ನದಿಯಲ್ಲಿ ತೇಲಿಬಂದ ಸುಮಾರು 3000 ಗ್ಯಾಸ್ ಸಿಲಿಂಡರ್! ಶಾಕಿಂಗ್ ವಿಡಿಯೋ ವೈರಲ್‌
x

ನದಿಯಲ್ಲಿ ತೇಲಿಬಂದ ಸುಮಾರು 3000 ಗ್ಯಾಸ್ ಸಿಲಿಂಡರ್! ಶಾಕಿಂಗ್ ವಿಡಿಯೋ ವೈರಲ್‌

ಮಹಾರಾಷ್ಟ್ರದ ರಾಯಗಢದಲ್ಲಿ ಭಾರಿ ಮಳೆಗೆ ಹೆಚ್‌ಪಿಸಿಎಲ್ ಪ್ಲಾಂಟ್ ಗೋಡೆ ಕುಸಿದು, ಸುಮಾರು 3,000 ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳು ನದಿಯಲ್ಲಿ ತೇಲಿಹೋಗಿವೆ. ಜಿಲ್ಲಾಧಿಕಾರಿಗಳ ಎಚ್ಚರಿಕೆ ಇಲ್ಲಿದೆ.


ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯ ನಡುವೆ ಅತ್ಯಂತ ಆತಂಕಕಾರಿ ಮತ್ತು ಶಾಕಿಂಗ್ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇಲ್ಲಿನ ಪಾತಾಳಗಂಗಾ ನದಿಯಲ್ಲಿ ಸುಮಾರು 3,000 ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳು ನೀರಿನ ಬಲವಾದ ಹರಿವಿಗೆ ಕೊಚ್ಚಿ ಹೋಗಿದ್ದು, ನದಿಯ ಮೇಲೆ ತೇಲುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಹೆಚ್‌ಪಿಸಿಎಲ್ (HPCL) ಪಾತಾಳಗಂಗಾ ಎಲ್‌ಪಿಜಿ ಬಾಟ್ಲಿಂಗ್ ಪ್ಲಾಂಟ್‌ನಿಂದ ಈ ಸಿಲಿಂಡರ್‌ಗಳು ಕೊಚ್ಚಿ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಳುಗಡೆಯಾಗದಂತೆ ತಡೆಯಲು ನಿರ್ಮಿಸಲಾಗಿದ್ದ ಪ್ಲಾಂಟ್‌ನ ರಕ್ಷಣಾ ಗೋಡೆಯು ಭಾರಿ ಮಳೆಯಿಂದಾಗಿ ಕುಸಿದು ಬಿದ್ದಿದೆ. ಇದರ ಬೆನ್ನಲ್ಲೇ ಪ್ರವಾಹದ ನೀರು ನೇರವಾಗಿ ಪ್ಲಾಂಟ್ ಆವರಣಕ್ಕೆ ನುಗ್ಗಿದ್ದರಿಂದ, ಅಲ್ಲಿ ಸಂಗ್ರಹಿಸಿಡಲಾಗಿದ್ದ ಸಾವಿರಾರು ಸಿಲಿಂಡರ್‌ಗಳು ಪಾತಾಳಗಂಗಾ ನದಿ ಮತ್ತು ಖಾರ್ಪಾಡಾ ಕ್ರೀಕ್ (ಕರೆ) ನೀರಿಗೆ ಕೊಚ್ಚಿ ಹೋಗಿವೆ.

ನದಿಯ ಮೇಲ್ಭಾಗದ ಸೇತುವೆಯ ಮೇಲಿಂದ ನೂರಾರು ಸಿಲಿಂಡರ್‌ಗಳು ಸಾಲಾಗಿ ತೇಲಿ ಹೋಗುತ್ತಿರುವುದನ್ನು ಕಂಡು ಸ್ಥಳೀಯ ನಾಗರಿಕರು ಆಶ್ಚರ್ಯಚಕಿತರಾಗಿ ತಮ್ಮ ಮೊಬೈಲ್‌ಗಳಲ್ಲಿ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ.

ಸಿಲಿಂಡರ್‌ಗಳಲ್ಲಿ ಗ್ಯಾಸ್ ಇರುವ ಸಾಧ್ಯತೆ: ಜಿಲ್ಲಾಧಿಕಾರಿ ಎಚ್ಚರಿಕೆ

ನದಿಯಲ್ಲಿ ಕೊಚ್ಚಿ ಹೋಗಿರುವ ಸಿಲಿಂಡರ್‌ಗಳಲ್ಲಿ ಕೆಲವು ಗ್ಯಾಸ್‌ನಿಂದ ಭರ್ತಿಯಾಗಿರುವ ಸಾಧ್ಯತೆಯಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ರಾಯಗಢ ಜಿಲ್ಲಾಧಿಕಾರಿ ಕಿಶನ್ ಜಾವ್ಲೆ ಅವರು ಸಾರ್ವಜನಿಕರಿಗೆ ತುರ್ತು ಮನವಿ ಮಾಡಿದ್ದಾರೆ. ಪಾತಾಳಗಂಗಾ ನದಿ ಅಥವಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಗ್ಯಾಸ್ ಸಿಲಿಂಡರ್‌ಗಳು ಕಂಡುಬಂದಲ್ಲಿ, ಸಾರ್ವಜನಿಕರು ತಕ್ಷಣವೇ ಅವುಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಅಥವಾ ಕಂಪನಿಗೆ ಹಸ್ತಾಂತರಿಸಬೇಕು ಎಂದು ಕೋರಿದ್ದಾರೆ.

ಮನೆಗೆ ಕೊಂಡೊಯ್ಯಬೇಡಿ - ಜೀವಕ್ಕೆ ಅಪಾಯ

"ನದಿಯಲ್ಲಿ ಕೊಚ್ಚಿಹೋಗಿರುವ ಸಿಲಿಂಡರ್‌ಗಳಲ್ಲಿ ಗ್ಯಾಸ್ ಇದೆಯೇ ಅಥವಾ ಇಲ್ಲವೇ, ಮತ್ತು ಅವು ಸುರಕ್ಷಿತ ಸ್ಥಿತಿಯಲ್ಲಿವೆಯೇ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಕೇವಲ ಕುತೂಹಲಕ್ಕಾಗಿಯೋ ಅಥವಾ ಬಳಕೆಯ ಆಸೆಯಿಂದಲೋ ಸಾರ್ವಜನಿಕರು ಇವುಗಳನ್ನು ಮುಟ್ಟುವುದು, ಓಪನ್ ಮಾಡುವುದು ಅಥವಾ ಮನೆಗೆ ಕೊಂಡೊಯ್ಯುವುದು ಅತ್ಯಂತ ಅಪಾಯಕಾರಿ. ಸುರಕ್ಷತೆಯ ದೃಷ್ಟಿಯಿಂದ ಯಾರೂ ಇವುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು," ಎಂದು ಜಿಲ್ಲಾಧಿಕಾರಿ ಕಿಶನ್ ಜಾವ್ಲೆ ಕಡಕ್ ಎಚ್ಚರಿಕೆ ನೀಡಿದ್ದಾರೆ.

ಕಳೆದ ಒಂದು ವಾರದಿಂದ ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಸತತ ಮಳೆಯು ತಲ್ಲಣ ಸೃಷ್ಟಿಸಿದೆ. ಈ ಪೈಕಿ ರಾಯಗಢ ಜಿಲ್ಲೆಯು ಭೀಕರ ಪ್ರವಾಹಕ್ಕೆ ತುತ್ತಾಗಿದ್ದು, ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಸದ್ಯ ಕೊಚ್ಚಿ ಹೋಗಿರುವ ಸಿಲಿಂಡರ್‌ಗಳನ್ನು ಮರಳಿ ವಶಕ್ಕೆ ಪಡೆಯಲು ಹೆಚ್‌ಪಿಸಿಎಲ್ ಸಿಬ್ಬಂದಿ ಮತ್ತು ಸ್ಥಳೀಯ ಆಡಳಿತ ಶೋಧ ಕಾರ್ಯ ಕೈಗೊಂಡಿದೆ.

Read More
Next Story