ಏರ್ ಇಂಡಿಯಾ ವಿಮಾನ ದುರಂತ|ವಿದೇಶಿ ಮಾಧ್ಯಮದ ವರದಿ ನಿರಾಕರಿಸಿದ ಸಚಿವಾಲಯ
x

ಏರ್ ಇಂಡಿಯಾ ವಿಮಾನ ದುರಂತ|ವಿದೇಶಿ ಮಾಧ್ಯಮದ ವರದಿ ನಿರಾಕರಿಸಿದ ಸಚಿವಾಲಯ

ವಿಮಾನ ದುರಂತದ ತನಿಖೆ ಪ್ರಗತಿಯಲ್ಲಿದೆ. AAIB ತನ್ನ ತನಿಖೆ ಪೂರ್ಣಗೊಳಿಸುವ ಮೊದಲೇ ಇಂತಹ ಊಹಾಪೋಹ ಹರಡುವುದು ತನಿಖೆಯನ್ನು ದಿಕ್ಕು ತಪ್ಪಿಸಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.


ಏರ್ ಇಂಡಿಯಾ ವಿಮಾನ ದುರಂತದ ತನಿಖೆ ಕುರಿತು ವಿದೇಶಿ ಮಾಧ್ಯಮಗಳು ಪ್ರಕಟಿಸಿರುವ ವರದಿಯನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಅಲ್ಲಗಳೆದಿದೆ.

ವಿಮಾನ ದುರಂತದ ತನಿಖೆ ಇನ್ನೂ ಪ್ರಗತಿಯಲ್ಲಿದ್ದು, ಅಂತಿಮ ವರದಿ ಬರುವ ಮುನ್ನ ಯಾವುದೇ ತೀರ್ಮಾನಕ್ಕೆ ಬರುವುದು ಸರಿಯಲ್ಲ ಎಂದು ವಿಮಾನಯಾನ ಸಚಿವಾಲಯದ ರಾಜ್ಯ ಖಾತೆ ಸಚಿವ ಮುರುಳೀಧರ್ ಮೊಹೋಲ್ ಹೇಳಿದ್ದಾರೆ.

ನಮ್ಮ ತನಿಖಾ ಸಂಸ್ಥೆಗಳ ಮೇಲೆ ನಂಬಿಕೆ ಇಡಿ

ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಭಾನುವಾರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ವಿದೇಶಿ ಮಾಧ್ಯಮಗಳ ವರದಿ ವಿಶ್ವಾಸಾರ್ಹವಾಗಿಲ್ಲ. ನಮ್ಮ ದೇಶದ ತನಿಖಾ ಸಂಸ್ಥೆಗಳು ಈ ದುರಂತದ ಬಗ್ಗೆ ಹಗಲಿರುಳು ಶ್ರಮಿಸುತ್ತಿವೆ. ನಾವು ನಮ್ಮ ತನಿಖಾ ಸಂಸ್ಥೆಗಳನ್ನು ನಂಬಬೇಕೇ ಹೊರತು ಹೊರಗಿನವರ ವರದಿಗಳನ್ನು ಅಲ್ಲ . ಅದಾಗ್ಯೂ, ತನಿಖೆ ಪೂರ್ಣಗೊಳ್ಳುವ ಮೊದಲೇ ಪ್ರತಿಕ್ರಿಯಿಸುವುದು ಸಮಂಜಸವಲ್ಲ ಎಂದು ಆಭಿಪ್ರಾಯಪಟ್ಟಿದ್ದಾರೆ.

ವಿವಾದಕ್ಕೆ ಕಾರಣವಾದ ಇಟಲಿ ಪತ್ರಿಕಾ ವರದಿ

ಇಟಲಿಯ ದಿನಪತ್ರಿಕೆ 'ಕೊರಿಯರ್ ಡೆಲ್ಲಾ ಸೆರಾ' (Corriere della Sera) ಇತ್ತೀಚೆಗೆ ಪ್ರಕಟಿಸಿದ ವರದಿಯಲ್ಲಿ ಅಹಮದಾಬಾದ್ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಹಲವು ಸ್ಫೋಟಕ ವಿಚಾರಗಳನ್ನು ಉಲ್ಲೇಖಿಸಿತ್ತು.

ಏರ್ ಇಂಡಿಯಾ ವಿಮಾನ ದುರಂತಕ್ಕೆ ಪೈಲಟ್ ಗಳೇ ಹೊಣೆ ಎಂದು ತನಿಖಾ ಸಂಸ್ಥೆಗಳು ಹೇಳಿವೆ. ಪೈಲಟ್ ಗಳು ವಿಮಾನದ ಇಂಧನದ ಬಟನ್ ಅನ್ನು ಉದ್ದೇಶಪೂರ್ವಕವಾಗಿ ಬಂದ್ ಮಾಡಿದ್ದರಿಂದಲೇ ವಿಮಾನ ಪತನಗೊಂಡಿದೆ ಎಂದು ತನಿಖಾಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ವರದಿ ಮಾಡಿತ್ತು.

ಆದರೆ, ವಿಮಾನ ಅಪಘಾತ ತನಿಖಾ ಸಂಸ್ಥೆ (AAIB) ಈ ವರದಿಯನ್ನು ಅಲ್ಲಗಳೆದಿದ್ದು, ತನಿಖೆ ನಿರ್ಣಾಯಕ ಹಂತದಲ್ಲಿದೆ. ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿತ್ತು.

2025 ಜೂನ್ 12 ರಂದು ಏರ್ ಇಂಡಿಯಾದ AI171 ವಿಮಾನವು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್ ಗೆ ತೆರಳಲು ಟೇಕಾಪ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿತ್ತು. ದುರಂತದಲ್ಲಿ 241 ಪ್ರಯಾಣಿಕರು ಮತ್ತು 19 ಸಿಬ್ಬಂದಿ ಸೇರಿ ಒಟ್ಟು 260 ಜನರು ಪ್ರಾಣ ಕಳೆದುಕೊಂಡಿದ್ದರು.

ವಿಮಾನ ದುರಂತದ ತನಿಖೆ ಪ್ರಗತಿಯಲ್ಲಿದೆ. AAIB ತನ್ನ ತನಿಖೆ ಪೂರ್ಣಗೊಳಿಸುವ ಮೊದಲೇ ಇಂತಹ ಊಹಾಪೋಹ ಹರಡುವುದು ತನಿಖೆಯನ್ನು ದಿಕ್ಕು ತಪ್ಪಿಸಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. ತಾಂತ್ರಿಕ ಮತ್ತು ಮಾನವ ಸಹಜ ತಪ್ಪುಗಳ ಬಗ್ಗೆ ಸಮಗ್ರ ಮಾಹಿತಿಯು ಅಂತಿಮ ವರದಿಯಲ್ಲಿ ಲಭ್ಯವಾಗಲಿದೆ ಎಂದು ಹೇಳಿದೆ.

Read More
Next Story