ಗುರುಗ್ರಾಮದಲ್ಲಿ ಲಿವ್-ಇನ್​ ಸಂಗಾತಿ ಮೇಲೆ ಸ್ಯಾನಿಟೈಸರ್ ಸುರಿದು ಬೆಂಕಿ ಹಚ್ಚಲು ಯತ್ನ; ಸೆರೆ
x

ಗುರುಗ್ರಾಮದಲ್ಲಿ ಲಿವ್-ಇನ್​ ಸಂಗಾತಿ ಮೇಲೆ ಸ್ಯಾನಿಟೈಸರ್ ಸುರಿದು ಬೆಂಕಿ ಹಚ್ಚಲು ಯತ್ನ; ಸೆರೆ

ಯುವತಿಯು ತ್ರಿಪುರಾದವಳಾಗಿದ್ದು, ಬಿಎಸ್ಸಿ ಓದುತ್ತಿದ್ದಾಳೆ. ಆನ್‌ಲೈನ್ ಆ್ಯಪ್ ಮೂಲಕ ದೆಹಲಿಯ ನರೇಲಾ ನಿವಾಸಿಯಾದ ಶಿವಂ ಎಂಬ 19 ವರ್ಷದ ಯುವಕನೊಂದಿಗೆ ಆಕೆಗೆ ಪರಿಚಯವಾಗಿ ಲಿವ್​ ಇನ್ ರಿಲೇಷನ್​ಶಿಪ್​ನಲ್ಲಿದ್ದಳು.


Click the Play button to hear this message in audio format

ಹರಿಯಾಣದ ಗುರುಗ್ರಾಮದಲ್ಲಿ ಯುವತಿಯೊಬ್ಬಳ ಮೇಲೆ ಲಿವ್-ಇನ್ ಪಾರ್ಟ್ನರ್ ಅಮಾನವೀಯವಾಗಿ ಹಲ್ಲೆ ನಡೆಸಿ, ಆಕೆಯ ಗುಪ್ತಾಂಗಗಳ ಮೇಲೆ ಸ್ಯಾನಿಟೈಸರ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ದೆಹಲಿ ಮೂಲದ ಆರೋಪಿಯು ಯುವತಿಯ ತಲೆಯನ್ನು ಗೋಡೆ ಹಾಗೂ ಪೀಠೋಪಕರಣಗಳಿಗೆ ಜಜ್ಜಿ, ಸ್ಟೀಲ್ ಬಾಟಲಿ ಹಾಗೂ ಮಣ್ಣಿನ ಮಡಕೆಯಿಂದ ಮನಬಂದಂತೆ ಥಳಿಸಿದ್ದಾನೆ. ಅಷ್ಟೇ ಅಲ್ಲದೆ, ತಾನು ನಡೆಸಿದ ಈ ಪೈಶಾಚಿಕ ಕೃತ್ಯವನ್ನು ಮೊಬೈಲ್‌ನಲ್ಲಿ ವಿಡಿಯೋ ಕೂಡ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಬಾದಷಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಭೀಕರ ಘಟನೆ ನಡೆದಿದೆ.

ಲಿವ್-ಇನ್ ರಿಲೇಶನ್‌ಶಿಪ್

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಸಂತ್ರಸ್ತ ಯುವತಿಯು ಮೂಲತಃ ತ್ರಿಪುರಾದವಳಾಗಿದ್ದು, ಬಿಎಸ್ಸಿ ಓದುತ್ತಿದ್ದಾಳೆ. ಸೆಪ್ಟೆಂಬರ್ 2025ರಲ್ಲಿ ಆನ್‌ಲೈನ್ ಆ್ಯಪ್ ಮೂಲಕ ದೆಹಲಿಯ ನರೇಲಾ ನಿವಾಸಿಯಾದ ಶಿವಂ ಎಂಬ 19 ವರ್ಷದ ಯುವಕನೊಂದಿಗೆ ಆಕೆಗೆ ಪರಿಚಯವಾಗಿತ್ತು. ಈ ಪರಿಚಯ ಕೆಲವೇ ದಿನಗಳಲ್ಲಿ ಪ್ರೇಮಕ್ಕೆ ತಿರುಗಿ, ಇಬ್ಬರೂ ಭೇಟಿಯಾಗಲು ಶುರುಮಾಡಿದ್ದರು. ಬಳಿಕ ಆರೋಪಿ ಶಿವಂ, ಮದುವೆಯಾಗುವ ಸುಳ್ಳು ಭರವಸೆ ನೀಡಿ ತನ್ನೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ, ಕೆಲವು ದಿನಗಳಿಂದ ಗುರುಗ್ರಾಮದಲ್ಲಿ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿ (ಒಟ್ಟಿಗೆ ವಾಸ) ವಾಸವಿದ್ದೆವು ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾಳೆ.

ಆಸ್ಪತ್ರೆಗೆ ದಾಖಲು

ಫೆಬ್ರವರಿ 18ರ ರಾತ್ರಿ ಆರೋಪಿಯು ಯುವತಿಯ ಮೇಲೆ ತೀವ್ರ ಹಲ್ಲೆ ನಡೆಸಿದ್ದಾನೆ. ಈ ಭೀಕರ ಹಲ್ಲೆಯ ಬಳಿಕ, ಹೇಗೋ ಮಾಡಿ ಆರೋಪಿಯ ಫೋನ್‌ನಿಂದಲೇ ಯುವತಿ ತನ್ನ ತಾಯಿಗೆ ಕರೆ ಮಾಡಿ, ತನ್ನ ಮೇಲಾದ ದೌರ್ಜನ್ಯವನ್ನು ಬಂಗಾಳಿ ಭಾಷೆಯಲ್ಲಿ ವಿವರಿಸಿದ್ದಾಳೆ. ಆರೋಪಿಗೆ ಬಂಗಾಳಿ ಭಾಷೆ ಅರ್ಥವಾಗದ ಕಾರಣ ಆಕೆಗೆ ಈ ಅವಕಾಶ ಸಿಕ್ಕಿತ್ತು. ವಿಷಯ ತಿಳಿದ ತಕ್ಷಣ ಆತಂಕಗೊಂಡ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದಾವಿಸಿದ ಪೊಲೀಸರು, ಯುವತಿಯನ್ನು ರಕ್ಷಿಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆಕೆಯ ಸ್ಥಿತಿ ಗಂಭೀರವಾಗಿದ್ದರಿಂದ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಆಕೆ ಹೇಳಿಕೆ ನೀಡುವಷ್ಟು ಚೇತರಿಸಿಕೊಂಡ ಬಳಿಕ, ಪೊಲೀಸರು ಆಕೆಯ ಅಧಿಕೃತ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಆರೋಪಿ ಬಂಧನ

"ಸಂತ್ರಸ್ತೆಯ ಕುಟುಂಬದವರು ನೀಡಿದ ಮಾಹಿತಿಯ ಮೇರೆಗೆ ಗುರುಗ್ರಾಮ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಯುವತಿಯನ್ನು ರಕ್ಷಿಸಿದ್ದಾರೆ. ಸದ್ಯ ಆಕೆಯ ಆರೋಗ್ಯ ಸ್ಥಿರವಾಗಿದೆ. ಲಿಖಿತ ದೂರಿನ ಆಧಾರದ ಮೇಲೆ, ದೆಹಲಿಯ ನರೇಲಾ ಮೂಲದ 19 ವರ್ಷದ ಆರೋಪಿ ಶಿವಂನನ್ನು ಬಂಧಿಸಲಾಗಿದೆ. ಆತನ ವಿರುದ್ಧ ಅತ್ಯಾಚಾರ ಸೇರಿದಂತೆ ಹಲವು ಗಂಭೀರ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಮುಗಿದ ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ (ಜೈಲಿಗೆ) ಕಳುಹಿಸಲಾಗಿದೆ. ಈ ಪ್ರಕರಣದ ಕುರಿತು ಗಂಭೀರ ತನಿಖೆ ಮುಂದುವರಿದಿದೆ" ಎಂದು ಗುರುಗ್ರಾಮ ಪೊಲೀಸ್ ವಕ್ತಾರ ಸಂದೀಪ್ ಕುಮಾರ್ ಎಎನ್‌ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಪೊಲೀಸ್ ಸೆಕ್ಷನ್‌ಗಳ ಬಗ್ಗೆ ವಕೀಲರ ಆಕ್ಷೇಪ

ಸಂತ್ರಸ್ತೆಯ ಪರ ವಕೀಲೆ ರೀನಾ ರೈ, ಪೊಲೀಸರು ದಾಖಲಿಸಿರುವ ಎಫ್‌ಐಆರ್ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. "ಬಾದಷಾಪುರ ಪೊಲೀಸ್ ಠಾಣೆಯಲ್ಲಿ ಕೇವಲ ಸಣ್ಣಪುಟ್ಟ ಗಾಯಗಳಿಗೆ ಸಂಬಂಧಿಸಿದ ಸೆಕ್ಷನ್‌ಗಳನ್ನು ಮಾತ್ರ ಹಾಕಲಾಗಿದೆ. ಇದೊಂದು ಕೊಲೆ ಯತ್ನ ಪ್ರಕರಣವಾಗಿದ್ದರೂ, ಆ ಸೆಕ್ಷನ್ ಸೇರಿಸಿಲ್ಲ. ಅತ್ಯಾಚಾರದ ಆರೋಪದ ಬಗ್ಗೆಯೂ ಸ್ಪಷ್ಟತೆಯಿಲ್ಲ. ಸಂತ್ರಸ್ತೆಯ ತಂದೆ ನೀಡಿದ ಮಾಹಿತಿಯ ಪ್ರಕಾರ, ಹಲ್ಲೆಯಿಂದ ಆಕೆಯ ಮುಖ ಸಂಪೂರ್ಣವಾಗಿ ಊದಿಕೊಂಡಿದೆ, ಕೂದಲನ್ನು ಕತ್ತರಿಸಲಾಗಿದೆ. ಗುಪ್ತಾಂಗಗಳನ್ನು ಸುಟ್ಟು, ಏನನ್ನೋ ಒಳಗೆ ತುರುಕಲಾಗಿದೆ ಎಂದು ಕೇಳಲ್ಪಟ್ಟಿದ್ದೇನೆ. ಇದು ಅಕ್ಷರಶಃ ನಿರ್ಭಯಾ ಪ್ರಕರಣದಂತಿದೆ. ಮಗಳ ಮೇಲಾದ ಈ ದೌರ್ಜನ್ಯ ಕಂಡು ಆಕೆಯ ಪೋಷಕರು ಸಂಪೂರ್ಣವಾಗಿ ಆಘಾತಕ್ಕೊಳಗಾಗಿದ್ದಾರೆ" ಎಂದು ವಕೀಲೆ ರೀನಾ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read More
Next Story