
ಮೃತ ಕೇತನ್ ಹಾಗೂ ಆರೋಪಿ ಸಿಯಾ
ನಿಶ್ಚಿತಾರ್ಥಕ್ಕಿಂತ ಕೊಲೆಯೇ ಸುಲಭ ಅಂದ್ಕೊಂಡ್ಲು; ಕೇತನ್ ಹತ್ಯೆ ಕೇಸ್‌ನಲ್ಲಿ ಸಿಯಾ ಭೀಕರ ಸ್ಕೆಚ್ ಬಯಲು!
ಆರೋಪಿಗಳಿಬ್ಬರ ಕಾಲ್ ಡಿಟೇಲ್ಸ್ (CDR) ಪರಿಶೀಲಿಸಿದಾಗ ಪೊಲೀಸರಿಗೆ ಬಲವಾದ ಸಾಕ್ಷ್ಯ ಸಿಕ್ಕಿದೆ. ಕಳೆದ ಜನವರಿಯಿಂದ ಇವರಿಬ್ಬರ ನಡುವೆ ಒಟ್ಟು 2,000ಕ್ಕೂ ಹೆಚ್ಚು ಫೋನ್ ಕರೆಗಳು ವಿನಿಮಯವಾಗಿವೆ.
ತೀವ್ರ ಸಂಚಲನ ಮೂಡಿಸಿರುವ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಪೊಲೀಸರ ತನಿಖೆಯಿಂದ ಆಘಾತಕಾರಿ ವಿಷಯಗಳು ಹೊರಬರುತ್ತಿವೆ. ಈ ಹತ್ಯೆ ಪ್ರಕರಣದ ಹಿಂದೆ ಈಗ 'ಕ್ರಿಕೆಟ್ ಲಿಂಕ್' ಬಯಲಾಗಿದ್ದು, ಪ್ರಮುಖ ಆರೋಪಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಎನ್ನಲಾದ ಚೇತನ್ ಚೌಧರಿ ಮೊದಲು ಭೇಟಿಯಾಗಿದ್ದೇ ಕ್ರಿಕೆಟ್ ಮೈದಾನದಲ್ಲಿ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ರಿಕೆಟ್‌ನಿಂದ ಶುರುವಾಗಿತ್ತು ಸ್ನೇಹ!
ಮಾಧ್ಯಮ ವರದಿಗಳ ಪ್ರಕಾರ, ಸಿಯಾ ಗೋಯಲ್ ಅವರ ಸಹೋದರ ಸಾಹಿಲ್ ಅವರಿಗೆ ಚೇತನ್ ಚೌಧರಿ ಕ್ರಿಕೆಟ್ ಮೂಲಕ ಪರಿಚಯವಾಗಿದ್ದರು. ಚೇತನ್ ಆಡುತ್ತಿದ್ದ ಪಂದ್ಯಗಳನ್ನು ನೋಡಲು ಸಿಯಾ ಆಗಾಗ ಮೈದಾನಕ್ಕೆ ಹೋಗುತ್ತಿದ್ದಳು. ಅಲ್ಲಿಯೇ ಇವರಿಬ್ಬರ ಮೊದಲ ಭೇಟಿಯಾಗಿತ್ತು. ಇದಾದ ಬಳಿಕ ಕಳೆದ ವರ್ಷ ನಡೆದ ದೀಪಾವಳಿ ಪಾರ್ಟಿಯೊಂದರಲ್ಲಿ ಇಬ್ಬರೂ ಮತ್ತೆ ಭೇಟಿಯಾಗಿದ್ದು, ಇವರ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು ಎಂದು ಎನ್‌ಡಿಟಿವಿ ವರದಿ ಮಾಡಿದೆ.
2,000ಕ್ಕೂ ಹೆಚ್ಚು ಕರೆ, 238 ಗಂಟೆಗಳ ಸಂಭಾಷಣೆ!
ಆರೋಪಿಗಳಿಬ್ಬರ ಕಾಲ್ ಡಿಟೇಲ್ಸ್ (CDR) ಪರಿಶೀಲಿಸಿದಾಗ ಪೊಲೀಸರಿಗೆ ಬಲವಾದ ಸಾಕ್ಷ್ಯ ಸಿಕ್ಕಿದೆ. ಕಳೆದ ಜನವರಿಯಿಂದ ಇವರಿಬ್ಬರ ನಡುವೆ ಒಟ್ಟು 2,000ಕ್ಕೂ ಹೆಚ್ಚು ಫೋನ್ ಕರೆಗಳು ವಿನಿಮಯವಾಗಿವೆ. ಬರೋಬ್ಬರಿ 238 ಗಂಟೆಗಳ ಕಾಲ ಇಬ್ಬರೂ ಮಾತನಾಡಿದ್ದಾರೆ. ಈ ಸುದೀರ್ಘ ಸಂವಹನವೇ ಕೊಲೆಗೆ ನಡೆದ ಆಪಾದಿತ ಪಿತೂರಿಯನ್ನು ಪುಷ್ಟೀಕರಿಸುತ್ತದೆ ಎಂದು ತನಿಖಾಧಿಕಾರಿಗಳು ನಂಬಿದ್ದಾರೆ.
ಕೊಲೆಗೆ ಒಂದು ದಿನ ಮುನ್ನ ಕೆಫೆಯಲ್ಲಿ ರಹಸ್ಯ ಸಭೆ
ಜೂ. 18 ರಂದು ಲೋಹಗಡ್ ಕೋಟೆಯಲ್ಲಿ ಕೇತನ್ ಅಗರ್ವಾಲ್ ಬಂಡೆಯ ಮೇಲಿಂದ ಬಿದ್ದು ಮೃತಪಟ್ಟಿದ್ದರು. ಆದರೆ, ಇದಕ್ಕೂ ಒಂದು ದಿನ ಮುಂಚಿತವಾಗಿ (ಜೂ. 17) ಪುಣೆಯ ಲುಲ್ಲಾನಗರ ಪ್ರದೇಶದ ಕೆಫೆಯೊಂದರಲ್ಲಿ ಸಿಯಾ ಮತ್ತು ಚೇತನ್ ಭೇಟಿಯಾಗಿದ್ದರು. ಸುಮಾರು ಒಂದು ಗಂಟೆ ಕಾಲ ನಡೆದ ಈ ರಹಸ್ಯ ಸಭೆಯಲ್ಲೇ ಕೊಲೆಯ ಅಂತಿಮ ಸ್ಕೆಚ್ ಸಿದ್ಧವಾಗಿತ್ತೇ ಎಂಬ ಕೋನದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಭೇಟಿಯ ನಂತರ ಇಬ್ಬರೂ ತಮ್ಮ ಫೋನ್‌ಗಳಲ್ಲಿದ್ದ ವಾಟ್ಸಾಪ್ ಹಾಗೂ ಇನ್‌ಸ್ಟಾಗ್ರಾಮ್ ಚಾಟ್‌ಗಳನ್ನು ಡಿಲೀಟ್ ಮಾಡಿದ್ದು, ಡೇಟಾ ಮರುಪಡೆಯಲು ಮೊಬೈಲ್‌ಗಳನ್ನು ವಿಧಿವಿಜ್ಞಾನ (FSL) ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಕೊಲೆ ಮಾಡುವುದೇ ಸುಲಭ ಅಂದುಕೊಂಡಿದ್ದಳು!
ಪೊಲೀಸ್ ಮೂಲಗಳ ಪ್ರಕಾರ, ಮದುವೆ ನಿರಾಕರಿಸಿದರೆ ತನ್ನ ಕುಟುಂಬದ ಗೌರವಕ್ಕೆ ಧಕ್ಕೆಯಾಗಬಹುದು ಮತ್ತು ಪೋಷಕರು ಬೇಸರಗೊಳ್ಳಬಹುದು ಎಂದು ಸಿಯಾ ಹೆದರಿದ್ದಳು. ಹೀಗಾಗಿ ನಿಶ್ಚಿತಾರ್ಥ ಮುರಿಯುವುದಕ್ಕಿಂತ ನಿಶ್ಚಿತಾರ್ಥ ಮಾಡಿಕೊಂಡವನನ್ನು ಕೊಲ್ಲುವುದೇ ಸುಲಭ ಎಂದು ಅವಳು ಭಾವಿಸಿದ್ದಳು. ಕೇತನ್ ಮೃತಪಟ್ಟರೆ ಮುಂದಿನ ಕೆಲವು ವರ್ಷಗಳ ಕಾಲ ಮದುವೆಗೆ ಮನೆಯವರಿಂದ ಒತ್ತಡ ಇರುವುದಿಲ್ಲ ಎಂಬುದು ಆಕೆಯ ಪ್ಲಾನ್ ಆಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಪ್ರೀ-ಪ್ಲಾನ್ಡ್ ಸಿಗ್ನಲ್ ಕೊಟ್ಟು ಕಮರಿಗೆ ತಳ್ಳಿಸಿದ್ಳು!
ಪೊಲೀಸ್ ತನಿಖೆಯ ಪ್ರಕಾರ, ಘಟನಾ ಸ್ಥಳದಲ್ಲಿ ಸಿಯಾ ಮೊದಲೇ ಯೋಜಿಸಿದಂತೆ ಕೆಳಗೆ ಕುಳಿತುಕೊಳ್ಳುವ ಮೂಲಕ ಚೇತನ್‌ಗೆ ಸಂಕೇತ ನೀಡಿದ್ದಾಳೆ. ತಕ್ಷಣವೇ ಹಿಂದಿನಿಂದ ಬಂದ ಚೇತನ್ ಚೌಧರಿ, ಕೇತನ್‌ನನ್ನು ಕಮರಿಗೆ ತಳ್ಳಿದ್ದಾನೆ ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ. ವಿಚಾರಣೆ ವೇಳೆ ಚೇತನ್ ಮೊದಲು ತಾನು ಅಲ್ಲಿರಲಿಲ್ಲ ಎಂದು ಸುಳ್ಳು ಹೇಳಿದ್ದರೂ, ನಂತರ ಸತ್ಯ ಒಪ್ಪಿಕೊಂಡಿದ್ದಾನೆ.
ಪೋಷಕರ ವಾದವೇನು?
"ನನ್ನ ಮಗಳಿಗೆ ಈ ಮದುವೆ ಇಷ್ಟವಿರಲಿಲ್ಲ ಎಂಬುದು ಸುಳ್ಳು. ಜೂ. 18 ರಂದು ಅವಳಿಗೆ ಲೋಹಗಡ್ ಕೋಟೆಗೆ ಹೋಗಲು ಇಷ್ಟವಿರಲಿಲ್ಲ. ಆದರೆ ಹಿಂದಿನ ರಾತ್ರಿ ಕೇತನ್ ಮತ್ತು ಆತನ ತಾಯಿ ವೀಡಿಯೊ ಕರೆಯಲ್ಲಿ ಪದೇ ಪದೇ ಒತ್ತಾಯಿಸಿದ್ದಕ್ಕೆ ಅವಳು ಪ್ರವಾಸಕ್ಕೆ ಒಪ್ಪಿಕೊಂಡಿದ್ದಳು" ಎಂದು ಸಿಯಾ ತಾಯಿ ತಿಳಿಸಿದ್ದಾರೆ.
"ಕೇತನ್ ಹೇರ್ ಪ್ಯಾಚ್ (ಕೂದಲಿನ ಪ್ಯಾಚ್) ಧರಿಸುತ್ತಿದ್ದ ಕಾರಣ ಸಿಯಾಗೆ ಆತ ಇಷ್ಟವಿರಲಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಇಂತಹ ಕಾರಣ ಕೊಲೆಯನ್ನು ಎಂದಿಗೂ ಸಮರ್ಥಿಸುವುದಿಲ್ಲ. ಆಕೆಗೆ ಆಕ್ಷೇಪವಿದ್ದರೆ ಮದುವೆಯನ್ನೇ ನಿರಾಕರಿಸಬೇಕಿತ್ತು" ಎಂದು ಕೇತನ್ ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಉಪ ಪೊಲೀಸ್ ವರಿಷ್ಠಾಧಿಕಾರಿ ಗಜಾನನ್ ಟೋನ್ಪ್, "ಕೇತನ್ ಹತ್ಯೆಯಲ್ಲಿ ಸಿಯಾ ಮತ್ತು ಚೇತನ್ ಇಬ್ಬರ ಪಾತ್ರವೂ ಸಾಬೀತಾಗಿದೆ" ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ಆರೋಪಿಗಳು ಪೊಲೀಸ್ ವಶದಲ್ಲಿದ್ದು, ತನಿಖೆ ಮುಂದುವರಿದಿದೆ.

