x

ʼಮೇಕೆದಾಟʼಲು ಕರ್ನಾಟಕಕ್ಕೆ ಅಡ್ಡಿ; ಪರಿಷ್ಕೃತ ಡಿಪಿಆರ್ ತಿರಸ್ಕೃತ

ಕೊಡಗು ಭಾಗದಲ್ಲಿ ಉತ್ತಮ ಮಳೆಯಾದರೆ ತಮಿಳುನಾಡಿಗೆ ನಿಗದಿತ 177.25 ಟಿಎಂಸಿ ನೀರು ಸುಲಭವಾಗಿ ಹರಿದು ಹೋಗಲಿದೆ. ಆಗ ವಿವಾದ ತಲೆದೋರುವುದಿಲ್ಲ.ಆದರೆ, ಮಳೆ ಕೊರತೆಯಾದಾಗ ಜಲಾಶಯಗಳಲ್ಲಿ ಸಂಗ್ರಹ ಕಡಿಮೆ ಇರುತ್ತದೆ. ಆಗ ನೀರಿನ ಸಮಸ್ಯೆ ಎರಡೂ ರಾಜ್ಯಗಳಿಗೂ ಎದುರಾಗಲಿದೆ.


ಬೆಂಗಳೂರಿನ ಭವಿಷ್ಯದ ಕುಡಿಯುವ ನೀರಿನ ದಾಹ ತೀರಿಸುವ ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆಗೆ ಪದೇ ಪದೇ ಅಡೆತಡೆಗಳು ಎದುರಾಗುತ್ತಿರುವುದು ಕನ್ನಡಿಗರಲ್ಲಿ ತೀವ್ರ ಅಸಮಾಧಾನ ಮತ್ತು ಕಳವಳ ಉಂಟು ಮಾಡಿವೆ. ಕೇಂದ್ರ ಸರ್ಕಾರವು ತಮಿಳುನಾಡಿನ ಪರ ಪಕ್ಷಪಾತ ಧೋರಣೆ ತಳೆಯುತ್ತಿದೆಯೇ ಅಥವಾ ಕರ್ನಾಟಕದ ಯೋಜನೆಗಳಿಗೆ ಅನುಮೋದನೆ ನೀಡುವಲ್ಲಿ ತಾರತಮ್ಯ ಮಾಡುತ್ತಿದೆಯೇ ಎನ್ನುವ ಚರ್ಚೆ ಈಗ ಮುನ್ನೆಲೆಗೆ ಬಂದಿದೆ.

ಕೆಆರ್‌ಎಸ್‌ನಿಂದ ಮೆಟ್ಟೂರುವರೆಗೆ ನದಿಯ ಪಯಣ

ಸಾಮಾನ್ಯವಾಗಿ ಕೊಡಗು ಹಾಗೂ ಕಾವೇರಿ ಕೊಳ್ಳದ ಪ್ರದೇಶಗಳಲ್ಲಿ ಉತ್ತಮ ಮಳೆಯಾದಾಗ, ಕಾವೇರಿ ಮತ್ತು ಅದರ ಉಪನದಿಗಳ ನೀರು ಕೆಆರ್‌ಎಸ್‌ಗೆ ಜಲಾಶಯಕ್ಕೆ ಬಂದು ತಲುಪುತ್ತದೆ. ಜಲಾಶಯ ಭರ್ತಿಯಾದಾಗ ಗೇಟ್‌ಗಳನ್ನು ತೆರೆದು ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ ನೀರು ಹರಿಸಲಾಗುತ್ತದೆ.

ಕಾವೇರಿ ನೀರು ವಿವಾದಾತ್ಮಕ ನ್ಯಾಯಾಧಿಕರಣ ಹಾಗೂ 2018ರ ಸುಪ್ರೀಂಕೋರ್ಟ್ ತೀರ್ಪಿನಂತೆ ತಮಿಳುನಾಡಿಗೆ ನಿಗದಿತ 177.25 ಟಿಎಂಸಿ ನೀರು ಸುಲಭವಾಗಿ ಹರಿದು ಹೋಗಲಿದೆ. ಆಗ ವಿವಾದ ತಲೆದೋರುವುದಿಲ್ಲ.ಆದರೆ, ಮಳೆ ಕೊರತೆಯಾದಾಗ ಜಲಾಶಯಗಳಲ್ಲಿ ಸಂಗ್ರಹ ಕಡಿಮೆ ಇರುತ್ತದೆ. ಆಗ ನೀರಿನ ಸಮಸ್ಯೆ ಎರಡೂ ರಾಜ್ಯಗಳಿಗೂ ಎದುರಾಗಲಿದೆ. ಪ್ರಸಕ್ತ ಸಾಲಿನಲ್ಲಿ ಕೊಡಗು ಭಾಗದಲ್ಲಿ ಸರಿಯಾದ ಮಳೆಯಾಗಿಲ್ಲ. ಆದಾಗ್ಯೂ, ಕಾವೇರಿ ನೀರು ನಿರ್ವಹಣಾ ಸಮಿತಿ ಪ್ರತಿನಿತ್ಯ ತಮಿಳುನಾಡಿಗೆ ನೀರು ಬಿಡುವಂತೆ ನೀಡಿರುವ ಆದೇಶವು ಕರ್ನಾಟಕಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. “ನಮಗೇ ಕುಡಿಯಲು ನೀರಿಲ್ಲದಿರುವಾಗ ತಮಿಳುನಾಡಿಗೆ ಎಲ್ಲಿಂದ ಬಿಡುವುದು" ಎಂಬುದು ಕರ್ನಾಟಕದ ಪ್ರಶ್ನೆ.

ಪರಿಷ್ಕೃತ ಡಿಪಿಆರ್ ತಿರಸ್ಕೃತ

ಅರ್ಕಾವತಿ ಮತ್ತು ಕಾವೇರಿ ನದಿಗಳ ಸಂಗಮವಾದ ಮೇಕೆದಾಟಿನಲ್ಲಿ ಜಲಾಶಯ ನಿರ್ಮಿಸಿ, 2040ರ ವೇಳೆಗೆ ಬೆಂಗಳೂರಿನ 1.5 ಕೋಟಿಗೂ ಹೆಚ್ಚಿರುವ ಜನಸಂಖ್ಯೆಗೆ ಕುಡಿಯುವ ನೀರು ಪೂರೈಸುವುದು ಕರ್ನಾಟಕದ ಮೂಲ ಉದ್ದೇಶವಾಗಿದೆ.

ಡಿಪಿಆರ್ ತಿರಸ್ಕರಿಸಲು ಕೇಂದ್ರ ನೀಡಿದ ತಾಂತ್ರಿಕ ಕಾರಣಗಳನ್ನ ನೋಡುವುದಾದರೆ, ನ್ಯಾಯಾಧಿಕರಣದ ಪ್ರಕಾರ ಬೆಂಗಳೂರಿನ ಕುಡಿಯುವ ನೀರಿಗೆ 4.75 ಟಿಎಂಸಿ ನಿಗದಿಯಾಗಿದೆ. ಆದರೆ, ಹೊಸ ಯೋಜನೆ ಮೂಲಕ ಹೆಚ್ಚಿನ ನೀರು ಬಳಕೆ ಮಾಡಿಕೊಳ್ಳುವ ಪ್ರಸ್ತಾಪಕ್ಕೆ ಕೇಂದ್ರ ಜಲ ಆಯೋಗ ಆಕ್ಷೇಪ ಎತ್ತಿದೆ. 1990ರ ದಶಕದ ಮಳೆಯ ಅಂಕಿ-ಅಂಶಗಳನ್ನು ಆಧರಿಸಿ ನೀರಿನ ಲಭ್ಯತೆ ಲೆಕ್ಕ ಹಾಕಲಾಗಿದೆ. ಪ್ರಸ್ತುತ ಹವಾಮಾನ ವೈಪರೀತ್ಯದಿಂದಾಗಿ ಮಳೆಯ ಮಾದರಿ ಬದಲಾಗಿದ್ದು, ಇತ್ತೀಚಿನ ಅಂಕಿ-ಅಂಶಗಳೊಂದಿಗೆ ಡಿಪಿಆರ್ ಪರಿಷ್ಕರಿಸಿ ಸಲ್ಲಿಸುವಂತೆ ಸೂಚಿಸಿದೆ.

ಸಂಸತ್ತಿನಲ್ಲಿ ದ್ವಂದ್ವ ನಿಲುವುಗಳು

ಇತ್ತೀಚೆಗೆ ಸಂಸತ್ತಿನ ಅಧಿವೇಶನದಲ್ಲಿ ತಮಿಳುನಾಡು ಸಂಸದರು ಕೇಳಿದ ಪ್ರಶ್ನೆಗಳಿಗೆ ಜಲಶಕ್ತಿ ಸಚಿವಾಲಯ ನೀಡಿದ ಉತ್ತರಗಳು ಕರ್ನಾಟಕಕ್ಕೆ ಕಳವಳ ತಂದೊಡ್ಡಿವೆ.

ರಾಜ್ಯಕ್ಕೆ ಸಿಗಬೇಕಾದ ಪಾಲಿನ ನೀರನ್ನು ಸಂಗ್ರಹಿಸಲು ಕೆಳಗಿನ ರಾಜ್ಯಗಳ (ತಮಿಳುನಾಡು, ಕೇರಳ, ಪುದುಚೇರಿ) ಅನುಮತಿ ಅಗತ್ಯವಿಲ್ಲ ಎಂದು ಹೇಳಿತ್ತು. ಯೋಜನೆಗೆ ಅನುಮೋದನೆ ನೀಡುವ ಮುನ್ನ ತಮಿಳುನಾಡಿನ ರೈತರ ಹಿತಾಸಕ್ತಿ, ಜಲಸಂಪನ್ಮೂಲ ಹಾಗೂ ಪರಿಸರ ಕಾಳಜಿಗಳನ್ನು ಪರಿಗಣಿಸಲಾಗುವುದು ಎಂದು ತಿಳಿಸಿರುವುದು ಕರ್ನಾಟಕದ ಮಟ್ಟಿಗೆ ಹಿನ್ನಡೆಯಾಗಿ ಗೋಚರಿಸುತ್ತಿದೆ. ಜಲಶಕ್ತಿ ಸಚಿವಾಲಯದಿಂದ ಅಂತಿಮ ಒಪ್ಪಿಗೆ ಸಿಗುವವರೆಗೆ ಅರಣ್ಯ ಭೂಮಿ ಮುಳುಗಡೆಗೆ ಸಂಬಂಧಿಸಿದಂತೆ ಯಾವುದೇ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಅರಣ್ಯ ಸಚಿವಾಲಯ ಸ್ಪಷ್ಟಪಡಿಸಿದೆ.

ನಾಯಕತ್ವ ಮತ್ತು ರಾಜಕೀಯ ಇಚ್ಛಾಶಕ್ತಿ ಕೊರತೆ

ನೈಸರ್ಗಿಕ ಸಂಪನ್ಮೂಲಗಳು ಯಾವುದೇ ಒಂದು ರಾಜ್ಯದಲ್ಲಿ ಹುಟ್ಟಿದರೂ ಅದನ್ನು 'ರಾಷ್ಟ್ರೀಯ ಸಂಪತ್ತು' ಎಂದು ಒಕ್ಕೂಟ ವ್ಯವಸ್ಥೆಯಲ್ಲಿ ಪರಿಗಣಿಸಲಾಗುತ್ತದೆ. ಆದಾಗ್ಯೂ, ತಮಿಳುನಾಡಿನ ಪ್ರಾದೇಶಿಕ ಪಕ್ಷಗಳು ಪಕ್ಷಭೇದ ಮರೆತು ದೆಹಲಿಯಲ್ಲಿ ತಮ್ಮ ರಾಜ್ಯದ ಹಿತಾಸಕ್ತಿಗಾಗಿ ಒಗ್ಗಟ್ಟಿನ ಧ್ವನಿ ಎತ್ತುತ್ತವೆ. ಅದಕ್ಕೆ ಹೋಲಿಸಿದರೆ, ಕರ್ನಾಟಕದಿಂದ ಆಯ್ಕೆಯಾದ ರಾಷ್ಟ್ರೀಯ ಪಕ್ಷಗಳ ಸಂಸದರು ದೆಹಲಿ ಮಟ್ಟದಲ್ಲಿ ಗಟ್ಟಿಯಾದ ಒತ್ತಡ ಹೇರುವಲ್ಲಿ ಮತ್ತು ಕಾನೂನಾತ್ಮಕ ಹೋರಾಟ ತೀವ್ರಗೊಳಿಸುವಲ್ಲಿ ಹಿಂದುಳಿಯುತ್ತಿದ್ದಾರೆ ಎಂಬ ಭಾವನೆ ಸಾರ್ವಜನಿಕರಲ್ಲಿದೆ.

ಒಟ್ಟಾರೆ, ಮೇಕೆದಾಟು ಯೋಜನೆ ಸಂಪೂರ್ಣವಾಗಿ ರದ್ದಾಗಿಲ್ಲ. ಕೇಂದ್ರ ಸರ್ಕಾರ ಯೋಜನೆ ತಿರಸ್ಕರಿಸುವ ಬದಲಿಗೆ ಸ್ಪಷ್ಟ ಹಾಗೂ ಪರಿಷ್ಕೃತ ಡಿಪಿಆರ್ ಸಲ್ಲಿಸಲು ಸೂಚಿಸಿದೆ. ರಾಜ್ಯ ಸರ್ಕಾರವು ತಾಂತ್ರಿಕ ಹಾಗೂ ಕಾನೂನು ಅಂಶಗಳನ್ನು ಸರಿಪಡಿಸಿ, ಶೀಘ್ರವಾಗಿ ಮರುಸಲ್ಲಿಕೆ ಮಾಡಿ ಅನುಮೋದನೆ ಪಡೆದುಕೊಳ್ಳಬೇಕಾದ ತುರ್ತು ಅಗತ್ಯವಿದೆ.

Read More
Next Story