
ಚಿಕ್ಕಬಳ್ಳಾಪುರ ಸಂಸದ ಡಾ.ಕೆ. ಸುಧಾಕರ್, ಕೆ.ಸಿ. ವ್ಯಾಲಿ ನೀರಿನಿಂದ ಭರ್ತಿಯಾಗಿರುವ ಕೋಲಾರಮ್ಮನ ಕೆರೆ
KC Vally | ಬಯಲು ಸೀಮೆ ರೈತರ ಧ್ವನಿಯಾಗಿ ಸಂಸತ್ತಿನಲ್ಲಿ ಮೊಳಗಿದ 'ದ ಫೆಡರಲ್'ನ ಗ್ರೌಂಡ್ ರಿಪೋರ್ಟ್
ತ್ಯಾಜ್ಯ ನೀರನ್ನು ಮೂರು ಹಂತಗಳಲ್ಲೇ ಸಂಸ್ಕರಣೆ ಮಾಡಿ ಬಳಕೆ ಮಾಡಬೇಕೆಂದು ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ಈಗಾಗಲೇ ತಿಳಿಸಲಾಗಿದೆ.
ಬಯಲುಸೀಮೆ ಜಿಲ್ಲೆಗಳ ದಾಹ ತೀರಿಸಬೇಕಿದ್ದ 'ಕೆ.ಸಿ. ವ್ಯಾಲಿ' ಹಾಗೂ 'ಎಚ್.ಎನ್. ವ್ಯಾಲಿ' ಯೋಜನೆಗಳು ಇದೀಗ ಜನರ ಪಾಲಿಗೆ ಕಂಟಕವಾಗಿ ಪರಿಣಮಿಸಿವೆ. ಸಮರ್ಪಕವಾಗಿ ಸಂಸ್ಕರಣೆಯಾಗದ ಈ ನೀರಿನಿಂದ ಬೆಳೆದ ತರಕಾರಿಗಳಲ್ಲಿ ಅಪಾಯಕಾರಿ 'ಸೀಸ'ದ (Lead) ಅಂಶ ಮಿತಿಮೀರಿರುವ ಕುರಿತು ಹಾಗೂ ಇದರಿಂದ ಕಂಗಾಲಾಗಿರುವ ರೈತರ ಪರದಾಟದ ಬಗ್ಗೆ ʼದ ಫೆಡರಲ್ ಕರ್ನಾಟಕʼ ಈ ಹಿಂದೆಯೇ ಪ್ರತ್ಯಕ್ಷ ವರದಿ ಪ್ರಕಟಿಸಿ ರಾಜ್ಯ ಸರ್ಕಾರದ ಗಮನ ಸೆಳೆದಿತ್ತು.
ಈ ಗಂಭೀರ ಸಮಸ್ಯೆ ಲೋಕಸಭೆಯಲ್ಲೂ ಪ್ರತಿಧ್ವನಿಸಿದ್ದು, ತ್ಯಾಜ್ಯ ನೀರನ್ನು ಕಡ್ಡಾಯವಾಗಿ ಮೂರು ಹಂತಗಳಲ್ಲಿ ಸಂಸ್ಕರಿಸಿಯೇ ಕೆರೆಗಳಿಗೆ ಹರಿಸುವಂತೆ ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ಸಂಸತ್ತಿನಲ್ಲಿ ರಾಜ್ಯ ಸರ್ಕಾರವನ್ನು ತೀವ್ರವಾಗಿ ಆಗ್ರಹಿಸಿದ್ದಾರೆ. ಕೆ.ಸಿ.ವ್ಯಾಲಿ ಹಾಗೂ ಎಚ್.ಎನ್. ವ್ಯಾಲಿ ಮೂಲಕ ಬಯಲು ಸೀಮೆಗೆ ಹರಿಸುತ್ತಿರುವ ನೀರನ್ನು ಮೂರು ಹಂತಗಳಲ್ಲಿ ಸಂಸ್ಕರಿಸಿ ನಂತರ ಕೆರೆಗಳಿಗೆ ಪೂರೈಸಬೇಕು ಎಂದು ಆಗ್ರಹಿಸಿದ್ದಾರೆ.
ಶುಕ್ರವಾರ(ಮಾ.27) ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ಕನ್ನಡದಲ್ಲೇ ವಿಷಯ ಪ್ರಸ್ತಾಪಿಸಿದ ಅವರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ ಸೇರಿದಂತೆ ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸಲು ನಾನು 2007 ರಿಂದಲೂ ಪ್ರಯತ್ನ ಮಾಡುತ್ತಿದ್ದೇನೆ. ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಈ ಭಾಗಕ್ಕೆ ಕೆ.ಸಿ.ವ್ಯಾಲಿ ಮತ್ತು ಎಚ್.ಎನ್.ವ್ಯಾಲಿ ಯೋಜನೆಗಳಲ್ಲಿ ಮೂರನೇ ಹಂತದಲ್ಲಿ ಸಂಸ್ಕರಣೆ ಮಾಡಿದ ನೀರನ್ನು ಹರಿಸುವ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಹಿಂದಿನ ಅನೇಕ ಉತ್ತಮ ಯೋಜನೆಗಳನ್ನು ರದ್ದು ಮಾಡಿದೆ. ಅದೇ ರೀತಿ ಮೂರನೇ ಹಂತದ ಸಂಸ್ಕರಣೆಯ ಯೋಜನೆಯನ್ನು ಕೂಡ ರದ್ದು ಮಾಡಿದೆ ಎಂದರು.
ಕೇಂದ್ರದ ಮಾರ್ಗಸೂಚಿ ಪಾಲಿಸಲಿ
"ಬಯಲುಸೀಮೆಗೆ ಈಗಾಗಲೇ ಪೂರೈಕೆಯಾಗುತ್ತಿರುವ ದ್ವಿತೀಯ ಹಂತದ ಸಂಸ್ಕರಣೆಯ ನೀರನ್ನು ಕೆಲವು ಸಂಸ್ಥೆಗಳು ಪರೀಕ್ಷೆ ಮಾಡಿದ್ದು, ಎರಡು ಹಂತದಲ್ಲಿ ಸಂಸ್ಕರಿಸಿದ ನೀರು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ವರದಿ ನೀಡಿವೆ. ತ್ಯಾಜ್ಯ ನೀರನ್ನು ಮೂರು ಹಂತಗಳಲ್ಲೇ ಸಂಸ್ಕರಣೆ ಮಾಡಿ ಬಳಕೆ ಮಾಡಬೇಕೆಂದು ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ಈಗಾಗಲೇ ತಿಳಿಸಲಾಗಿದೆ. ಮೊದಲಿಗೆ ಈ ನಿಯಮವನ್ನು ಕರ್ನಾಟಕ ಸರ್ಕಾರ ಅನುಷ್ಠಾನ ಮಾಡಬೇಕಿದೆ" ಎಂದು ತಿಳಿಸಿದರು.
ಎತ್ತಿನಹೊಳೆ ಯೋಜನೆಯ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ಶಾಶ್ವತ ನೀರಾವರಿ ಕಲ್ಪಿಸಲು ಕೃಷ್ಣ ನದಿಯಿಂದ ಕನಿಷ್ಠ 15 ಟಿಎಂಸಿ ನೀರನ್ನು ತಂದು ಬಯಲುಸೀಮೆಗೆ ನೀಡಲು ರಾಜ್ಯ ಸರ್ಕಾರ ಕ್ರಮ ವಹಿಸಬೇಕು ಎಂದು ಲೋಕಸಭೆಯಲ್ಲಿ ಆಗ್ರಹಿಸಿದರು.
ವರದಿಯಲ್ಲೇನಿದೆ ?
ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ (NGT) ಸೂಚನೆಯ ಮೇರೆಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) 2026ರ ಫೆಬ್ರವರಿ 12ರಂದು ಸಲ್ಲಿಸಿದ ವರದಿಯು ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿದ್ದು, ಕೋಲಾರ, ಚಿಕ್ಕಬಳ್ಳಾಪುರ, ನೆಲಮಂಗಲದ ಕೃಷಿ ಭೂಮಿ ಹಾಗೂ ಬೆಂಗಳೂರಿನ ಮಾರುಕಟ್ಟೆಗಳಿಂದ ಸಂಗ್ರಹಿಸಲಾದ 72 ತರಕಾರಿ ಮಾದರಿಗಳ ಪೈಕಿ ಶೇ. 26ರಷ್ಟು (19 ಮಾದರಿಗಳು) ತರಕಾರಿಗಳಲ್ಲಿ ಮಿತಿಮೀರಿದ 'ಸೀಸ' (Lead) ಪತ್ತೆಯಾಗಿದೆ. ಎಫ್‌ಎಸ್‌ಎಸ್‌ಎಐ (FSSAI) ಸುರಕ್ಷತಾ ಮಿತಿಗಿಂತ ಬದನೆಕಾಯಿಯಲ್ಲಿ 20 ಪಟ್ಟು, ತೊಂಡೆಕಾಯಿಯಲ್ಲಿ 18 ಪಟ್ಟು, ಬೀನ್ಸ್‌ನಲ್ಲಿ 9 ಪಟ್ಟು ಹಾಗೂ ಸೊಪ್ಪು ಮತ್ತು ಎಲೆಕೋಸಿನಲ್ಲಿ 5 ಪಟ್ಟು ಹೆಚ್ಚು ಸೀಸದ ಅಂಶವಿರುವುದು ದೃಢಪಟ್ಟಿದೆ; ಇದರ ಜೊತೆಗೆ, ಕ್ಯಾಪ್ಸಿಕಂ, ಹಸಿರು ಮೆಣಸಿನಕಾಯಿ ಮತ್ತು ಶುಂಠಿಯಂತಹ ತರಕಾರಿಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಕೀಟನಾಶಕಗಳ (Pesticides) ಅಂಶವೂ ಇರುವುದು ಈ ವರದಿಯಿಂದ ಸಾಬೀತಾಗಿದ್ದು, ಇದು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ತೀವ್ರ ಕಳವಳ ಮೂಡಿಸಿದೆ.
ಡಾ. ಟಿ.ವಿ. ರಾಮಚಂದ್ರ ಅವರ ಮುನ್ನೆಚ್ಚರಿಕೆ ಏನಿತ್ತು?
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (IISc) ಪರಿಸರ ವಿಜ್ಞಾನ ಕೇಂದ್ರದ ವಿಜ್ಞಾನಿ ಪ್ರೊ. ಟಿ.ವಿ. ರಾಮಚಂದ್ರ ಅವರು 2018ರಲ್ಲೇ ಈ ಬಗ್ಗೆ ಎಚ್ಚರಿಕೆ ನೀಡಿದ್ದರು. ಅವರು ಹೈಕೋರ್ಟ್‌ಗೆ ಸಲ್ಲಿಸಿದ್ದ "Water quality of Bellandur STP and lakes of Kolar" ಎಂಬ ವರದಿಯಲ್ಲಿ, ಕೆ.ಸಿ. ವ್ಯಾಲಿ ನೀರು ಶುದ್ಧೀಕರಣ ಘಟಕದಿಂದ ಹೊರಬರುವ ನೀರಿನಲ್ಲಿ 6 ಬಗೆಯ ಭಾರಿ ಲೋಹಗಳು ಮಿತಿಮೀರಿವೆ ಎಂದು ಸಾಬೀತುಪಡಿಸಿದ್ದರು. ಈ ನೀರು ಕೃಷಿಗೆ ಬಳಕೆಯಾದರೆ, ವಿಷಕಾರಿ ಅಂಶಗಳು ಮಣ್ಣು ಸೇರಿ, ಅಲ್ಲಿಂದ ಸಸ್ಯಗಳಿಗೆ ಮತ್ತು ಅಂತಿಮವಾಗಿ ಮನುಷ್ಯರ ದೇಹವನ್ನು ಪ್ರವೇಶಿಸುತ್ತವೆ ಎಂದು ಎಚ್ಚರಿಸಿದ್ದರು. ಆದರೆ ಅಂದಿನ ಸರ್ಕಾರಗಳು ಹಾಗೂ ನೀರಾವರಿ ಇಲಾಖೆ ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ .
ಕೆ.ಸಿ.ವ್ಯಾಲಿ ಕುರಿತು ʼದ ಫೆಡರಲ್ ಕರ್ನಾಟಕʼ ಮಾಡಿದ್ದ ವಿಡಿಯೋ ಇಲ್ಲಿದೆ.

