ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಮೋಹನ್ ಭಾಗವತ್ ಒಲವು
x

ಡೆಹ್ರಾಡೂನ್‌ನಲ್ಲಿ ಆರ್‌ಎಸ್‌ಎಸ್‌ನ 100 ನೇ ವಾರ್ಷಿಕೋತ್ಸವದ ಅಂಗವಾಗಿ ಮಾಜಿ ಸೈನಿಕರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್.

ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಮೋಹನ್ ಭಾಗವತ್ ಒಲವು

ಏಕರೂಪ ನಾಗರಿಕ ಸಂಹಿತೆ ಸಾಮಾಜಿಕ ಏಕತೆಗೆ ಪ್ರಮುಖವಾಗಿದೆ ಎಂದ ಆರ್‌ಎಸ್‌ಎಸ್ ಮುಖ್ಯಸ್ಥ, ಉತ್ತರಾಖಂಡದ ಮಾದರಿಯನ್ನು ದೇಶಾದ್ಯಂತ ಜಾರಿಗೊಳಿಸುವಂತೆ ಒತ್ತಾಯ.


Click the Play button to hear this message in audio format

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಉತ್ತರಾಖಂಡದ ಮಾದರಿಯಲ್ಲಿ ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೊಳಿಸುವಂತೆ ಒತ್ತಾಯಿಸಿದ್ದಾರೆ. ಇದು "ಸಮಾಜವನ್ನು ಒಗ್ಗೂಡಿಸಲು" ಅತ್ಯಗತ್ಯ ಎಂದು ಅವರು ಬಣ್ಣಿಸಿದ್ದಾರೆ.

ಸೋಮವಾರ (ಫೆಬ್ರವರಿ 23) ಸಂಜೆ ಆರ್‌ಎಸ್‌ಎಸ್‌ನ 100ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಮಾಜಿ ಸೈನಿಕರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಭಾಗವತ್, “ಯುಸಿಸಿ ಜಾರಿಯಾದರೆ ಅದು ಅತ್ಯುತ್ತಮ ಬೆಳವಣಿಗೆಯಾಗಲಿದೆ... ಇದು ದೇಶಾದ್ಯಂತ ಜಾರಿಯಾದರೆ ಒಳ್ಳೆಯದು. ಇದನ್ನು (ಉತ್ತರಾಖಂಡದ ಮಾದರಿಯಲ್ಲಿ) ಇದೇ ರೀತಿಯಲ್ಲಿ ಜಾರಿಗೊಳಿಸಬೇಕು ಎಂಬುದು ನನ್ನ ನಂಬಿಕೆ” ಎಂದು ಹೇಳಿದರು.

ಕಳೆದ ವರ್ಷ ಜನವರಿ 27 ರಂದು ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೆ ತಂದ ದೇಶದ ಮೊದಲ ರಾಜ್ಯ ಉತ್ತರಾಖಂಡ

ಸಮಾಜವನ್ನು ಒಗ್ಗೂಡಿಸುವ ಶಕ್ತಿ

ಸಮಾಜವನ್ನು ಒಗ್ಗೂಡಿಸಲು ಯುಸಿಸಿ ಅತ್ಯಗತ್ಯ ಎಂದು ಹೇಳಿದ ಆರ್‌ಎಸ್‌ಎಸ್ ಮುಖ್ಯಸ್ಥರು, ಉತ್ತರಾಖಂಡದ ಕರಡು ಪ್ರಸ್ತಾವನೆಯನ್ನು ಸಾರ್ವಜನಿಕ ಚರ್ಚೆಗೆ ಇಟ್ಟಾಗ, 3 ಲಕ್ಷಕ್ಕೂ ಹೆಚ್ಚು ಜನರಿಂದ ಸಲಹೆಗಳು ಬಂದವು ಮತ್ತು ಆ ಎಲ್ಲಾ ಸಲಹೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ ಎಂದು ತಿಳಿಸಿದರು.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟುವ ಉದ್ದೇಶದಿಂದ ರೂಪಿಸಲಾದ ಯುಜಿಸಿ ನಿಯಮಗಳಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಲು ಭಾಗವತ್ ನಿರಾಕರಿಸಿದರು. ಈ ವಿಚಾರವು ಪ್ರಸ್ತುತ ಸುಪ್ರೀಂ ಕೋರ್ಟ್‌ನ ಮುಂದಿರುವುದರಿಂದ ಅದರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸ್ವಾತಂತ್ರ್ಯದ ರಕ್ಷಣೆ

ಸೇನಾಪಡೆ ಮತ್ತು ಅರೆಸೇನಾಪಡೆಗಳ ನಿವೃತ್ತ ಹಾಗೂ ಹಾಲಿ ಅಧಿಕಾರಿಗಳು ಭಾಗವಹಿಸಿದ್ದ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಭಾಗವತ್​, ದೇಶವು ಸ್ವತಂತ್ರವಾಗಿದ್ದರೂ, ಆ ಸ್ವಾತಂತ್ರ್ಯವನ್ನು ರಕ್ಷಿಸಲು ರಕ್ಷಣಾ ಪಡೆಗಳ ಅಗತ್ಯ ಯಾವಾಗಲೂ ಇರುತ್ತದೆ ಎಂದು ಹೇಳಿದರು. ಸಂಘವನ್ನು ಯಾವುದೇ ಬಾಹ್ಯ ಸಂಪನ್ಮೂಲಗಳಿಲ್ಲದೆ ಸ್ಥಾಪಿಸಲಾಯಿತು ಮತ್ತು ಎರಡು ಬಾರಿ ಕಠಿಣ ನಿರ್ಬಂಧಗಳನ್ನು ಎದುರಿಸಿದರೂ, ಸಮಾಜದ ಆತ್ಮವಿಶ್ವಾಸದ ಬಲದಿಂದ ಅದು ನಿರಂತರವಾಗಿ ಪ್ರಗತಿ ಹೊಂದುತ್ತಲೇ ಬಂದಿದೆ ಎಂದು ಅವರು ತಿಳಿಸಿದರು.

ಮಾಜಿ ಸೈನಿಕರು ಸಂಘದ ಶಿಬಿರಗಳು ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಒತ್ತಾಯಿಸಿದ ಭಾಗವತ್, ಸ್ವಯಂಸೇವಕರ ಸಮರ್ಪಿತ ಕಾರ್ಯವನ್ನು ಗಮನಿಸುವಂತೆ ಹಾಗೂ ಅವರವರ ಆಸಕ್ತಿ ಮತ್ತು ಸಾಮರ್ಥ್ಯಗಳಿಗೆ ಅನುಗುಣವಾಗಿ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.

Read More
Next Story