x

ಯುವಜನರ ಹೋರಾಟಕ್ಕೆ ಕೊನೆಗೂ ಮಣಿದ ಕೇಂದ್ರ ಸರ್ಕಾರ; ಯಾಕೆ, ಏನು?

ನೀಟ್ ಪರೀಕ್ಷೆಯ ಅಕ್ರಮದ ವಿರುದ್ಧದ ಹೋರಾಟ ದಿಢೀರನೆ ರೂಪುಗೊಂಡಿದ್ದಲ್ಲ. ಮೇ 3ರಂದು ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾದ ವರದಿಗಳು ಹೊರಬಂದ ತಕ್ಷಣವೇ ವಿದ್ಯಾರ್ಥಿಗಳಿಂದ ಆಕ್ರೋಶ ವ್ಯಕ್ತವಾಗಿತ್ತು.


ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ನೀಟ್ (NEET) ಪರೀಕ್ಷಾ ಅಕ್ರಮ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ, ಯುವಜನತೆ ಮತ್ತು ವಿದ್ಯಾರ್ಥಿಗಳು ನಡೆಸಿದ ನಿರಂತರ ಪ್ರತಿಭಟನೆಗೆ ಕೇಂದ್ರ ಸರ್ಕಾರ ಕೊನೆಗೂ ಮಣಿದಿದೆ. ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಹನ್ನೆರಡು ವರ್ಷಗಳ ಆಡಳಿತದಲ್ಲಿ, ವ್ಯವಸ್ಥೆಯ ವೈಫಲ್ಯ ಅಥವಾ ಅಕ್ರಮದ ಆರೋಪದ ಹಿನ್ನೆಲೆಯಲ್ಲಿ ಸಚಿವರೊಬ್ಬರು ತಲೆದಂಡ ತೆರುತ್ತಿರುವುದು ಇದೇ ಮೊದಲು. ಇದು ಕೇವಲ ರಾಜಕೀಯ ವಿರೋಧ ಪಕ್ಷಗಳ ಹೋರಾಟಕ್ಕಿಂತ ಮಿಗಿಲಾಗಿ, ವಿದ್ಯಾರ್ಥಿಗಳು, ಯುವಜನತೆ ಹಾಗೂ ಸಿಜೆಪಿ (CJP) ಸಂಘಟನೆಯ ನಿರಂತರ ಯತ್ನಕ್ಕೆ ಸಿಕ್ಕ ಜಯ ಎಂದು ವಿಶ್ಲೇಷಿಸಲಾಗುತ್ತಿದೆ.

ನೀಟ್ ಪರೀಕ್ಷೆಯ ಅಕ್ರಮದ ವಿರುದ್ಧದ ಹೋರಾಟ ದಿಢೀರನೆ ರೂಪುಗೊಂಡಿದ್ದಲ್ಲ. ಮೇ 3ರಂದು ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾದ ವರದಿಗಳು ಹೊರಬಂದ ತಕ್ಷಣವೇ ವಿದ್ಯಾರ್ಥಿಗಳಿಂದ ಆಕ್ರೋಶ ವ್ಯಕ್ತವಾಗಿತ್ತು. ತೀವ್ರ ಪ್ರತಿಭಟನೆಗಳ ಬಳಿಕ ಮೇ 12ರಂದು ಕೇಂದ್ರ ಸರ್ಕಾರ ಪರೀಕ್ಷೆಯನ್ನು ರದ್ದುಗೊಳಿಸಿ, ತನಿಖೆಯನ್ನು ಸಿಬಿಐಗೆ ವಹಿಸಿತು. ಬಿಗಿ ಭದ್ರತೆಯೊಂದಿಗೆ ಜೂನ್ 21ರಂದು ಮರು ಪರೀಕ್ಷೆ ನಡೆಸಿದರೂ, ಜೂನ್ 28ರಂದು ಪರಿಸರವಾದಿ ಸೋನಂ ವಾಂಚುಕ್ ಅವರು ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಜುಲೈ 14ರಂದು ಪ್ರಕಟವಾದ ಮರು ಪರೀಕ್ಷೆಯ ಫಲಿತಾಂಶದಲ್ಲಿ ಅಂಕಗಳ ಭಾರೀ ವ್ಯತ್ಯಾಸ ಕಂಡುಬಂದಿದ್ದು ಪ್ರತಿಭಟನೆಯ ಕಾವು ಮತ್ತಷ್ಟು ಹೆಚ್ಚಾಗಲು ಕಾರಣವಾಯಿತು.

ಸತ್ಯಾಗ್ರಹ ನಿರತ ವಾಂಚುಕ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಹೈಕೋರ್ಟ್ ಸೂಚನೆ ಮೇರೆಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರು ಆಸ್ಪತ್ರೆಗೆ ಭೇಟಿ ನೀಡಿ ವಾಂಚುಕ್ ಅವರ ಮನವೊಲಿಸುವಲ್ಲಿ ಯಶಸ್ವಿಯಾದರು. ಆದರೆ, ಜುಲೈ 20ರಂದು ಸಂಸತ್ ಅಧಿವೇಶನ ಆರಂಭವಾದ ದಿನವೇ ವಿದ್ಯಾರ್ಥಿಗಳು ನಡೆಸಿದ 'ಸಂಸದ್ ಚಲೋ' ತೀವ್ರ ಸ್ವರೂಪ ಪಡೆದುಕೊಂಡು, ಪೊಲೀಸರ ಲಾಠಿಚಾರ್ಜ್‌ನಿಂದಾಗಿ ನೂರಾರು ವಿದ್ಯಾರ್ಥಿಗಳು ಗಾಯಗೊಂಡರು.

ಅಪಾರ ಬೆಂಬಲ

ಆರಂಭದಲ್ಲಿ ಈ ಪ್ರತಿಭಟನೆಯನ್ನು ಗಂಭೀರವಾಗಿ ಪರಿಗಣಿಸದ ಕೇಂದ್ರ ಸರ್ಕಾರ, ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್ ದೃಶ್ಯಗಳು ಹಾಗೂ ಅದಕ್ಕೆ ಸಾರ್ವಜನಿಕರು ಮತ್ತು ಸೆಲೆಬ್ರಿಟಿಗಳಿಂದ ವ್ಯಕ್ತವಾದ ಅಪಾರ ಬೆಂಬಲದಿಂದಾಗಿ ಎಚ್ಚೆತ್ತುಕೊಂಡಿತು. ಪ್ರಧಾನಿ ಮೋದಿಯವರು ಮಧ್ಯರಾತ್ರಿಯಲ್ಲಿ ಬಿಡುಗಡೆ ಮಾಡಿದ ಸೆಲ್ಫಿ ವಿಡಿಯೋಗಳು ಸರ್ಕಾರ ಎದುರಿಸುತ್ತಿದ್ದ ತೀವ್ರ ಒತ್ತಡವನ್ನು ಪ್ರತಿಬಿಂಬಿಸಿದ್ದವು ಎಂದು ವಿಶ್ಲೇಷಿಸಲಾಗುತ್ತಿದೆ. ಸರ್ಕಾರದೊಂದಿಗಿನ ಮಾತುಕತೆ ವೇಳೆ ಸಿಜೆಪಿ ಪ್ರಮುಖವಾಗಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ತಕ್ಷಣದ ರಾಜೀನಾಮೆ, ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲಿನ ಎಲ್ಲಾ ಎಫ್‌ಐಆರ್‌ಗಳ ವಾಪಸಾತಿ ಮತ್ತು ಅಕ್ರಮದ ಬಗ್ಗೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ 21 ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ ಒಂದು ಕೋಟಿ ರೂಪಾಯಿ ಪರಿಹಾರ ನೀಡುವಂತೆ ಬೇಡಿಕೆಗಳನ್ನು ಮುಂದಿಟ್ಟಿತ್ತು. ಸರ್ಕಾರವು ಪರಿಹಾರ ಮತ್ತು ಪ್ರಕರಣಗಳ ವಾಪಸಾತಿಗೆ ಮೊದಲೇ ಒಪ್ಪಿಗೆ ಸೂಚಿಸಿದ್ದು, ಇದೀಗ ಸಚಿವರ ರಾಜೀನಾಮೆಯೂ ಆಗಿರುವುದರಿಂದ ಪ್ರತಿಭಟನಾಕಾರರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ.

ಸಚಿವರ ರಾಜೀನಾಮೆಯೊಂದಿಗೆ ಈ ವಿವಾದ ಸಂಪೂರ್ಣವಾಗಿ ಅಂತ್ಯಗೊಳ್ಳುವ ಲಕ್ಷಣಗಳು ಸದ್ಯಕ್ಕೆ ಕಾಣುತ್ತಿಲ್ಲ. ದೆಹಲಿ ಪೊಲೀಸರು ಈ ಪ್ರತಿಭಟನೆಯಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳ 500ಕ್ಕೂ ಹೆಚ್ಚು ವ್ಯಕ್ತಿಗಳು ನುಸುಳಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ತಪ್ಪು ಮಾಹಿತಿ ಹರಡುವ ನಕಲಿ ವಿಡಿಯೋಗಳ ಬಗ್ಗೆ ನಿಗಾ ಇಡಲಾಗುತ್ತಿದ್ದು, ಫೇಶಿಯಲ್ ರೆಕಗ್ನಿಷನ್ ತಂತ್ರಜ್ಞಾನದ ಮೂಲಕ ದುಷ್ಕರ್ಮಿಗಳ ಪತ್ತೆ ಕಾರ್ಯ ನಡೆಯುತ್ತಿದೆ. ಈ ಬೃಹತ್ ಹೋರಾಟದ ಹಿಂದೆ ಯಾವುದೇ ರಾಷ್ಟ್ರವಿರೋಧಿ ಶಕ್ತಿಗಳ ಅಥವಾ ವಿದೇಶಿ ಸಂಪರ್ಕಗಳ ಕೈವಾಡವಿದೆಯೇ ಎಂಬ ಬಗ್ಗೆಯೂ ಗುಪ್ತಚರ ಇಲಾಖೆ ತನಿಖೆಯನ್ನು ಚುರುಕುಗೊಳಿಸಿದೆ.

Read More
Next Story