
ಬಂಗಾಳದಲ್ಲಿ ರಾಜಕೀಯ ಹೈಡ್ರಾಮಾ: ದೀದಿ ಪ್ರತಿಭಟನಾ ರ‍್ಯಾಲಿ ತಡೆದ ಬಿಜೆಪಿ- ಕೋಲ್ಕತ್ತಾದಲ್ಲಿ ರಣರಂಗ
ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರವು ಭಯ ಮತ್ತು ಹಿಂಸೆಯ ಮೂಲಕ ಜನರ ಪ್ರಜಾಪ್ರಭುತ್ವದ ಧ್ವನಿಯನ್ನು ಅಡಗಿಸಲು ಪೊಲೀಸರನ್ನು ಬಳಸಿಕೊಳ್ಳುತ್ತಿದೆ ಎಂದು ಮಾಜಿ ಸಿಎಂ ಮಮತಾ ಬ್ಯಾನರ್ಜಿ ದೂರಿದರು.
ಪಶ್ಚಿಮ ಬಂಗಾಳದ ಬರೂಯಿಪುರದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ರ‍್ಯಾಲಿ ವೇಳೆ ಆಡಳಿತಾರೂಢ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರ ನಡುವೆ ಭೀಕರ ಘರ್ಷಣೆ ಸಂಭವಿಸಿದೆ. ದಕ್ಷಿಣ ಕೋಲ್ಕತ್ತಾದ ಬ್ಯಾಲಿಗಂಜ್ ಫಾರಿಯಿಂದ ಹಜ್ರಾ ಕ್ರಾಸಿಂಗ್‌ವರೆಗಿನ ರಸ್ತೆಗಳು ಸಂಪೂರ್ಣವಾಗಿ ರಣರಂಗವಾಗಿ ಮಾರ್ಪಟ್ಟಿದ್ದವು.
ಮೇ ತಿಂಗಳಲ್ಲಿ ಅಧಿಕಾರ ಕಳೆದುಕೊಂಡಿರುವ ಮಾಜಿ ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, "ಕೇಸರಿ ಪಕ್ಷವು ನಮ್ಮ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಗೂಂಡಾಗಳನ್ನು ಬಳಸುತ್ತಿದೆ ಮತ್ತು ಪೊಲೀಸರು ಆಡಳಿತ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ" ಎಂದು ಗಂಭೀರ ಆರೋಪ ಮಾಡಿದ್ದಾರೆ.
40ಕ್ಕೂ ಕಾರ್ಯಕರ್ತರು ಆಸ್ಪತ್ರೆಗೆ ದಾಖಲು
ಕೋಲ್ಕತ್ತಾ ಹೈಕೋರ್ಟ್ ಅನುಮತಿಯೊಂದಿಗೆ ಟಿಎಂಸಿಯ ವಿದ್ಯಾರ್ಥಿ ಮತ್ತು ಯುವ ಘಟಕಗಳು ಈ ರ‍್ಯಾಲಿಯನ್ನು ಆಯೋಜಿಸಿದ್ದವು. ಆದರೆ ರ‍್ಯಾಲಿ ಸಾಗುವ ಮಾರ್ಗದಲ್ಲಿ ಬಿಜೆಪಿ ಕಾರ್ಯಕರ್ತರು ಹಜ್ರಾ ರಸ್ತೆಯುದ್ದಕ್ಕೂ ಮಾನವ ಬ್ಯಾರಿಕೇಡ್‌ಗಳನ್ನು ನಿರ್ಮಿಸಿ 'ಕಳ್ಳ' (ಚೋರ್-ಚೋರ್) ಘೋಷಣೆಗಳನ್ನು ಕೂಗುತ್ತಾ ಅಡ್ಡಿಪಡಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇದು ಉಭಯ ಪಕ್ಷಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಗಿ, ನಂತರ ತೀವ್ರ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಘರ್ಷಣೆಯಲ್ಲಿ ಮಹಿಳೆಯರು ಸೇರಿದಂತೆ 40ಕ್ಕೂ ಹೆಚ್ಚು ಟಿಎಂಸಿ ಕಾರ್ಯಕರ್ತರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ನಗರದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. ಗಾಯಾಳುಗಳನ್ನು ಭೇಟಿ ಮಾಡಿದ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ, "ಹೈಕೋರ್ಟ್ ಅನುಮತಿ ನೀಡಿದ್ದ ರ‍್ಯಾಲಿಯನ್ನು ಬಿಜೆಪಿ ಗೂಂಡಾಗಳು ತಡೆದು ಹಲ್ಲೆ ನಡೆಸಿರುವುದು ಪ್ರಜಾಪ್ರಭುತ್ವದ ವಿರೋಧಿ " ಎಂದು ಆಕ್ರೋಶ ಹೊರಹಾಕಿದ್ದಾರೆ.
'ನನ್ನನ್ನು ಗೃಹಬಂಧನದಲ್ಲಿಡಲಾಗಿದೆ': ಮಮತಾ ಆರೋಪ
ಘಟನೆಯ ನಂತರ ಹಜ್ರಾ ಕ್ರಾಸಿಂಗ್‌ನಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಪೊಲೀಸರ ದ್ವಿಮುಖ ನೀತಿಯನ್ನು ತೀವ್ರವಾಗಿ ಖಂಡಿಸಿದರು. "ಕಾನೂನು ಸುವ್ಯವಸ್ಥೆ ಕಾಪಾಡುವ ಬದಲು ಪೊಲೀಸರು ಬೆಳಿಗ್ಗೆಯಿಂದ ನನ್ನ ನಿವಾಸದ ಮೇಲೆ ಕಣ್ಗಾವಲು ಇಟ್ಟಿದ್ದಾರೆ. ಯಾರು ಬರುತ್ತಾರೆ, ಯಾರು ಹೋಗುತ್ತಾರೆ ಎಂಬುದನ್ನು ಗಮನಿಸುತ್ತಾ ನನ್ನನ್ನು ಗೃಹಬಂಧನದಲ್ಲಿಟ್ಟಂತೆ ನಡೆಸಿಕೊಳ್ಳುತ್ತಿದ್ದಾರೆ. ಹೈಕೋರ್ಟ್ ಹ್ಯಾಂಡ್ ಮೈಕ್ ಬಳಸಲು ನಮಗೆ ಅನುಮತಿ ನೀಡಿದ್ದರೂ ಪೊಲೀಸರು ಅದನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಆದರೆ ಬಿಜೆಪಿ ಬೆಂಬಲಿಗರಿಗೆ ಡಿಜೆ ಬಳಸಲು ಮತ್ತು ಅಡೆತಡೆಗಳನ್ನು ಸೃಷ್ಟಿಸಲು ಮುಕ್ತ ಅವಕಾಶ ನೀಡಿದ್ದಾರೆ" ಎಂದು ಕಿಡಿಕಾರಿದ್ದಾರೆ. ಅಲ್ಲದೆ, ಈ ವಿಷಯದ ಕುರಿತು ನ್ಯಾಯಾಂಗ ನಿಂದನೆ ದೂರು ದಾಖಲಿಸುವುದಾಗಿ ಅವರು ಎಚ್ಚರಿಸಿದ್ದಾರೆ.
ದೇಣಿಗೆ ಲೂಟಿ ಮಾಡಿದವರಿಂದ ಗದ್ದಲ
"ಅಯೋಧ್ಯೆಯ ರಾಮ ಮಂದಿರದ ದೇಣಿಗೆಯನ್ನು ಲೂಟಿ ಮಾಡಿದವರು ಇಂದು ಭಗವಾನ್ ರಾಮನ ಹೆಸರಿನಲ್ಲಿ ಇಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ" ಎಂದು ಆರೋಪಿಸಿದರು. ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರವು ಭಯ ಮತ್ತು ಹಿಂಸೆಯ ಮೂಲಕ ಜನರ ಪ್ರಜಾಪ್ರಭುತ್ವದ ಧ್ವನಿಯನ್ನು ಅಡಗಿಸಲು ಪೊಲೀಸರನ್ನು ಬಳಸಿಕೊಳ್ಳುತ್ತಿದೆ ಎಂದು ದೂರಿದರು. ಇದೇ ವೇಳೆ ರಾಜ್ಯದಲ್ಲಿ ಶಾಲೆಗಳ ಮಧ್ಯಾಹ್ನದ ಊಟದಲ್ಲಿ ಮೊಟ್ಟೆ ನೀಡುವುದನ್ನು ನಿಲ್ಲಿಸಲಾಗಿದೆ ಎಂದು ಆಡಳಿತ ವ್ಯವಸ್ಥೆಯ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ತಿರುಗೇಟು
ಮಮತಾ ಬ್ಯಾನರ್ಜಿ ಅವರ ಆರೋಪಗಳನ್ನು ತಳ್ಳಿಹಾಕಿರುವ ಬಿಜೆಪಿ ರಾಜ್ಯ ಘಟಕ, ಟಿಎಂಸಿ ಅಧಿಕಾರ ಕಳೆದುಕೊಂಡ ನಂತರ ಮಮತಾ ಬ್ಯಾನರ್ಜಿ ಅವರು ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದೆ. ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಕಾನೂನು ತನ್ನ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ನಾಯಕರು ಪ್ರತಿಪಾದಿಸಿದ್ದಾರೆ.

