Mamata Banerjee alleges CRPF goons attacked, kicked in stomach at vote counting centre
x

ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ

ಮತ ಎಣಿಕೆ ಕೇಂದ್ರದಲ್ಲಿ ಸಿಆರ್ ಪಿಎಫ್ ಗೂಂಡಾಗಳಿಂದ ಹಲ್ಲೆ, ಹೊಟ್ಟೆಗೆ ಒದ್ದರು: ಮಮತಾ ಬ್ಯಾನರ್ಜಿ ಆರೋಪ

ಚುನಾವಣೆಯಲ್ಲಿ 100ಕ್ಕೂ ಹೆಚ್ಚು ಸ್ಥಾನಗಳನ್ನು "ಬಲವಂತವಾಗಿ ಕಸಿದುಕೊಳ್ಳಲಾಗಿದೆ" ಎಂದು ದೂರಿದ ಅವರು, ಈ ಹಿನ್ನೆಲೆಯಲ್ಲಿ ತಾವು ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


Click the Play button to hear this message in audio format

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಭವಾನಿಪುರ ಮತ ಎಣಿಕೆ ಕೇಂದ್ರದಲ್ಲಿ ತಮ್ಮ ಮೇಲೆ ಸಿಆರ್ ಪಿಎಫ್ ಜವಾನರು ಹಲ್ಲೆ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಚುನಾವಣೆಯಲ್ಲಿ 100ಕ್ಕೂ ಹೆಚ್ಚು ಸ್ಥಾನಗಳನ್ನು "ಬಲವಂತವಾಗಿ ಕಸಿದುಕೊಳ್ಳಲಾಗಿದೆ" ಎಂದು ದೂರಿದ ಅವರು, ಈ ಹಿನ್ನೆಲೆಯಲ್ಲಿ ತಾವು ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆದ್ದು ಟಿಎಂಸಿ ಆಡಳಿತವನ್ನು ಅಂತ್ಯಗೊಳಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಒಂದು ಕಾಲದಲ್ಲಿ ತಮ್ಮ ಆಪ್ತರಾಗಿದ್ದ ಸುವೇಂದು ಅಧಿಕಾರಿ ವಿರುದ್ಧವೇ ಮಮತಾ ಬ್ಯಾನರ್ಜಿ ಅವರು ಭವಾನಿಪುರ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದಾರೆ. "ನಾನು ರಾಜೀನಾಮೆ ನೀಡುವುದಿಲ್ಲ. ನಾನು ರಾಜಭವನಕ್ಕೂ ಹೋಗುವುದಿಲ್ಲ. ನಾವು ಚುನಾವಣೆಯಲ್ಲಿ ಸೋತಿಲ್ಲ" ಎಂದು ಅವರು ಹೇಳಿದ್ದಾರೆ.

ಸಿಆರ್‌ಪಿಎಫ್ ವಿರುದ್ಧ ಹಲ್ಲೆ ಆರೋಪ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ 71 ವರ್ಷದ ಮಮತಾ ಬ್ಯಾನರ್ಜಿ, "ಮತ ಎಣಿಕೆ ಕೇಂದ್ರದಲ್ಲಿ ಸಿಆರ್ ಪಿಎಫ್ ಜವಾನರು ಗೂಂಡಾಗಳಂತೆ ವರ್ತಿಸಿದರು. ಅವರು ನನ್ನ ಹೊಟ್ಟೆ ಮತ್ತು ಬೆನ್ನಿಗೆ ಒದ್ದರು. ಆ ಸಮಯದಲ್ಲಿ ಉದ್ದೇಶಪೂರ್ವಕವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಲಾಗಿತ್ತು. ನನ್ನನ್ನು ಎಣಿಕೆ ಕೇಂದ್ರದಿಂದ ಹೊರದಬ್ಬಲಾಯಿತು (ಧಕ್ಕಾ ಮಾರ್ಕೆ ನಿಕಾಲಾ). ಓರ್ವ ಮಹಿಳೆಯಾಗಿ ನನ್ನೊಂದಿಗೆ ಅಮಾನವೀಯವಾಗಿ ನಡೆದುಕೊಂಡರು," ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಧ್ಯಾಹ್ನ 3 ಗಂಟೆಯ ನಂತರ ಪರಿಸ್ಥಿತಿ ವಿಕೋಪಕ್ಕೆ ಹೋದಾಗ, ಟಿಎಂಸಿ ಏಜೆಂಟರನ್ನು ಒಳಗೆ ಬಿಡದೆ ಅವರ ಮೇಲೂ ಹಲ್ಲೆ ನಡೆಸಲಾಗಿದೆ. "ನಮ್ಮ ಏಜೆಂಟರನ್ನು ಕನಿಷ್ಠ 5 ನಿಮಿಷಗಳ ಕಾಲ ಒಳಗೆ ಬಿಡಿ ಎಂದು ನಾವು ಮನವಿ ಮಾಡಿದರೂ ಅವರು ನಿರಾಕರಿಸಿದರು. ಇದು ಸಂಪೂರ್ಣವಾಗಿ ಅನೈತಿಕ ಗೆಲುವು," ಎಂದು ಮಮತಾ ವಾಗ್ದಾಳಿ ನಡೆಸಿದರು.

ಮರುಹೋರಾಟದ ಎಚ್ಚರಿಕೆ

ಚುನಾವಣಾ ಆಯೋಗ, ಕೇಂದ್ರ ಪಡೆಗಳು, ಪ್ರಧಾನಿ ಮತ್ತು ಗೃಹ ಸಚಿವರು ಸೇರಿ ಮಾಡಿರುವ ಈ ಕೃತ್ಯ ಸಂಪೂರ್ಣವಾಗಿ ಕಾನೂನುಬಾಹಿರ. ಇದು ಪ್ರಜಾಪ್ರಭುತ್ವದ ಹತ್ಯೆ ಎಂದು ಆರೋಪಿಸಿದ ಮಮತಾ, ತಾವು ಈ ಸೋಲಿನಿಂದ ಎದೆಗುಂದುವುದಿಲ್ಲ ಮತ್ತು "ಮತ್ತೆ ಪುಟಿದೆದ್ದು ಬರುತ್ತೇವೆ" ಎಂದು ಶಪಥ ಮಾಡಿದ್ದಾರೆ.

Read More
Next Story