
ಉತ್ತರ ಪ್ರದೇಶದ ಮೀರತ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಐವರು ಮಕ್ಕಳು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ.
ಮೀರತ್‌ನಲ್ಲಿ ಭೀಕರ ಅಗ್ನಿಅವಘಡ: ಐವರು ಮಕ್ಕಳು ಸೇರಿ ಆರು ಜನರ ದುರ್ಮರಣ
Fire Accident| ಉತ್ತರ ಪ್ರದೇಶದ ಮೀರತ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಐವರು ಮಕ್ಕಳು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶದ ಮೀರತ್ನ ಲಿಸಾಡಿ ಗೇಟ್ ಪ್ರದೇಶದ ಮನೆಯೊಂದರಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಐವರು ಕಂದಮ್ಮಗಳು ಸೇರಿದಂತೆ ಒಟ್ಟು ಆರು ಜನರು ದುರಂತ ಅಂತ್ಯ ಕಂಡಿದ್ದಾರೆ. ಕಿದ್ವಾಯಿ ನಗರದ ನಿವಾಸಿ ಇಕ್ಬಾಲ್ ಅನ್ಸಾರಿ ಎಂಬುವವರ ಮೂರು ಅಂತಸ್ತಿನ ಮನೆಯಲ್ಲಿ ಈ ಘಟನೆ ನಡೆದಿದ್ದು, ಇಡೀ ಪ್ರದೇಶದಲ್ಲಿ ಶೋಕದ ಛಾಯೆ ಆವರಿಸಿದೆ.
ಮೃತಪಟ್ಟವರನ್ನು ರುಖ್ಸರ್ (25), ಮಹ್ಬಿಶ್ (12), ಹಮ್ಮದ್ (4), ಅಕ್ದಾಸ್ (4) ಹಾಗೂ ಕೇವಲ ನಾಲ್ಕು ತಿಂಗಳ ಹಸುಗೂಸುಗಳಾದ ನಬಿಯಾ ಮತ್ತು ಇನಾಯತ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ 55 ವರ್ಷದ ಅಮೀರ್ ಬಾನೋ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ನಾಗರಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಜವಳಿ ಉದ್ಯಮಿಯಾದ ಇಕ್ಬಾಲ್ ಅವರ ಮನೆಯ ನೆಲಮಹಡಿಯಲ್ಲಿ ಸಿದ್ಧ ಉಡುಪುಗಳ ಗೋದಾಮು ಇತ್ತು. ಸೋಮವಾರ ರಾತ್ರಿ ಸುಮಾರು 8:30ರ ಸುಮಾರಿಗೆ ಮನೆಯ ಮೊದಲ ಮಹಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ಗೋದಾಮಿನಲ್ಲಿದ್ದ ಬಟ್ಟೆಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಬಟ್ಟೆಗಳಿದ್ದ ಕಾರಣ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಮನೆಗೆ ವ್ಯಾಪಿಸಿದ್ದು, ಮೇಲೆ ವಾಸವಿದ್ದ ಕುಟುಂಬಸ್ಥರು ಕೆಳಗಿಳಿಯಲು ದಾರಿಯಿಲ್ಲದೆ ಸಿಲುಕಿಕೊಂಡರು.
ದುರಂತದ ಸಮಯದಲ್ಲಿ ಕುಟುಂಬದ ಪುರುಷರು ಪ್ರಾರ್ಥನೆಗಾಗಿ ಹತ್ತಿರದ ಮಸೀದಿಗೆ ಹೋಗಿದ್ದರು. ಮನೆಯಲ್ಲಿ ಸಿಲುಕಿದ ರುಖ್ಸರ್ ತನ್ನ ಮಕ್ಕಳನ್ನು ಉಳಿಸುವ ಸಲುವಾಗಿ ಎರಡನೇ ಮಹಡಿಯ ಕೊಠಡಿಯೊಂದಕ್ಕೆ ಕರೆದೊಯ್ದು ಬಾಗಿಲು ಹಾಕಿಕೊಂಡಿದ್ದರು. ಆದರೆ ಹೊಗೆ ಮತ್ತು ಜ್ವಾಲೆಗಳು ಆ ಕೊಠಡಿಯನ್ನೂ ಆವರಿಸಿದ್ದರಿಂದ ಉಸಿರುಗಟ್ಟಿ ಹಾಗೂ ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಎಲ್ಲರೂ ಮೃತಪಟ್ಟಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಇಕ್ಬಾಲ್ ಮತ್ತು ಅಸಿಮ್ ಅವರು ಒಳಗೆ ಹೋಗಲು ಪ್ರಯತ್ನಿಸಿದರೂ, ಬೆಂಕಿಯ ತೀವ್ರತೆಯಿಂದಾಗಿ ಅಸಹಾಯಕರಾಗಿ ನಿಲ್ಲಬೇಕಾಯಿತು.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಮೂರು ವಾಹನಗಳು ಸತತ ಒಂದು ಗಂಟೆಯ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದವು. ಅಗ್ನಿಶಾಮಕ ಸಿಬ್ಬಂದಿ ಪಕ್ಕದ ಮನೆಗಳ ಛಾವಣಿಯ ಮೂಲಕ ಏಣಿಗಳನ್ನು ಬಳಸಿ ಒಳಗೆ ಪ್ರವೇಶಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು ಹೊರತಂದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ರುಖ್ಸರ್ ಮತ್ತು ಐವರು ಮಕ್ಕಳು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಲಿಸಾಡಿ ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

