25 ವರ್ಷಗಳ ನಂತರ ಬಿಜೆಪಿಗೆ BMC ಮೇಯರ್ ಗದ್ದುಗೆ ಫಿಕ್ಸ್‌? ರಿತು ತಾವ್ಡೆ ನಾಮಪತ್ರ ಸಲ್ಲಿಕೆ
x
ಬಿಎಂಸಿ ಮೇಯರ್‌ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ರಿತು ತಾವ್ಡೆ

25 ವರ್ಷಗಳ ನಂತರ ಬಿಜೆಪಿಗೆ BMC ಮೇಯರ್ ಗದ್ದುಗೆ ಫಿಕ್ಸ್‌? ರಿತು ತಾವ್ಡೆ ನಾಮಪತ್ರ ಸಲ್ಲಿಕೆ

ಮುಂಬೈ ಮಹಾನಗರ ಪಾಲಿಕೆಯ ಮೇಯರ್ ಆಗಿ ಬಿಜೆಪಿಯ ರಿತು ತಾವ್ಡೆ ಮತ್ತು ಉಪಮೇಯರ್ ಆಗಿ ಶಿವಸೇನೆಯ ಸಂಜಯ್ ಘಾಡಿ ಆಯ್ಕೆಯಾಗುವುದು ಖಚಿತವಾಗಿದೆ.


Click the Play button to hear this message in audio format

ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎನ್‌ಡಿಎ (ಮಹಾಯುತಿ) ಮೈತ್ರಿಕೂಟ ಭರ್ಜರಿ ಜಯ ದಾಖಲಿಸಿದ ಬೆನ್ನಲ್ಲೇ, ಮೇಯರ್ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ರಿತು ತಾವ್ಡೆ ಮತ್ತು ಉಪಮೇಯರ್ ಸ್ಥಾನಕ್ಕೆ ಶಿವಸೇನೆ (ಶಿಂದೆ ಬಣ) ಅಭ್ಯರ್ಥಿಯಾಗಿ ಸಂಜಯ್ ಶಂಕರ್ ಘಾಡಿ ಇಂದು ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಈ ಮೂಲಕ ಬಿಎಂಸಿ ಆಡಳಿತದಲ್ಲಿ ಹೊಸ ಯುಗ ಆರಂಭವಾಗಲಿದ್ದು, ಬಿಜೆಪಿ ಸುಮಾರು 40 ವರ್ಷಗಳ ದೀರ್ಘ ಕಾಯುವಿಕೆಯ ನಂತರ ಮೊದಲ ಬಾರಿಗೆ ಮೇಯರ್ ಗದ್ದುಗೆಯನ್ನು ಏರಲು ಸಜ್ಜಾಗಿದೆ.

ರಿತು ತಾವ್ಡೆ: ಜನಪ್ರಿಯತೆ ಮತ್ತು ರಾಜಕೀಯ ಹಾದಿ

ಘಾಟ್‌ಕೋಪರ್‌ನ ವಾರ್ಡ್ ಸಂಖ್ಯೆ 132 ರಿಂದ ಸತತ ಮೂರನೇ ಬಾರಿಗೆ ಕಾರ್ಪೊರೇಟರ್ ಆಗಿ ಆಯ್ಕೆಯಾಗಿರುವ ರಿತು ತಾವ್ಡೆ, ಪಕ್ಷದ ತಳಮಟ್ಟದ ಸಕ್ರಿಯ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಮರಾಠಾ ಸಮುದಾಯಕ್ಕೆ ಸೇರಿದವರಾಗಿದ್ದರೂ, ಗುಜರಾತಿ ಮತದಾರರ ಪ್ರಾಬಲ್ಯವಿರುವ ವಾರ್ಡ್‌ನಲ್ಲಿ ಗೆಲುವು ಸಾಧಿಸಿರುವುದು ಇವರ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಈ ಹಿಂದೆ ಬಿಎಂಸಿ ಶಿಕ್ಷಣ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು, ಪ್ರಸ್ತುತ ಮಹಾರಾಷ್ಟ್ರ ಪ್ರದೇಶ ಮಹಿಳಾ ಮೋರ್ಚಾದ ಉಪಾಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. 2012ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಇವರು, ನಾಗರಿಕ ಸಮಸ್ಯೆಗಳ ಪರಿಹಾರ ಮತ್ತು ಸಾರ್ವಜನಿಕರೊಂದಿಗೆ ಉತ್ತಮ ಸಂವಹನ ನಡೆಸುವಲ್ಲಿ ಹೆಸರಾಗಿದ್ದಾರೆ.

ಉಪಮೇಯರ್ ಅಭ್ಯರ್ಥಿ ಸಂಜಯ್ ಘಾಡಿ

ಮಹಾಯುತಿ ಮೈತ್ರಿಕೂಟದ ಒಪ್ಪಂದದಂತೆ ಶಿವಸೇನೆಯ ಸಂಜಯ್ ಶಂಕರ್ ಘಾಡಿ ಅವರು ಉಪಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಸಂಖ್ಯಾಬಲದ ಆಧಾರದ ಮೇಲೆ ಎನ್‌ಡಿಎ ಅಭ್ಯರ್ಥಿಗಳ ಗೆಲುವು ಬಹುತೇಕ ಖಚಿತವಾಗಿದ್ದು, ಅಧಿಕೃತ ಫಲಿತಾಂಶವು ಫೆಬ್ರವರಿ 11 ರಂದು ಪ್ರಕಟವಾಗಲಿದೆ.

ಬಿಎಂಸಿ ಚುನಾವಣಾ ಫಲಿತಾಂಶ

ಮುಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ಚುನಾವಣಾ ಫಲಿತಾಂಶದ ಚಿತ್ರಣ ಹೀಗಿದೆ. ಒಟ್ಟು 227 ಸ್ಥಾನಗಳ ಪೈಕಿ ಬಿಜೆಪಿ 89 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (UBT) 65 ಸ್ಥಾನಗಳನ್ನು ಪಡೆದುಕೊಂಡಿದೆ. ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ 29 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 24 ಸ್ಥಾನಗಳಲ್ಲಿ ಜಯಗಳಿಸಿದೆ; ಇನ್ನುಳಿದಂತೆ ಎಐಎಂಐಎಂ (AIMIM) 08 ಹಾಗೂ ಎಂಎನ್‌ಎಸ್ (MNS) 06 ಸ್ಥಾನಗಳನ್ನು ತನ್ನದಾಗಿಸಿಕೊಂಡಿವೆ.

ಮುಂಬೈ ಮಹಾನಗರ ಪಾಲಿಕೆಯ ಈ ಬಾರಿಯ ಚುನಾವಣೆಯು ಹಲವು ಐತಿಹಾಸಿಕ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. 1997ರಿಂದ ಸತತವಾಗಿ ಬಿಎಂಸಿಯಲ್ಲಿ ಆಡಳಿತ ನಡೆಸುತ್ತಿದ್ದ ಶಿವಸೇನೆಯ (ಈಗಿನ ಉದ್ಧವ್ ಬಣ) ಸುದೀರ್ಘ 25 ವರ್ಷಗಳ ಆಡಳಿತವು ಈ ಬಾರಿಯ ಫಲಿತಾಂಶದೊಂದಿಗೆ ಅಂತ್ಯಗೊಂಡಿದೆ. ದೇಶದ ಅತ್ಯಂತ ಶ್ರೀಮಂತ ನಾಗರಿಕ ಸಂಸ್ಥೆಯಾಗಿರುವ ಮುಂಬೈ ಪಾಲಿಕೆಯ 2025-26ರ ಸಾಲಿನ ಬಜೆಟ್ ಅಂದಾಜು ಸುಮಾರು 74,450 ಕೋಟಿ ರೂಪಾಯಿಗಳಾಗಿದ್ದು, ಇಂತಹ ಬೃಹತ್ ಸಂಸ್ಥೆಯ ಅಧಿಕಾರ ಇದೀಗ ಹೊಸ ಮೈತ್ರಿಕೂಟದ ಪಾಲಾಗಿದೆ. ವಿಶೇಷವೆಂದರೆ, ಕಳೆದ 2022ರ ಮಾರ್ಚ್ 7ರಿಂದ ಆಡಳಿತಾಧಿಕಾರಿಗಳ ಆಳ್ವಿಕೆಯಲ್ಲಿದ್ದ ಬಿಎಂಸಿಗೆ ಬರೋಬ್ಬರಿ ಒಂಬತ್ತು ವರ್ಷಗಳ ದೀರ್ಘ ಬಿಡುವಿನ ನಂತರ ಚುನಾವಣೆ ನಡೆದಿರುವುದು ಈ ಬಾರಿಯ ವಿಶೇಷ ಪ್ರಾಮುಖ್ಯತೆಯಾಗಿದೆ.

Read More
Next Story