If you want to silence me, you have to kill me first: Mamata Banerjee lashes out at BJP
x

ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ

"ನನ್ನನ್ನು ಮೌನಗೊಳಿಸಬೇಕಾದರೆ ಮೊದಲು ಕೊಲ್ಲಬೇಕು": ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಕಿಡಿ

ಪಕ್ಷದೊಳಗಿನ ಇತ್ತೀಚಿನ ಭಿನ್ನಮತ ಮತ್ತು ಬಿಕ್ಕಟ್ಟಿನ ಬಳಿಕ ಮೊದಲ ಬಾರಿಗೆ ಮೌನ ಮುರಿದಿರುವ ಮಮತಾ ಬ್ಯಾನರ್ಜಿ, ವಿಡಿಯೋ ಸಂದೇಶದ ಮೂಲಕ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ.


Click the Play button to hear this message in audio format

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಶುಕ್ರವಾರ(ಜು.10) ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ವ್ಯವಸ್ಥಿತವಾಗಿ ಗುರಿಯಾಗಿಸಿಕೊಂಡು ರಾಜಕೀಯ ದ್ವೇಷ ಸಾಧಿಸಲಾಗುತ್ತಿದೆ ಎಂದು ಆರೋಪಿಸಿರುವ ಅವರು, "ನನ್ನನ್ನು ಮೌನಗೊಳಿಸಲು ಅಥವಾ ಟಿಎಂಸಿಯನ್ನು ನಾಶಮಾಡಲು ಬಯಸುವ ಯಾರಾದರೂ ಮೊದಲು ನನ್ನನ್ನು ಕೊಲ್ಲಬೇಕಾಗುತ್ತದೆ" ಎಂದು ಸವಾಲು ಹಾಕಿದ್ದಾರೆ.

ಪಕ್ಷದೊಳಗಿನ ಇತ್ತೀಚಿನ ಭಿನ್ನಮತ ಮತ್ತು ಬಿಕ್ಕಟ್ಟಿನ ಬಳಿಕ ಮೊದಲ ಬಾರಿಗೆ ಮೌನ ಮುರಿದಿರುವ ಮಮತಾ ಬ್ಯಾನರ್ಜಿ, ವಿಡಿಯೋ ಸಂದೇಶದ ಮೂಲಕ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ. "ನನ್ನನ್ನು ಮೌನಗೊಳಿಸಲು ನೀವು ನನ್ನನ್ನು ಕೊಲ್ಲಬೇಕಾಗುತ್ತದೆ. ಹೌದು, ನೀವು ಅದಕ್ಕೂ ಯಾವುದೇ ಪ್ರಯತ್ನವನ್ನು ಬಾಕಿ ಉಳಿಸಿಲ್ಲ" ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸ್‌ ಠಾಣೆಯಲ್ಲಿ ಅಮಾನವೀಯ ವರ್ತನೆ

ಬಂಧನದಲ್ಲಿರುವ ತಮ್ಮ ಪಕ್ಷದ ಸಹೋದ್ಯೋಗಿಗಳನ್ನು ಪೊಲೀಸರು ಅತ್ಯಂತ ಅವಮಾನಕರವಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಅವರು, "ನನ್ನ ಅನೇಕ ಸಹೋದ್ಯೋಗಿಗಳನ್ನು ಲಾಕ್-ಅಪ್‌ಗಳಲ್ಲಿ ಬಂಧಿಸಿ, ಬರಿ ನೆಲದ ಮೇಲೆ ಮಲಗುವಂತೆ ಒತ್ತಾಯಿಸಲಾಗುತ್ತಿದೆ. ಕೆಲವರ ಸೊಂಟಕ್ಕೆ ಹಗ್ಗ ಕಟ್ಟಿ, ಕಾಲುಗಳಿಗೆ ಸಂಕೋಲೆ ಹಾಕಿ ಮೆರವಣಿಗೆ ಮಾಡಲಾಗುತ್ತಿದೆ. ಕೆಲವರ ತಲೆ ಬೋಳಿಸಲಾಗಿದೆ, ಇನ್ನು ಕೆಲವರ ಮೇಲೆ ಕೆಟ್ಟ ವಸ್ತುಗಳನ್ನು ಎಸೆಯಲಾಗಿದೆ. ಇದನ್ನು ಬಾಯಲ್ಲಿ ಹೇಳಲು ಸಹ ನಾಚಿಕೆಯಾಗುತ್ತದೆ." ಆದರೆ, ಇಂತಹ ದೌರ್ಜನ್ಯಗಳಿಂದ ಟಿಎಂಸಿಯನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ ಮತ್ತು ರಾಜಕೀಯ ಹೋರಾಟ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಟಿಎಂಸಿಯನ್ನು ಬೆದರಿಸಲು ಸಾಧ್ಯವಿಲ್ಲ

ಈ ವೇಳೆ ಅವರು ಸಂಸದರಾದ ಮಹುವಾ ಮೊಯಿತ್ರಾ, ಅಭಿಷೇಕ್ ಬ್ಯಾನರ್ಜಿ ಮತ್ತು ಕಲ್ಯಾಣ್ ಬ್ಯಾನರ್ಜಿ ಅವರ ಹೆಸರುಗಳನ್ನು ಪ್ರಸ್ತಾಪಿಸಿ, "ನೀವು ಯಾರ ಮೇಲೆ ಹಲ್ಲೆ ಮಾಡಿಲ್ಲ ಹೇಳಿ? ಮಹುವಾ, ಅಭಿಷೇಕ್, ಕಲ್ಯಾಣ್ ಎಲ್ಲರ ಮೇಲೂ ದಾಳಿ ಮಾಡಿದ್ದೀರಿ. ಅಷ್ಟೇ ಏಕೆ, ನನ್ನ ಮನೆಯ ಮೇಲೂ ದಾಳಿ ನಡೆಸಿದ್ದೀರಿ" ಎಂದು ಮಮತಾ ಆಕ್ರೋಶ ಹೊರಹಾಕಿದ್ದಾರೆ.

ಮಧ್ಯಾಹ್ನದ ಊಟದ ಮೊಟ್ಟೆ ವಿವಾದ

ಇದೇ ವೇಳೆ ಪಶ್ಚಿಮ ಬಂಗಾಳದ ಆಯ್ದ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಊಟದಲ್ಲಿ ಮೊಟ್ಟೆಗಳನ್ನು ತೆಗೆದು ಪರ್ಯಾಯವಾಗಿ ಸಸ್ಯಾಹಾರಿ ಆಹಾರ ನೀಡುತ್ತಿರುವ ಬಿಜೆಪಿ ಸರ್ಕಾರದ ನಿರ್ಧಾರವನ್ನು ಮಮತಾ ತೀವ್ರವಾಗಿ ಖಂಡಿಸಿದರು. "ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದಲ್ಲಿ ಮೊಟ್ಟೆ ಸಿಗದಂತೆ ಮಾಡಲಾಗುತ್ತಿದೆ. ಜನಕಲ್ಯಾಣವನ್ನು ಗಾಳಿಗೆ ತೂರಿ ಇಂತಹ ವಿಕೃತ ಕೆಲಸಗಳಲ್ಲಿ ಸರ್ಕಾರ ಬ್ಯುಸಿಯಾಗಿದೆ. ಇದು ಎಂದಿಗೂ ಬಂಗಾಳದ ಸಂಸ್ಕೃತಿಯಲ್ಲ. ನಾವೂ 15 ವರ್ಷಗಳ ಕಾಲ ಅಧಿಕಾರ ನಡೆಸಿದ್ದೇವೆ, ಆದರೆ ಪೊಲೀಸರನ್ನು ಬಳಸಿ ಇಂತಹ ಕೃತ್ಯಗಳನ್ನು ಎಂದಿಗೂ ಮಾಡಿಸಿಲ್ಲ" ಎಂದು ಹೇಳುವ ಮೂಲಕ ಸರ್ಕಾರವು ಮಕ್ಕಳ ಕಲ್ಯಾಣಕ್ಕಿಂತ ರಾಜಕೀಯ ದ್ವೇಷಕ್ಕೆ ಆದ್ಯತೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

ಪ್ರಸ್ತುತ ಟಿಎಂಸಿ ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಗಂಭೀರ ಆಂತರಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ರುತಬ್ರತ ಬ್ಯಾನರ್ಜಿ ನೇತೃತ್ವದ ಬಂಡಾಯ ಬಣವು ಸುಮಾರು 60 ಶಾಸಕರ ಬೆಂಬಲ ಹೊಂದಿದ್ದು, ಮತ್ತೊಂದೆಡೆ ಕನಿಷ್ಠ 20 ಭಿನ್ನಮತೀಯ ಶಾಸಕರು ತ್ರಿಪುರಾ ಮೂಲದ ಎನ್‌ಸಿಪಿಐ ಪಕ್ಷದೊಂದಿಗೆ ವಿಲೀನಗೊಂಡಿದ್ದಾರೆ. ಈ ರಾಜಕೀಯ ಬೆಳವಣಿಗೆಗಳ ಬೆನ್ನಲ್ಲೇ ಮಮತಾ ಅವರಿಂದ ಈ ಖಡಕ್ ಹೇಳಿಕೆ ಹೊರಬಿದ್ದಿದೆ.

Read More
Next Story