ನಿವೃತ್ತ ಅಧಿಕಾರಿಗಳು ಪುಸ್ತಕ ಬರೆಯಲು 20 ವರ್ಷ ಕಾಯಬೇಕೆ? ಏನಿದು ಹೊಸ ನಿಯಮ?
x
ಜನರಲ್ ಎಂ.ಎಂ. ನರಾವಣೆ ಕೃತಿ

ನಿವೃತ್ತ ಅಧಿಕಾರಿಗಳು ಪುಸ್ತಕ ಬರೆಯಲು 20 ವರ್ಷ ಕಾಯಬೇಕೆ? ಏನಿದು ಹೊಸ ನಿಯಮ?

Naravane Memoir Row|ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಅವರ ಪುಸ್ತಕ ವಿವಾದದ ಬೆನ್ನಲ್ಲೇ, ನಿವೃತ್ತ ಅಧಿಕಾರಿಗಳ ಪುಸ್ತಕ ಬರವಣಿಗೆಗೆ 20 ವರ್ಷಗಳ ನಿರ್ಬಂಧ ಹೇರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.


ಸೇನಾ ಪಡೆಗಳ ಮುಖ್ಯಸ್ಥರು ಸೇರಿದಂತೆ ಪ್ರಭಾವಿ ಹುದ್ದೆಗಳನ್ನು ಅಲಂಕರಿಸಿ ನಿವೃತ್ತರಾದ ಅಧಿಕಾರಿಗಳು ಪುಸ್ತಕ ಬರೆಯುವ ಮುನ್ನ 20 ವರ್ಷಗಳ ಕಾಲ ಕಾಯಬೇಕು ಎಂಬ ಹೊಸ ನಿಯಮವನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಗಂಭೀರ ಆಲೋಚನೆ ನಡೆಸಿದೆ. ಶುಕ್ರವಾರ (ಫೆಬ್ರವರಿ 14) ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ ಎಂದು ವರದಿಗಳು ತಿಳಿಸಿವೆ.

ವಿವಾದದ ಕಿಡಿ ಹಚ್ಚಿದ ನರವಾಣೆ ಪುಸ್ತಕ

ಜನರಲ್ ಎಂ.ಎಂ. ನರವಾಣೆ ಅವರ ಇನ್ನೂ ಪ್ರಕಟವಾಗದ ಆತ್ಮಕಥೆಯಲ್ಲಿ 2020ರ ಗಲ್ವಾನ್ ಸಂಘರ್ಷದ ಕುರಿತು ಬರೆಯಲಾದ ಅಂಶಗಳು ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಈ ಪುಸ್ತಕದಲ್ಲಿ ಚೀನಾದ ಕೃತ್ಯಗಳಿಗೆ ರಾಜಕೀಯ ನಾಯಕತ್ವದಿಂದ ತಕ್ಷಣದ ಸ್ಪಷ್ಟ ನಿರ್ದೇಶನ ಇರಲಿಲ್ಲ ಎಂಬ ಉಲ್ಲೇಖವಿದೆ ಎಂದು ಹೇಳಲಾಗುತ್ತಿದ್ದು, ಇದು ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಈ ಹಸ್ತಪ್ರತಿಯನ್ನು ಸಂಸತ್ತಿನಲ್ಲಿ ಪ್ರದರ್ಶಿಸಿದ ನಂತರ ವಿವಾದ ಉಲ್ಬಣಗೊಂಡಿತು. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಪುಸ್ತಕದ ಪಿಡಿಎಫ್ (PDF) ಆವೃತ್ತಿ ಹರಿದಾಡುತ್ತಿದ್ದು, ಇದರ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಸಚಿವ ಸಂಪುಟದಲ್ಲಿ ಚರ್ಚೆಯಾದ ಪ್ರಮುಖ ಅಂಶಗಳು

20 ವರ್ಷಗಳ ನಿರ್ಬಂಧ: ಅಧಿಕಾರದಲ್ಲಿದ್ದಾಗ ದೇಶದ ರಕ್ಷಣೆ ಮತ್ತು ಗೌಪ್ಯ ಮಾಹಿತಿಗಳ ಅರಿವಿರುವ ಅಧಿಕಾರಿಗಳು ನಿವೃತ್ತಿಯಾದ ತಕ್ಷಣ ಪುಸ್ತಕ ಬರೆಯುವುದರಿಂದ ದೇಶದ ಹಿತಾಸಕ್ತಿಗೆ ಧಕ್ಕೆ ಬರಬಹುದು ಎಂಬ ಅಭಿಪ್ರಾಯ ಸಚಿವರ ಮಟ್ಟದಲ್ಲಿ ಕೇಳಿಬಂದಿದೆ. ಹೀಗಾಗಿ 20 ವರ್ಷಗಳ 'ಕೂಲಿಂಗ್-ಆಫ್' ಅವಧಿಯ ಅಧಿಕೃತ ಆದೇಶ ಶೀಘ್ರದಲ್ಲೇ ಹೊರಬೀಳುವ ಸಾಧ್ಯತೆಯಿದೆ.

ಎಪ್ಸ್ಟೀನ್ ಫೈಲ್ಸ್ ವಿವಾದ: ಅಮೆರಿಕದ ಜೆಫ್ರಿ ಎಪ್ಸ್ಟೀನ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಮೇಲೆ ಮಾಡುತ್ತಿರುವ ಆರೋಪಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಯಿತು. ಈ ವಿಷಯದಲ್ಲಿ ಸರ್ಕಾರ ತನ್ನ ನಿಲುವನ್ನು ಸ್ಪಷ್ಟವಾಗಿ ಹೊಂದಿರಬೇಕು ಮತ್ತು ವಿರೋಧ ಪಕ್ಷಗಳ ಆಧಾರರಹಿತ ಆರೋಪಗಳಿಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಹರ್ದೀಪ್ ಸಿಂಗ್ ಪುರಿ ಈಗಾಗಲೇ ಈ ಆರೋಪಗಳನ್ನು ನಿರಾಕರಿಸಿದ್ದು, ಎಪ್ಸ್ಟೀನ್ ಜೊತೆಗಿನ ಸಂಪರ್ಕ ಕೇವಲ ಅಧಿಕೃತ ನಿಯೋಗದ ಭಾಗವಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಕಾಶಕರ ಎಚ್ಚರಿಕೆ

ನರವಾಣೆ ಪುಸ್ತಕದ ಹಸ್ತಪ್ರತಿಯನ್ನು ಅಕ್ರಮವಾಗಿ ಹಂಚಿಕೆ ಮಾಡುತ್ತಿರುವುದು ಕಾಪಿರೈಟ್ ಉಲ್ಲಂಘನೆಯಾಗಿದ್ದು, ಇಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಎಚ್ಚರಿಸಿದೆ. ಸ್ವತಃ ನರವಾಣೆ ಅವರೂ ಸಹ ತಮ್ಮ ಪುಸ್ತಕ ಇನ್ನು ಅಧಿಕೃತವಾಗಿ ಬಿಡುಗಡೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Read More
Next Story