
ಎನ್‌ಸಿಇಆರ್‌ಟಿ (NCERT) 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ಕುರಿತು ಉಲ್ಲೇಖಿಸಿ ಸುಪ್ರೀಂ ಕೋರ್ಟ್ ಬುಧವಾರ (ಫೆಬ್ರವರಿ 25) ಗಂಭೀರವಾಗಿ ಪರಿಗಣಿಸಿದೆ.
NCERT| 8ನೇ ತರಗತಿ ಪಠ್ಯದಲ್ಲಿ 'ನ್ಯಾಯಾಂಗ ಭ್ರಷ್ಟಾಚಾರ' ಉಲ್ಲೇಖ: ಸುಪ್ರೀಂ ತಪರಾಕಿ
ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, "ಈ ಸಾಂಸ್ಥಿಕ ವ್ಯವಸ್ಥೆಯನ್ನು ಅವಹೇಳನ ಮಾಡಲು ನಾನು ಬಿಡುವುದಿಲ್ಲ. ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳಲಿದೆ," ಎಂದರು.
ಎನ್‌ಸಿಇಆರ್‌ಟಿ (NCERT) 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ಕುರಿತು ಉಲ್ಲೇಖಿಸಿರುವುದನ್ನು ಸುಪ್ರೀಂ ಕೋರ್ಟ್ ಬುಧವಾರ (ಫೆಬ್ರವರಿ 25) ಗಂಭೀರವಾಗಿ ಪರಿಗಣಿಸಿದೆ. ಈ ವಿಷಯದ ಕುರಿತು ಸ್ವಯಂಪ್ರೇರಿತವಾಗಿ ದೂರು ತೆಗೆದುಕೊಂಡಿರುವ ನ್ಯಾಯಾಲಯವು ತೀವ್ರ ಕಳವಳ ವ್ಯಕ್ತಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಯ್ಮಾಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಾಂಚೋಲಿ ಅವರನ್ನೊಳಗೊಂಡ ಪೀಠದ ಮುಂದೆ ಹಿರಿಯ ವಕೀಲ ಕಪಿಲ್ ಸಿಬಲ್ ಈ ವಿಷಯವನ್ನು ಪ್ರಸ್ತಾಪಿಸಿದರು. "8ನೇ ತರಗತಿಯ ಮಕ್ಕಳಿಗೆ ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ಬೋಧಿಸಲಾಗುತ್ತಿದೆ. ಇದು ಅತ್ಯಂತ ಗಂಭೀರವಾದ ವಿಷಯ" ಎಂದು ಅವರು ನ್ಯಾಯಾಲಯದ ಗಮನ ಸೆಳೆದರು.
ಪಠ್ಯಪುಸ್ತಕದಲ್ಲೇನಿದೆ?
ಎನ್‌ಸಿಇಆರ್‌ಟಿಯ ಹೊಸ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ನ್ಯಾಯಾಂಗ ವ್ಯವಸ್ಥೆಯು ಎದುರಿಸುತ್ತಿರುವ ಸವಾಲುಗಳ ಪಟ್ಟಿಯಲ್ಲಿ ಭ್ರಷ್ಟಾಚಾರ, ಪ್ರಕರಣಗಳ ವಿಳವಾರಿ ಬಾಕಿ ಉಳಿದಿರುವುದು ಮತ್ತು ನ್ಯಾಯಾಧೀಶರ ಕೊರತೆಯನ್ನು ಸೇರಿಸಲಾಗಿದೆ. "ನ್ಯಾಯಾಂಗದಲ್ಲಿ ಭ್ರಷ್ಟಾಚಾರ" ಎಂಬ ವಿಭಾಗದಲ್ಲಿ, ನ್ಯಾಯಾಧೀಶರು ನ್ಯಾಯಾಲಯದ ಒಳಗಡೆ ಮತ್ತು ಹೊರಗಡೆ ಹೇಗೆ ವರ್ತಿಸಬೇಕು ಎಂಬುದನ್ನು ನಿಯಂತ್ರಿಸುವ ನಡವಳಿಕಾ ಸಂಹಿತೆಗೆ ಬದ್ಧರಾಗಿರುತ್ತಾರೆ ಎಂದು ವಿವರಿಸಲಾಗಿದೆ.
ಸಿಜೆಐ ಕಟು ಎಚ್ಚರಿಕೆ
ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, "ಈ ಸಾಂಸ್ಥಿಕ ವ್ಯವಸ್ಥೆಯನ್ನು ಅವಹೇಳನ ಮಾಡಲು ನಾನು ಯಾರಿಗೂ ಬಿಡುವುದಿಲ್ಲ. ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳಲಿದೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಸಂಸ್ಥೆಯ ಮುಖ್ಯಸ್ಥನಾಗಿ ನಾನು ನನ್ನ ಕರ್ತವ್ಯ ನಿರ್ವಹಿಸಿದ್ದೇನೆ ಮತ್ತು ಈ ಬಗ್ಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸುತ್ತಿದ್ದೇನೆ. ಇದೊಂದು ವ್ಯವಸ್ಥಿತ ಸಂಚಿನಂತೆ ಕಾಣುತ್ತಿದೆ. ಈ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ," ಎಂದು ಸಿಜೆಐ ಹೇಳಿದರು.
ಇದೇ ವೇಳೆ ನ್ಯಾಯಮೂರ್ತಿ ಬಾಗ್ಚಿ ಅವರು ಮಾತನಾಡಿ, "ಈ ಪಠ್ಯವು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿರುವಂತೆ ತೋರುತ್ತಿದೆ," ಎಂದು ಅಭಿಪ್ರಾಯಪಟ್ಟರು.
ನ್ಯಾಯಾಂಗ ವಲಯದಲ್ಲಿ ಆತಂಕ
ಬಾರ್ ಅಸೋಸಿಯೇಷನ್, ಬೆಂಚ್ ಮತ್ತು ಹೈಕೋರ್ಟ್‌ನ ಎಲ್ಲಾ ನ್ಯಾಯಾಧೀಶರು ಈ ಬೆಳವಣಿಗೆಯಿಂದ ಆತಂಕಕ್ಕೊಳಗಾಗಿದ್ದಾರೆ. ದಯವಿಟ್ಟು ಕೆಲವು ದಿನ ಕಾಯಿರಿ, ನಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಜರುಗಿಸುತ್ತೇವೆ, ಎಂದು ಸಿಜೆಐ ಭರವಸೆ ನೀಡಿದರು.
ಏನಿದು NCERT?
ಎನ್‌ಸಿಇಆರ್‌ಟಿ ಎನ್ನುವುದು ಭಾರತ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಒಂದು ಸ್ವಾಯತ್ತ ಸಂಸ್ಥೆ. ಇದು 1961 ರಲ್ಲಿ ಸ್ಥಾಪನೆಯಾಯಿತು. ಶಾಲಾ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಲಹೆ ಹಾಗೂ ಸಹಾಯ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಇದರ ಪ್ರಧಾನ ಕಚೇರಿ ನವದೆಹಲಿಯಲ್ಲಿದೆ. ಒಂದನೇ ತರಗತಿಯಿಂದ 12ನೇ ತರಗತಿಯವರೆಗೆ ಗುಣಮಟ್ಟದ ಪಠ್ಯಪುಸ್ತಕಗಳನ್ನು ರೂಪಿಸುತ್ತದೆ. ಸಿಬಿಎಸ್‌ಇ (CBSE) ಶಾಲೆಗಳಲ್ಲಿ ಹೆಚ್ಚಾಗಿ ಇವುಗಳನ್ನೇ ಬಳಸಲಾಗುತ್ತದೆ.

