ಕುಸಿದು ಬಿದ್ದ ಪಿಜಿ ಕಟ್ಟಡ- 6 ಬಲಿ: ಅವಶೇಷದಡಿಯಿಂದ ವಿಡಿಯೊ ಕಾಲ್‌ ಮಾಡಿ ರಕ್ಷಣೆಗಾಗಿ ಕೂಗಿದ ವಿದ್ಯಾರ್ಥಿಗಳು
x

ಕುಸಿದು ಬಿದ್ದ ಪಿಜಿ ಕಟ್ಟಡ- 6 ಬಲಿ: ಅವಶೇಷದಡಿಯಿಂದ ವಿಡಿಯೊ ಕಾಲ್‌ ಮಾಡಿ ರಕ್ಷಣೆಗಾಗಿ ಕೂಗಿದ ವಿದ್ಯಾರ್ಥಿಗಳು

‘ಹಾಸ್ಟೆಲ್ ಡೇಜ್’ ಎಂದು ಗುರುತಿಸಲಾಗಿದ್ದ ಈ ಕಟ್ಟಡವನ್ನು ವಿದ್ಯಾರ್ಥಿಗಳ ಪಿಜಿಯಾಗಿ ಬಳಸಲಾಗುತ್ತಿತ್ತು. ಕಟ್ಟಡ ಕುಸಿಯುವ ಸಂದರ್ಭದಲ್ಲಿ ನೆಲಮಹಡಿಯಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.


ದೆಹಲಿಯ ಸತ್ಯ ನಿಕೇತನದಲ್ಲಿ ಐದು ಅಂತಸ್ತಿನ ಪೇಯಿಂಗ್ ಗೆಸ್ಟ್ (PG) ಕಟ್ಟಡವೊಂದು ಭಾನುವಾರ ಮಧ್ಯಾಹ್ನ ಕುಸಿದು ಬಿದ್ದಿದ್ದು, ಸಾವಿನ ಸಂಖ್ಯೆ ಆರಕ್ಕೆ ಏರಿಕೆ ಆಗಿದೆ. ಇನ್ನು 11ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ. ದೆಹಲಿ ವಿಶ್ವವಿದ್ಯಾಲಯದ ಸೌತ್ ಕ್ಯಾಂಪಸ್ ಸಮೀಪದ ಸತ್ಯ ನಿಕೇತನದಲ್ಲಿರುವ ‘ಹಾಸ್ಟೆಲ್ ಡೇಜ್’ ಎಂಬ ಕಟ್ಟಡವೇ ಕುಸಿದಿದೆ.

ಸತ್ಯ ನಿಕೇತನದ ಆರ್‌ಕೆ ಪುರಂ–ಮೋತಿಬಾಗ್ ಪ್ರದೇಶದಲ್ಲಿರುವ ಶಿವ ದೇವಸ್ಥಾನದ ಸಮೀಪದ ಕಿರಿದಾದ ರಸ್ತೆಯಲ್ಲಿ ಈ ಕಟ್ಟಡವಿತ್ತು. ಜನನಿಬಿಡ ಪ್ರದೇಶವಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಸ್ಥಳಾವಕಾಶದ ಸಮಸ್ಯೆಯೂ ಎದುರಾಗಿದೆ.

ಅವಶೇಷದಡಿಯಿಂದ ವಿಡಿಯೊ ಕಾಲ್‌

ಕುಸಿದ ಪಿಜಿ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ವಿದ್ಯಾರ್ಥಿಯೊಬ್ಬರು ಭಯಾನಕ ಪರಿಸ್ಥಿತಿಯಲ್ಲೂ ಪ್ರಜ್ಞೆ ಕಳೆದುಕೊಳ್ಳದೆ ಮೊಬೈಲ್ ಮೂಲಕ ವಿಡಿಯೋ ಕಾಲ್ ಮಾಡಿ ಸಹಾಯ ಕೋರಿರುವ ಘಟನೆ ನಡೆದಿದೆ.

ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ವಿದ್ಯಾರ್ಥಿಯ 11 ಸೆಕೆಂಡ್‌ಗಳ ವಿಡಿಯೋ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕವಾದ ಎನ್‌ಎಸ್‌ಯುಐ ಹಂಚಿಕೊಂಡಿದೆ. ವಿಡಿಯೋದಲ್ಲಿ ವಿದ್ಯಾರ್ಥಿ ಅವಶೇಷಗಳಡಿ ಸಿಲುಕಿಕೊಂಡು ಮಲಗಿರುವುದು ಕಾಣಿಸುತ್ತದೆ. ಸುತ್ತಲಿನ ಕಿರಿದಾದ ಜಾಗವನ್ನು ಮೊಬೈಲ್ ಕ್ಯಾಮೆರಾದ ಮೂಲಕ ನಿಧಾನವಾಗಿ ತೋರಿಸುತ್ತಾ, ಸ್ನೇಹಿತನಿಗೆ ಮಾಹಿತಿ ನೀಡಿ ರಕ್ಷಣೆಗೆ ಮನವಿ ಮಾಡುತ್ತಿರುವುದು ಕಂಡುಬಂದಿದೆ.

40ರಿಂದ 50 ವಿದ್ಯಾರ್ಥಿಗಳು ಕಟ್ಟಡದಲ್ಲಿದ್ದರು

ಭಾನುವಾರ ಮಧ್ಯಾಹ್ನ ಸುಮಾರು 1.30ರ ವೇಳೆಗೆ ಸತ್ಯ ನಿಕೇತನದಲ್ಲಿದ್ದ ಸುಮಾರು 50 ವರ್ಷ ಹಳೆಯ ಕಟ್ಟಡ ಕುಸಿದಿದೆ. ‘ಹಾಸ್ಟೆಲ್ ಡೇಜ್’ ಎಂದು ಗುರುತಿಸಲಾಗಿದ್ದ ಈ ಕಟ್ಟಡವನ್ನು ವಿದ್ಯಾರ್ಥಿಗಳ ಪಿಜಿಯಾಗಿ ಬಳಸಲಾಗುತ್ತಿತ್ತು. ಕಟ್ಟಡ ಕುಸಿಯುವ ಸಂದರ್ಭದಲ್ಲಿ ನೆಲಮಹಡಿಯಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕಟ್ಟಡ ಕುಸಿದ ವೇಳೆ ಸುಮಾರು 40ರಿಂದ 50 ವಿದ್ಯಾರ್ಥಿಗಳು ಒಳಗಿದ್ದರು ಎಂದು ಅಂದಾಜಿಸಲಾಗಿದೆ. ಇದುವರೆಗೆ 11 ಮಂದಿಯನ್ನು ರಕ್ಷಿಸಲಾಗಿದ್ದು, ಇನ್ನೂ ಸುಮಾರು 30ರಿಂದ 50 ವಿದ್ಯಾರ್ಥಿಗಳು ಅವಶೇಷಗಳಡಿ ಸಿಲುಕಿರುವ ಸಾಧ್ಯತೆಯಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಗಾಯಗೊಂಡ 10 ಮಂದಿಯನ್ನು ಏಮ್ಸ್ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

ಅವಶೇಷಗಳಡಿಯಿಂದ ಬರುತ್ತಿದ್ದ ಫೋನ್ ಕರೆಗಳು

ಕಟ್ಟಡ ಕುಸಿತದ ಸ್ಥಳಕ್ಕೆ ಭೇಟಿ ನೀಡಿದ್ದ ಬಿಜೆಪಿ ಶಾಸಕ ಅನಿಲ್ ಶರ್ಮಾ, ಅವಶೇಷಗಳಡಿ ಸಿಲುಕಿರುವವರಿಂದ ರಕ್ಷಣಾ ತಂಡಗಳಿಗೆ ಇನ್ನೂ ಫೋನ್ ಕರೆಗಳು ಬರುತ್ತಿವೆ ಎಂದು ತಿಳಿಸಿದ್ದಾರೆ. “ಅವಶೇಷಗಳಡಿ ಸಿಲುಕಿರುವವರಿಂದ ನಮಗೆ ಕರೆಗಳು ಬರುತ್ತಿವೆ. ರಕ್ಷಣಾ ತಂಡಗಳು ಅವರೊಂದಿಗೆ ನಿರಂತರ ಸಂಪರ್ಕದಲ್ಲಿವೆ. ಎಲ್ಲರೂ ಸುರಕ್ಷಿತವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ” ಎಂದು ಅವರು ಭಾನುವಾರ ಹೇಳಿದ್ದಾರೆ.

ಸ್ಥಳೀಯರ ಪ್ರಕಾರ, ಅವಶೇಷಗಳಡಿ ಸಿಲುಕಿದ್ದ ಕೆಲ ವಿದ್ಯಾರ್ಥಿಗಳು ಮೊಬೈಲ್ ಮೂಲಕ ಕರೆ ಮಾಡಿ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ರಕ್ಷಣಾ ಸಿಬ್ಬಂದಿಯೊಂದಿಗೆ ಸ್ಥಳೀಯರೂ ಕೈಜೋಡಿಸಿದ್ದು, ಕೈಗಳಿಂದಲೇ ಹಾಗೂ ಲಭ್ಯವಿದ್ದ ಉಪಕರಣಗಳನ್ನು ಬಳಸಿಕೊಂಡು ಅವಶೇಷಗಳನ್ನು ತೆರವುಗೊಳಿಸುವ ಪ್ರಯತ್ನ ನಡೆಸಿದ್ದಾರೆ.

ಅಕ್ರಮ ನಿರ್ಮಾಣದ ಆರೋಪ

ಕುಸಿದ ಕಟ್ಟಡವು ದೆಹಲಿ ವಿಶ್ವವಿದ್ಯಾಲಯದ ಸೌತ್ ಕ್ಯಾಂಪಸ್ ಸಮೀಪದ ಜನನಿಬಿಡ ಪ್ರದೇಶದಲ್ಲಿತ್ತು. ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳ ಪಿಜಿಗಳು, ಹೋಟೆಲ್‌ಗಳು ಹಾಗೂ ಅಂಗಡಿಗಳಿವೆ. ಹಿರಿಯ ಎಂಸಿಡಿ ಅಧಿಕಾರಿಯೊಬ್ಬರ ಪ್ರಕಾರ, ಸುಮಾರು 50 ವರ್ಷ ಹಳೆಯದಾದ ಈ ಕಟ್ಟಡವು ಪುನರ್ವಸತಿ ಕಾಲನಿಯಲ್ಲಿರುವ 55 ಚದರ ಗಜದ ಜಾಗದಲ್ಲಿ ನಿರ್ಮಿಸಲಾಗಿತ್ತು. ಮೂಲ ಅನುಮತಿ ಕೇವಲ G+1 ಕಟ್ಟಡಕ್ಕೆ ಇದ್ದರೂ, ಕಟ್ಟಡವನ್ನು G+4 ರಚನೆಯಾಗಿ ನಿರ್ಮಿಸಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.

ದೆಹಲಿ ಪೊಲೀಸರೊಂದಿಗೆ ಕೆಲಸ ಮಾಡುವ ಸ್ಥಳೀಯ ನಿವಾಸಿ ರಾಜೇನ್ ಛೇತ್ರಿ ಅವರ ಪ್ರಕಾರ, ಕಟ್ಟಡದಲ್ಲಿ ಸುಮಾರು 15 ಕೊಠಡಿಗಳಿದ್ದು, ಪ್ರತಿ ಕೊಠಡಿಯಲ್ಲಿ ಎರಡರಿಂದ ಮೂವರು ವಿದ್ಯಾರ್ಥಿಗಳು ವಾಸಿಸುತ್ತಿದ್ದರು. ನೆಲಮಾಳಿಗೆಯಲ್ಲಿ ದುರಸ್ತಿ ಅಥವಾ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು ಎಂದು ಅವರು ಹೇಳಿದ್ದಾರೆ.

ಈ ಪಿಜಿಯಲ್ಲಿ ವಾಸಿಸುತ್ತಿದ್ದ ಬಹುತೇಕ ವಿದ್ಯಾರ್ಥಿಗಳು ಕೇರಳ, ಹರಿಯಾಣ ಮತ್ತು ಉತ್ತರ ಪ್ರದೇಶದವರಾಗಿದ್ದು, ಮೋಟಿಲಾಲ್ ನೆಹರು ಕಾಲೇಜು, ಆತ್ಮ ರಾಮ್ ಸನಾತನ ಧರ್ಮ ಕಾಲೇಜು ಹಾಗೂ ಶ್ರೀ ವೆಂಕಟೇಶ್ವರ ಕಾಲೇಜಿನಲ್ಲಿ ಓದುತ್ತಿದ್ದರು ಎಂದು ಛೇತ್ರಿ ತಿಳಿಸಿದ್ದಾರೆ. ಪ್ರತಿ ಬೆಡ್‌ಗೆ ಸುಮಾರು 12 ಸಾವಿರ ರೂಪಾಯಿ ಬಾಡಿಗೆ ಪಾವತಿಸುತ್ತಿದ್ದರು ಎನ್ನಲಾಗಿದೆ.

ಮಳೆಯಿಂದ ಕಟ್ಟಡದ ಅಡಿಪಾಯ ದುರ್ಬಲವಾಗಿತ್ತೇ?

ಕಟ್ಟಡ ಕುಸಿಯಲು ದುರಸ್ತಿ ಕಾಮಗಾರಿ ಕಾರಣವಾಗಿರಬಹುದು ಎಂದು ಪೊಲೀಸರು ಪ್ರಾಥಮಿಕವಾಗಿ ತಿಳಿಸಿದ್ದಾರೆ. ಆದರೆ ಸ್ಥಳೀಯರು ಬೇರೆ ಕಾರಣವನ್ನೂ ಮುಂದಿಟ್ಟಿದ್ದಾರೆ. ಹಲವು ದಿನಗಳಿಂದ ಸುರಿದ ಮಳೆಯಿಂದ ಕಟ್ಟಡದ ನೆಲಮಾಳಿಗೆಯಲ್ಲಿ ನೀರು ಸಂಗ್ರಹವಾಗಿತ್ತು. ಇದರಿಂದ ಕಟ್ಟಡದ ಅಡಿಪಾಯ ದುರ್ಬಲಗೊಂಡಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.

ಕಟ್ಟಡದ ಮಾಲೀಕ ಹರಿರಾಮ್ ಸೇರಿದಂತೆ ಇತರರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ನಿರ್ಲಕ್ಷ್ಯ, ಕಟ್ಟಡ ನಿರ್ವಹಣೆಯಲ್ಲಿ ಲೋಪ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಅಪಾಯ ಉಂಟುಮಾಡಿದ ಆರೋಪಗಳ ಜೊತೆಗೆ ಅಪರಾಧ ಸಂಬಂಧಿತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.

ಅಕ್ರಮ ಕಟ್ಟಡಗಳ ವಿರುದ್ಧ ಎಂಸಿಡಿ ಕ್ರಮ

ದುರಂತದ ಬಳಿಕ ದೆಹಲಿ ಮಹಾನಗರ ಪಾಲಿಕೆ (MCD) ನಾಲ್ಕು ಮಹಡಿಗಿಂತ ಹೆಚ್ಚು ಇರುವ ಅಕ್ರಮ ನಿರ್ಮಾಣಗಳನ್ನು ತಕ್ಷಣ ಸೀಲ್ ಮಾಡುವಂತೆ ಆದೇಶಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕಟ್ಟಡದ ಪಕ್ಕದಲ್ಲಿದ್ದ ಮಹಿಳಾ ಪಿಜಿಯನ್ನೂ ಖಾಲಿ ಮಾಡಿಸಿ ಸೀಲ್ ಮಾಡಲಾಗಿದೆ.

ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಮ್ಯಾಜಿಸ್ಟೀರಿಯಲ್ ತನಿಖೆಗೆ ಅವರು ಆದೇಶಿಸಿದ್ದಾರೆ. ಅವಶೇಷಗಳಡಿ ಇನ್ನೂ ವಿದ್ಯಾರ್ಥಿಗಳು ಸಿಲುಕಿರುವ ಸಾಧ್ಯತೆ ಹಿನ್ನೆಲೆಯಲ್ಲಿ ರಕ್ಷಣಾ ತಂಡಗಳು ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಸಿಲುಕಿರುವವರನ್ನು ಸುರಕ್ಷಿತವಾಗಿ ಹೊರತೆಗೆಯುವ ಪ್ರಯತ್ನ ನಡೆಯುತ್ತಿದೆ.

Read More
Next Story