
ಒಡಿಶಾದ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ: 10 ರೋಗಿಗಳ ಸಾವು, 11 ಸಿಬ್ಬಂದಿಗೆ ಸುಟ್ಟ ಗಾಯ
Hospital Fire accident| ಒಡಿಶಾದ ಕಟಕ್‌ನಲ್ಲಿರುವ ಎಸ್‌ಸಿಬಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡು 10 ರೋಗಿಗಳು ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆ ವೇಳೆ 11 ಸಿಬ್ಬಂದಿಗೆ ಗಾಯವಾಗಿದ್ದು, ಸಿಎಂ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ.
ಒಡಿಶಾದ ಕಟಕ್‌ನಲ್ಲಿರುವ ಪ್ರಸಿದ್ಧ ಎಸ್‌ಸಿಬಿ (SCB) ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಟ್ರಾಮಾ ಕೇರ್ ಐಸಿಯು (ICU) ವಿಭಾಗದಲ್ಲಿ ಸೋಮವಾರ ಬೆಳಿಗ್ಗೆ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 10 ರೋಗಿಗಳು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 11 ಆಸ್ಪತ್ರೆ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಘಟನೆಯ ವಿವರ
ಸೋಮವಾರ ಬೆಳಗ್ಗೆ ಐಸಿಯು ವಿಭಾಗದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಆವರಿಸುತ್ತಿದ್ದಂತೆ ಆಸ್ಪತ್ರೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಐಸಿಯುನಲ್ಲಿದ್ದ ರೋಗಿಗಳನ್ನು ಸುರಕ್ಷಿತವಾಗಿ ಹೊರತರಲು ಪ್ರಯತ್ನಿಸುತ್ತಿದ್ದಾಗ 11 ಮಂದಿ ಆಸ್ಪತ್ರೆ ಸಿಬ್ಬಂದಿ ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ ಎಂದು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ತಿಳಿಸಿದ್ದಾರೆ.
#WATCH | Odisha: A fire broke out at Trauma Care ICU of S.C.B. Medical College and Hospital in Cuttack. Fire brigade present at the spot for firefighting operations. Visuals from the spot. More details awaited. pic.twitter.com/KZVF5wOy4V
— ANI (@ANI) March 16, 2026
ರಕ್ಷಣಾ ಕಾರ್ಯಾಚರಣೆ
ಘಟನಾ ಸ್ಥಳಕ್ಕೆ ಹಲವಾರು ಅಗ್ನಿಶಾಮಕ ವಾಹನಗಳು ಧಾವಿಸಿದ್ದು, ಬೆಂಕಿ ನಂದಿಸುವ ಮತ್ತು ರೋಗಿಗಳನ್ನು ಸ್ಥಳಾಂತರಿಸುವ ಕಾರ್ಯಾಚರಣೆಯಲ್ಲಿ ನಿರತವಾಗಿವೆ. ವಿಷಯ ತಿಳಿಯುತ್ತಿದ್ದಂತೆಯೇ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ಘಟನಾ ಸ್ಥಳಕ್ಕೆ ಧಾವಿಸಿದ್ದು, ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.
ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಭೀತಿಯಿದ್ದು, ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣವೇನು ಎಂಬುದು ಇನ್ನು ತಿಳಿದುಬಂದಿಲ್ಲ.

