ಧರ್ಮೇಂದ್ರ ಪ್ರಧಾನ್ ರಾಜೀನಾಮೆ? ಇಂದು ನಿರ್ಣಾಯಕ ಮಾತುಕತೆ
CJP ಮುಂದಿಟ್ಟಿರುವ ಮೂರು ಪ್ರಮುಖ ಬೇಡಿಕೆಗಳಲ್ಲಿ ಎರಡನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದ್ದು, ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ವಿಚಾರದಲ್ಲಿ ಮಾತ್ರ ಇನ್ನಷ್ಟು ಸಮಯ ಕೋರಿದೆ.
NEET ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಹಿನ್ನೆಲೆಯಲ್ಲಿ ನಡೆಯುತ್ತಿರುವ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಿರ್ಣಾಯಕ ಹಂತ ತಲುಪಿದ್ದು, ಕೇಂದ್ರ ಸರ್ಕಾರ ಮತ್ತು ಕಾಕ್ರೋಚ್ ಜನತಾ ಪಕ್ಷ (CJP) ನಡುವೆ ಇಂದು ಮೂರನೇ ಸುತ್ತಿನ ಮಾತುಕತೆ ನಡೆಯಲಿದೆ. ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳಲ್ಲಿ ಒಂದಾದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಕುರಿತು ಸರ್ಕಾರ ಯಾವ ನಿಲುವು ತಾಳಲಿದೆ ಎಂಬುದರತ್ತ ದೇಶದ ಗಮನ ನೆಟ್ಟಿದೆ.
ಮೂಲಗಳ ಪ್ರಕಾರ, CJP ಮುಂದಿಟ್ಟಿರುವ ಮೂರು ಪ್ರಮುಖ ಬೇಡಿಕೆಗಳಲ್ಲಿ ಎರಡನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದ್ದು, ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ವಿಚಾರದಲ್ಲಿ ಮಾತ್ರ ಇನ್ನಷ್ಟು ಸಮಯ ಕೋರಿದೆ. ಇಂದಿನ ಸಭೆಯ ಫಲಿತಾಂಶ ಮುಂದಿನ ಪ್ರತಿಭಟನೆಯ ದಿಕ್ಕನ್ನು ನಿರ್ಧರಿಸುವ ಸಾಧ್ಯತೆಯಿದೆ.
ದೆಹಲಿಯಲ್ಲಿ ಬಿಗಿ ಭದ್ರತೆ
ಮಾತುಕತೆಯ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ದೆಹಲಿ ಮೆಟ್ರೋ ರೈಲು ನಿಗಮ (DMRC) ಹಲವು ಮೆಟ್ರೋ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಿದ್ದು, ಮದ್ಯದಂಗಡಿಗಳನ್ನು ಮುಂಚಿತವಾಗಿ ಮುಚ್ಚುವಂತೆ ಸೂಚಿಸಿದೆ. ಜೊತೆಗೆ ದೆಹಲಿ ಪೊಲೀಸ್ ಸಿಬ್ಬಂದಿಯ ಸಾಮಾನ್ಯ ರಜೆಗಳನ್ನು ರದ್ದುಗೊಳಿಸಿ, ಸಂಪೂರ್ಣ ಪೊಲೀಸ್ ಪಡೆ ಕರ್ತವ್ಯದಲ್ಲಿ ಇರುವಂತೆ ಆದೇಶಿಸಲಾಗಿದೆ. ಈ ಕ್ರಮಗಳು ಜುಲೈ 20ರಂದು ನಡೆದ 'ಸಂಸದ್ ಚಲೋ' ಪ್ರತಿಭಟನೆಯ ವೇಳೆ ನಡೆದ ಹಿಂಸಾಚಾರದ ಬಳಿಕ ಕೈಗೊಳ್ಳಲಾಗಿದೆ.
ಮೋದಿ ಎರಡನೇ ಇನ್‌ಸ್ಟಾಗ್ರಾಮ್ ರೀಲ್
ಈ ಬೆಳವಣಿಗೆಗಳ ನಡುವೆಯೇ ಪ್ರಧಾನಿ ನರೇಂದ್ರ ಮೋದಿ 24 ಗಂಟೆಗಳೊಳಗೆ ಎರಡನೇ ಇನ್‌ಸ್ಟಾಗ್ರಾಮ್ ರೀಲ್ ಹಂಚಿಕೊಂಡಿದ್ದಾರೆ. NEET ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ತಾವು ಹಂಚಿಕೊಂಡಿದ್ದ ಹಿಂದಿನ ವಿಡಿಯೋಗೆ ದೊರೆತ ಅಭೂತಪೂರ್ವ ಪ್ರತಿಕ್ರಿಯೆಗೆ ಜನರಿಗೆ ಧನ್ಯವಾದ ಸಲ್ಲಿಸಿರುವ ಅವರು, "ನಿಮ್ಮ ಪ್ರೀತಿ ಮತ್ತು ಬೆಂಬಲ ಇದೇ ರೀತಿ ಮುಂದುವರಿಯಲಿ" ಎಂದು ಹೇಳಿದ್ದಾರೆ.
NEET ಕುರಿತ ಪ್ರಧಾನಿ ಮೋದಿ ಅವರ ಮೊದಲ ವಿಡಿಯೋ ಈಗಾಗಲೇ 30 ಕೋಟಿ (300 ಮಿಲಿಯನ್) ವೀಕ್ಷಣೆಗಳನ್ನು ದಾಟಿದ್ದು, ಕೇವಲ 24 ಗಂಟೆಗಳೊಳಗೆ ಅವರ ಇನ್‌ಸ್ಟಾಗ್ರಾಮ್ ಖಾತೆಗೆ ಸುಮಾರು 10 ಲಕ್ಷ ಹೊಸ ಫಾಲೋವರ್ಸ್ ಸೇರ್ಪಡೆಯಾಗಿದ್ದಾರೆ. ಇದೇ ಸಂದರ್ಭದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ಉಪಸ್ಥಿತಿಯನ್ನು ಮತ್ತಷ್ಟು ಬಲಪಡಿಸಿ, ಯುವಜನರೊಂದಿಗೆ ನಿರಂತರ ಸಂಪರ್ಕದಲ್ಲಿರಲು ಸಚಿವರಿಗೆ ಪ್ರಧಾನಿ ಮೋದಿ ಸೂಚನೆ ನೀಡಿರುವುದಾಗಿ ವರದಿಯಾಗಿದೆ.
2,500ಕ್ಕೂ ಹೆಚ್ಚು ಅಪರಾಧ ಹಿನ್ನೆಲೆಯವರ ಗುರುತು
ಜುಲೈ 20ರ ಪ್ರತಿಭಟನೆ ಬಳಿಕ ಜಂತರ್ ಮಂತರ್‌ನಲ್ಲಿ ಅಳವಡಿಸಲಾಗಿರುವ ಫೇಶಿಯಲ್ ರೆಕಗ್ನಿಷನ್ ಸಿಸ್ಟಮ್ (FRS) ಮೂಲಕ ಕಳೆದ ಮೂರು ದಿನಗಳಲ್ಲಿ 2,500ಕ್ಕೂ ಹೆಚ್ಚು ಅಪರಾಧ ಹಿನ್ನೆಲೆಯ ವ್ಯಕ್ತಿಗಳನ್ನು ಗುರುತಿಸಲಾಗಿದೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.

