ಪಾಕ್ ಮೂಲದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ 8 ಸ್ಲೀಪರ್ ಸೆಲ್ಸ್ ಅರೆಸ್ಟ್‌!
x

ಪಾಕ್ ಮೂಲದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ 8 ಸ್ಲೀಪರ್ ಸೆಲ್ಸ್ ಅರೆಸ್ಟ್‌!

ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ಗುಜರಾತ್ ಎಟಿಎಸ್ ತಂಡ ಭರ್ಜರಿ ಕಾರ್ಯಾಚರಣೆ ನಡೆಸಿ ಮದರಸಾಗಳಲ್ಲಿ ಅಡಗಿದ್ದ ಜೈಶ್-ಎ-ಮೊಹಮ್ಮದ್ ಸಂಘಟನೆಯ 8 ಉಗ್ರರನ್ನು ಬಂಧಿಸಿದೆ.


ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ (JeM) ನ ಭಾರಿ ನೆಟ್‌ವರ್ಕ್ ಅನ್ನು ಗುಜರಾತ್ ಭಯೋತ್ಪಾದನಾ ನಿರೋಧಕ ದಳ (ATS) ಯಶಸ್ವಿಯಾಗಿ ಬೇಧಿಸಿದೆ. ಹಲವು ರಾಜ್ಯಗಳಲ್ಲಿ ಏಕಕಾಲಕ್ಕೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಜೈಶ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಎಂಟು ಜನ ಶಂಕಿತ ಉಗ್ರರನ್ನು ಅಧಿಕಾರಿಗಳು ಬಂಧಿಸಿದ್ದಾರೆ.

ಗುಜರಾತ್‌ನ ಬನಸ್ಕಾಂತ, ಪಟಾನ್ ಮತ್ತು ನವಸಾರಿ ಜಿಲ್ಲೆಗಳು ಹಾಗೂ ಮಧ್ಯಪ್ರದೇಶದ ದೇವಾಸ್‌ನಲ್ಲಿ ಏಕಕಾಲಕ್ಕೆ ಅತ್ಯಂತ ರಹಸ್ಯವಾಗಿ ಈ ಕೌಂಟರ್-ಟೆರರಿಸಂ ಕಾರ್ಯಾಚರಣೆಯನ್ನು ನಡೆಸಲಾಗಿದೆ.

ಮದರಸಾಗಳೇ ಆಗಿದ್ದವು ಉಗ್ರರ ಅಡಗುದಾಣ

ಬಂಧಿತ ಉಗ್ರರು ಗುಜರಾತ್‌ನಲ್ಲಿ ಭವಿಷ್ಯದಲ್ಲಿ ದೊಡ್ಡ ಮಟ್ಟದ ಸರಣಿ ಬಾಂಬ್ ದಾಳಿಗಳನ್ನು ನಡೆಸಲು ಅತ್ಯಂತ ಸಕ್ರಿಯವಾದ ಸ್ಲೀಪರ್ ಮಾಡ್ಯೂಲ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರೆಲ್ಲರೂ 18 ರಿಂದ 40 ವರ್ಷ ವಯಸ್ಸಿನ ಯುವಕರಾಗಿದ್ದಾರೆ.

ಅತ್ಯಂತ ಆಘಾತಕಾರಿ ವಿಷಯವೆಂದರೆ, ಈ ಶಂಕಿತರು ತನಿಖಾ ಸಂಸ್ಥೆಗಳ ಕಣ್ಣಿಗೆ ಬೀಳದಂತೆ ಧಾರ್ಮಿಕ ಮತ್ತು ಶಿಕ್ಷಣ ಸಂಸ್ಥೆಗಳ ಆಶ್ರಯ ಪಡೆದಿದ್ದರು. ಪಟಾನ್‌ನ ಜಾಮಿಯಾ ಅಬುಲ್ ಹಸನ್ ಮದರಸಾ ಮತ್ತು ನವಸಾರಿಯ ಜಾಮಿಯಾ ರಹಮಾನಿಯಾ ಖಾಂಬಿಯಾ ಮದರಸಾಗಳನ್ನು ಇವರು ತಮ್ಮ ಅಡಗುದಾಣವನ್ನಾಗಿ ಮಾಡಿಕೊಂಡಿದ್ದರು. ಈ ಸ್ಥಳಗಳನ್ನು ಬಳಸಿಕೊಂಡು ಅಮಾಯಕ ಯುವಕರನ್ನು ಬ್ರೈನ್‌ವಾಶ್ ಮಾಡಲಾಗುತ್ತಿತ್ತು ಹಾಗೂ ಉಗ್ರರ ನೆಟ್‌ವರ್ಕ್‌ಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲಾಗುತ್ತಿತ್ತು ಎಂದು ಭದ್ರತಾ ಏಜೆನ್ಸಿಗಳು ಪತ್ತೆಹಚ್ಚಿವೆ.

ಯುಎಪಿಎ ಕಾಯ್ದೆಯಡಿ ಪ್ರಕರಣ; 14 ದಿನ ಪೊಲೀಸ್ ಕಸ್ಟಡಿಗೆ

ಗುಜರಾತ್ ಎಟಿಎಸ್ ಪೊಲೀಸರು ಎಂಟು ಜನ ಆರೋಪಿಗಳ ವಿರುದ್ಧ ಅಧಿಕೃತವಾಗಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ನ್ಯಾಯಾಲಯವು ಎಲ್ಲಾ ಎಂಟು ಜನ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಬಂಧಿತರ ಮೇಲೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ, 1967 (UAPA) ನ ಸೆಕ್ಷನ್ 13, 17, 18, 38 ಮತ್ತು 39 ರ ಅಡಿಯಲ್ಲಿ ಕಠಿಣ ಪ್ರಕರಣ ದಾಖಲಿಸಲಾಗಿದೆ. ಈ ಸೆಕ್ಷನ್‌ಗಳು ದೇಶದ್ರೋಹದ ಚಟುವಟಿಕೆಗಳು, ಭಯೋತ್ಪಾದನೆಗೆ ಧನಸಹಾಯ, ಉಗ್ರರ ಸಂಚು ಮತ್ತು ನಿಷೇಧಿತ ಸಂಘಟನೆಯೊಂದಿಗೆ ಸಂಪರ್ಕ ಹೊಂದುವುದಕ್ಕೆ ಸಂಬಂಧಿಸಿವೆ. ಇದರೊಂದಿಗೆ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಅಡಿಯೂ ಪ್ರಕರಣ ದಾಖಲಿಸಲಾಗಿದೆ.

Read More
Next Story