
50 ವರ್ಷಗಳ ನಂತರ 9ನೇ ತರಗತಿ ಪಠ್ಯದಲ್ಲಿ ತುರ್ತು ಪರಿಸ್ಥಿತಿ ಪಾಠ
1975-77ರ ಅವಧಿಯಲ್ಲಿ ಹೇರಲಾದ ತುರ್ತು ಪರಿಸ್ಥಿತಿಯನ್ನು ಪ್ರಜಾಪ್ರಭುತ್ವ ಎದುರಿಸಿದ ʼಪ್ರಮುಖ ಸವಾಲುಗಳಲ್ಲಿ ಒಂದುʼ ಎಂದು ಪಠ್ಯದಲ್ಲಿ ವಿವರಿಸಲಾಗಿದೆ. ಆ ಕಾಲಘಟ್ಟದ ಪರಿಸ್ಥಿತಿಯನ್ನು ತೆರೆದಿಟ್ಟಿದೆ.
ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಅತ್ಯಂತ ಕರಾಳ ಅಧ್ಯಾಯವೆಂದು ಪರಿಗಣಿಸಲ್ಪಟ್ಟಿರುವ ತುರ್ತು ಪರಿಸ್ಥಿತಿ, ಈಗ ಶಾಲಾ ಪಠ್ಯಪುಸ್ತಕಗಳ ಭಾಗವಾಗಿದೆ. ಸುಮಾರು 50 ವರ್ಷಗಳ ನಂತರ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ತನ್ನ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕವಾದ ಅಂಡರ್‌ಸ್ಟ್ಯಾಂಡಿಂಗ್ ಸೊಸೈಟಿ: ಇಂಡಿಯಾ ಅಂಡ್ ಬಿಯಾಂಡ್‌ನಲ್ಲಿ ತುರ್ತು ಪರಿಸ್ಥಿತಿಯ ಕುರಿತಾದ ಅಧ್ಯಾಯವನ್ನು ಮೊದಲ ಬಾರಿಗೆ ಸೇರ್ಪಡೆಗೊಳಿಸಿದೆ. ಇದು ವಿದ್ಯಾರ್ಥಿಗಳಿಗೆ ಭಾರತೀಯ ಪ್ರಜಾಪ್ರಭುತ್ವದ ಸವಾಲುಗಳು ಮತ್ತು ಸಾಮರ್ಥ್ಯಗಳ ಕುರಿತು ಆಳವಾದ ತಿಳುವಳಿಕೆ ನೀಡುವ ಗುರಿಯನ್ನು ಹೊಂದಿದೆ.
ಎನ್‌ಸಿಇಆರ್‌ಟಿ ಅಧಿಕಾರಿಗಳು ದೃಢಪಡಿಸಿರುವಂತೆ, 1975-77ರ ಅವಧಿಯಲ್ಲಿ ಹೇರಲಾದ ತುರ್ತು ಪರಿಸ್ಥಿತಿಯನ್ನು ಭಾರತದ ಪ್ರಜಾಪ್ರಭುತ್ವ ಎದುರಿಸಿದ ʼಪ್ರಮುಖ ಸವಾಲುಗಳಲ್ಲಿ ಒಂದುʼ ಎಂದು ಪಠ್ಯದಲ್ಲಿ ವಿವರಿಸಲಾಗಿದೆ. ಆ ಕಾಲಘಟ್ಟದ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಯನ್ನು ಈ ಅಧ್ಯಾಯವು ಅತ್ಯಂತ ತಟಸ್ಥವಾಗಿ ತೆರೆದಿಟ್ಟಿದೆ. 1970ರ ದಶಕದ ಆರಂಭದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಸರ್ಕಾರದ ವಿರುದ್ಧ ಸಾರ್ವಜನಿಕ ಅಸಮಾಧಾನ ತೀವ್ರವಾಗಿತ್ತು. ನಿರುದ್ಯೋಗ, ಹಣದುಬ್ಬರ ಮತ್ತು ಆಡಳಿತ ವೈಫಲ್ಯದ ಆರೋಪಗಳು ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾದವು. ಈ ಹಿನ್ನೆಲೆಯಲ್ಲಿ, ಜೂನ್ 1975ರಲ್ಲಿ "ಆಂತರಿಕ ಅಶಾಂತಿ"ಯ ನೆಪವೊಡ್ಡಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಹೇರಲಾಯಿತು ಎಂದು ಪಠ್ಯವು ವಿವರಿಸುತ್ತದೆ. ಈ ಅವಧಿಯಲ್ಲಿ ಸಂವಿಧಾನದ ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಲಾಗಿತ್ತು, ಪತ್ರಿಕಾ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿತ್ತು ಮತ್ತು ವಿರೋಧ ಪಕ್ಷದ ನಾಯಕರು, ಹೋರಾಟಗಾರರನ್ನು ಸೆರೆಮನೆಗೆ ತಳ್ಳಲಾಗಿತ್ತು. ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲೆ ತೀವ್ರ ಒತ್ತಡ ಹೇರಲಾಗಿತ್ತು ಮತ್ತು ನಾಗರಿಕರ ಸ್ವಾತಂತ್ರ್ಯವನ್ನು ನಿರ್ಬಂಧಿಸಲಾಗಿತ್ತು ಎಂಬುದನ್ನು ಪಠ್ಯವು ಸ್ಪಷ್ಟವಾಗಿ ಉಲ್ಲೇಖಿಸಿದೆ.
ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ಪಾತ್ರ
ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದ ನೇತೃತ್ವ ವಹಿಸಿದ್ದ ಜಯಪ್ರಕಾಶ್ ನಾರಾಯಣ್ (ಜೆಪಿ) ಅವರ ಕೊಡುಗೆಯನ್ನು ಪಠ್ಯದಲ್ಲಿ ಗೌರವದಿಂದ ಸ್ಮರಿಸಲಾಗಿದೆ. ಬಿಹಾರ ಮತ್ತು ಗುಜರಾತ್‌ನಲ್ಲಿ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರನ್ನು ಒಗ್ಗೂಡಿಸಿ ಜೆಪಿ ನಡೆಸಿದ ಅಹಿಂಸಾತ್ಮಕ ಚಳವಳಿಗಳು ಪ್ರಜಾಪ್ರಭುತ್ವದ ಮರುಸ್ಥಾಪನೆಗೆ ಹೇಗೆ ದಾರಿಯಾದವು ಎಂಬುದನ್ನು ವಿವರಿಸಲಾಗಿದೆ. 1977ರಲ್ಲಿ ತುರ್ತು ಪರಿಸ್ಥಿತಿಯನ್ನು ತೆರವುಗೊಳಿಸಿದ ನಂತರ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಆಡಳಿತಾರೂಢ ಸರ್ಕಾರ ಸೋತಿದ್ದು, ಭಾರತೀಯ ಪ್ರಜಾಪ್ರಭುತ್ವದ ಶಕ್ತಿ ಮತ್ತು ಜನರ ಮತದಾನದ ಅಧಿಕಾರವನ್ನು ಜಗತ್ತಿಗೆ ಸಾರಿತು ಎಂದು ಪುಸ್ತಕವು ಅಭಿಪ್ರಾಯಪಟ್ಟಿದೆ. ಕೇವಲ ತುರ್ತು ಪರಿಸ್ಥಿತಿಯಷ್ಟೇ ಅಲ್ಲದೆ, ಪ್ರಸ್ತುತ ಭಾರತೀಯ ಪ್ರಜಾಪ್ರಭುತ್ವವು ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನೂ ಈ ಪುಸ್ತಕ ಪರಿಚಯಿಸುತ್ತದೆ. ನಕಲಿ ಸುದ್ದಿಗಳ ಹಾವಳಿ, ಮಿತಿಮೀರಿದ ನಿರುದ್ಯೋಗ, ಬಡತನ, ಪ್ರಾದೇಶಿಕ ಭಿನ್ನಾಭಿಪ್ರಾಯಗಳು, ಸಾಮಾಜಿಕ ಬಹಿಷ್ಕಾರ ಮತ್ತು ಲಿಂಗಾಧಾರಿತ ತಾರತಮ್ಯದಂತಹ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗಿದೆ. ಹೊಸದಾಗಿ ಸೇರಿಸಲಾದ ಡೆಮೋಕ್ರಸಿ ಅಂಡ್ ಯು ಎಂಬ ವಿಭಾಗವು ವಿದ್ಯಾರ್ಥಿಗಳನ್ನು ಚಿಂತನೆಗೆ ಹಚ್ಚುತ್ತದೆ. ಪ್ರಜಾಪ್ರಭುತ್ವದ ಮೌಲ್ಯಗಳು ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗದೆ, ನಾಗರಿಕನಾದವನ ಪ್ರತಿನಿತ್ಯದ ನಡವಳಿಕೆಯಲ್ಲಿ ಮತ್ತು ಸಾಮಾಜಿಕ ಹೊಣೆಗಾರಿಕೆಯಲ್ಲಿ ಹೇಗೆ ಪ್ರತಿಫಲಿಸಬೇಕು ಎಂಬುದನ್ನು ಇದು ಒತ್ತಿಹೇಳುತ್ತದೆ.
ಪ್ರಧಾನಿ ಮೋದಿಯವರ ಸ್ಮರಣೆ
ತುರ್ತು ಪರಿಸ್ಥಿತಿಯ 50ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಅವಧಿಯನ್ನು "ಭಾರತದ ಇತಿಹಾಸದ ಕರಾಳ ಅಧ್ಯಾಯ" ಎಂದು ಬಣ್ಣಿಸಿದ್ದಾರೆ. ತುರ್ತು ಪರಿಸ್ಥಿತಿಯು ನಮ್ಮ ಸಂವಿಧಾನದ ಮೇಲೆ ನಡೆದ ನೇರ ದಾಳಿಯಾಗಿದೆ. ನಾಗರಿಕ ಸ್ವಾತಂತ್ರ್ಯದ ಅಮಾನತು, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ನಿರ್ಬಂಧ ಮತ್ತು ಪ್ರಜಾಪ್ರಭುತ್ವದ ಆಧಾರಸ್ತಂಭಗಳ ಮೇಲೆ ನಡೆದ ಪ್ರಹಾರವನ್ನು ದೇಶ ಎಂದಿಗೂ ಮರೆಯುವಂತಿಲ್ಲ. ಅಂದಿನ ಕಾಲದ ಹೋರಾಟಗಾರರ ತ್ಯಾಗ ಮತ್ತು ಧೈರ್ಯವನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿದ್ಯಾರ್ಥಿಗಳಿಗೆ ಈ ಪಾಠ ಏಕೆ ಮುಖ್ಯ?
ದಶಕಗಳ ಕಾಲ ಇತಿಹಾಸದ ಪುಸ್ತಕಗಳಲ್ಲಿ ಈ ಘಟನೆಯನ್ನು ವಿವರವಾಗಿ ಚರ್ಚಿಸಲಾಗಿರಲಿಲ್ಲ ಅಥವಾ ಬಹಳ ಸಂಕ್ಷಿಪ್ತವಾಗಿ ಉಲ್ಲೇಖಿಸಲಾಗಿತ್ತು. ಈಗ ಅದನ್ನು ಪಠ್ಯದ ಭಾಗವನ್ನಾಗಿ ಮಾಡುವುದರ ಮೂಲಕ ಎನ್‌ಸಿಇಆರ್‌ಟಿ ಹೊಸ ಪೀಳಿಗೆಗೆ ಇತಿಹಾಸದ ಕಟು ಸತ್ಯಗಳನ್ನು ತಿಳಿಸುವ ಪ್ರಯತ್ನ ಮಾಡಿದೆ. ವಿದ್ಯಾರ್ಥಿಗಳಿಗೆ ತಮ್ಮ ದೇಶದ ಸಂವಿಧಾನ ಮತ್ತು ಅದರ ರಕ್ಷಣೆಯಲ್ಲಿ ನಾಗರಿಕರ ಪಾತ್ರದ ಮಹತ್ವ ಅರ್ಥವಾಗುತ್ತದೆ. ತುರ್ತು ಪರಿಸ್ಥಿತಿಯ ಉದಾಹರಣೆಯು, ಸಂವಿಧಾನದ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವದ ಸ್ವಾತಂತ್ರ್ಯ ಎಷ್ಟು ದುರ್ಬಲ ಮತ್ತು ಅಮೂಲ್ಯವಾದದ್ದು ಎಂಬುದನ್ನು ಕಲಿಸುತ್ತದೆ. ಸರ್ಕಾರಿ ನೀತಿಗಳು ಮತ್ತು ಪ್ರಜಾಪ್ರಭುತ್ವದ ಮಿತಿಗಳ ಬಗ್ಗೆ ಚರ್ಚಿಸಲು ಮತ್ತು ಪ್ರಶ್ನಿಸಲು ವಿದ್ಯಾರ್ಥಿಗಳಿಗೆ ವೇದಿಕೆ ಸಿಗುತ್ತದೆ. ಪಠ್ಯಪುಸ್ತಕವು ಮಾಧ್ಯಮಗಳ ಪಾತ್ರವನ್ನು ಪ್ರಜಾಪ್ರಭುತ್ವದ ನಾಲ್ಕನೇ ಕಂಬ ಎಂದು ವ್ಯಾಖ್ಯಾನಿಸಿದೆ. ಪತ್ರಿಕಾ ಸ್ವಾತಂತ್ರ್ಯವನ್ನು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹೇಗೆ ನಿಯಂತ್ರಿಸಲಾಗಿತ್ತು ಮತ್ತು ಅದರಿಂದ ಪ್ರಜಾಪ್ರಭುತ್ವದ ಕಾರ್ಯವೈಖರಿಗೆ ಎಂತಹ ತೊಂದರೆಯಾಯಿತು ಎಂಬುದನ್ನು ಚರ್ಚಿಸಲಾಗಿದೆ. ಇದರೊಂದಿಗೆ ಚುನಾವಣೆಗಳ ಪ್ರಕ್ರಿಯೆ, ಮತದಾನದ ಹಕ್ಕು ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ ಸ್ಥಳೀಯ ಆಡಳಿತದ ಮಹತ್ವವನ್ನು ವಿವರಿಸಲಾಗಿದೆ. ಮಹಿಳೆಯರ ಮತದಾನದ ಹಕ್ಕು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿದ ಐತಿಹಾಸಿಕ ಬೆಳವಣಿಗೆಗಳನ್ನೂ ಈ ಪುಸ್ತಕವು ಒಳಗೊಂಡಿದೆ.

