
ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಗೆ ಬರ್ತಿದ್ದಾರೆ ಸಿಜೆಪಿ ಸ್ಥಾಪಕ ಅಭಿಜೀತ್
ನೀಟ್ ಮಾತ್ರವಲ್ಲದೆ, ಸಿಬಿಎಸ್‌ಇ, ಸಿಯುಇಟಿ ಮತ್ತು ಎಸ್‌ಎಸ್‌ಸಿ ಜಿಡಿ ಮುಂತಾದ ಪ್ರಮುಖ ಪರೀಕ್ಷೆಗಳಲ್ಲಿನ ಆಡಳಿತಾತ್ಮಕ ಲೋಪಗಳನ್ನು ಅಭಿಜೀತ್ ದಿಪ್ಕೆ ಪ್ರಶ್ನಿಸಿದ್ದಾರೆ.
ದೇಶದಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿರುವ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವು ಇದೀಗ ಹೊಸ ತಿರುವು ಪಡೆದುಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಜನಪ್ರಿಯತೆ ಗಳಿಸಿರುವ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ)ಯ ಸ್ಥಾಪಕ ಅಭಿಜೀತ್ ದಿಪ್ಕೆ ಅವರು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಅವರು ಜೂ.6 ರಂದು ಭಾರತಕ್ಕೆ ಆಗಮಿಸಲಿದ್ದಾರೆ.
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನೀಟ್ ಪರೀಕ್ಷಾ ಅಕ್ರಮಗಳ ವಿರುದ್ಧ ಧ್ವನಿ ಎತ್ತುತ್ತಿರುವ ಅಭಿಜೀತ್ ದಿಪ್ಕೆ, ಸೋಮವಾರ ಬಿಡುಗಡೆ ಮಾಡಿದ ವಿಡಿಯೋ ಸಂದೇಶದಲ್ಲಿ ತಮ್ಮ ತೀರ್ಮಾನವನ್ನು ಪ್ರಕಟಿಸಿದ್ದಾರೆ. ನೀಟ್ ಪರೀಕ್ಷೆಯಲ್ಲಿನ ಅವ್ಯವಸ್ಥೆಯಿಂದಾಗಿ ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ ಮತ್ತು ಹಲವು ವಿದ್ಯಾರ್ಥಿಗಳು ಆತ್ಮಹತ್ಯೆಯಂತಹ ತೀವ್ರ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಈ ಎಲ್ಲಕ್ಕೂ ನೈತಿಕ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ದಿಪ್ಕೆ ತಮ್ಮ ಸಂದೇಶದಲ್ಲಿ, ನಾನು ಭಾರತಕ್ಕೆ ಮರಳುತ್ತಿದ್ದೇನೆ. ನನ್ನ ದೇಶದ ವಿದ್ಯಾರ್ಥಿಗಳಿಗಾಗಿ, ನ್ಯಾಯಕ್ಕಾಗಿ ನಾನು ದೆಹಲಿಗೆ ಬರುತ್ತಿದ್ದೇನೆ. ನಾವು ನಮ್ಮ ಸಂವಿಧಾನಬದ್ಧ ಹಕ್ಕನ್ನು ಚಲಾಯಿಸಿ ಶಾಂತಿಯುತವಾಗಿ ಪ್ರತಿಭಟಿಸುತ್ತೇವೆ. ನಾವೆಲ್ಲರೂ ಒಂದಾಗಿ ಧ್ವನಿ ಎತ್ತಿದರೆ, ಸರ್ಕಾರ ನಮ್ಮ ಮಾತನ್ನು ಕೇಳಲೇಬೇಕಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪರೀಕ್ಷಾ ಆಡಳಿತದ ಕುರಿತು ಗಂಭೀರ ಪ್ರಶ್ನೆಗಳು
ಕೇವಲ ನೀಟ್ ಮಾತ್ರವಲ್ಲದೆ, ಸಿಬಿಎಸ್‌ಇ, ಸಿಯುಇಟಿ ಮತ್ತು ಎಸ್‌ಎಸ್‌ಸಿ ಜಿಡಿ ಮುಂತಾದ ಪ್ರಮುಖ ಪರೀಕ್ಷೆಗಳಲ್ಲಿನ ಆಡಳಿತಾತ್ಮಕ ಲೋಪಗಳನ್ನು ದಿಪ್ಕೆ ಪ್ರಶ್ನಿಸಿದ್ದಾರೆ. ಈ ರೀತಿಯ ತಪ್ಪುಗಳು ವಿದ್ಯಾರ್ಥಿಗಳ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ಇಂತಹ ದೊಡ್ಡ ಪ್ರಮಾದ ನಡೆದರೂ ಶಿಕ್ಷಣ ಸಚಿವರು ರಾಜೀನಾಮೆ ನೀಡದಿದ್ದರೆ, ಈ ವ್ಯವಸ್ಥೆಯಲ್ಲಿ ಉತ್ತರದಾಯಿತ್ವವೇ ಇಲ್ಲ ಎಂದರ್ಥ. ವ್ಯವಸ್ಥೆ ಎಷ್ಟೇ ದೊಡ್ಡ ತಪ್ಪುಗಳನ್ನು ಮಾಡಿದರೂ ಅದಕ್ಕೆ ಯಾವುದೇ ಶಿಕ್ಷೆಯಿಲ್ಲ, ಆದರೆ ವಿದ್ಯಾರ್ಥಿಗಳು ಮಾತ್ರ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ಶಾಂತಿಯುತ ಪ್ರತಿಭಟನೆಗೆ ಯೋಜನೆ
ಜೂ.6 ರಂದು ಶನಿವಾರ ಬೆಳಿಗ್ಗೆ ದೆಹಲಿಗೆ ಆಗಮಿಸಲಿರುವ ದಿಪ್ಕೆ, ವಿಮಾನ ನಿಲ್ದಾಣದಿಂದ ನೇರವಾಗಿ ಸಂಸತ್ ಸ್ಟ್ರೀಟ್ ಪೊಲೀಸ್ ಠಾಣೆಗೆ ತೆರಳಿ, ಜಂತರ್ ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಅನುಮತಿ ಕೋರಲಿದ್ದಾರೆ. ತಮ್ಮ ಈ ನಿರ್ಧಾರದ ಬಗ್ಗೆ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಆತಂಕ ವ್ಯಕ್ತಪಡಿಸಿದ್ದು, ಬಂಧನಕ್ಕೊಳಗಾಗುವ ಭೀತಿಯನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ. ಆದರೂ, ತಾವು ಹಿಂಜರಿಯುವುದಿಲ್ಲ ಎಂದು ಅವರು ದೃಢ ನಿರ್ಧಾರ ಕೈಗೊಂಡಿದ್ದಾರೆ. ಅಭಿಜೀತ್ ದಿಪ್ಕೆ ಅವರು ಮಹಾತ್ಮ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್, ಭಗತ್ ಸಿಂಗ್ ಮತ್ತು ಜವಾಹರಲಾಲ್ ನೆಹರು ಅವರ ತತ್ವಗಳಲ್ಲಿ ತಮಗೆ ಅಪಾರ ನಂಬಿಕೆಯಿದೆ ಎಂದು ಹೇಳಿದ್ದಾರೆ. ನಾನು ಭಾರತದ ಸಂವಿಧಾನವನ್ನು ನಂಬುವವನು. ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವುದು ಪ್ರತಿಯೊಬ್ಬ ನಾಗರಿಕನ ಸಂವಿಧಾನಬದ್ಧ ಹಕ್ಕು. ನಾವು ಶಾಂತಿಯುತವಾಗಿ ನಮ್ಮ ಧ್ವನಿಯನ್ನು ಎತ್ತುತ್ತೇವೆ. ಪೊಲೀಸರು ಮತ್ತು ಸರ್ಕಾರ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಸಿಜೆಪಿ
ಅಭಿಜೀತ್ ದಿಪ್ಕೆ ಅವರು ಸ್ಥಾಪಿಸಿದ 'ಕಾಕ್ರೋಚ್ ಜನತಾ ಪಾರ್ಟಿ' ಒಂದು ವ್ಯಂಗ್ಯಚಿತ್ರಣದ ರಾಜಕೀಯ ಸಂಘಟನೆಯಾದರೂ, ಸದ್ಯದ ಸಾಮಾಜಿಕ ಮತ್ತು ರಾಜಕೀಯ ವಿದ್ಯಮಾನಗಳ ಬಗ್ಗೆ ಕಟುವಾದ ಟೀಕೆಗಳನ್ನು ಮಾಡುವ ಮೂಲಕ ದೇಶದ ಯುವಜನತೆಯಲ್ಲಿ ಭಾರಿ ಜನಪ್ರಿಯತೆ ಗಳಿಸಿದೆ. ಈಗ ಈ ಸಂಘಟನೆಯು ಕೇವಲ ವರ್ಚುವಲ್ ಜಗತ್ತಿಗೆ ಸೀಮಿತವಾಗದೆ, ಬೀದಿಗಿಳಿದು ಹೋರಾಡಲು ನಿರ್ಧರಿಸುತ್ತಿರುವುದು ದೆಹಲಿಯ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ನೀಟ್ ಹಗರಣದ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ದಿಪ್ಕೆ ಅವರ ಈ ನಿರ್ಧಾರ ಸರ್ಕಾರಕ್ಕೆ ಮತ್ತಷ್ಟು ಒತ್ತಡವನ್ನು ಉಂಟುಮಾಡಲಿದೆ. ಜೂ.6 ರಂದು ದೆಹಲಿಯಲ್ಲಿ ನಡೆಯಲಿರುವ ಈ ಪ್ರತಿಭಟನೆಗೆ ಎಷ್ಟರ ಮಟ್ಟಿಗೆ ಬೆಂಬಲ ಸಿಗುತ್ತದೆ ಮತ್ತು ಸರ್ಕಾರವು ಈ ಪ್ರತಿಭಟನೆಯನ್ನು ಹೇಗೆ ನಿರ್ವಹಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

