Ghaziabad sisters mass suicide: Police dig into fathers dark history!
x

ಚೇತನ್‌ ಕುಮಾರ್‌

ಘಾಜಿಯಾಬಾದ್ ಸಹೋದರಿಯರ ಆತ್ಮಹತ್ಯೆ: ತಂದೆಯ 'ಕರಾಳ ಇತಿಹಾಸ' ಕೆದಕಿದ ಪೊಲೀಸರು!

ಷೇರು ದಲ್ಲಾಳಿಯಾಗಿದ್ದ ಚೇತನ್, ಸುಮಾರು 2ಕೋಟಿ ರೂಪಾಯಿಗಳ ಸಾಲದ ಸುಳಿಯಲ್ಲಿ ಸಿಲುಕಿದ್ದರು ಎಂದು ಹೇಳಲಾಗಿದೆ. ವಿದ್ಯುತ್ ಬಿಲ್ ಕಟ್ಟಲು ಕೂಡ ಹಣವಿಲ್ಲದೆ ಮಕ್ಕಳ ಮೊಬೈಲ್ ಫೋನ್‌ಗಳನ್ನು ಮಾರಾಟ ಮಾಡಿದ್ದರು.


Click the Play button to hear this message in audio format

ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಘಾಜಿಯಾಬಾದ್‌ನ ಮೂವರು ಅಪ್ರಾಪ್ತ ಸಹೋದರಿಯರ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ, ಮೃತ ಬಾಲಕಿಯರ ತಂದೆ ಚೇತನ್ ಕುಮಾರ್ ಅವರ ಹಳೆಯ ಇತಿಹಾಸದ ಮೇಲೆ ಬಲವಾದ ಅನುಮಾನ ಮೂಡಿದೆ. 2015ರಲ್ಲಿ ನಡೆದ ಚೇತನ್ ಅವರ ಲಿವ್-ಇನ್ ಸಂಗಾತಿಯ ನಿಗೂಢ ಸಾವಿನ ಪ್ರಕರಣವನ್ನು ಪೊಲೀಸರು ಈಗ ಮರುಪರಿಶೀಲಿಸುತ್ತಿದ್ದಾರೆ.

ಪ್ರಕರಣದ ತನಿಖೆ ಚುರುಕುಗೊಂಡಂತೆ, ತಂದೆ ಚೇತನ್ ಕುಮಾರ್ ಅವರ ಗತಕಾಲದ ವಿವಾದಗಳು ಮುನ್ನೆಲೆಗೆ ಬರುತ್ತಿವೆ. ಟ್ರಾನ್ಸ್ ಹಿಂಡನ್ ವಿಭಾಗದ ಡಿಸಿಪಿ ನಿಮಿಶ್ ಪಾಟೀಲ್ ನೀಡಿರುವ ಮಾಹಿತಿಯ ಪ್ರಕಾರ, 2015ರಲ್ಲಿ ಚೇತನ್ ಕುಮಾರ್ ಅವರಿಗೆ ಆಗಲೇ ಇಬ್ಬರು ಪತ್ನಿಯರಿದ್ದರೂ, ಸಾಹಿಬಾಬಾದ್‌ನ ರಾಜೇಂದ್ರ ನಗರ ಕಾಲೋನಿಯಲ್ಲಿ ಬೇರೊಬ್ಬ ಮಹಿಳೆಯೊಂದಿಗೆ ಲಿವ್-ಇನ್ ಸಂಬಂಧ ಹೊಂದಿದ್ದರು. ಆ ಸಂದರ್ಭದಲ್ಲಿ ಆ ಮಹಿಳೆ ಕಟ್ಟಡದ ಮೇಲ್ಛಾವಣಿಯಿಂದ ಬಿದ್ದು ನಿಗೂಢವಾಗಿ ಸಾವನ್ನಪ್ಪಿದ್ದರು. ಅಂದು ಪೊಲೀಸರು ಅದನ್ನು ಕೇವಲ 'ಆತ್ಮಹತ್ಯೆ' ಎಂದು ಪರಿಗಣಿಸಿ ಪ್ರಕರಣ ಮುಕ್ತಾಯಗೊಳಿಸಿದ್ದರು.

ಆದರೆ, ಈಗ ಮೂವರು ಹೆಣ್ಣುಮಕ್ಕಳು ಒಂದೇ ರೀತಿ ಕಟ್ಟಡದಿಂದ ಜಿಗಿದು ಪ್ರಾಣಬಿಟ್ಟಿರುವ ಹಿನ್ನೆಲೆಯಲ್ಲಿ, ಅಂದಿನ ಆ ಘಟನೆಗೂ ಇಂದಿನ ದುರಂತಕ್ಕೂ ಏನಾದರೂ ಸಂಬಂಧವಿದೆಯೇ? ಮಕ್ಕಳ ಮಾನಸಿಕ ಸ್ಥಿತಿಯ ಮೇಲೆ ತಂದೆಯ ಈ ವರ್ತನೆಗಳು ಹೇಗೆ ಪರಿಣಾಮ ಬೀರಿರಬಹುದು ಎಂದು ಪೊಲೀಸರು ಗಂಭೀರವಾಗಿ ಪರಿಶೀಲಿಸುತ್ತಿದ್ದಾರೆ.

ಒಂದೇ ಮನೆಯಲ್ಲಿ ಮೂವರು ಪತ್ನಿಯರು!

ತನಿಖೆಯಲ್ಲಿ ಬಯಲಾಗಿರುವ ಮತ್ತೊಂದು ಆಘಾತಕಾರಿ ಸಂಗತಿಯೆಂದರೆ ಚೇತನ್ ಕುಮಾರ್ ಅವರ ಕುಟುಂಬದ ವಿಚಿತ್ರ ರಚನೆ. ಚೇತನ್ ಅವರಿಗೆ ಸುಜಾತಾ, ಹೀನಾ ಮತ್ತು ಟೀನಾ ಎಂಬ ಮೂವರು ಪತ್ನಿಯರಿದ್ದು, ವಿಶೇಷವೆಂದರೆ ಈ ಮೂವರೂ ಅಕ್ಕತಂಗಿಯರು (ಬಯಲಾಜಿಕಲ್ ಸಿಸ್ಟರ್ಸ್). ಇವರೆಲ್ಲರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಮೃತಪಟ್ಟ ಮಕ್ಕಳಲ್ಲಿ ಹಿರಿಯ ಮಗಳು (16) ಸುಜಾತಾ ಅವರಿಗೆ ಜನಿಸಿದ್ದರೆ, 14 ಮತ್ತು 12 ವರ್ಷದ ಇಬ್ಬರು ಮಕ್ಕಳು ಹೀನಾ ಅವರ ಮಕ್ಕಳಾಗಿದ್ದರು. ಮೂರನೇ ಪತ್ನಿ ಟೀನಾಗೆ 4 ವರ್ಷದ ಮಗಳಿದ್ದಾಳೆ. ಇಷ್ಟೊಂದು 'ತಾಯಿ'ಯರಿದ್ದರೂ, ಮಕ್ಕಳಿಗೆ ಯಾರೊಂದಿಗೂ ಬಲವಾದ ಭಾವನಾತ್ಮಕ ಸಂಬಂಧವಿರಲಿಲ್ಲ ಎಂಬುದು ತನಿಖೆಯಲ್ಲಿ ಕಂಡುಬಂದಿದೆ.

ಸಾಲದ ಸುಳಿ ಮತ್ತು ಕೊರಿಯನ್ ಗೀಳು

ಷೇರು ದಲ್ಲಾಳಿಯಾಗಿದ್ದ ಚೇತನ್, ಸುಮಾರು 2ಕೋಟಿ ರೂಪಾಯಿಗಳ ಸಾಲದ ಸುಳಿಯಲ್ಲಿ ಸಿಲುಕಿದ್ದರು ಎಂದು ಹೇಳಲಾಗಿದೆ. ಆರ್ಥಿಕ ಸಂಕಷ್ಟ ಎಷ್ಟಿತ್ತೆಂದರೆ, ವಿದ್ಯುತ್ ಬಿಲ್ ಕಟ್ಟಲು ಕೂಡ ಹಣವಿಲ್ಲದೆ ಮಕ್ಕಳ ಮೊಬೈಲ್ ಫೋನ್‌ಗಳನ್ನು ಮಾರಾಟ ಮಾಡಿದ್ದರು. ಕಳೆದ ಎರಡು ವರ್ಷಗಳಿಂದ ಮಕ್ಕಳು ಶಾಲೆಗೂ ಹೋಗುತ್ತಿರಲಿಲ್ಲ.

ಮಕ್ಕಳ ಕೋಣೆಯಲ್ಲಿ ದೊರೆತ 8 ಪುಟಗಳ ಡೈರಿಯು ತನಿಖೆಗೆ ಮಹತ್ವದ ಸುಳಿವು ನೀಡಿದೆ. ಅದರಲ್ಲಿ ಮಕ್ಕಳು ಕೊರಿಯನ್ ಸಂಸ್ಕೃತಿ ಮತ್ತು ಕೆ-ಪಾಪ್ (K-Pop) ಬಗ್ಗೆ ತಮಗಿರುವ ಹುಚ್ಚು ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. "ನಮಗೆ ಕೊರಿಯನ್ ಅಂದರೆ ಇಷ್ಟ" ಎಂದು ತಂದೆಯನ್ನು ಉದ್ದೇಶಿಸಿ ಬರೆದಿದ್ದಾರೆ. ಮಕ್ಕಳು ಯಾವುದಾದರೂ ಆನ್‌ಲೈನ್ 'ಕೊರಿಯನ್ ಗೇಮ್' ಅಥವಾ ಟಾಸ್ಕ್ ಗೇಮ್‌ಗೆ (ಆನ್‌ಲೈನ್ ಸೂಸೈಡ್ ಟಾಸ್ಕ್) ಬಲಿಯಾಗಿದ್ದಾರೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಅವರು ಇಂಟರ್ನೆಟ್‌ನಲ್ಲಿ ತಮಗಾಗಿ ಕೊರಿಯನ್ ಹೆಸರುಗಳನ್ನು ಇಟ್ಟುಕೊಂಡಿದ್ದರು ಎಂಬುದು ಪತ್ತೆಯಾಗಿದೆ.

ಆ ರಾತ್ರಿ ನಡೆದಿದ್ದೇನು?

ಬುಧವಾರ (ಫೆಬ್ರವರಿ 4) ನಸುಕಿನ ಜಾವ 2.15ರ ಸುಮಾರಿಗೆ ಈ ಮೂವರು ಸಹೋದರಿಯರು ತಮ್ಮ ಕೋಣೆಯನ್ನು ಭದ್ರಪಡಿಸಿಕೊಂಡು, 9ನೇ ಮಹಡಿಯ ಅಪಾರ್ಟ್‌ಮೆಂಟ್ ಬಾಲ್ಕನಿಯಿಂದ ಒಬ್ಬರಾದ ಮೇಲೊಬ್ಬರಂತೆ ಹಾರಿದ್ದಾರೆ. ಅವರು ನೆಲಕ್ಕೆ ಬಿದ್ದ ರಭಸಕ್ಕೆ ಇಡೀ ಸೊಸೈಟಿಯೇ ಬೆಚ್ಚಿಬಿದ್ದಿತ್ತು. ಅವರನ್ನು ಕೂಡಲೇ ಲೋನಿ ನಗರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅದಾಗಲೇ ಅವರು ಮೃತಪಟ್ಟಿದ್ದರು.

ಸದ್ಯ ಪೊಲೀಸರು, ಈ ಸಾವಿಗೆ ಕೇವಲ ಆನ್‌ಲೈನ್ ಗೇಮಿಂಗ್ ಕಾರಣವೇ ಅಥವಾ ತಂದೆಯ ಸಂಶಯಾಸ್ಪದ ನಡವಳಿಕೆ, ಮನೆಯಲ್ಲಿನ ಅಸಹಜ ವಾತಾವರಣ ಮತ್ತು ಆರ್ಥಿಕ ಒತ್ತಡಗಳು ಮಕ್ಕಳನ್ನು ಈ ನಿರ್ಧಾರಕ್ಕೆ ತಳ್ಳಿದವೇ ಎಂಬ ಬಹುಮುಖಿ ತನಿಖೆ ನಡೆಸುತ್ತಿದ್ದಾರೆ.

Read More
Next Story