
ಆಗ್ರಾದಲ್ಲಿ ದೃಶ್ಯಂ ಮಾದರಿ ಕೊಲೆ: ಕುಡುಕ ಗಂಡನನ್ನು ಮುಗಿಸಿ ಬಾತ್‌ರೂಮ್ ನೆಲದಡಿ ಹೂತಿಟ್ಟ ಪತ್ನಿ
ಉತ್ತರ ಪ್ರದೇಶದ ಆಗ್ರಾದಲ್ಲಿ ಕುಡುಕ ಪತಿಯ ಕಿರುಕುಳಕ್ಕೆ ಬೇಸತ್ತ ಪತ್ನಿ ರೂಬಿ, ಗಂಡ ಸುರೇಂದ್ರ ಶರ್ಮನನ್ನು ಕೊಲೆ ಮಾಡಿ ಮನೆಯ ಬಾತ್‌ರೂಮ್ ನೆಲದಡಿ ಹೂತು ಹಾಕಿದ್ದಾಳೆ. 45 ದಿನಗಳ ಬಳಿಕ ಕ್ರೌರ್ಯ ಬಯಲಾಗಿದೆ.
ಉತ್ತರ ಪ್ರದೇಶದ ಆಗ್ರಾದ ಸಿಕಂದರಾ ಪ್ರದೇಶದಲ್ಲಿ ಸಿನಿಮಾ ಸ್ಟೈಲ್‌ನಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣವೊಂದು ಬರೋಬ್ಬರಿ ಒಂದೂವರೆ ತಿಂಗಳ (45 ದಿನಗಳು) ಬಳಿಕ ಬೆಳಕಿಗೆ ಬಂದಿದೆ. ನಾಪತ್ತೆಯಾಗಿದ್ದಾನೆ ಎಂದು ಇಡೀ ಕುಟುಂಬ ಮತ್ತು ಪೊಲೀಸರು ಹುಡುಕುತ್ತಿದ್ದ ವ್ಯಕ್ತಿಯನ್ನು ಆತನ ಪತ್ನಿಯೇ ಕೊಲೆ ಮಾಡಿ, ಸ್ವಂತ ಮನೆಯ ಬಾತ್‌ರೂಮ್‌ನಲ್ಲಿ ಹೂತಿಟ್ಟಿರುವ ಆಘಾತಕಾರಿ ಘಟನೆ ಬಯಲಾಗಿದೆ!
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಪತ್ನಿ ರೂಬಿಯನ್ನು ಬಂಧಿಸಿದ್ದು, ಮೃತ ಪತಿಯನ್ನು ಸುರೇಂದ್ರ ಶರ್ಮಾ ಎಂದು ಗುರುತಿಸಲಾಗಿದೆ.
45 ದಿನಗಳ ಕಾಲ ಪೊಲೀಸರ ಕಣ್ಣಿಗೆ ಮಣ್ಣು ಎರೆಚಿದ್ದ ಪತ್ನಿ
ಸುರೇಂದ್ರ ಶರ್ಮಾ ನಾಪತ್ತೆಯಾದ ದಿನವೇ ಆತನ ಸಹೋದರ ಅನಿಲ್ ಶರ್ಮಾ ಸಿಕಂದರಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಪೊಲೀಸರು ಕಳೆದ 45 ದಿನಗಳಿಂದ ಸುರೇಂದ್ರನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದರು. ತನಿಖೆಯ ಭಾಗವಾಗಿ ಪೊಲೀಸರು ಹಲವು ಬಾರಿ ಸುರೇಂದ್ರನ ಮನೆಗೆ ಭೇಟಿ ನೀಡಿದ್ದರು. ಆದರೆ, ತಾವು ಬಂದು ಹೋಗುತ್ತಿದ್ದ ಮನೆಯ ಬಾತ್‌ರೂಮ್ ನೆಲದಡಿಯೇ ಹೆಣ ಹೂತಿಡಲಾಗಿದೆ ಎಂಬ ಸಣ್ಣ ಸುಳಿವು ಕೂಡ ಪೊಲೀಸರಿಗೆ ಸಿಕ್ಕಿರಲಿಲ್ಲ!
ಕೊಲೆಗೆ ಕಾರಣವೇನು? ವರ್ಷಗಳ ಕಾಲ ನಡೆದಿದ್ದ ದೌರ್ಜನ್ಯ
ಪೊಲೀಸ್ ವಿಚಾರಣೆ ವೇಳೆ ಆರೋಪಿ ರೂಬಿ ತನ್ನ ಗಂಡನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದು, ಅದಕ್ಕೆ ಕಾರಣವನ್ನೂ ಬಿಚ್ಚಿಟ್ಟಿದ್ದಾಳೆ. ಸುರೇಂದ್ರ ಶರ್ಮಾ ಯಾವುದೇ ಕೆಲಸವಿಲ್ಲದೆ ಖಾಲಿ ಇದ್ದ ಹಾಗೂ ಕುಡಿತದ ದಾಸನಾಗಿದ್ದ. ಪ್ರತಿದಿನ ಕುಡಿದು ಬಂದು ಪತ್ನಿ ರೂಬಿ ಮೇಲೆ ತೀವ್ರವಾಗಿ ಹಲ್ಲೆ ನಡೆಸುತ್ತಿದ್ದ. ಇಡೀ ಕುಟುಂಬ ಸುರೇಂದ್ರನ ತಾಯಿಗೆ ಬರುತ್ತಿದ್ದ ಪೆನ್ಷನ್ ಹಣದಲ್ಲೇ ಜೀವನ ಸಾಗಿಸುತ್ತಿತ್ತು.
ವರ್ಷಗಳಿಂದ ಗಂಡನ ದೈಹಿಕ ಮತ್ತು ಮಾನಸಿಕ ದೌರ್ಜನ್ಯವನ್ನು ಸಹಿಸಿಕೊಂಡಿದ್ದ ರೂಬಿ ಮೇ 26 ರಂದು ತಾಳ್ಮೆ ಕಳೆದುಕೊಂಡಿದ್ದಾಳೆ. ಅಂದು ಕೂಡ ಸುರೇಂದ್ರ ಕುಡಿದು ಬಂದು ಅಮಾನವೀಯವಾಗಿ ಥಳಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ರೂಬಿ, ಅಂದೇ ಆತನನ್ನು ಮುಗಿಸಲು ನಿರ್ಧರಿಸಿ ಕೊಲೆ ಮಾಡಿದ್ದಾಳೆ. ಸಾಕ್ಷ್ಯ ನಾಶಪಡಿಸಲು ಬಾತ್‌ರೂಮ್‌ನೊಳಗೆ ಗುಂಡಿ ತೋಡಿ ಗಂಡನ ಹೆಣವನ್ನು ಹೂತು ಹಾಕಿದ್ದಾಳೆ.
ಅತ್ತೆಯ ಮುಂದೆ ರಹಸ್ಯ ಬಿಚ್ಚಿಟ್ಟಿದ್ದೇ ಆಪತ್ತು
ಗುರುವಾರ ಕೂಡ ಪೊಲೀಸರು ತನಿಖೆಯ ಭಾಗವಾಗಿ ರೂಬಿ ಮನೆಗೆ ಬಂದು ಹೋಗಿದ್ದರು. ಪೊಲೀಸರು ಹೋದ ಬಳಿಕ ಅಂದು ರಾತ್ರಿ ರೂಬಿಗೆ ತಡೆಯಲಾಗದೆ, ತನ್ನ ಗಂಡ ಎಲ್ಲೂ ನಾಪತ್ತೆಯಾಗಿಲ್ಲ, ನಾನೇ ಆತನನ್ನು ಕೊಂದು ಮನೆಯೊಳಗೆ ಹೂತಿಟ್ಟಿದ್ದೇನೆ ಎಂದು ತನ್ನ ಅತ್ತೆಯ (ಸುರೇಂದ್ರನ ತಾಯಿ) ಮುಂದೆ ಕಣ್ಣೀರಿಡುತ್ತಾ ನಿಜ ಒಪ್ಪಿಕೊಂಡಿದ್ದಾಳೆ. ತಕ್ಷಣವೇ ಸುರೇಂದ್ರನ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ರೂಬಿಯನ್ನು ಕಸ್ಟಡಿಗೆ ಪಡೆದಿದ್ದಾರೆ.
ಬಾತ್‌ರೂಮ್ ಅಗೆದಾಗ ಸಿಕ್ಕಿತು ಅಸ್ಥಿಪಂಜರ
ಆರೋಪಿ ಮಹಿಳೆ ನೀಡಿದ ಮಾಹಿತಿ ಆಧರಿಸಿ ಪೊಲೀಸರು ತಹಶೀಲ್ದಾರ್ ಸಮ್ಮುಖದಲ್ಲಿ ಮನೆಯ ಬಾತ್‌ರೂಮ್ ನೆಲವನ್ನು ಅಗೆದಿದ್ದಾರೆ. ಈ ವೇಳೆ ಸುರೇಂದ್ರ ಶರ್ಮಾ ಅವರದ್ದು ಎನ್ನಲಾದ ಅಸ್ಥಿಪಂಜರ ಪತ್ತೆಯಾಗಿದೆ. ಸದ್ಯ ಅಸ್ಥಿಪಂಜರವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಕೊಲೆಗೆ ರೂಬಿಗೆ ಬೇರೆ ಯಾರಾದರೂ ಸಾಥ್ ನೀಡಿದ್ದಾರಾ ಎಂಬ ದೃಷ್ಟಿಯಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

