆಗಳು ಮತ್ತು ಆಕೆಯ ನಡವಳಿಕೆಗಳು ಅತ್ಯಂತ ವ್ಯವಸ್ಥಿತವಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
"ಇದು ಕೇವಲ ವೈಯಕ್ತಿಕ ದ್ವೇಷವಲ್ಲ, ಕೌಟುಂಬಿಕ ಮತ್ತು ಸಾಮಾಜಿಕ ನಂಬಿಕೆಗಳು ಹಾಗೂ ಕುಟುಂಬಗಳ ನಡುವಿನ ವ್ಯವಹಾರದ ಅಂಶಗಳೂ ಸಿಯಾಳನ್ನು ಈ ಹತಾಶೆಯ ಅಪರಾಧ ಮಾಡಲು ಪ್ರೇರೇಪಿಸಿವೆ. ಆಕೆ ಅತ್ಯಂತ ಕ್ರಿಮಿನಲ್ ಬುದ್ಧಿಯಿಂದ, ಕಾನೂನಿನ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದಲೇ ಈ ಸಂಚು ರೂಪಿಸಿದ್ದಳು" ಎಂದು ತನಿಖಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪಶ್ಚಾತ್ತಾಪವೇ ಇಲ್ಲದ ಅಪರಾಧಿಗಳು!
ಪ್ರಸ್ತುತ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಇಬ್ಬರೂ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಆದರೆ, ಇಬ್ಬರಲ್ಲೂ ತಾವು ಮಾಡಿದ ಕ್ರೂರ ಕೃತ್ಯದ ಬಗ್ಗೆ ಯಾವುದೇ ಪಶ್ಚಾತ್ತಾಪದ ಲಕ್ಷಣಗಳು ಕಾಣಿಸುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ. "ಪ್ರಸ್ತುತ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಜೈಲಿನ ಕತ್ತಲ ಕೋಣೆಯಲ್ಲಿ ಕಾಲ ಕಳೆಯುವಾಗ ಇವರ ಅಹಂಕಾರ ಮುರಿದು ತಪ್ಪು ಅರಿವಾಗಬಹುದು" ಎಂದು ಅಧಿಕಾರಿಗಳು ಆಶಿಸಿದ್ದಾರೆ.
ಲೋಹಗಡ್ ಕೋಟೆಯ ಪ್ಲಾನ್ ಫ್ಲಾಪ್ ಆಗಿದ್ದು ಹೇಗೆ?
ಕೇತನ್ ಅಗರ್ವಾಲ್ ಸಾವು ಆಕಸ್ಮಿಕ ಎಂದು ಬಿಂಬಿಸಲು ಇಬ್ಬರೂ ನಾಟಕವಾಡಿದ್ದರು. ಆದರೆ, ಕೇತನ್ ಬಿದ್ದಿದ್ದ ಲೋಹಗಡ್ ಕೋಟೆಯ ಆ ನಿರ್ದಿಷ್ಟ ಜಾಗವು ಪಾದಯಾತ್ರೆ ಮಾಡುವ ಇತರ ಸ್ಥಳಗಳಿಗಿಂತ ಅಷ್ಟೇನೂ ಅಪಾಯಕಾರಿಯಾಗಿರಲಿಲ್ಲ. ಇದು ಪೊಲೀಸರ ಅನುಮಾನಕ್ಕೆ ಕಾರಣವಾಯಿತು. ನಿರಂತರ ವಿಚಾರಣೆ ನಡೆಸದಿದ್ದರೆ ಆರೋಪಿಗಳು ಪಾರಾಗುತ್ತಿದ್ದರು ಎಂದು ಪೊಲೀಸರು ಒಪ್ಪಿಕೊಂಡಿದ್ದಾರೆ.
ಗೂಗಲ್ ಸರ್ಚ್ ಹಿಸ್ಟರಿಯಲ್ಲಿ ಬಯಲಾಯ್ತು ಸತ್ಯ!
ಸಿಯಾ ಗೋಯಲ್ ಬಳಿ ಇದ್ದ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡ ಪೊಲೀಸರಿಗೆ ಬಿಗ್ ಶಾಕ್ ಕಾದಿತ್ತು. ಆಕೆಯ ಬ್ರೌಸಿಂಗ್ ಹಿಸ್ಟರಿ ಪರಿಶೀಲಿಸಿದಾಗ, ಮೇಘಾಲಯದ ರಾಜಾ ರಘುವಂಶಿ ಕೊಲೆ ಪ್ರಕರಣದ ಸುದ್ದಿಗಳನ್ನು ಆಕೆ ಗಂಟೆಗಟ್ಟಲೆ ಓದಿರುವುದು ಪತ್ತೆಯಾಗಿತ್ತು. ಅಷ್ಟೇ ಅಲ್ಲದೆ, "ಪೊಲೀಸ್ ಕಸ್ಟಡಿಯಲ್ಲಿ ಮಹಿಳೆಯರನ್ನು ಥಳಿಸಲಾಗುತ್ತದೆಯೇ?" ಮತ್ತು "ಮಹಿಳಾ ಕೈದಿಗಳ ಹಕ್ಕುಗಳು ಏನೇನು?" ಎಂಬುದರ ಕುರಿತು ಆಕೆ ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಾಳೆ! ಸದ್ಯ ಆಕೆಯ ಎರಡನೇ ಮೊಬೈಲ್ ಫೋನ್ ಅನ್ನು ವಿಧಿವಿಜ್ಞಾನ (FSL) ಪರೀಕ್ಷೆಗೆ ಕಳುಹಿಸಲಾಗಿದೆ.
ರಘುವಂಶಿ ತಾಯಿಯ ಆಕ್ರೋಶ
ಇದೇ ವೇಳೆ ಪ್ರತಿಕ್ರಿಯಿಸಿರುವ ರಾಜಾ ರಘುವಂಶಿ ಅವರ ತಾಯಿ ಉಮಾ ರಘುವಂಶಿ, "ಸಿಯಾ ಗೋಯಲ್ ಮಾಡಿರುವ ಕೃತ್ಯ ನನ್ನ ಮಗನ ಹತ್ಯೆಯನ್ನೇ ನೆನಪಿಸುತ್ತಿದೆ. ರಾಜಾ ಕೊಲೆ ಪ್ರಕರಣದ ತನಿಖೆ ಶಿಲ್ಲಾಂಗ್‌ನಲ್ಲಿ ನಡೆಯುತ್ತಿದ್ದರೂ, ಮುಖ್ಯ ಆರೋಪಿ ಸೋನಮ್ ರಘುವಂಶಿ ಜಾಮೀನಿನ ಮೇಲೆ ಹೊರಗಿದ್ದಾಳೆ. ಇಂತಹ ಕಾನೂನಿನ ಸಡಿಲಿಕೆಯೇ ಸಿಯಾ ಮತ್ತು ಚೇತನ್‌ನಂತಹ ಅಪರಾಧಿಗಳಿಗೆ ಧೈರ್ಯ ನೀಡುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

