
ಸಾಂದರ್ಭಿಕ ಚಿತ್ರ
ಏಪ್ರಿಲ್ 1, 2026 ರಿಂದ ಟೋಲ್ ಶುಲ್ಕ ಹೆಚ್ಚಳ: ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್
ಇದು ವಾರ್ಷಿಕ ಸಗಟು ಬೆಲೆ ಸೂಚ್ಯಂಕವನ್ನು (Wholesale Price Index - WPI) ಆಧರಿಸಿ ಪ್ರತಿ ವರ್ಷವೂ ನಡೆಯುವ ವಾಡಿಕೆಯ ಪ್ರಕ್ರಿಯೆಯಾಗಿದೆ ಎಂದು NHAI ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಹಣದುಬ್ಬರ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ವಾಹನ ಸವಾರರಿಗೆ ಮತ್ತೊಂದು ಆಘಾತ ನೀಡಿದೆ. ಏಪ್ರಿಲ್ 1, 2026 ರಿಂದ ಅನ್ವಯವಾಗುವಂತೆ ದೇಶಾದ್ಯಂತ ಟೋಲ್ ಶುಲ್ಕವನ್ನು ಶೇಕಡಾ 3 ರಿಂದ 5 ರಷ್ಟು ಹೆಚ್ಚಿಸಲು ಪ್ರಾಧಿಕಾರ ನಿರ್ಧರಿಸಿದೆ.
ಕರ್ನಾಟಕದಾದ್ಯಂತ ಇರುವ 66 ಟೋಲ್ ಪ್ಲಾಜಾಗಳಲ್ಲಿ ಈ ಹೊಸ ದರಗಳು ಅನ್ವಯವಾಗಲಿವೆ. ಹೊಸ ದರಗಳ ಪ್ರಕಾರ, ಪ್ರತಿ ಪ್ರಯಾಣಕ್ಕೆ ವಾಹನ ಸವಾರರು 5 ರಿಂದ 10 ರೂಪಾಯಿಗಳವರೆಗೆ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದು ವಾರ್ಷಿಕ ಸಗಟು ಬೆಲೆ ಸೂಚ್ಯಂಕವನ್ನು (Wholesale Price Index - WPI) ಆಧರಿಸಿ ಪ್ರತಿ ವರ್ಷವೂ ನಡೆಯುವ ವಾಡಿಕೆಯ ಪ್ರಕ್ರಿಯೆಯಾಗಿದೆ ಎಂದು NHAI ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪ್ರಮುಖ ಹೆದ್ದಾರಿಗಳಲ್ಲಿ ಶುಲ್ಕ ಏರಿಕೆ
ಹೊಸ ಟೋಲ್ ದರವು ಈ ಕೆಳಗಿನ ಪ್ರಮುಖ ಮಾರ್ಗಗಳ ಮೇಲೆ ಪರಿಣಾಮ ಬೀರಲಿದೆ
- ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ: ವಾಹನಗಳ ಆಧಾರದ ಮೇಲೆ ಟೋಲ್ ಶುಲ್ಕ 5 ರಿಂದ 10 ರೂ.ಗಳವರೆಗೆ ಹೆಚ್ಚಳವಾಗಲಿದೆ.
- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ (ಸಾದಹಳ್ಳಿ ಟೋಲ್): ಕಾರುಗಳ ಏಕಮುಖ ಸಂಚಾರಕ್ಕೆ ಶುಲ್ಕ 115 ರೂ.ನಿಂದ 120 ರೂ.ಗೆ ಹಾಗೂ ದ್ವಿಮುಖ ಸಂಚಾರಕ್ಕೆ 170 ರೂ.ನಿಂದ 180 ರೂ.ಗೆ ಏರಿಕೆಯಾಗಲಿದೆ. ಲಘು ವಾಣಿಜ್ಯ ವಾಹನಗಳ ಶುಲ್ಕವೂ ಹೆಚ್ಚಾಗಲಿದೆ.
- ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು-ತಿರುಪತಿ (ಕೋಲಾರ) ಹಾಗೂ ತುಮಕೂರು ರಸ್ತೆಗಳಲ್ಲೂ ಶುಲ್ಕ ಏರಿಕೆಯಾಗುವ ನಿರೀಕ್ಷೆಯಿದೆ.
ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ದರವೂ ದುಬಾರಿ
ಟೋಲ್ ದರದ ಜೊತೆಗೆ, ನಿಯಮಿತವಾಗಿ ಹೆದ್ದಾರಿ ಬಳಸುವವರಿಗೆ ನೀಡಲಾಗುವ 'ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್' (FASTag Annual Pass) ಶುಲ್ಕವನ್ನೂ NHAI ಹೆಚ್ಚಿಸಿದೆ. ಪ್ರಸ್ತುತ ಇರುವ 3,000 ರೂ.ಗಳ ಶುಲ್ಕವನ್ನು 75 ರೂ.ಗಳಷ್ಟು ಹೆಚ್ಚಿಸಲಾಗಿದ್ದು, ಏಪ್ರಿಲ್ 1 ರಿಂದ ಇದು 3,075 ರೂಪಾಯಿಗಳಾಗಲಿದೆ. ಇದು 200 ಟೋಲ್ ಟ್ರಿಪ್‌ಗಳನ್ನು ಒಳಗೊಂಡಿರುತ್ತದೆ.
ನಗದು ರಹಿತ ವ್ಯವಹಾರಕ್ಕೆ ಒತ್ತು
ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಪ್ರಸ್ತಾಪವೂ NHAI ಮುಂದಿದೆ. ಶೀಘ್ರದಲ್ಲೇ ಟೋಲ್ ಶುಲ್ಕವನ್ನು ಕಡ್ಡಾಯವಾಗಿ ಫಾಸ್ಟ್‌ಟ್ಯಾಗ್ ಅಥವಾ UPI ಮೂಲಕವೇ ಪಾವತಿಸಬೇಕಾಗಬಹುದು. ಆದ್ದರಿಂದ, ಫಾಸ್ಟ್‌ಟ್ಯಾಗ್ ನಿಷ್ಕ್ರಿಯವಾಗುವುದನ್ನು ತಪ್ಪಿಸಲು ಕೆವೈಸಿ (KYC) ಮಾಡಿಸುವುದು ಕಡ್ಡಾಯವಾಗಿದೆ.

