
ಮೃತ ನೀರಜ್ ಶರ್ಮಾ ಹಾಗೂ ಆರೋಪಿ ಆಯುಷಿ ಶರ್ಮಾ
ಸರ್ಕಾರಿ ಕೆಲಸ, ಆಸ್ತಿಗಾಗಿ ಹೆತ್ತ ತಾಯಿಯನ್ನೇ ಸುಪಾರಿ ಕೊಟ್ಟು ಕೊಂದ ಮಗಳು
ಜೈಪುರದ ಪ್ರತಾಪ್ ನಗರದಲ್ಲಿ ನೀರಜ್ ಶರ್ಮಾ ಎಂಬ ಮಹಿಳೆ ತನ್ನ ಮಗನನ್ನು ಕೋಚಿಂಗ್ ಸೆಂಟರ್‌ಗೆ ಬಿಟ್ಟು ಮನೆಗೆ ಮರಳುತ್ತಿದ್ದರು. ಈ ವೇಳೆ ಅತಿ ವೇಗವಾಗಿ ಬಂದ ಸ್ಕಾರ್ಪಿಯೋ ಎಸ್‌ಯುವಿ ಕಾರು ಅವರಿಗೆ ಭೀಕರವಾಗಿ ಡಿಕ್ಕಿ ಹೊಡೆದಿತ್ತು.
ಸರ್ಕಾರಿ ಉದ್ಯೋಗ ಹಾಗೂ ಆಸ್ತಿಗಾಗಿ ಹೆತ್ತ ತಾಯಿಯನ್ನೇ ಮಗಳೊಬ್ಬಳು ಸುಪಾರಿ ಹಂತಕರ ನೆರವಿನಿಂದ ಕಾರು ಡಿಕ್ಕಿ ಹೊಡೆಸಿ ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ರಾಜಸ್ಥಾನದ ಜೈಪುರದಲ್ಲಿ ಬೆಳಕಿಗೆ ಬಂದಿದೆ. ಅಪಘಾತದಂತೆ ಬಿಂಬಿಸಲು ಯತ್ನಿಸಿದ್ದ ಈ ಕೊಲೆ ರಹಸ್ಯವನ್ನು ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಪೊಲೀಸರು ಭೇದಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮೃತರ ಮಗಳು ಆಯುಷಿ ಶರ್ಮಾ, ಆಕೆಯ ಚಿಕ್ಕಪ್ಪ ಮೋಹನ್ ಸ್ವರೂಪ್ ಸೇರಿದಂತೆ ಒಟ್ಟು ಏಳು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಜು. 3 ರಂದು ಜೈಪುರದ ಪ್ರತಾಪ್ ನಗರದಲ್ಲಿ ನೀರಜ್ ಶರ್ಮಾ ಎಂಬ ಮಹಿಳೆ ತನ್ನ ಮಗನನ್ನು ಕೋಚಿಂಗ್ ಸೆಂಟರ್‌ಗೆ ಬಿಟ್ಟು ಮನೆಗೆ ಮರಳುತ್ತಿದ್ದರು. ಈ ವೇಳೆ ಅತಿ ವೇಗವಾಗಿ ಬಂದ ಸ್ಕಾರ್ಪಿಯೋ ಎಸ್‌ಯುವಿ ಕಾರು ಅವರಿಗೆ ಭೀಕರವಾಗಿ ಡಿಕ್ಕಿ ಹೊಡೆದಿತ್ತು. ಕಾರಿನ ವೇಗ ಎಷ್ಟಿತ್ತೆಂದರೆ, ಡಿಕ್ಕಿಯ ರಭಸಕ್ಕೆ ನೀರಜ್ ಶರ್ಮಾ ಅವರು ಸುಮಾರು 100 ಅಡಿ ಎತ್ತರಕ್ಕೆ ಹಾರಿ ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದರು. ಕೃತ್ಯದ ಬಳಿಕ ಚಾಲಕ ಕಾರನ್ನು ಬಿಟ್ಟು ಪರಾರಿಯಾಗಿದ್ದನು.
ಸಿಸಿಟಿವಿ ನೀಡಿತು ಸುಳಿವು
ಮೊದಲಿಗೆ ಇದೊಂದು ರಸ್ತೆ ಅಪಘಾತ ಎಂದು ಭಾವಿಸಲಾಗಿತ್ತು. ಆದರೆ ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಇದು ಅಪಘಾತವಲ್ಲ, ಬದಲಿಗೆ ಉದ್ದೇಶಪೂರ್ವಕವಾಗಿ ನಡೆಸಿರುವ ಯೋಜಿತ ಕೊಲೆ ಎಂಬುದು ಪತ್ತೆಯಾಗಿತ್ತು. ತನಿಖೆಯನ್ನು ತೀವ್ರಗೊಳಿಸಿದಾಗ ಸ್ವಂತ ಮಗಳೇ ಈ ಕೊಲೆಯ ಮಾಸ್ಟರ್ ಮೈಂಡ್ ಎಂಬ ಆಘಾತಕಾರಿ ಸತ್ಯ ಹೊರಬಿದ್ದಿದೆ.
ಕೊಲೆಗೆ ಕಾರಣವೇನು?
ಜೈಪುರದ ಪೂರ್ವ ಡಿಸಿಪಿ ರಂಜಿತಾ ಶರ್ಮಾ ಅವರ ಪ್ರಕಾರ, ಮೃತ ನೀರಜ್ ಶರ್ಮಾ ಅವರ ಪತಿ ಒಂದು ವರ್ಷದ ಹಿಂದೆ ನಿಧನರಾಗಿದ್ದರು. ಪತಿಯ ನಿಧನದ ನಂತರ ಅನುಕಂಪದ ಆಧಾರದ ಮೇಲೆ ನೀರಜ್ ಅವರಿಗೆ ಸರ್ಕಾರಿ ಕೆಲಸ ಸಿಕ್ಕಿತ್ತು. ಆದರೆ ಮಗಳು ಆಯುಷಿ ತನಗೆ ಆ ಸರ್ಕಾರಿ ಉದ್ಯೋಗ ಸಿಗಬೇಕೆಂದು ಬಯಸಿದ್ದಳು. ಇದರೊಂದಿಗೆ ಕಳೆದ ಎರಡು-ಮೂರು ವರ್ಷಗಳಿಂದ ತಾಯಿಯೊಂದಿಗೆ ಆಸ್ತಿ ವಿವಾದವೂ ನಡೆದಿತ್ತು. ಕೆಲಸ ಮತ್ತು ಆಸ್ತಿ ಎರಡನ್ನೂ ತನ್ನದಾಗಿಸಿಕೊಳ್ಳಲು ಆಯುಷಿ, ತನ್ನ ಚಿಕ್ಕಪ್ಪ ಹಾಗೂ ಸೋದರಸಂಬಂಧಿ ರವಿ ಜೊತೆ ಸೇರಿ ತಾಯಿಯನ್ನು ಮುಗಿಸಲು ಸ್ಕೆಚ್ ಹಾಕಿದ್ದಳು.
7 ಲಕ್ಷ ರೂ. ಗೆ ಸುಪಾರಿ
ತಾಯಿಯನ್ನು ಕೊಲ್ಲಲು ಇವರು ಬರೋಬ್ಬರಿ 7 ಲಕ್ಷ ರೂ. ನೀಡಿ ಸುಪಾರಿ ಕೊಲೆಗಾರರನ್ನು ನೇಮಿಸಿಕೊಂಡಿದ್ದರು. ಜು. 3 ರಂದು ತಾಯಿಯ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ ಆರೋಪಿಗಳು, ಆಕೆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ಸುಮಾರು 130 ಕಿ.ಮೀ ವೇಗದಲ್ಲಿ ಸ್ಕಾರ್ಪಿಯೋ ಕಾರನ್ನು ಚಲಾಯಿಸಿ ಡಿಕ್ಕಿ ಹೊಡೆಸಿದ್ದರು.
ಈಗಾಗಲೇ ಪೊಲೀಸರು ಮಗಳು ಆಯುಷಿ ಶರ್ಮಾ, ಮೋಹನ್ ಸ್ವರೂಪ್, ಮೋಹಿತ್ ಶರ್ಮಾ, ಆಕಾಶ್ ಶರ್ಮಾ, ಅರವಿಂದ್ ಶರ್ಮಾ, ಹೇಮಂತ್ ಶರ್ಮಾ ಮತ್ತು ರೋಹಿತ್ ಜಾತವ್‌ನನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಸಂಚುಕೋರ, ಆಯುಷಿಯ ಸೋದರಸಂಬಂಧಿ ಬಲರಾಮ್ ಅಲಿಯಾಸ್ ರವಿ ಪ್ರಸ್ತುತ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

