Rajya Sabha Elections| ಹರಿಯಾಣದಲ್ಲಿ ಅಡ್ಡ ಮತದಾನದ ಆರೋಪ- ಐವರು ಕಾಂಗ್ರೆಸ್ ಶಾಸಕರಿಗೆ ಸಂಕಷ್ಟ!
x
ಹರಿಯಾಣದ ಕಾಂಗ್ರೆಸ್‌ ನಾಯಕ ಧರಂಪಾಲ್ ಮಲಿಕ್

Rajya Sabha Elections| ಹರಿಯಾಣದಲ್ಲಿ ಅಡ್ಡ ಮತದಾನದ ಆರೋಪ- ಐವರು ಕಾಂಗ್ರೆಸ್ ಶಾಸಕರಿಗೆ ಸಂಕಷ್ಟ!

ಹರಿಯಾಣ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರೋಪ ಹೊತ್ತಿರುವ ಐವರು ಕಾಂಗ್ರೆಸ್ ಶಾಸಕರ ವಿರುದ್ಧ ಶಿಸ್ತು ಕ್ರಮ ಸಮಿತಿ ವರದಿ ಸಿದ್ಧಪಡಿಸಿದೆ.


ಕಳೆದ ತಿಂಗಳು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ (Cross-voting) ಮಾಡಿದ ಆರೋಪ ಎದುರಿಸುತ್ತಿರುವ ಐವರು ಶಾಸಕರ ವಿರುದ್ಧ ಹರಿಯಾಣ ಕಾಂಗ್ರೆಸ್‌ನ ಶಿಸ್ತು ಕ್ರಮ ಸಮಿತಿ (DAC) ವರದಿ ಸಿದ್ಧಪಡಿಸುತ್ತಿದ್ದು, ಶೀಘ್ರದಲ್ಲೇ ಹೈಕಮಾಂಡ್‌ಗೆ ಅಂತಿಮ ನಿರ್ಧಾರವನ್ನು ತಿಳಿಸಲಿದೆ.

ಶಿಸ್ತು ಕ್ರಮ ಸಮಿತಿ ಸಭೆ

ಪಕ್ಷದ ನಾಯಕ ಧರಂಪಾಲ್ ಮಲಿಕ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಂಜೆ ಚಂಡೀಗಢದ ಕಾಂಗ್ರೆಸ್ ಕಚೇರಿಯಲ್ಲಿ ಈ ಮಹತ್ವದ ಸಭೆ ನಡೆಯಿತು. ಮಾರ್ಚ್ 16 ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸತೀಶ್ ನಂದಾಲ್ ಪರವಾಗಿ ಅಡ್ಡ ಮತದಾನ ಮಾಡಿದ ಆರೋಪದ ಮೇಲೆ ಐವರು ಶಾಸಕರಿಗೆ ಈಗಾಗಲೇ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು.

ಯಾರ ಮೇಲೆ ಆರೋಪವಿದೆ?

ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧವಾಗಿ ಕಾರ್ಯನಿರ್ವಹಿಸಿದ ಆರೋಪದ ಮೇಲೆ ಈ ಕೆಳಗಿನ ಐವರು ಶಾಸಕರ ಹೆಸರನ್ನು ಕಾಂಗ್ರೆಸ್ ಪಟ್ಟಿ ಮಾಡಿದೆ:

1. ಶಲ್ಲಿ ಚೌಧರಿ (ನಾರಾಯಣಗಢ ಶಾಸಕಿ)

2. ರೇಣು ಬಾಲಾ (ಸಧೌರಾ ಶಾಸಕಿ)

3. ಮೊಹಮ್ಮದ್ ಇಲ್ಯಾಸ್ (ಪುನ್ಹಾನಾ ಶಾಸಕ)

4. ಮೊಹಮ್ಮದ್ ಇಸ್ರೇಲ್ (ಹಥಿನ್ ಶಾಸಕ)

5. ಜರ್ನೈಲ್ ಸಿಂಗ್ (ರತಿಯಾ ಶಾಸಕ)

ಶಲ್ಲಿ ಚೌಧರಿ, ರೇಣು ಬಾಲಾ ಮತ್ತು ಜರ್ನೈಲ್ ಸಿಂಗ್ ಮಾತ್ರ ನೋಟಿಸ್‌ಗೆ ಉತ್ತರ ನೀಡಿದ್ದಾರೆ. ಉಳಿದ ಇಬ್ಬರು ಶಾಸಕರು ಪ್ರತಿಕ್ರಿಯಿಸದಿರುವುದು ಅವರು "ಆರೋಪವನ್ನು ಒಪ್ಪಿಕೊಂಡಿದ್ದಾರೆ" ಎಂಬ ಅರ್ಥ ನೀಡುತ್ತದೆ ಎಂದು ಸಮಿತಿ ಅಧ್ಯಕ್ಷ ಮಲಿಕ್ ತಿಳಿಸಿದ್ದಾರೆ.

ಶಲ್ಲಿ ಚೌಧರಿ ಮತ್ತು ರೇಣು ಬಾಲಾ ಅವರ ವಿನಂತಿಯ ಮೇರೆಗೆ ಶುಕ್ರವಾರ ಸಮಿತಿಯು ಅವರ ಅಹವಾಲನ್ನು ವೈಯಕ್ತಿಕವಾಗಿ ಆಲಿಸಿದೆ. ಶಿಸ್ತು ಕ್ರಮ ಸಮಿತಿಯು ತನ್ನ ಅಂತಿಮ ವರದಿಯನ್ನು ಸಿದ್ಧಪಡಿಸಿ ಕಾಂಗ್ರೆಸ್ ಹೈಕಮಾಂಡ್‌ಗೆ ಸಲ್ಲಿಸಲಿದೆ. ಮುಂದಿನ ಕ್ರಮದ ಬಗ್ಗೆ ಹೈಕಮಾಂಡ್ ತೀರ್ಮಾನಿಸಲಿದೆ.

ಹುಡಾ ಆಕ್ರೋಶ

ಈ ನಡುವೆ ಹಿರಿಯ ನಾಯಕ ಭೂಪಿಂದರ್ ಸಿಂಗ್ ಹುಡಾ ಅವರು ಪ್ರತಿಕ್ರಿಯಿಸಿ, "ಅಡ್ಡ ಮತದಾನ ಮಾಡಿದ ಶಾಸಕರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಇವರು ಕೇವಲ ಪಕ್ಷಕ್ಕೆ ಮಾತ್ರವಲ್ಲ, ತಮಗೆ ಮತ ನೀಡಿದ ಜನರಿಗೂ ದ್ರೋಹ ಬಗೆದಿದ್ದಾರೆ" ಎಂದು ಕಿಡಿಕಾರಿದ್ದಾರೆ.

ಹರಿಯಾಣದ ಎರಡು ರಾಜ್ಯಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಂಜಯ್ ಭಾಟಿಯಾ ಸುಲಭವಾಗಿ ಗೆದ್ದಿದ್ದರು. ಕಾಂಗ್ರೆಸ್ ಅಭ್ಯರ್ಥಿ ಕರಮ್‌ವೀರ್ ಸಿಂಗ್ ಬೌಧ್ ಅವರು ಪಕ್ಷೇತರ ಅಭ್ಯರ್ಥಿ ಸತೀಶ್ ನಂದಾಲ್ ವಿರುದ್ಧ ಕಠಿಣ ಪೈಪೋಟಿಯ ನಂತರ ಗೆಲುವು ಸಾಧಿಸಿದ್ದರು. ಈ ವೇಳೆ ಕಾಂಗ್ರೆಸ್‌ನ ನಾಲ್ಕು ಮತಗಳು ಅಸಿಂಧುಗೊಂಡಿದ್ದವು, ಇದು ಪಕ್ಷದೊಳಗೆ ಭಾರಿ ಚರ್ಚೆಗೆ ಕಾರಣವಾಗಿತ್ತು.

Read More
Next Story