ರಾಜ್ಯಸಭೆ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್!
x

ರಾಜ್ಯಸಭೆ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್!

ಚುನಾವಣಾ ಅಧಿಕಾರಿಯ ಈ ನಿರ್ಧಾರವನ್ನು "ಪ್ರಜಾಪ್ರಭುತ್ವದ ವಿರೋಧಿ ಮತ್ತು ಪಕ್ಷಪಾತದ ನಿರ್ಧಾರ" ಎಂದು ಕರೆದಿರುವ ಕಾಂಗ್ರೆಸ್, ಸುಪ್ರೀಂ ಕೋರ್ಟ್‌ನಲ್ಲಿ ತುರ್ತು ವಿಚಾರಣೆಗೆ ಮನವಿ ಮಾಡಿದೆ.


Click the Play button to hear this message in audio format

ಮಧ್ಯಪ್ರದೇಶದಿಂದ ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಹಿರಿಯ ನಾಯಕಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕೃತಗೊಂಡಿದ್ದು, ಇದನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ಚುನಾವಣಾ ಅಧಿಕಾರಿ ಅರವಿಂದ್ ಶರ್ಮಾ ಅವರು ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ತಿರಸ್ಕರಿಸಿದ್ದಾರೆ. ಬಿಜೆಪಿ ನಾಯಕರು ಸಲ್ಲಿಸಿದ್ದ ಆಕ್ಷೇಪಣೆಯನ್ನು ಪುರಸ್ಕರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ತೆಲಂಗಾಣದ ಹೈದರಾಬಾದ್ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣವೊಂದರ ವಿವರಗಳನ್ನು ಮೀನಾಕ್ಷಿ ಅವರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಉಲ್ಲೇಖಿಸಿಲ್ಲ ಎಂಬುದು ಬಿಜೆಪಿ ಆರೋಪವಾಗಿತ್ತು. ನ್ಯಾಯಾಲಯದ ಸಮನ್ಸ್‌ಗೆ ಅಕ್ಟೋಬರ್ 2025 ರಲ್ಲಿ ಪ್ರತಿಕ್ರಿಯಿಸಿದ್ದರೂ, ಆ ಮಾಹಿತಿಯನ್ನು ಮುಚ್ಚಿಡಲಾಗಿದೆ ಎಂದು ಅಧಿಕಾರಿಗಳು ನಾಮಪತ್ರವನ್ನು ಅಸಿಂಧುಗೊಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಕಾಂಗ್ರೆಸ್ ಕಾನೂನು ಸಮರ

ಚುನಾವಣಾ ಅಧಿಕಾರಿಯ ಈ ನಿರ್ಧಾರವನ್ನು "ಪ್ರಜಾಪ್ರಭುತ್ವದ ವಿರೋಧಿ ಮತ್ತು ಪಕ್ಷಪಾತದ ನಿರ್ಧಾರ" ಎಂದು ಕರೆದಿರುವ ಕಾಂಗ್ರೆಸ್, ಸುಪ್ರೀಂ ಕೋರ್ಟ್‌ನಲ್ಲಿ ತುರ್ತು ವಿಚಾರಣೆಗೆ ಮನವಿ ಮಾಡಿದೆ.

ಕಾಂಗ್ರೆಸ್ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ವಾದ ಮಂಡಿಸಿದ್ದು, "ಮೀನಾಕ್ಷಿ ನಟರಾಜನ್ ವಿರುದ್ಧ ಯಾವುದೇ ಅಧಿಕೃತ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ. ಕೇವಲ ಖಾಸಗಿ ದೂರಿಗೆ ಸಂಬಂಧಿಸಿದಂತೆ ಕೋರ್ಟ್ ನೋಟಿಸ್ ಅಥವಾ ಪ್ರಿ-ಕಾಗ್ನಿಸನ್ಸ್ ಸಮನ್ಸ್ ಜಾರಿಯಾಗಿದೆ ಅಷ್ಟೆ. ಜನಪ್ರತಿನಿಧಿ ಕಾಯ್ದೆ ಸೆಕ್ಷನ್ 33A ಪ್ರಕಾರ, ನ್ಯಾಯಾಲಯವು ಪ್ರಕರಣವನ್ನು ಅಧಿಕೃತವಾಗಿ ಕೈಗೆತ್ತಿಕೊಂಡರೆ ಅಥವಾ ದೋಷಾರೋಪಣೆ ಪಟ್ಟಿ ಸಲ್ಲಿಕೆಯಾದರೆ ಮಾತ್ರ ಅಫಿಡವಿಟ್‌ನಲ್ಲಿ ಉಲ್ಲೇಖಿಸುವುದು ಕಡ್ಡಾಯವಾಗಿರುತ್ತದೆ. ಹೀಗಾಗಿ ಚುನಾವಣಾ ಅಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ನಾಮಪತ್ರ ತಿರಸ್ಕರಿಸಿದ್ದಾರೆ" ಎಂದು ವಾದಿಸಿದ್ದಾರೆ.

ಜಸ್ಟಿಸ್ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಜಸ್ಟಿಸ್ ಅತುಲ್ ಚಾಂದೂರ್ಕರ್ ಅವರನ್ನೊಳಗೊಂಡ ರಜಾಕಾಲದ ಪೀಠವು ಈ ಅರ್ಜಿಯ ತುರ್ತು ವಿಚಾರಣೆ ನಡೆಸಲು ಸಮ್ಮತಿಸಿದ್ದು, ಜೂನ್ 12 (ಶುಕ್ರವಾರ) ರಂದು ವಿಚಾರಣೆ ನಿಗದಿಪಡಿಸಿದೆ. ಆದರೆ, ಸದ್ಯಕ್ಕೆ ಚುನಾವಣಾ ಫಲಿತಾಂಶ ಪ್ರಕಟಣೆಗೆ ತಡೆಯಾಜ್ಞೆ ನೀಡಲು ಕೋರ್ಟ್ ನಿರಾಕರಿಸಿದೆ.

ರಾಜಕೀಯ ತಲ್ಲಣ ಮತ್ತು ರೆಸಾರ್ಟ್ ರಾಜಕೀಯದ ಆತಂಕ

ಮಧ್ಯಪ್ರದೇಶದ ಒಟ್ಟು 3 ರಾಜ್ಯಸಭಾ ಸ್ಥಾನಗಳಿಗೆ ಜೂನ್ 18 ರಂದು ಚುನಾವಣೆ ನಿಗದಿಯಾಗಿದೆ. ಸಂಖ್ಯಾಬಲದ ಆಧಾರದ ಮೇಲೆ ಬಿಜೆಪಿ ಸುಲಭವಾಗಿ 2 ಸ್ಥಾನ ಹಾಗೂ ಕಾಂಗ್ರೆಸ್ 1 ಸ್ಥಾನ ಗೆಲ್ಲುವ ಅವಕಾಶವಿತ್ತು. ಆದರೆ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕಾರದಿಂದಾಗಿ ಕಾಂಗ್ರೆಸ್ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಇತ್ತ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ಕರೆತಂದು ರೆಸಾರ್ಟ್ ರಾಜಕೀಯ ನಡೆಸಲು ಯೋಜಿಸಲಾಗಿತ್ತು ಎನ್ನಲಾಗಿದ್ದು, ನಾಮಪತ್ರ ತಿರಸ್ಕಾರದ ಸುದ್ದಿ ತಿಳಿಯುತ್ತಿದ್ದಂತೆ ಮಧ್ಯಪ್ರದೇಶದ ಶಾಸಕರ ವಿಶೇಷ ವಿಮಾನವು ಅರ್ಧ ಹಾದಿಯಿಂದಲೇ ವಾಪಸ್ ಹೋಗಿದೆ ಎಂದು ವರದಿಗಳು ತಿಳಿಸಿವೆ.

Read More
Next Story