ಮನಮೋಹನ್‌ ಸಿಂಗ್‌ ವಿಧಿವಶರಾದ ಎರಡು ವರ್ಷಗಳ ಬಳಿಕ ಕಲ್ಲಿದ್ದಲು ಹಗರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ರಿಲೀಫ್‌
x

ಮನಮೋಹನ್‌ ಸಿಂಗ್‌ ವಿಧಿವಶರಾದ ಎರಡು ವರ್ಷಗಳ ಬಳಿಕ ಕಲ್ಲಿದ್ದಲು ಹಗರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ರಿಲೀಫ್‌

ಈ ಪ್ರಕರಣವು 2005ರಲ್ಲಿ ಒಡಿಶಾದ ತಲಬಿರಾ-2 ಕಲ್ಲಿದ್ದಲು ಗಣಿ ಹಂಚಿಕೆಗೆ ಸಂಬಂಧಿಸಿದೆ. ಆ ಸಂದರ್ಭದಲ್ಲಿ ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಷ್ಟೇ ಅಲ್ಲದೆ ಕಲ್ಲಿದ್ದಲು ಸಚಿವಾಲಯದ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದರು.


Click the Play button to hear this message in audio format

ಮಾಜಿ ಪ್ರಧಾನಿ ದಿವಂಗತ ಡಾ. ಮನಮೋಹನ್ ಸಿಂಗ್ ನಿಧನರಾದ ಸುಮಾರು ಎರಡು ವರ್ಷಗಳ ಬಳಿಕ, ಅವರ ಪ್ರಧಾನಮಂತ್ರಿಯ ಅವಧಿಯಲ್ಲಿ ವಿವಾದಕ್ಕೀಡಾಗಿದ್ದ ತಲಬಿರಾ-2 ಕಲ್ಲಿದ್ದಲು ಗಣಿ ಹಂಚಿಕೆ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ಅಂತಿಮ ತೆರೆ ಎಳೆದಿದೆ. ಮಹತ್ವದ ತೀರ್ಪಿನಲ್ಲಿ, ಡಾ. ಮನಮೋಹನ್ ಸಿಂಗ್ ಸೇರಿದಂತೆ ಐವರು ಆರೋಪಿಗಳ ವಿರುದ್ಧ ವಿಚಾರಣೆಗೆ ಹಾಜರಾಗುವಂತೆ 2015ರಲ್ಲಿ ವಿಶೇಷ ಸಿಬಿಐ ನ್ಯಾಯಾಲಯ ನೀಡಿದ್ದ ಸಮನ್ಸ್ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಆ ಮೂಲಕ ಮನಮೋಹನ್‌ ಸಿಂಗ್‌ ಅವರಿಗೆ ಕ್ಲೀನ್ ಚಿಟ್ ನೀಡಿದೆ.

ಈ ತೀರ್ಪಿನೊಂದಿಗೆ ಸುಮಾರು 11 ವರ್ಷಗಳಿಂದ ಮುಂದುವರಿದಿದ್ದ ಕಾನೂನು ಹೋರಾಟಕ್ಕೆ ಅಂತ್ಯ ಸಿಕ್ಕಿದೆ. ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ, ಡಾ. ಮನಮೋಹನ್ ಸಿಂಗ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಯಾವುದೇ ಸಾಕ್ಷ್ಯಾಧಾರಗಳು ದೊರೆತಿಲ್ಲ ಎಂದು ಎರಡು ಪ್ರತ್ಯೇಕ ಕ್ಲೋಸರ್ ವರದಿಗಳನ್ನು ಸಲ್ಲಿಸಿತ್ತು. ಆದರೆ, ವಿಶೇಷ ಸಿಬಿಐ ನ್ಯಾಯಾಲಯವು ಆ ವರದಿಗಳನ್ನು ತಿರಸ್ಕರಿಸಿ, ಮಾಜಿ ಪ್ರಧಾನಿಯ ವಿರುದ್ಧ ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿತ್ತು.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು ಸಿಬಿಐ ಸಲ್ಲಿಸಿದ್ದ ಕ್ಲೋಸರ್ ವರದಿಗಳನ್ನು ಅಂಗೀಕರಿಸಿ, ಅವುಗಳನ್ನು ತಿರಸ್ಕರಿಸಲು ವಿಶೇಷ ನ್ಯಾಯಾಲಯವು ಸಮರ್ಪಕ ಕಾನೂನು ಕಾರಣಗಳನ್ನು ನೀಡಿರಲಿಲ್ಲ ಎಂದು ಸ್ಪಷ್ಟಪಡಿಸಿದೆ. ತನಿಖಾ ಸಂಸ್ಥೆಯು ಸಮಗ್ರ ತನಿಖೆ ನಡೆಸಿ ಯಾವುದೇ ಅಪರಾಧ ಪ್ರಕರಣ ರೂಪುಗೊಳ್ಳುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯದ ಕ್ರಮ ಸಮರ್ಥನೀಯವಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಇದರೊಂದಿಗೆ, 2015ರ ಮಾರ್ಚ್ 11ರಂದು ವಿಶೇಷ ಸಿಬಿಐ ನ್ಯಾಯಾಲಯ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದು, ಸಿಬಿಐ ಕ್ಲೋಸರ್ ವರದಿಗಳನ್ನು ಅಧಿಕೃತವಾಗಿ ಅಂಗೀಕರಿಸಿ ಪ್ರಕರಣವನ್ನು ಅಂತ್ಯಗೊಳಿಸಿದೆ.

2005ರ ಕಲ್ಲಿದ್ದಲು ಗಣಿ ಹಂಚಿಕೆ ವಿವಾದ

ಈ ಪ್ರಕರಣವು 2005ರಲ್ಲಿ ಒಡಿಶಾದ ತಲಬಿರಾ-2 ಕಲ್ಲಿದ್ದಲು ಗಣಿ ಹಂಚಿಕೆಗೆ ಸಂಬಂಧಿಸಿದೆ. ಆ ಸಂದರ್ಭದಲ್ಲಿ ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಷ್ಟೇ ಅಲ್ಲದೆ ಕಲ್ಲಿದ್ದಲು ಸಚಿವಾಲಯದ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದರು. ಸಿಬಿಐ ತನಿಖೆಯಲ್ಲಿ ಅವರ ವಿರುದ್ಧ ವಿಚಾರಣೆಗೆ ಸಾಕಷ್ಟು ಸಾಕ್ಷ್ಯಾಧಾರಗಳು ಇಲ್ಲ ಎಂದು ಹೇಳಿದ್ದರೂ, ವಿಶೇಷ ನ್ಯಾಯಾಲಯವು ಕ್ರಿಮಿನಲ್ ಸಂಚು ಮತ್ತು ನಂಬಿಕೆ ದ್ರೋಹ ಸೇರಿದಂತೆ ವಿವಿಧ ಆರೋಪಗಳಡಿ ಡಾ. ಸಿಂಗ್ ಹಾಗೂ ಇತರ ಐವರು ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಿತ್ತು.

ಈ ಆದೇಶದ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್ 2015ರ ಏಪ್ರಿಲ್ 1ರಂದು ವಿಚಾರಣೆಗೆ ತಡೆ ನೀಡಿತ್ತು. ಆ ತಡೆ ಆದೇಶ ಮುಂದುವರಿದಿದ್ದ ಹಿನ್ನೆಲೆ, ಇದೀಗ ಅಂತಿಮ ತೀರ್ಪು ನೀಡಿ ಪ್ರಕರಣವನ್ನು ಸಂಪೂರ್ಣವಾಗಿ ಮುಕ್ತಾಯಗೊಳಿಸಿದೆ.

11 ವರ್ಷಗಳ ವಿವಾದಕ್ಕೆ ತೆರೆ

ಯುಪಿಎ ಸರ್ಕಾರದ ಅವಧಿಯಲ್ಲಿ ದೇಶದ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಕಲ್ಲಿದ್ದಲು ಗಣಿ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಉಳಿದಿದ್ದ ಪ್ರಮುಖ ಕ್ರಿಮಿನಲ್ ಪ್ರಕರಣಗಳಲ್ಲಿ ಇದು ಒಂದಾಗಿತ್ತು. ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ವೈಯಕ್ತಿಕ ಪ್ರಾಮಾಣಿಕತೆಯನ್ನು ರಾಜಕೀಯ ವಿರೋಧಿಗಳೂ ಹಲವು ಬಾರಿ ಒಪ್ಪಿಕೊಂಡಿದ್ದರೂ, ಈ ಪ್ರಕರಣ ಅವರ ಹೆಸರಿನ ಮೇಲೆ ಕಾನೂನು ನೆರಳಾಗಿ ಉಳಿದಿತ್ತು.

ಸುಪ್ರೀಂ ಕೋರ್ಟ್‌ನ ತಾಜಾ ತೀರ್ಪಿನೊಂದಿಗೆ ತಲಬಿರಾ-2 ಪ್ರಕರಣದಲ್ಲಿ ಅವರ ವಿರುದ್ಧದ ಎಲ್ಲಾ ಕ್ರಿಮಿನಲ್ ಆರೋಪಗಳಿಗೆ ಅಂತಿಮ ತೆರೆ ಬಿದ್ದಿದ್ದು, ಸಿಬಿಐ ತನಿಖೆಯ ತೀರ್ಮಾನವನ್ನು ನ್ಯಾಯಾಲಯ ಮಾನ್ಯಗೊಳಿಸಿದೆ. ಅದೇ ವೇಳೆ, ತನಿಖಾ ಸಂಸ್ಥೆಯ ವರದಿಯನ್ನು ತಿರಸ್ಕರಿಸುವ ಅಧಿಕಾರ ನ್ಯಾಯಾಲಯಗಳಿಗೆ ಇದ್ದರೂ, ಅಂತಹ ತೀರ್ಮಾನಗಳು ಸದೃಢ ಕಾನೂನು ಆಧಾರ ಮತ್ತು ಸಮರ್ಪಕ ಕಾರಣಗಳ ಮೇಲೆ ಮಾತ್ರ ನಿಲ್ಲಬೇಕು ಎಂಬ ಮಹತ್ವದ ಸಂದೇಶವನ್ನೂ ಸುಪ್ರೀಂ ಕೋರ್ಟ್ ತನ್ನ ತೀರ್ಪಿನ ಮೂಲಕ ನೀಡಿದೆ.

Read More
Next Story