
20 ತೃಣಮೂಲ ಸಂಸದರ ವಿಲೀನದಿಂದ ರಾಷ್ಟ್ರ ರಾಜಕೀಯದ ಕೇಂದ್ರಬಿಂದುವಾದ NCPI; ಈ ಪಕ್ಷದ ಹಿನ್ನೆಲೆ ಏನು?
ತೃಣಮೂಲ ಕಾಂಗ್ರೆಸ್‌ನ 20 ಬಂಡಾಯ ಸಂಸದರು ಎನ್‌ಸಿಪಿಐ ಪಕ್ಷದೊಂದಿಗೆ ವಿಲೀನಗೊಂಡ ಬಳಿಕ ರಾಷ್ಟ್ರೀಯ ರಾಜಕೀಯದಲ್ಲಿ ಹೊಸ ಚರ್ಚೆ ಆರಂಭವಾಗಿದೆ. ತ್ರಿಪುರಾದಲ್ಲಿ ಕೇವಲ ಸಾವಿರಕ್ಕೂ ಕಡಿಮೆ ಮತಗಳನ್ನು ಪಡೆದಿದ್ದ ಈ ಪಕ್ಷದ ಹಿನ್ನೆಲೆ, ನಾಯಕತ್ವ ಮತ್ತು ರಾಜಕೀಯ ಪಯಣದ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತೀಯ ರಾಜಕೀಯದಲ್ಲಿ ಕೆಲವೊಮ್ಮೆ ಸಣ್ಣ ಪಕ್ಷಗಳೂ ದೊಡ್ಡ ಸುದ್ದಿಯಾಗುತ್ತವೆ. ಅದಕ್ಕೆ ತಾಜಾ ಉದಾಹರಣೆಯಾಗಿ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (NCPI) ಹೊರಹೊಮ್ಮಿದೆ. 2023ರ ತ್ರಿಪುರಾ ವಿಧಾನಸಭೆ ಚುನಾವಣೆಯಲ್ಲಿ ಸಾವಿರಕ್ಕೂ ಕಡಿಮೆ ಮತಗಳನ್ನು ಪಡೆದಿದ್ದ ಈ ಪಕ್ಷ, ಇದೀಗ ರಾಷ್ಟ್ರ ರಾಜಕೀಯದ ಕೇಂದ್ರಬಿಂದುವಾಗಿದೆ. ತೃಣಮೂಲ ಕಾಂಗ್ರೆಸ್‌ನ 20 ಬಂಡಾಯ ಸಂಸದರು ಈ ಪಕ್ಷದೊಂದಿಗೆ ವಿಲೀನಗೊಂಡಿರುವುದಾಗಿ ಘೋಷಿಸಿದ ಬೆನ್ನಲ್ಲೇ ಎನ್‌ಸಿಪಿಐ ಹೆಸರು ದೇಶಾದ್ಯಂತ ಚರ್ಚೆಯಾಗುತ್ತಿದೆ.
ಈ ಬೆಳವಣಿಗೆ ತೃಣಮೂಲ ಕಾಂಗ್ರೆಸ್‌ನ ಒಳರಾಜಕೀಯ ಬಿಕ್ಕಟ್ಟಿಗೆ ಹೊಸ ತಿರುವು ನೀಡಿದ್ದು, ಇದುವರೆಗೆ ಹೆಚ್ಚು ಪರಿಚಿತವಲ್ಲದಿದ್ದ ಎನ್‌ಸಿಪಿಐ ಪಕ್ಷದ ಹಿನ್ನೆಲೆ, ನಾಯಕತ್ವ ಹಾಗೂ ಕಾರ್ಯವೈಖರಿಯತ್ತ ಗಮನ ಸೆಳೆದಿದೆ.
ಕ್ಷಣಾರ್ಧದಲ್ಲಿ ರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆ
ಎನ್‌ಸಿಪಿಐ ಪಕ್ಷವನ್ನು 2023ರ ಜನವರಿ 20ರಂದು ಚುನಾವಣಾ ಆಯೋಗವು ನೋಂದಾಯಿತ ಆದರೆ ಮಾನ್ಯತೆ ಪಡೆಯದ ರಾಜಕೀಯ ಪಕ್ಷ (RUPP) ಎಂದು ನೋಂದಾಯಿಸಿತ್ತು. ಪಶ್ಚಿಮ ಬಂಗಾಳದಲ್ಲಿ ನೋಂದಾಯಿತವಾಗಿದ್ದರೂ, ಪಕ್ಷ ತನ್ನ ಮೊದಲ ಚುನಾವಣಾ ಪ್ರಯೋಗವನ್ನು ತ್ರಿಪುರಾದಲ್ಲಿ ನಡೆಸಿತ್ತು. ಚುನಾವಣಾ ಆಯೋಗದ ದಾಖಲೆಗಳ ಪ್ರಕಾರ, ಪಕ್ಷಕ್ಕೆ ಒಟ್ಟು ಕೇವಲ 1.13 ಲಕ್ಷ ರೂಪಾಯಿ ದೇಣಿಗೆ ಲಭಿಸಿತ್ತು.
ಪಕ್ಷದ ಖಜಾಂಚಿಯಾಗಿ ಶೇವ್ಲಿ ಕುಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಪಕ್ಷದ ಕಚೇರಿ ಇರುವ ಅದೇ ವಿಳಾಸದಲ್ಲಿ ನೋಂದಾಯಿತವಾಗಿರುವ ಎರಡು ಸಂಸ್ಥೆಗಳ ನಿರ್ದೇಶಕಿಯೂ ಆಗಿದ್ದಾರೆ. ಅವುಗಳಲ್ಲಿ ಬಿಸ್ವಬಜಾರ್ ಪ್ರೈವೇಟ್ ಲಿಮಿಟೆಡ್ ಹಾಗೂ ಪಶ್ಚಿಮ ಬಂಗ ಅಸಂಘಟಿತ ಮಹಿಳಾ ಕಾರ್ಮಿ ಅಸೋಸಿಯೇಷನ್ ಸೇರಿವೆ.
ಪಕ್ಷದ ನಾಯಕತ್ವ ಯಾರ ಕೈಯಲ್ಲಿ?
ಪಕ್ಷದ ಅಧ್ಯಕ್ಷರಾಗಿ ಉತ್ತಿಯಾ ಕುಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಶೇವ್ಲಿ ಕುಂಡು ಅವರ ಪತಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿನ ಒಂದು ಪೋಸ್ಟ್‌ನಲ್ಲಿ ಉತ್ತಿಯಾ ಕುಂಡು ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರೊಂದಿಗೆ ತೆಗೆಸಿಕೊಂಡಿರುವ ಚಿತ್ರವನ್ನು ಹಂಚಿಕೊಂಡಿದ್ದರು. ಪಕ್ಷ ಹಾಗೂ ಸಂಬಂಧಿತ ಸಂಸ್ಥೆಗಳ ಕಚೇರಿ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಬನಿಪುರ ಪ್ರದೇಶದಲ್ಲಿದೆ.
ತ್ರಿಪುರಾದಲ್ಲಿ ಚುನಾವಣಾ ಸಾಧನೆ ಶೂನ್ಯ
ಎನ್‌ಸಿಪಿಐ ನಾಯಕ ಶಾಂತನು ದೇ ಅವರ ಪ್ರಕಾರ, ತ್ರಿಪುರಾ ಸ್ವಾಯತ್ತ ಜಿಲ್ಲಾ ಮಂಡಳಿ (TTAADC) ವ್ಯಾಪ್ತಿಯ ಬುಡಕಟ್ಟು ಸಮುದಾಯಗಳ ಪರ ಧ್ವನಿಯಾಗುವ ಉದ್ದೇಶದಿಂದ ಪಕ್ಷ ತ್ರಿಪುರಾ ರಾಜಕೀಯಕ್ಕೆ ಪ್ರವೇಶಿಸಿತ್ತು. ಪಕ್ಷ ಏಳು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಯತ್ನಿಸಿತ್ತು. ಆದರೆ ನಾಲ್ಕು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತವಾಗಿತ್ತು. ಅಂತಿಮವಾಗಿ ಕೇವಲ ಎರಡು ಕ್ಷೇತ್ರಗಳಲ್ಲಿ ಮಾತ್ರ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಚಾವ್ಮಾನು ಕ್ಷೇತ್ರದಲ್ಲಿ 536 ಮತಗಳು ಮತ್ತು ಕೈಲಾಶಹರ್ ಕ್ಷೇತ್ರದಲ್ಲಿ 286 ಮತಗಳು ಸೇರಿದಂತೆ ಒಟ್ಟು ಪಕ್ಷಕ್ಕೆ ಕೇವಲ 822 ಮತಗಳು ಲಭಿಸಿದ್ದವು.
ಇನ್ನೊಬ್ಬ ಅಭ್ಯರ್ಥಿ ಕೃಷ್ಣಕುಮಾರ್ ದೇಬ್ಬರ್ಮಾ ಅಂಬಾಸಾ ಕ್ಷೇತ್ರದಲ್ಲಿ ಪಕ್ಷದ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 376 ಮತಗಳನ್ನು ಪಡೆದಿದ್ದರು. ಒಟ್ಟಾರೆ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ 1,198 ಮತಗಳು ಬಂದಿದ್ದರೂ, ಯಾರೂ ಗೆಲುವಿನ ಸಮೀಪಕ್ಕೂ ತಲುಪಿರಲಿಲ್ಲ.
ಚುನಾವಣೆಯ ನಂತರ ಪಕ್ಷವೇ ಕಾಣೆಯಾಗಿತ್ತು!
ತ್ರಿಪುರಾದಲ್ಲಿ ಎನ್‌ಸಿಪಿಐ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆಲವರು ಚುನಾವಣೆಯ ಬಳಿಕ ಪಕ್ಷ ಸಂಪೂರ್ಣವಾಗಿ ಕಾಣೆಯಾಗಿತ್ತು ಎಂದು ಆರೋಪಿಸಿದ್ದಾರೆ. ಕೈಲಾಶಹರ್ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಜಹಾಂಗೀರ್ ಅಲಿ, "2023ರ ಚುನಾವಣೆಯ ವೇಳೆ ಕೋಲ್ಕತ್ತಾದಿಂದ ಬಂದಿದ್ದ ಶೇವ್ಲಿ ಕುಂಡು ನಮ್ಮನ್ನು ಸಂಪರ್ಕಿಸಿ ಅಭ್ಯರ್ಥಿಗಳನ್ನಾಗಿ ಮಾಡಿದ್ದರು. ಚುನಾವಣೆ ಮುಗಿದ ಬಳಿಕ ಪಕ್ಷದವರು ಕಚೇರಿ ಮುಚ್ಚಿ ಹಿಂತಿರುಗಿದರು. ನಂತರ ಅವರೊಂದಿಗೆ ಸಂಪರ್ಕವೇ ಇಲ್ಲದಂತಾಯಿತು" ಎಂದು ಹೇಳಿದ್ದಾರೆ.
ಇನ್ನೊಬ್ಬ ಮಾಜಿ ಅಭ್ಯರ್ಥಿ ಬರ್ಜೇದಾ ತ್ರಿಪುರಾ, "ಪಕ್ಷದ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದೆ. ಯಾವುದೇ ಹಣ ಕೇಳಲಿಲ್ಲ. ಪ್ರಚಾರವೂ ಹೆಚ್ಚು ನಡೆಯಲಿಲ್ಲ. ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದೇ ಮುಖ್ಯ ಉದ್ದೇಶವಾಗಿತ್ತು. ಚುನಾವಣೆ ಮುಗಿದ ಬಳಿಕ ಪಕ್ಷದವರೊಂದಿಗೆ ಸಂಪರ್ಕ ಕಡಿತವಾಯಿತು" ಎಂದು ಹೇಳಿದ್ದಾರೆ.
ತ್ರಿಪುರಾದಿಂದ ನೇರವಾಗಿ ಸಂಸತ್‌ಗೆ
ತ್ರಿಪುರಾ ಚುನಾವಣೆಯ ಬಳಿಕ ಹಣಕಾಸು ವಿಚಾರವಾಗಿ ಪಕ್ಷದೊಳಗೆ ಭಿನ್ನಾಭಿಪ್ರಾಯಗಳು ಉಂಟಾಗಿ ಸಂಘಟನೆ ಬಹುತೇಕ ಸ್ಥಗಿತಗೊಂಡಿತ್ತು ಎಂದು ಶಾಂತನು ದೇ ತಿಳಿಸಿದ್ದಾರೆ. 2026ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸುವಂತೆ ಪಕ್ಷದ ನಾಯಕತ್ವಕ್ಕೆ ಸಲಹೆ ನೀಡಿದ್ದರೂ, ಹಣಕಾಸಿನ ಕೊರತೆಯಿಂದ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ ಎಂದಿದ್ದಾರೆ.
ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಲೋಕಸಭೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ಸುಮಾರು ಮೂರನೇ ಎರಡರಷ್ಟು ಸಂಸದರನ್ನು ಒಳಗೊಂಡಿರುವ ಬಂಡಾಯ ಗುಂಪು ಎನ್‌ಸಿಪಿಐ ಜೊತೆ ವಿಲೀನಗೊಂಡಿದೆ.
ಸ್ಪೀಕರ್‌ಗೆ ಮನವಿ ಮಾಡಿದ ಬಂಡಾಯ ಸಂಸದರು
ತೃಣಮೂಲ ಕಾಂಗ್ರೆಸ್‌ನಿಂದ ಪ್ರತ್ಯೇಕವಾಗಿರುವ ಬಂಡಾಯ ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. ಸಭೆಯ ಬಳಿಕ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಮಾತನಾಡಿ, ತಮ್ಮ ಗುಂಪನ್ನು ಪ್ರತ್ಯೇಕ ಸಂಸದೀಯ ಗುಂಪಾಗಿ ಗುರುತಿಸುವಂತೆ ಪತ್ರ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದಾದ ಬಳಿಕ ತೃಣಮೂಲ ನಾಯಕ ಸುದೀಪ್ ಬಂದೋಪಾಧ್ಯಾಯ, ಬಂಡಾಯ ಗುಂಪು ಎನ್‌ಸಿಪಿಐ ಜೊತೆ ವಿಲೀನಗೊಂಡಿರುವುದನ್ನು ದೃಢಪಡಿಸಿದ್ದು, ಈ ಪಕ್ಷವನ್ನು ಪ್ರಾದೇಶಿಕ ರಾಜಕೀಯ ಪಕ್ಷ ಎಂದು ಬಣ್ಣಿಸಿದ್ದಾರೆ. ಕೆಲವೇ ತಿಂಗಳ ಹಿಂದೆ ಚುನಾವಣೆಯಲ್ಲಿ ಸಾವಿರಕ್ಕೂ ಕಡಿಮೆ ಮತಗಳನ್ನು ಪಡೆದಿದ್ದ ಎನ್‌ಸಿಪಿಐ, ಇದೀಗ ರಾಷ್ಟ್ರೀಯ ರಾಜಕೀಯದ ಕೇಂದ್ರಬಿಂದುವಾಗಿ ಹೊರಹೊಮ್ಮಿರುವುದು ಭಾರತೀಯ ರಾಜಕೀಯದ ಅಚ್ಚರಿಯ ಬೆಳವಣಿಗೆಯಾಗಿದೆ.

