Nashik TCS Row| ಯಾರೀ ನಿದಾ ಖಾನ್? ನಾಸಿಕ್ TCS ಲೈಂಗಿಕ ಕಿರುಕುಳ, ಮತಾಂತರ ವಿವಾದದ ಮಾಸ್ಟರ್‌ಮೈಂಡ್ ಹಿನ್ನೆಲೆ ಏನು?
x
ನಾಸಿಕ್ ಲೈಂಗಿಕ ಕಿರುಕುಳ ಪ್ರಕರಣ‌ ಮಾಸ್ಟರ್‌ ಮೈಂಡ್‌ ನಿದಾ ಖಾನ್‌

Nashik TCS Row| ಯಾರೀ ನಿದಾ ಖಾನ್? ನಾಸಿಕ್ TCS ಲೈಂಗಿಕ ಕಿರುಕುಳ, ಮತಾಂತರ ವಿವಾದದ 'ಮಾಸ್ಟರ್‌ಮೈಂಡ್' ಹಿನ್ನೆಲೆ ಏನು?

ನಾಸಿಕ್ ಬಿಪಿಒ ಲೈಂಗಿಕ ಕಿರುಕುಳ ಮತ್ತು ಮತಾಂತರ ಪ್ರಕರಣದ ಮಾಸ್ಟರ್‌ಮೈಂಡ್ ಎನ್ನಲಾದ ನಿದಾ ಖಾನ್ ಯಾರು? ಪೊಲೀಸರ ಆರೋಪಕ್ಕೆ ಕುಟುಂಬದ ಸ್ಪಷ್ಟನೆ ಏನು?


Click the Play button to hear this message in audio format

ನಾಸಿಕ್‌ನ ಟಾಟಾ ಕನ್ಸಲ್ಟೆನ್ಸಿಯ ಬಿಪಿಒ (BPO) ಕಚೇರಿಯೊಂದರಲ್ಲಿ ಹಿಂದೂ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ ಮತ್ತು ಧಾರ್ಮಿಕ ಮತಾಂತರಕ್ಕೆ ಪ್ರಚೋದಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಏಳು ಮಂದಿಯನ್ನು ಬಂಧಿಸಿದ್ದಾರೆ. ಈ ಪ್ರಕರಣದ ಮಾಸ್ಟರ್‌ಮೈಂಡ್ ಎನ್ನಲಾದ ಹೆಚ್‌ಆರ್ ಮುಖ್ಯಸ್ಥೆ ನಿದಾ ಖಾನ್ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. ಆದರೆ, ಗುರುವಾರ ಈ ಬಗ್ಗೆ ಪ್ರತಿಕ್ರಿಯಿಸಿರುವ ನಿದಾ ಕುಟುಂಬಸ್ಥರು, ಆಕೆ ಎಲ್ಲೂ ಓಡಿ ಹೋಗಿಲ್ಲ, ಮನೆಯಲ್ಲೇ ಇದ್ದಾರೆ ಮತ್ತು ಆಕೆ ಗರ್ಭಿಣಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಯಾರೀ ನಿದಾ ಖಾನ್?

ಟಿಎಸ್‌ಎಸ್ ಸಂಸ್ಥೆಯೊಂದಿಗೆ ಸಂಬಂಧ ಹೊಂದಿರುವ ಬಿಪಿಒ ಕಚೇರಿಯಲ್ಲಿ ನಡೆದ ಮತಾಂತರ ಆರೋಪದ ಪ್ರಕರಣದಲ್ಲಿ ಹೆಸರಿಸಲಾದ ಎಂಟು ಆರೋಪಿಗಳಲ್ಲಿ ನಿದಾ ಖಾನ್ ಕೂಡ ಒಬ್ಬರು. ಪೊಲೀಸರು ಇವರನ್ನು ಈ ಕೃತ್ಯದ ಹಿಂದಿನ ಸಂಚುಗಾರ್ತಿ ಎಂದು ಗುರುತಿಸಿದ್ದಾರೆ. ಆದರೆ ಕುಟುಂಬದ ಮೂಲಗಳ ಪ್ರಕಾರ, ನಿದಾ 2021ರ ಡಿಸೆಂಬರ್‌ನಲ್ಲಿ ಈ ಬಿಪಿಒ ಸೇರಿದ್ದರು. ಅವರು ಅಲ್ಲಿ ಹೆಚ್‌ಆರ್ ಹುದ್ದೆಯಲ್ಲಿರಲಿಲ್ಲ, ಬದಲಿಗೆ ಟೆಲಿಕಾಲರ್ ಆಗಿ ಕೆಲಸ ಮಾಡುತ್ತಿದ್ದರು.

"ನನ್ನ ಮಗಳು ಇಂತಹ ಯಾವುದೇ ಕೆಲಸ ಮಾಡಿಲ್ಲ. ಆಕೆ ಪ್ರತಿದಿನ ಕೆಲಸಕ್ಕೆ ಹೋಗುತ್ತಿದ್ದಳು. ಕೇವಲ ಪರಿಚಯಸ್ಥರಿಗೆ ಹಲೋ, ಗುಡ್‌ಬೈ ಹೇಳಿದ್ದಕ್ಕೇ ಆಕೆ ಸಂಕಷ್ಟಕ್ಕೆ ಸಿಲುಕಿದ್ದಾಳೆ" ಎಂದು ನಿದಾ ತಂದೆ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.

26 ವರ್ಷದ ನಿದಾ ಖಾನ್ ನಾಸಿಕ್‌ನಲ್ಲಿ ಬೆಳೆದು ಶಿಕ್ಷಣ ಪಡೆದವರು. ವಾಣಿಜ್ಯ ಪದವಿ ಹೊಂದಿರುವ ಇವರು, ಕೆಲಸದ ಜೊತೆಗೆ ಅಂಚೆ ತೆರಪಿನ ಶಿಕ್ಷಣದ ಮೂಲಕ ಎಂ.ಬಿ.ಎ (MBA) ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ವರ್ಷ ಮದುವೆಯಾಗಿದ್ದ ನಿದಾ, ಈ ವರ್ಷದ ಆರಂಭದಲ್ಲಿ ಪತಿಯೊಂದಿಗೆ ಮುಂಬೈಗೆ ವಲಸೆ ಹೋಗಿದ್ದರು ಮತ್ತು ಮಲಾಡ್‌ನ ಬಿಪಿಒ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು.

ಪ್ರಕರಣದ ವಿವರ

23 ವರ್ಷದ ಬಿಪಿಒ ಉದ್ಯೋಗಿಯೊಬ್ಬರು ನೀಡಿದ ದೂರಿನ ಮೇರೆಗೆ ನಾಸಿಕ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ದೂರುದಾರೆ ತನ್ನ ಹಿರಿಯ ಸಹೋದ್ಯೋಗಿ ಡ್ಯಾನಿಶ್ ಶೇಖ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಡ್ಯಾನಿಶ್ ತನಗೆ ಮದುವೆಯಾಗಿರುವ ವಿಚಾರವನ್ನು ಮುಚ್ಚಿಟ್ಟು, ಮದುವೆಯ ಸುಳ್ಳು ಭರವಸೆ ನೀಡಿ ಲೈಂಗಿಕ ಸಂಬಂಧ ಬೆಳೆಸಿದ್ದ ಎಂದು ಯುವತಿ ಆರೋಪಿಸಿದ್ದಾರೆ.

ಅಲ್ಲದೆ, ಡ್ಯಾನಿಶ್ ಮತ್ತು ಮತ್ತೊಬ್ಬ ಸಹೋದ್ಯೋಗಿ ತೌಸಿಫ್ ತನ್ನನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಪ್ರೇರೇಪಿಸಿದ್ದರು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಈ ವೇಳೆ ನಿದಾ ಖಾನ್ ಮತ್ತು ತೌಸಿಫ್ ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು ಎಂಬ ಗಂಭೀರ ಆರೋಪವನ್ನೂ ಮಾಡಲಾಗಿದೆ. ಈ ಪ್ರಕರಣ ಈಗ ಮಹಾರಾಷ್ಟ್ರದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಕರಣದ ಬೆನ್ಹತ್ತಿದ ಪೊಲೀಸರಿಗೆ ಟಿಸಿಎಸ್‌ ಸಂಸ್ಥೆಯಲ್ಲಿ ನಡೆಯುತ್ತಿದ್ದ ಲೈಂಗಿಕ ಕಿರುಕುಳ ಮತ್ತು ಬಲವಂತದ ಮತಾಂತರ ಕರ್ಮಕಾಂಡ ಸುಳಿವು ಎಳೆ ಎಳೆಯಾಗಿ ಸಿಕ್ಕಿತ್ತು.

ಈ ಪ್ರಕರಣವು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಆರೋಪಿಗಳು ಒಂದು ಸಂಘಟಿತ ಗ್ಯಾಂಗ್ ರೀತಿ ಕೆಲಸ ಮಾಡುತ್ತಿದ್ದರು ಮತ್ತು ಪ್ರಮುಖವಾಗಿ 18 ರಿಂದ 25 ವರ್ಷದೊಳಗಿನ ಯುವತಿಯರನ್ನೇ ಗುರಿಯಾಗಿಸಿಕೊಂಡಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈವರೆಗೆ ಒಟ್ಟು 9 ಎಫ್‌ಐಆರ್ (FIR) ದಾಖಲಾಗಿದ್ದು, ಇದರಲ್ಲಿ ಓರ್ವ ಪುರುಷ ಉದ್ಯೋಗಿ ಕೂಡ ಧಾರ್ಮಿಕ ಕಿರುಕುಳ ಮತ್ತು ಮತಾಂತರ ಯತ್ನದ ಬಗ್ಗೆ ದೂರು ನೀಡಿರುವುದು ಪ್ರಕರಣದ ವ್ಯಾಪ್ತಿಯನ್ನು ಹೆಚ್ಚಿಸಿದೆ.

ಈ ಪ್ರಕರಣದಲ್ಲಿ ಆರೋಪಿಗಳು ಹಿಂದೂ ದೇವತೆಗಳ ಬಗ್ಗೆ ಅತ್ಯಂತ ಆಕ್ಷೇಪಾರ್ಹ ಹಾಗೂ ಅವಹೇಳನಕಾರಿ ಮಾತುಗಳನ್ನಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವುದು ಮಾತ್ರವಲ್ಲದೆ, ಸಸ್ಯಾಹಾರಿಗಳಾಗಿದ್ದ ಹಿಂದೂ ಉದ್ಯೋಗಿಗಳಿಗೆ ಬಲವಂತವಾಗಿ ಮಾಂಸಾಹಾರ ಸೇವಿಸುವಂತೆ ಒತ್ತಡ ಹೇರುತ್ತಿದ್ದರು. ನಿರ್ದಿಷ್ಟ ಧರ್ಮದ ಆಚರಣೆಗಳನ್ನು ಅನುಸರಿಸುವಂತೆ ಉದ್ಯೋಗಿಗಳ ಮೇಲೆ ನಿರಂತರವಾಗಿ ಮಾನಸಿಕ ಮತ್ತು ಧಾರ್ಮಿಕ ಕಿರುಕುಳ ನೀಡಲಾಗುತ್ತಿತ್ತು. ಅತ್ಯಂತ ಗಂಭೀರವಾದ ವಿಷಯವೆಂದರೆ, ಆರೋಪಿಗಳಲ್ಲಿ ಅನೇಕರು ಕಂಪನಿಯಲ್ಲಿ ಉನ್ನತ ಹುದ್ದೆಗಳಲ್ಲಿದ್ದು, ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಕೆಳಹಂತದ ಸಹೋದ್ಯೋಗಿಗಳಿಗೆ ಇಂತಹ ಕಿರುಕುಳಗಳನ್ನು ನೀಡುತ್ತಿದ್ದರು ಎಂಬ ಅಂಶವು ದೂರಿನಲ್ಲಿ ಬಹಿರಂಗವಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ ಎಂಟು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಡ್ಯಾನಿಶ್ ಶೇಖ್, ತೌಸಿಫ್ ಅತ್ತಾರ್, ರಜಾ ಮೆಮನ್, ಶಾರುಖ್ ಖುರೇಷಿ, ಶಫಿ ಶೇಖ್, ಆಸಿಫ್ ಅಫ್ತಾಬ್ ಅನ್ಸಾರ್ ಮತ್ತು ಶಾರುಖ್ ಶೇಖ್ ಎಂಬ ಏಳು ಪುರುಷರು ಹಾಗೂ ಓರ್ವ ಮಹಿಳೆ ಸೇರಿದ್ದಾರೆ.

ಪ್ರಮುಖ ಆರೋಪಿ ಎನ್ನಲಾದ ನಿದಾ ಖಾನ್ ಕುರಿತು ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಯೊಬ್ಬರು, "ಸಂತ್ರಸ್ತೆಯೊಬ್ಬರು ದೂರು ನೀಡಲು ಮುಂದಾದಾಗ, ಇಂತಹ ಸಣ್ಣಪುಟ್ಟ ವಿಷಯಗಳು ನಡೆಯುತ್ತಲೇ ಇರುತ್ತವೆ (Things Happen) ಎಂದು ಹೇಳುವ ಮೂಲಕ ನಿದಾ ಖಾನ್ ದೂರು ನೀಡದಂತೆ ತಡೆದಿದ್ದರು" ಎಂದು ತಿಳಿಸಿದ್ದಾರೆ.

Read More
Next Story