
ನೀತಿ ಆಯೋಗದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
ನೀತಿ ಆಯೋಗ ಸಭೆಯಲ್ಲಿ ಹೊಸ ಇತಿಹಾಸ: ಬಹಿಷ್ಕಾರವಿಲ್ಲದೆ 28 ರಾಜ್ಯಗಳ ಸಿಎಂಗಳು ಭಾಗಿ!
ಹಿಂದಿನ ವರ್ಷಗಳಲ್ಲಿ ತಮಿಳುನಾಡು, ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ಕೇರಳದಂತಹ ರಾಜ್ಯಗಳು ಕೇಂದ್ರದೊಂದಿಗೆ ವಿವಿಧ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ನೀತಿ ಆಯೋಗದ ಸಭೆಗಳನ್ನು ಬಹಿಷ್ಕರಿಸಿದ್ದವು.
ದೇಶದ ಒಕ್ಕೂಟ ವ್ಯವಸ್ಥೆಗೆ ಹೊಸ ಇತಿಹಾಸ ಬರೆಯುವಂತಹ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ನೀತಿ ಆಯೋಗದ 11ನೇ ಆಡಳಿತ ಮಂಡಳಿ ಸಭೆಯಲ್ಲಿಇದೇ ಮೊದಲ ಬಾರಿಗೆ ದೇಶದ ಎಲ್ಲಾ 28 ರಾಜ್ಯಗಳ ಮುಖ್ಯಮಂತ್ರಿಗಳು ಒಟ್ಟಾಗಿ ಭಾಗವಹಿಸುವ ಮೂಲಕ ಸೌಹಾರ್ದಯುತ ವಾತಾವರಣಕ್ಕೆ ಸಾಕ್ಷಿಯಾದರು.
ಯಾವುದೇ ಬಹಿಷ್ಕಾರ ಅಥವಾ ಗೈರುಹಾಜರಿ ಇಲ್ಲದೆ ನಡೆದ ಈ ಸಭೆಯಲ್ಲಿ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು, ಪ್ರಧಾನಿ ಮತ್ತು ಕೇಂದ್ರ ಸಚಿವರೊಂದಿಗೆ ದೇಶದ ಅಭಿವೃದ್ಧಿ ಕುರಿತು ಸುದೀರ್ಘ ಚರ್ಚೆ ನಡೆಸಿದರು.
ಪ್ರತಿಪಕ್ಷ ಆಡಳಿತದ ರಾಜ್ಯಗಳ ಹೊಸ ಸಿಎಂಗಳು ಭಾಗಿ
ಹಿಂದಿನ ವರ್ಷಗಳಲ್ಲಿ ತಮಿಳುನಾಡು, ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ಕೇರಳದಂತಹ ರಾಜ್ಯಗಳು ಕೇಂದ್ರದೊಂದಿಗೆ ವಿವಿಧ ಭಿನ್ನಾಭಿಪ್ರಾಯದ ಕಾರಣದಿಂದಾಗಿ ನೀತಿ ಆಯೋಗದ ಸಭೆಗಳನ್ನು ಬಹಿಷ್ಕರಿಸಿದ್ದವು ಅಥವಾ ಗೈರಾಗಿದ್ದವು. (ಉದಾಹರಣೆಗೆ 2024 ರಲ್ಲಿ 10 ಮುಖ್ಯಮಂತ್ರಿಗಳು ಸಭೆಗೆ ಬಂದಿರಲಿಲ್ಲ). ಆದರೆ ಈ ಬಾರಿ ಪರಿಸ್ಥಿತಿ ಸಂಪೂರ್ಣ ಬದಲಾಗಿತ್ತು.
ಕರ್ನಾಟಕದ ಸಿಎಂ ಡಿ.ಕೆ. ಶಿವಕುಮಾರ್, ತಮಿಳುನಾಡಿನ ಸಿಎಂ ಸಿ. ಜೋಸೆಫ್ ವಿಜಯ್, ಪಶ್ಚಿಮ ಬಂಗಾಳದ ಸಿಎಂ ಸುವೇಂದು ಅಧಿಕಾರಿ ಹಾಗೂ ಕೇರಳದ ಸಿಎಂ ವಿ.ಡಿ. ಸತೀಶನ್ ಸೇರಿದಂತೆ ಹೊಸದಾಗಿ ಚುನಾಯಿತರಾದ ಮುಖ್ಯಮಂತ್ರಿಗಳು ಮೊದಲ ಬಾರಿಗೆ ಸಭೆಯಲ್ಲಿ ಪಾಲ್ಗೊಂಡರು. ಇವರಲ್ಲದೆ ಹಿಮಾಚಲ ಪ್ರದೇಶ, ತೆಲಂಗಾಣ ಹಾಗೂ ಪಂಜಾಬ್‌ನ ಮುಖ್ಯಮಂತ್ರಿಗಳೂ ಸಭೆಯಲ್ಲಿ ಹಾಜರಿದ್ದು ಗಮನ ಸೆಳೆದರು. ಅಧಿಕಾರಿಗಳ ಪ್ರಕಾರ, ಇಡೀ ಸಭೆಯಲ್ಲಿ ಯಾವುದೇ ರಾಜಕೀಯ ಘರ್ಷಣೆಗಳು ನಡೆಯದೆ ಕೇವಲ ದೇಶದ ಪ್ರಗತಿಯ ಮೇಲಷ್ಟೇ ಚರ್ಚೆಗಳು ಕೇಂದ್ರೀಕೃತವಾಗಿದ್ದವು.
ನೀತಿ ಆಯೋಗದ ಸಭೆಯ ನಂತರ ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಪ್ರಧಾನಿ ಮೋದಿ ಹಲವು ವಿಷಯಗಳ ಬಗ್ಗೆ ಚರ್ಚಿಸಿದರು.
'ವಿಕ್ಷಿತ್ ಭಾರತ್'ಗಾಗಿ ಪ್ರಧಾನಿ ಮೋದಿ ಕರೆ
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, "ದೇಶದ ಎಲ್ಲಾ ರಾಜ್ಯಗಳೂ ಸಮಾನವಾಗಿ ಅಭಿವೃದ್ಧಿ ಹೊಂದದೆ ಭಾರತವನ್ನು 'ವಿಕ್ಷಿತ್ ಭಾರತ' (ಅಭಿವೃದ್ಧಿ ಹೊಂದಿದ ಭಾರತ) ಮಾಡಲು ಸಾಧ್ಯವಿಲ್ಲ" ಎಂದು ಸ್ಪಷ್ಟಪಡಿಸಿದರು. ರಾಜ್ಯಗಳಿಗೆ ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸಲು 'ಸುಲಭ ವಾಣಿಜ್ಯ ವ್ಯವಹಾರ'ಪ್ರಕ್ರಿಯೆಗೆ ಒತ್ತು ನೀಡುವಂತೆ ಅವರು ಕರೆ ನೀಡಿದರು.
ಸಭೆಯ ಪ್ರಮುಖ ನಿರ್ಧಾರಗಳು
ಈ ವರ್ಷದ ಸಭೆಯು "ವಿಕ್ಷಿತ್ ಭಾರತ @2047 ಕ್ಕಾಗಿ ಅಂತರ್ಗತ ಮಾನವ ಅಭಿವೃದ್ಧಿ" ಎಂಬ ವಿಷಯದ ಮೇಲೆ ಆಧಾರಿತವಾಗಿತ್ತು. ಮನೆಗಳ ಛಾವಣಿಯ ಮೇಲೆ ಸೌರಶಕ್ತಿ ಅಳವಡಿಕೆ ಸೇರಿದಂತೆ ದೇಶದ ಇಂಧನ ಭದ್ರತೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಭಾರತದ ನಗರಗಳು ವೇಗವಾಗಿ ಬೆಳೆಯುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ವ್ಯವಸ್ಥಿತ ಮತ್ತು ಯೋಜಿತ ನಗರೀಕರಣದ ಅಗತ್ಯವಿದೆ ಎಂಬುದನ್ನು ಕೇಂದ್ರ ಮತ್ತು ರಾಜ್ಯಗಳು ಒಪ್ಪಿಕೊಂಡವು. ಈಗಾಗಲೇ ದೇಶದ 20 ರಾಜ್ಯಗಳು 'ವಿಕ್ಷಿತ್ ಭಾರತ್' ದೃಷ್ಟಿಕೋನಕ್ಕಾಗಿ ತಮ್ಮದೇ ಆದ ಪ್ರತ್ಯೇಕ ಮಾರ್ಗಸೂಚಿಯನ್ನು ಸಿದ್ಧಪಡಿಸಿದ್ದು, ಉಳಿದ ರಾಜ್ಯಗಳು ಮುಂದಿನ 10 ತಿಂಗಳಲ್ಲಿ ಇದನ್ನು ಪೂರ್ಣಗೊಳಿಸಲಿವೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ಅಶೋಕ್ ಕುಮಾರ್ ಲಹಿರಿ ತಿಳಿಸಿದ್ದಾರೆ.
ಯುವಜನರಿಗೆ ಉದ್ಯೋಗ ಕಲ್ಪಿಸುವುದು, ಕೌಶಲ್ಯಾಭಿವೃದ್ಧಿ ಹಾಗೂ ಮಹಿಳಾ ಸಬಲೀಕರಣದ (ಲಖ್ಪತಿ ದೀದಿಯರ ಸಂಖ್ಯೆಯನ್ನು 3 ಕೋಟಿಯಿಂದ 6 ಕೋಟಿಗೆ ಹೆಚ್ಚಿಸುವುದು) ಮುಂತಾದ ಪ್ರಮುಖ ಆರ್ಥಿಕ ಸುಧಾರಣೆಗಳಿಗೆ ಸಭೆಯಲ್ಲಿ ಒಮ್ಮತದ ಬೆಂಬಲ ವ್ಯಕ್ತವಾಯಿತು.

