
ಪತ್ರಕರ್ತ ಅಮಿತ್ ಯಾದವ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಪ್ರಕರಣದ ಮುಂದಿನ ವಿಚಾರಣೆಗೆ ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠ ತಡೆ ನೀಡಿದೆ.
ಶಾಲೆಯ ಅವ್ಯವಸ್ಥೆ ವರದಿ ಮಾಡಿದ ಪತ್ರಕರ್ತನ ವಿರುದ್ಧದ ಎಫ್‌ಐಆರ್‌ಗೆ ಅಲಹಾಬಾದ್ ಹೈಕೋರ್ಟ್ ತಡೆ
ಶಾಲೆಯ ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸುವ ವೈಯಕ್ತಿಕ ಪ್ರಮಾಣಪತ್ರ ಸಲ್ಲಿಸುವಂತೆ ಮೂಲ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್ ಸೂಚಿಸಿದೆ.
ಲಖನೌ ಸರ್ಕಾರಿ ಶಾಲೆಯ ದುಸ್ಥಿತಿ ಕುರಿತು ವರದಿ ಮಾಡಿದ್ದ ಪತ್ರಕರ್ತ ಅಮಿತ್ ಯಾದವ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಪ್ರಕರಣದ ಮುಂದಿನ ವಿಚಾರಣೆಗೆ ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠ ತಡೆ ನೀಡಿದೆ. ಪೊಲೀಸ್ ಕ್ರಮವು ಪ್ರತೀಕಾರದ ಕ್ರಮದಂತೆ ಕಾಣುತ್ತಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಗಳಾದ ಅಬ್ದುಲ್ ಮೊಯಿನ್ ಮತ್ತು ಪ್ರಮೋದ್ ಕುಮಾರ್ ಶ್ರೀವಾಸ್ತವ ಅವರಿದ್ದ ಪೀಠ, ಸರ್ಕಾರಿ ಶಾಲೆಯಲ್ಲಿನ ಕೊರತೆಗಳನ್ನು ಸಾರ್ವಜನಿಕರ ಗಮನಕ್ಕೆ ತಂದ ಬಳಿಕ ಪತ್ರಕರ್ತನ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ‘ಸಂದೇಶವಾಹಕನನ್ನೇ ಕೊಲ್ಲುವ’ ಕ್ರಮದಂತಿದೆ ಎಂದು ಹೇಳಿದೆ.
ಗೋಸಾಯಿಗಂಜ್ ಪೊಲೀಸ್ ಠಾಣೆಯಲ್ಲಿ ಪತ್ರಕರ್ತ ಅಮಿತ್ ಯಾದವ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ತಮ್ಮ ವೃತ್ತಿಯ ಭಾಗವಾಗಿ ಗೋಸಾಯಿಗಂಜ್‌ನ ಬೇಗರಿಯಾಮೌನಲ್ಲಿರುವ ಮೇಲ್ದರ್ಜೆ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ್ದ ಯಾದವ್, ಶಾಲೆಯ ಶೌಚಾಲಯಗಳು ಶಿಥಿಲಾವಸ್ಥೆಯಲ್ಲಿರುವುದನ್ನು ಗಮನಿಸಿದ್ದರು ಎಂದು ಅವರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಶಾಲೆಯಲ್ಲಿ ಶೌಚಾಲಯ, ಕುಡಿಯುವ ನೀರಿನ ಸಮಸ್ಯೆ
ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯೂ ಇರಲಿಲ್ಲ ಎಂದು ಯಾದವ್ ಆರೋಪಿಸಿದ್ದರು. ಶಾಲೆಯ ಪರಿಸ್ಥಿತಿ ಕುರಿತು ಶಿಕ್ಷಕರನ್ನು ಸಂದರ್ಶಿಸಿ ವರದಿ ಪ್ರಕಟಿಸಿದ್ದರು. ಎಫ್‌ಐಆರ್ ದಾಖಲಿಸುವ ನಾಲ್ಕು ದಿನಗಳ ಮೊದಲು, ಅಂದರೆ ಆಗಸ್ಟ್ 24ಕ್ಕೂ ಮುನ್ನ ವರದಿ ಪ್ರಕಟವಾಗಿತ್ತು ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.
ವಾದ ಆಲಿಸಿದ ನ್ಯಾಯಾಲಯ, ಸರ್ಕಾರಿ ಶಾಲೆಯಲ್ಲಿನ ಕೊರತೆಗಳನ್ನು ಎತ್ತಿ ತೋರಿಸಿದ ಪತ್ರಕರ್ತನ ವಿರುದ್ಧದ ಎಫ್‌ಐಆರ್ ಮೇಲ್ನೋಟಕ್ಕೆ ಪ್ರತೀಕಾರದ ಕ್ರಮವಾಗಿ ಕಂಡುಬರುತ್ತಿದೆ ಎಂದು ಹೇಳಿದೆ.
ಶಾಲೆಯ ಪ್ರಸ್ತುತ ಸ್ಥಿತಿ ಕುರಿತು ವರದಿ ಸಲ್ಲಿಸಲು ಸೂಚನೆ
ಶಾಲೆಯ ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸುವ ವೈಯಕ್ತಿಕ ಪ್ರಮಾಣಪತ್ರ ಸಲ್ಲಿಸುವಂತೆ ಮೂಲ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್ ಸೂಚಿಸಿದೆ. ಶಾಲಾ ಆವರಣದ ಛಾಯಾಚಿತ್ರಗಳನ್ನೂ ಪ್ರಮಾಣಪತ್ರದೊಂದಿಗೆ ಸಲ್ಲಿಸುವಂತೆ ನಿರ್ದೇಶನ ನೀಡಿದೆ. ಇದೇ ವೇಳೆ, ಪತ್ರಕರ್ತನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದ ಮುಂದಿನ ಪ್ರಕ್ರಿಯೆಗಳಿಗೆ ನ್ಯಾಯಾಲಯ ತಡೆ ನೀಡಿದೆ.

