
ಸಾಂದರ್ಭಿಕ ಚಿತ್ರ
Monsoon 2026: ಈ ವರ್ಷ ಮುಂಗಾರು ಮಳೆ ಕಡಿಮೆ; ಕೃಷಿ ವಲಯಕ್ಕೆ ಭಾರೀ ಆತಂಕ
ಭಾರತೀಯ ಹವಾಮಾನ ಇಲಾಖೆಯ (IMD) ಅಂದಾಜಿನ ಪ್ರಕಾರ, ಈ ಬಾರಿಯ ಮುಂಗಾರು ದೀರ್ಘಾವಧಿ ಸರಾಸರಿಯ ಶೇ. 96 ರಷ್ಟಿರಲಿದೆ. ಹೀಗಾಗಿ ಈ ವರ್ಷದ ಮಳೆಯು 'ವಾಡಿಕೆಗಿಂತ ಕಡಿಮೆ' ವರ್ಗದಲ್ಲಿ ಬರುತ್ತದೆ.
ಭಾರತದ ಕೃಷಿ ವಲಯದ ಜೀವನಾಡಿಯಾಗಿರುವ ನೈಋತ್ಯ ಮುಂಗಾರು ಮಳೆಯ ಕುರಿತಾಗಿ ಈ ಬಾರಿ ಆತಂಕಕಾರಿ ಮುನ್ಸೂಚನೆಗಳು ಹೊರಬಿದ್ದಿವೆ. ಭಾರತೀಯ ಹವಾಮಾನ ಇಲಾಖೆ (IMD) ಹಾಗೂ ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆ 'ಸ್ಕೈಮೆಟ್' ಎರಡೂ ಸಹ 2026ರ ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಮುಂಗಾರು ಹಂಗಾಮಿನಲ್ಲಿ 'ವಾಡಿಕೆಗಿಂತ ಕಡಿಮೆ' ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿವೆ.
ಎರಡೂ ಸಂಸ್ಥೆಗಳ ಅಂದಾಜಿನಲ್ಲಿ ಅಲ್ಪ ವ್ಯತ್ಯಾಸವಿದ್ದರೂ, ಮಳೆಯು ದೀರ್ಘಾವಧಿಯ ಸರಾಸರಿಗಿಂತ ಕಡಿಮೆ ಇರಲಿದೆ ಎಂಬುದು ಮಾತ್ರ ಖಚಿತವಾಗಿದೆ. ಇದು ದೇಶದ ಕೃಷಿ ವಲಯ ಹಾಗೂ ಗ್ರಾಮೀಣ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುವ ಭೀತಿಯನ್ನು ಹುಟ್ಟುಹಾಕಿದೆ.
ಐಎಂಡಿ ಮತ್ತು ಸ್ಕೈಮೆಟ್ ಮುನ್ಸೂಚನೆಗಳ ವಿವರ
ಭಾರತೀಯ ಹವಾಮಾನ ಇಲಾಖೆಯ (IMD) ಅಂದಾಜಿನ ಪ್ರಕಾರ, ಈ ಬಾರಿಯ ಮುಂಗಾರು ದೀರ್ಘಾವಧಿ ಸರಾಸರಿಯ ಶೇ. 96 ರಷ್ಟಿರಲಿದೆ. (ಶೇ. 96 ರಿಂದ 104 ರಷ್ಟಿದ್ದರೆ ಅದನ್ನು ವಾಡಿಕೆ ಮಳೆ ಎಂದು ಪರಿಗಣಿಸಲಾಗುತ್ತದೆ). ಹೀಗಾಗಿ ಈ ವರ್ಷದ ಮಳೆಯು 'ವಾಡಿಕೆಗಿಂತ ಕಡಿಮೆ' ವರ್ಗದಲ್ಲಿ ಬರುತ್ತದೆ.
ಇತ್ತ ಏಪ್ರಿಲ್ 7ರಂದು ತನ್ನ ವರದಿ ಬಿಡುಗಡೆ ಮಾಡಿದ್ದ ಸ್ಕೈಮೆಟ್, ಮುಂಗಾರು ಶೇ.94 ರಷ್ಟು (812 ಮಿ.ಮೀ) ಇರಲಿದೆ ಎಂದು ಭವಿಷ್ಯ ನುಡಿದಿದೆ. ಇದು ಐಎಂಡಿಗಿಂತ ಕೊಂಚ ಹೆಚ್ಚಿದ್ದರೂ ಸಹ, ವಾಡಿಕೆ ಮಳೆಗಿಂತ ಕಡಿಮೆಯೇ ಆಗಿದೆ. ಮುಂಗಾರಿನ ದ್ವಿತೀಯಾರ್ಧದಲ್ಲಿ (ಆಗಸ್ಟ್-ಸೆಪ್ಟೆಂಬರ್) ಮಳೆಯ ಹಂಚಿಕೆ ತೀರಾ ಅಸಮಾನವಾಗಿರಲಿದ್ದು, ಬೆಳೆಗಳ ಇಳುವರಿಗೆ ಇದು ದೊಡ್ಡ ಅಪಾಯ ತಂದೊಡ್ಡಲಿದೆ ಎಂದು ಸ್ಕೈಮೆಟ್ ಎಚ್ಚರಿಸಿದೆ.
ವಿಲನ್ ಆಗಲಿರುವ 'ಎಲ್ ನಿನೊ'
ಈ ವರ್ಷದ ಮಳೆಯ ಕೊರತೆಗೆ ಪ್ರಮುಖ ಕಾರಣ 'ಎಲ್ ನಿನೊ' ಪ್ರಭಾವ. ಐಎಂಡಿ ಮಹಾನಿರ್ದೇಶಕ ಡಾ. ಎಂ. ಮೊಹಾಪಾತ್ರ ಅವರ ಪ್ರಕಾರ, ಪ್ರಸ್ತುತ ದುರ್ಬಲವಾಗಿರುವ 'ಲಾ ನಿನಾ' ಪರಿಸ್ಥಿತಿಯು ತಟಸ್ಥ ಹಂತಕ್ಕೆ ತಲುಪುತ್ತಿದ್ದು, ಜೂನ್ ವೇಳೆಗೆ 'ಎಲ್ ನಿನೊ' ರೂಪುಗೊಳ್ಳುವ ಸಾಧ್ಯತೆಯಿದೆ. ಸ್ಕೈಮೆಟ್ ಕೂಡ ಇದನ್ನೇ ಪುಷ್ಟೀಕರಿಸಿದ್ದು, ಮುಂಗಾರು ಮುಂದುವರಿದಂತೆ ಎಲ್ ನಿನೊ ಪ್ರಭಾವ ತೀವ್ರಗೊಂಡು ಮಳೆಯ ಪ್ರಮಾಣವನ್ನು ಕುಗ್ಗಿಸಲಿದೆ ಎಂದಿದೆ.
ಈ ಆತಂಕದ ನಡುವೆ ಸಣ್ಣದೊಂದು ಆಶಾಭಾವನೆ ಎಂದರೆ 'ಇಂಡಿಯನ್ ಓಷನ್ ಡೈಪೋಲ್' (ಹಿಂದೂ ಮಹಾಸಾಗರದ ಮೇಲ್ಮೈ ಸುಳಿಗಾಳಿ). ಮುಂಗಾರಿನ ದ್ವಿತೀಯಾರ್ಧದಲ್ಲಿ ಸಕಾರಾತ್ಮಕ ಇಂಡಿಯನ್ ಓಷನ್ ಡೈಪೋಲ್ ಸೃಷ್ಟಿಯಾಗುವ ನಿರೀಕ್ಷೆಯಿದ್ದು, ಇದು ಎಲ್ ನಿನೊದ ದುಷ್ಪರಿಣಾಮ ಕೊಂಚಮಟ್ಟಿಗೆ ಸರಿದೂಗಿಸಿ, ಮಳೆಯ ಪ್ರಮಾಣವನ್ನು ಹೆಚ್ಚಿಸುವ ಸಾಧ್ಯತೆಯೂ ಇದೆ ಎಂದು ಎರಡೂ ಏಜೆನ್ಸಿಗಳು ಹೇಳಿವೆ.
ಪಂಜಾಬ್ ಹರಿಯಾಣಕ್ಕೆ ಸಂಕಷ್ಟ
ದೇಶಾದ್ಯಂತ ಒಟ್ಟಾರೆ ಮಳೆಯ ಪ್ರಮಾಣ ಕಡಿಮೆಯಾಗುವುದರ ಜೊತೆಗೆ, ಅದರ ಹಂಚಿಕೆಯಲ್ಲೂ ತೀವ್ರ ಅಸಮಾನತೆ ಇರಲಿದೆ. ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಪರ್ಯಾಯ ದ್ವೀಪದಲ್ಲಿ ವಾಡಿಕೆ ಅಥವಾ ಅದಕ್ಕಿಂತ ಕೊಂಚ ಹೆಚ್ಚು ಮಳೆಯಾಗಬಹುದು. ಉತ್ತರ, ಪಶ್ಚಿಮ ಮತ್ತು ಮಧ್ಯ ಭಾರತದಲ್ಲಿ ಮಳೆ ತೀವ್ರ ಕೈಕೊಡಲಿದೆ.
ದೇಶದ ಪ್ರಮುಖ ಕೃಷಿ ಪ್ರಧಾನ ರಾಜ್ಯಗಳಾದ ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದಲ್ಲಿ ಮಳೆ ಗಣನೀಯವಾಗಿ ಕಡಿಮೆಯಾಗಲಿದ್ದು, ವಿಶೇಷವಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್‌ನ ನಿರ್ಣಾಯಕ ಹಂತದಲ್ಲಿ ಬೆಳೆಗಳು ಒಣಗುವ ಅಪಾಯವಿದೆ. ಇದು ಒಟ್ಟಾರೆ ಆಹಾರ ಉತ್ಪಾದನೆ ಕುಸಿಯಲು ಮತ್ತು ಬೆಲೆ ಏರಿಕೆಗೆ ದಾರಿಮಾಡಿಕೊಡಬಹುದು.

