ಪೈಲಟ್‌ಗಳ ವಿಶ್ರಾಂತಿ ನಿಯಮ ಸಡಿಲಿಕೆ: ಡಿಜಿಸಿಎಗೆ ದೆಹಲಿ ಹೈಕೋರ್ಟ್ ತಪರಾಕಿ!
x

ದೆಹಲಿ ಹೈಕೋರ್ಟ್‌ ಹಾಗೂ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಕಚೇರಿ

ಪೈಲಟ್‌ಗಳ ವಿಶ್ರಾಂತಿ ನಿಯಮ ಸಡಿಲಿಕೆ: ಡಿಜಿಸಿಎಗೆ ದೆಹಲಿ ಹೈಕೋರ್ಟ್ ತಪರಾಕಿ!

ಪೈಲಟ್‌ಗಳ ಹಾರಾಟದ ಅವಧಿ ಮತ್ತು ವಿಶ್ರಾಂತಿ ನಿಯಮಗಳಲ್ಲಿ (FDTL) ಅನಿರ್ದಿಷ್ಟಾವಧಿ ಸಡಿಲಿಕೆ ನೀಡಿರುವ ಡಿಜಿಸಿಎ (DGCA) ಕ್ರಮವನ್ನು ದೆಹಲಿ ಹೈಕೋರ್ಟ್ ಪ್ರಶ್ನಿಸಿದೆ. ಪೈಲಟ್‌ಗಳ ದಣಿವು ವಿಮಾನ ಸುರಕ್ಷತೆಯ ಮೇಲೆ ಬೀರುವ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ನ್ಯಾಯಾಲಯದ ಸಂಪೂರ್ಣ ವರದಿ ಇಲ್ಲಿದೆ.


Click the Play button to hear this message in audio format

ವಿಮಾನಯಾನ ಸಂಸ್ಥೆಗಳ ಒತ್ತಡಕ್ಕೆ ಮಣಿದು ಪೈಲಟ್‌ಗಳ ‘ಹಾರಾಟದ ಕರ್ತವ್ಯ ಸಮಯದ ಮಿತಿ’ ನಿಯಮಗಳಲ್ಲಿ ಅನಿರ್ದಿಷ್ಟಾವಧಿ ಸಡಿಲಿಕೆ ನೀಡಿರುವ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (ಡಿಜಿಸಿಎ) ಕ್ರಮವನ್ನು ದೆಹಲಿ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಪೈಲಟ್‌ಗಳ ದಣಿವು ಅಥವಾ ಆಯಾಸ ವಿಮಾನ ಪ್ರಯಾಣದ ಸುರಕ್ಷತೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಇಂತಹ ಗಂಭೀರ ವಿಷಯದಲ್ಲಿ ರಿಯಾಯಿತಿ ನೀಡಿರುವುದು ಎಷ್ಟರಮಟ್ಟಿಗೆ ಸರಿ ಎಂದು ನ್ಯಾಯಾಲಯ ಪ್ರಶ್ನಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರಿದ್ದ ಪೀಠವು ಈ ಸಂಬಂಧ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿತು. ಅಲ್ಲದೆ, ಈ ನಿರ್ಧಾರದ ಹಿಂದಿರುವ ತರ್ಕಬದ್ಧ ಕಾರಣವನ್ನು ವಿವರಿಸುವಂತೆ ಡಿಜಿಸಿಎ ಮತ್ತು ಇಂಡಿಗೋ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು, ಎರಡು ವಾರಗಳೊಳಗೆ ಲಿಖಿತ ಉತ್ತರ ನೀಡುವಂತೆ ಆದೇಶಿಸಿದೆ.

ನ್ಯಾಯಾಲಯದ ಆಕ್ಷೇಪವೇನು?

ಡಿಸೆಂಬರ್ 5, 2025 ರಂದು ಡಿಜಿಸಿಎ ಹೊರಡಿಸಿದ್ದ ಆದೇಶದಲ್ಲಿ, ಇಂಡಿಗೋ ಸಂಸ್ಥೆಯ ಕಾರ್ಯಾಚರಣೆಯನ್ನು ಸಹಜ ಸ್ಥಿತಿಗೆ ತರಲು ಪೈಲಟ್‌ಗಳ ವಿಶ್ರಾಂತಿ ನಿಯಮಗಳಲ್ಲಿ ರಿಯಾಯಿತಿ ನೀಡಲಾಗಿತ್ತು. ಆದರೆ, ಈ ಆದೇಶದಲ್ಲಿ 'ಅನಿರ್ದಿಷ್ಟಾವಧಿ' ಎಂಬ ಪದವನ್ನು ಬಳಸಿರುವುದಕ್ಕೆ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.

"ಇಂಡಿಗೋ ಸಂಸ್ಥೆಗೆ ರಾತ್ರಿ ಪಾಳಿಯ ಕರ್ತವ್ಯದ ನಿಯಮಗಳಲ್ಲಿ ಫೆಬ್ರವರಿ 10ರವರೆಗೆ ಮಾತ್ರ ರಿಯಾಯಿತಿ ನೀಡಲಾಗಿದೆ. ಆದರೆ, ವಿಶ್ರಾಂತಿ ನಿಯಮಗಳ ಸಡಿಲಿಕೆಯನ್ನು ಏಕೆ ಯಾವುದೇ ಗಡುವು ಇಲ್ಲದೆ ಅನಿರ್ದಿಷ್ಟಾವಧಿಯವರೆಗೆ ನೀಡಲಾಗಿದೆ?" ಎಂದು ಪೀಠವು ಡಿಜಿಸಿಎಯನ್ನು ಪ್ರಶ್ನಿಸಿದೆ.

ಏನಿದು ವಿವಾದ?

ವಾರದ ರಜೆ ಮತ್ತು ಸಾಂದರ್ಭಿಕ ರಜೆಗಳನ್ನು ಒಂದರ ಬದಲಿಗೆ ಮತ್ತೊಂದನ್ನು ಬಳಸಬಾರದು ಎಂಬ ನಿಯಮ ಈ ಹಿಂದೆ ಇತ್ತು. ಇದನ್ನು ಡಿಜಿಸಿಎ ಇತ್ತೀಚೆಗೆ ಹಿಂಪಡೆದಿತ್ತು. ಇದರಿಂದಾಗಿ ಪೈಲಟ್‌ಗಳಿಗೆ ನಿಗದಿತ ವಿಶ್ರಾಂತಿ ಸಿಗದೆ, ಸತತವಾಗಿ ಕರ್ತವ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಎದುರಾಗಬಹುದು ಎಂಬುದು ಅರ್ಜಿದಾರರ ವಾದ.

ಡಿಜಿಸಿಎ ಸಮರ್ಥನೆ ಏನು?

ನ್ಯಾಯಾಲಯದಲ್ಲಿ ವಾದ ಮಂಡಿಸಿದ ಡಿಜಿಸಿಎ ಪರ ವಕೀಲರು, "2025ರ ನವೆಂಬರ್ 1ರಿಂದ ಹೊಸ ಎಫ್‌ಡಿಟಿಎಲ್ ನಿಯಮಗಳು ಜಾರಿಗೆ ಬಂದಿವೆ. ಪೈಲಟ್‌ಗಳು ರಜೆಗಳನ್ನು ಒಟ್ಟಾಗಿ ಬಳಸುತ್ತಿರುವುದರಿಂದ ವಿಮಾನಯಾನ ಕಾರ್ಯಾಚರಣೆಯಲ್ಲಿ ಅಡೆತಡೆ ಉಂಟಾಗುತ್ತಿದೆ. ಇದನ್ನು ತಪ್ಪಿಸಲು ನಿಯಮ ಸಡಿಲಿಸಲಾಗಿದೆ. ವಾರದ ರಜೆ ಕಡ್ಡಾಯವಾಗಿದ್ದರೂ, ಇತರ ರಜೆಗಳು ಪೈಲಟ್ ಮತ್ತು ಸಂಸ್ಥೆಯ ನಡುವಿನ ಒಪ್ಪಂದಕ್ಕೆ ಒಳಪಟ್ಟಿರುತ್ತವೆ," ಎಂದು ಸಮರ್ಥಿಸಿಕೊಂಡರು.

ಸಿಬ್ಬಂದಿ ಕೊರತೆ ಮುಚ್ಚಿಹಾಕುವ ತಂತ್ರ?

ಅರ್ಜಿದಾರರಾದ ಸಬರಿ ರಾಯ್ ಲೆಂಕಾ ಅವರ ಪರ ವಕೀಲರು ವಾದ ಮಂಡಿಸಿ, "ಡಿಜಿಸಿಎ ಕ್ರಮವು ಕೇವಲ ಇಂಡಿಗೋ ಸಂಸ್ಥೆಗೆ ಲಾಭ ಮಾಡಿಕೊಡುವ ಉದ್ದೇಶ ಹೊಂದಿದೆ. ಇದು ಅಂತರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ (ICAO) ನಿಯಮಗಳ ಸ್ಪಷ್ಟ ಉಲ್ಲಂಘನೆ. ವಿಮಾನಯಾನ ಸಂಸ್ಥೆಗಳಲ್ಲಿರುವ ಪೈಲಟ್‌ಗಳ ಕೊರತೆಯನ್ನು ಮುಚ್ಚಿ ಹಾಕಲು ಅಸ್ತಿತ್ವದಲ್ಲಿರುವ ಸಿಬ್ಬಂದಿಯ ಮೇಲೆ ಹೆಚ್ಚಿನ ಒತ್ತಡ ಹೇರಲಾಗುತ್ತಿದೆ," ಎಂದು ಆರೋಪಿಸಿದರು.

ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ ತಿಂಗಳಿಗೆ ಮುಂದೂಡಲಾಗಿದೆ.

Read More
Next Story