ಮನೆಯ ಟೆರೇಸ್ ಮೇಲೆ ಭೀಕರ ಸ್ಫೋಟ; 2 ಬಲಿ- ಬಾಂಬ್‌ ತಯಾರಿಸುವಾಗಲೇ ಬ್ಲಾಸ್ಟ್‌?
x
ಒಡಿಶಾದಲ್ಲಿ ಭೀಕರ ಸ್ಫೋಟ

ಮನೆಯ ಟೆರೇಸ್ ಮೇಲೆ ಭೀಕರ ಸ್ಫೋಟ; 2 ಬಲಿ- ಬಾಂಬ್‌ ತಯಾರಿಸುವಾಗಲೇ ಬ್ಲಾಸ್ಟ್‌?

ಮನೆಯೊಂದರ ಮೇಲ್ಛಾವಣಿಯಲ್ಲಿ ಬಾಂಬ್ ತಯಾರಿಸುತ್ತಿದ್ದಾಗ ಸಂಭವಿಸಿದ ಸ್ಫೋಟಕ್ಕೆ ತಾಯಿ ಮತ್ತು ಮಗ ಬಲಿಯಾಗಿದ್ದಾರೆ. ಆರೋಪಿಗಳ ಕ್ರಿಮಿನಲ್ ಹಿನ್ನೆಲೆ ಮತ್ತು ಸ್ಫೋಟದ ಭೀಕರ ದೃಶ್ಯಗಳು ಈಗ ತನಿಖೆಯಲ್ಲಿದೆ.


ಒಡಿಶಾದ ರಾಜಧಾನಿ ಭುವನೇಶ್ವರದ ಸುಂದರಪದ ಎಂಬಲ್ಲಿ ಜನವರಿ 27 ರಂದು ಮಧ್ಯಾಹ್ನ ಸುಮಾರು 2:45ಕ್ಕೆ ಸಂಭವಿಸಿದ ಭೀಕರ ಸ್ಫೋಟವೊಂದು ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ. ಮನೆಯೊಂದರ ಟೆರೇಸ್ ಮೇಲೆ ಈ ಸ್ಫೋಟ ಸಂಭವಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ತಾಯಿ ಮತ್ತು ಮಗ ಮೃತಪಟ್ಟಿದ್ದಾರೆ. ಇನ್ನು ಕಚ್ಛಾ ಬಾಂಬ್ ತಯಾರಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಘಟನೆಯ ವಿವರ

ಜನವರಿ 27ರಂದು ಸಂಭವಿಸಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಮನೆಯ ಮೇಲ್ಛಾವಣಿಯಲ್ಲಿ ಸ್ಫೋಟಕಗಳನ್ನು ತಯಾರಿಸುತ್ತಿದ್ದಾಗ ಈ ದುರಂತ ನಡೆದಿದೆ. ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ನಿವಾಸಿಗಳು ಆತಂಕಗೊಂಡು ಮನೆಯಿಂದ ಹೊರಬಂದಿದ್ದಾರೆ. ಘಟನಾ ಸ್ಥಳದಲ್ಲಿ ಗನ್‌ಪೌಡರ್ ಪತ್ತೆಯಾಗಿದ್ದು, ಇಲ್ಲಿ ಅಕ್ರಮವಾಗಿ ಬಾಂಬ್ ತಯಾರಿಸಲಾಗುತ್ತಿತ್ತು ಎಂಬ ಸಂಶಯಕ್ಕೆ ಪುಷ್ಟಿ ನೀಡಿದೆ.

ವೈರಲಾಗುತ್ತಿರುವ ವಿಡಿಯೋ ಇಲ್ಲಿದೆ

ಮೃತರು ಮತ್ತು ಗಾಯಾಳುಗಳು

ಈ ಸ್ಫೋಟದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಪಡೆಯುತ್ತಿದ್ದ ಪ್ರಮುಖ ಆರೋಪಿ ಶಹನವಾಜ್ ಮಲಿಕ್ ಮತ್ತು ಆತನ ತಾಯಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಉಳಿದ ಇಬ್ಬರು ಸಹಚರರಾದ ಅಮಿಯ ಮಲಿಕ್ ಮತ್ತು ಮತ್ತೊಬ್ಬ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ.

ಪೊಲೀಸ್ ತನಿಖೆ ಮತ್ತು ಕ್ರಿಮಿನಲ್ ಹಿನ್ನೆಲೆ

ಘಟನೆಗೆ ಸಂಬಂಧಿಸಿದಂತೆ ಡಿಸಿಪಿ ಜಗಮೋಹನ್ ಮೀನಾ ಪ್ರತಿಕ್ರಿಯಿಸಿದ್ದು, "ಗಾಯಗೊಂಡಿರುವ ಮುಖ್ಯ ಆರೋಪಿ ಹಳೆಯ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದಾನೆ. ಇವರು ಯಾವುದೋ ದೊಡ್ಡ ಅಪರಾಧ ಕೃತ್ಯವೆಸಗಲು ಸಂಚು ರೂಪಿಸುತ್ತಿದ್ದರು ಮತ್ತು ಅದಕ್ಕಾಗಿ ಬಾಂಬ್ ತಯಾರಿಸುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ” ಎಂದು ತಿಳಿಸಿದ್ದಾರೆ.

ಪ್ರಸ್ತುತ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಹಾಗೂ ಸ್ಥಳದಲ್ಲಿ ದೊರೆತ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದು, ಹೆಚ್ಚಿನ ಸ್ಫೋಟಕಗಳನ್ನು ಸಂಗ್ರಹಿಸಿಡಲಾಗಿದೆಯೇ ಎಂಬ ಬಗ್ಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.

Read More
Next Story