
ಜೆಡಿಯು ಸದಸ್ಯತ್ವ ಪಡೆದ ಬಿಹಾರ ಸಿಎಂ ನಿತೀಶ್‌ಕುಮಾರ್ ಪುತ್ರ ನಿಶಾಂತ್
ಬಿಹಾರ ರಾಜಕಾರಣದಿಂದ ದೂರವಿದ್ದ ನಿಶಾಂತ್ ಕುಮಾರ್ ಅವರು, ಈಗ ಸಕ್ರಿಯ ರಾಜಕಾರಣಕ್ಕೆ ಇಳಿಯುವ ಮೂಲಕ 'ವಂಶಪಾರಂಪರ್ಯ' ರಾಜಕಾರಣದ ಚರ್ಚೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದ್ದಾರೆ.
ಬಿಹಾರ ರಾಜಕಾರಣಕ್ಕೆ ನಿತೀಶ್ ಪುತ್ರ ನಿಶಾಂತ್ ಕುಮಾರ್ ಪ್ರವೇಶ: ಜೆಡಿಯು ಸದಸ್ಯತ್ವ ಸ್ವೀಕಾರ
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಷ್ಟ್ರ ರಾಜಕಾರಣಕ್ಕೆ ಮರಳಿದ ಬೆನ್ನಲ್ಲೇ, ಅವರ ಪುತ್ರ ನಿಶಾಂತ್ ಕುಮಾರ್ ಜೆಡಿಯು (JDU) ಸದಸ್ಯತ್ವ ಪಡೆಯುವ ಮೂಲಕ ಅಧಿಕೃತವಾಗಿ ರಾಜಕೀಯ ರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.
ಪಾಟ್ನಾದ ಜೆಡಿಯು ಕೇಂದ್ರ ಕಚೇರಿಯಲ್ಲಿ ಭಾನುವಾರ ನಡೆದ ವಿಶೇಷ ಕಾರ್ಯಕ್ರಮದಲ್ಲಿ ನಿಶಾಂತ್ ಕುಮಾರ್ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಈ ಬೆಳವಣಿಗೆಯು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದ್ದು, ಅವರನ್ನು ನಿತೀಶ್ ಕುಮಾರ್ ಅವರ ಉತ್ತರಾಧಿಕಾರಿ ಎಂದೇ ಬಿಂಬಿಸಲಾಗುತ್ತಿದೆ.
ಹೊಸ ಯುಗದ ಆರಂಭ
ಇಷ್ಟು ದಿನ ಬಿಹಾರ ರಾಜಕಾರಣದಿಂದ ದೂರವಿದ್ದ ನಿಶಾಂತ್ ಕುಮಾರ್ ಅವರು ಸಕ್ರಿಯ ರಾಜಕಾರಣಕ್ಕೆ ಇಳಿಯುವ ಮೂಲಕ, ರಾಜ್ಯದಲ್ಲಿ 'ವಂಶಪಾರಂಪರ್ಯ' ರಾಜಕಾರಣದ ಚರ್ಚೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದ್ದಾರೆ. ಜೆಡಿಯು ಕಾರ್ಯಾಧ್ಯಕ್ಷ ಸಂಜಯ್ ಝಾ ಅವರು ನಿಶಾಂತ್ ಅವರಿಗೆ ಪಕ್ಷದ ಪ್ರಾಥಮಿಕ ಸದಸ್ಯತ್ವ ನೀಡಿ ಬರಮಾಡಿಕೊಂಡರು.
ವರದಿಗಳ ಪ್ರಕಾರ, ನಿಶಾಂತ್ ಅವರ ಸೇರ್ಪಡೆ ಕಾರ್ಯಕ್ರಮವು ಮೊದಲು ಮಧ್ಯಾಹ್ನ 1 ಗಂಟೆಗೆ ನಿಗದಿಯಾಗಿತ್ತು. ಆದರೆ, ಶುಭ ಮುಹೂರ್ತದ ಕಾರಣದಿಂದಾಗಿ ಕಾರ್ಯಕ್ರಮವನ್ನು ಅರ್ಧ ಗಂಟೆ ಮುಂದೂಡಿ, ಮಧ್ಯಾಹ್ನ 1:30ಕ್ಕೆ ಅವರು ಸದಸ್ಯತ್ವ ಪಡೆದರು. ನಿಶಾಂತ್ ಪಕ್ಷ ಸೇರುತ್ತಿದ್ದಂತೆ ಕಚೇರಿ ಆವರಣದಲ್ಲಿದ್ದ ಕಾರ್ಯಕರ್ತರು ಹೂಮಳೆಗರೆದು, ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಿಶಾಂತ್ ಕುಮಾರ್, "ನನ್ನ ತಂದೆ ಕಳೆದ 20 ವರ್ಷಗಳಿಂದ ಬಿಹಾರದ ಜನತೆಗೆ ಸಲ್ಲಿಸಿದ ಸೇವೆಯನ್ನು ನಾನು ಮುಂದುವರಿಸಲಿದ್ದೇನೆ. ಅವರ ನಿರ್ಧಾರವನ್ನು ಗೌರವಿಸಿ, ಜನರ ನಂಬಿಕೆಗೆ ತಕ್ಕಂತೆ ಶ್ರಮಿಸುತ್ತೇನೆ," ಎಂದು ತಿಳಿಸಿದರು.
ನಿಶಾಂತ್‌ಗೆ ಉಪಮುಖ್ಯಮಂತ್ರಿ ಹುದ್ದೆ?
ನಿಶಾಂತ್ ಕುಮಾರ್ ಅವರ ದಿಢೀರ್ ರಾಜಕೀಯ ಪ್ರವೇಶವು ಬಿಹಾರ ರಾಜಕೀಯದಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ನಿತೀಶ್ ಕುಮಾರ್ ಅವರು ರಾಜ್ಯಸಭೆಗೆ ಆಯ್ಕೆಯಾಗಲಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸ್ಥಾನ ಬಿಜೆಪಿಗೆ ಬಿಟ್ಟುಕೊಟ್ಟು, ತಮ್ಮ ಪುತ್ರನಿಗೆ ಉಪಮುಖ್ಯಮಂತ್ರಿ (DCM) ಹುದ್ದೆ ಕೊಡಿಸುವ ಉದ್ದೇಶದಿಂದಲೇ ಅವರನ್ನು ರಾಜಕಾರಣಕ್ಕೆ ತರಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ತೆರೆಮರೆಯಲ್ಲಿದ್ದ ನಿಶಾಂತ್ ಈಗ ಅಧಿಕೃತವಾಗಿ ಕಣಕ್ಕಿಳಿದಿರುವುದು ಜೆಡಿಯು ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಿದೆ.

